For Quick Alerts
ALLOW NOTIFICATIONS  
For Daily Alerts

ಹೂಡಿಕೆ ಐಡಿಯಾಗಳನ್ನು ಹುಡುಕುವುದು ಹೇಗೆ? ವಾರೆನ್ ಬಫೆಟ್‌ರಿಂದ ತಿಳಿದುಕೊಳ್ಳೋಣ ಬನ್ನಿ

|

ಸಂಪಾದನೆ ಮಾಡುವ ಹಣದಲ್ಲಿ ಒಂದಿಷ್ಟು ದುಡ್ಡು ಹೂಡಿಕೆ ಮಾಡಬೇಕೆಂಬುದು ಬಹುತೇಕರ ಆಲೋಚನೆಯಾಗಿರುತ್ತದೆ. ಆದರೆ ಹೇಗೆ ಹಣ ಹೂಡಿಕೆ ಮಾಡುವುದು ಅಥವಾ ಹೂಡಿಕೆಯ ಸೂಕ್ತ ವಿಧಾನಗಳು ಯಾವುವು ಎಂಬುದು ಮಾತ್ರ ತಿಳಿದಿರುವುದಿಲ್ಲ. ಹೂಡಿಕೆ/ಉಳಿತಾಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿಯೇ ಕನ್ನಡ ಗುಡ್‌ರಿಟರ್ನ್ಸ (kannada.goodreturns.in) ನಿಮಗಾಗಿ ಲೇಖನಗಳನ್ನು ನೀಡುತ್ತಾ ಬಂದಿದೆ.

ಜಗತ್ತಿನಲ್ಲಿ 'ಇನ್ವೆಸ್ಟಮೆಂಟ್ ಗುರು' ಎಂದು ಗುರುತಿಸಿಕೊಂಡಿರುವ ವಾರೆನ್ ಬಫೆಟ್ ಹಣಕಾಸು ಹೂಡಿಕೆಯ ಬಗ್ಗೆ ತುಂಬ ವಿಶ್ಲೇಷಣಾತ್ಮಕವಾಗಿ ವಿವರಣೆ ನೀಡಿದ್ದಾರೆ.

ಹೂಡಿಕೆಯ ಬಗ್ಗೆ ಆಗಾಗ ಅವರು ನೀಡಿದ ಅಮೂಲ್ಯ ಸಲಹೆಗಳನ್ನು ಮತ್ತು ಐಡಿಯಾಗಳನ್ನು ಆಧರಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. ತಿಳಿದುಕೊಳ್ಳೋಣ ಬನ್ನಿ..

ಓದಿರಿ, ಓದಿರಿ ಮತ್ತು ಓದಿರಿ
 

ಓದಿರಿ, ಓದಿರಿ ಮತ್ತು ಓದಿರಿ

ಹೂಡಿಕೆಯ ಮುನ್ನ ಅದರ ಬಗ್ಗೆ ಓದಿ ತಿಳಿದುಕೊಳ್ಳುವುದರ ಬಗ್ಗೆ ಬಹುತೇಕ ಜನರಿಗೆ ತಾತ್ಸಾರ ಭಾವನೆ ಇದ್ದು, ಓದಿ ತಿಳಿದುಕೊಳ್ಳುವುದರಿಂದ ಹೂಡಿಕೆಯ ಮೇಲಾಗುವ ಪರಿಣಾಮಗಳ ಬಗ್ಗೆಯೂ ಕಲ್ಪನೆಯಿಲ್ಲ. ವಾರೆನ್ ಬಫೆಟ್ ಹಾಗೂ ಅವರ ಪಾರ್ಟನರ್ ಚಾರ್ಲಿ ಮುಂಗರ್ ಸತತವಾದ ಓದು ಹಾಗೂ ಅಧ್ಯಯನದಿಂದ ಹೊರ ಹೊಮ್ಮುವ ಉತ್ತಮ ಪರಿಣಾಮಗಳ ಬಗ್ಗೆ ಆಗಾಗ ಹೇಳುತ್ತಲೇ ಬಂದಿದ್ದಾರೆ. ಸತತವಾಗಿ ಬದಲಾಗುತ್ತಿರುವ ಈ ಜಗತ್ತು ಹಾಗೂ ಬದಲಾಗುತ್ತಿರುವ ತಂತ್ರಜ್ಞಾನದಿಂದ ನಮ್ಮ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕಾದರೆ ಓದುವಿಕೆ ಬೇಕು. ನಮ್ಮ ಜೀವನ ಶೈಲಿಯನ್ನು ಬದಲಾಯಿಸಬಲ್ಲ ಎರಡು ನೂತನ ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಪರಿಶೀಲಿಸೋಣ.

ಎಲಾನ್ ಮಸ್ಕ್ ಅವರ ಟೆಸ್ಲಾ-3 ಎಲೆಕ್ಟ್ರಿಕ್ ಕಾರಿನಿಂದ ಜಾಗತಿಕ ಆಟೊಮೊಬೈಲ್ ಉದ್ಯಮದ ಮೇಲಾಗಬಹುದಾದ ಪರಿಣಾಮಗಳೇನು? ಜೀನ್ ಎಡಿಟ್ ಮಾಡುವ ಕ್ರಿಸ್ಪರ್ (CRISPR) ತಾಂತ್ರಿಕತೆಯ ಆವಿಷ್ಕಾರದಿಂದ ಫಾರ್ಮಸಿ ಹಾಗೂ ಬೀಜೋತ್ಪಾದನೆ ಕಂಪನಿಗಳ ಮೇಲಾಗುವ ಪರಿಣಾಮಗಳೇನು?

ಹೀಗೆ ದೊಡ್ಡ ಸಂಗತಿಗಳು ಮಾತ್ರವಲ್ಲದೆ ಅತಿ ಚಿಕ್ಕ ಪುಟ್ಟ ಸಂಗತಿಗಳ ಬಗ್ಗೆ ತಿಳಿಯಲು ನಮ್ಮನ್ನು ನಾವು ಯಾವಾಗಲೂ ಅಪ್ಡೇಟ್ ಆಗಿರಿಸಿಕೊಳ್ಳಬೇಕಾಗುತ್ತದೆ. ವೃತ್ತ ಪತ್ರಿಕೆಗಳು, ಮ್ಯಾಗಜಿನ್‌ಗಳು, ಪುಸ್ತಕಗಳನ್ನು ಓದುತ್ತಿರಬೇಕು. ಕೇವಲ ಬಿಸಿನೆಸ್‌ಗೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲದೆ ಎಲ್ಲದರ ಬಗ್ಗೆ ವ್ಯಾಪಕವಾಗಿ ಓದಿ ಅಧ್ಯಯನ ನಡೆಸಬೇಕು. ಓದುವಿಕೆ ಹೆಚ್ಚಾದಷ್ಟೂ ನಿಮ್ಮ ವಿಚಾರಗಳ ಹರವು ಹೆಚ್ಚಾಗುತ್ತದೆ. ದೀರ್ಘಾವಧಿಯಲ್ಲಿ ಹಣ ಡಬಲ್ ಮಾಡಬಲ್ಲ ಟಾಪ್ 10 ಮ್ಯೂಚುವಲ್ ಫಂಡ್ಸ್

ಹೂಡಿಕೆ ಮುನ್ನ

ಹೂಡಿಕೆ ಮುನ್ನ

ಯಾವುದಾದರೊಂದು ಕಂಪನಿಯಲ್ಲಿ ನೀವು ಇನ್ವೆಸ್ಟ್ ಮಾಡಬೇಕು ಅಂದುಕೊಂಡಿದ್ದರೆ ಆ ಕಂಪನಿಯ ಬಿಸಿನೆಸ್ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಆ ವ್ಯವಹಾರದ ಬಗ್ಗೆ ಲಭ್ಯವಿರುವ ಎಲ್ಲ ಮೂಲಗಳಿಂದ ಮಾಹಿತಿ ಕಲೆ ಹಾಕಿ ಅಭ್ಯಾಸ ಮಾಡಬೇಕು. ಆ ಕಂಪನಿ ನಡೆಸುವ ವ್ಯವಹಾರವನ್ನೇ ನಡೆಸುವ ಇನ್ನಿತರ ದೊಡ್ಡ ಕಂಪನಿಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸಬೇಕು ಹಾಗೂ ಆ ವ್ಯವಹಾರದ ಒಳ ಹೊರಗುಗಳ ಬಗ್ಗೆ ಅರಿತುಕೊಳ್ಳಬೇಕು. ಉದಾಹರಣೆಗೆ ನೀವು ಹೀರೊ ಮೊಟೊ ಕಾರ್ಪ್ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ಅಂದುಕೊಂಡಿದ್ದರೆ ಬಜಾಜ್ ಕಂಪನಿಯ ಬಗ್ಗೆಯೂ ತಿಳಿದುಕೊಳ್ಳಿ. ಹಾಗೆಯೇ ಇನ್ನೂ ಲಿಸ್ಟ್ ಆಗದ ಹೊಂಡಾ ಮೋಟರ್ಸ್ ಬಗ್ಗೆಯೂ ಅಧ್ಯಯನ ನಡೆಸಿ. ಜಪಾನ್ ಕಂಪನಿ ಹೊಂಡಾ ಭಾರತದಲ್ಲಿ ಯಾವ ರೀತಿ ಉದ್ಯಮ ನಡೆಸುತ್ತಿದೆ ಹಾಗೂ ಅದು ಎದುರಿಸಿದ ಸಮಸ್ಯೆಗಳು, ಅದರಿಂದ ಮೇಲೆದ್ದು ಯಶಸ್ವಿಯಾದ ರೀತಿ ಹೀಗೆ ಎಲ್ಲದರ ಬಗ್ಗೆಯೂ ಅರಿತುಕೊಳ್ಳಬೇಕು.

ಓದಿನಿಂದ ದೀರ್ಘಾವಧಿಯಲ್ಲಿ ಲಾಭ ನಿಶ್ಚಿತ

ಓದಿನಿಂದ ದೀರ್ಘಾವಧಿಯಲ್ಲಿ ಲಾಭ ನಿಶ್ಚಿತ

ಕೆಲ ಹೂಡಿಕೆದಾರರು ಓದಿನತ್ತ ಆರಂಭದಲ್ಲಿ ಆಸಕ್ತಿ ಬೆಳೆಸಿಕೊಂಡರೂ ಅದರಿಂದ ಹತ್ತಿರದ ಭವಿಷ್ಯದಲ್ಲಿ ಯಾವುದೇ ನೇರ ಲಾಭವಿಲ್ಲ ಎಂದುಕೊಂಡು ವಿಷಯಗಳ ಮಾಹಿತಿ ಪಡೆಯುವುದನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ಇದೊಂದು ತಪ್ಪು ಕಲ್ಪನೆಯಾಗಿದೆ. ವಾಸ್ತವದಲ್ಲಿ ದಿನ ಕಳೆದಂತೆ ನೀವು ಸಂಗ್ರಹಿಸಿದ ಜ್ಞಾನ ನಿಮ್ಮ ಉಪಯೋಗಕ್ಕೆ ಬರಲಾರಂಭಿಸುತ್ತದೆ. ನಿಮ್ಮ ಓದುವಿಕೆಯಿಂದ ನೇರ ಲಾಭ ಪಡೆಯಲು ಕೆಲ ಸಮಯ ತಡವಾದರೂ ಅದರಿಂದ ದೀರ್ಘಾವಧಿಯಲ್ಲಿ ಸಾಕಷ್ಟು ಉಪಯೋಗವಾಗುವುದಂತೂ ನಿಶ್ಚಿತ. ಒಮ್ಮೆ ಗಳಿಸಿದ ಜ್ಞಾನವನ್ನು ಯಾರೂ ನಿಮ್ಮಿಂದ ಕಸಿಯಲಾರರು.

ಬಿಸಿನೆಸ್ ಅರ್ಥ ಮಾಡಿಕೊಳ್ಳಿ
 

ಬಿಸಿನೆಸ್ ಅರ್ಥ ಮಾಡಿಕೊಳ್ಳಿ

ನೀವು ಹೂಡಿಕೆ ಮಾಡಬೇಕೆಂದಿರುವ ಕಂಪನಿಯ ಬಿಸಿನೆಸ್ ಮಾಡೆಲ್ ಬಗ್ಗೆ ಅರ್ಥ ಮಾಡಿಕೊಳ್ಳಲು ಯತ್ನಿಸಿ. ಆ ಕಂಪನಿ ಕಮಾಡಿಟಿ ಕಂಪನಿಯಾಗಿದ್ದಲ್ಲಿ ಅದರ ದರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಗದಿಯಾಗುತ್ತವೆ ಹಾಗೂ ಯಾವಾಗಲೂ ಅನಿಶ್ಚಿತತೆ ಇರುತ್ತದೆ ಎಂಬುದನ್ನು ತಿಳಿಯಬೇಕು. ಹಾಗೆಯೇ ಒಂದು ನಿರ್ದಿಷ್ಟ ವರ್ಷದಲ್ಲಿ ಆ ಕಂಪನಿ ಲಾಭ ಮಾಡಿದೆ ಎಂದಾಕ್ಷಣ ಮುಂದಿನ ವರ್ಷವೂ ಹಾಗೆಯೇ ಇರಲಾರದು. ಒಂದು ವೇಳೆ ಕೃಷಿ ಉತ್ಪನ್ನ ಆಧರಿತ ಕಂಪನಿಯಾಗಿದ್ದರೆ ಕೃಷಿ ಉತ್ಪನ್ನಗಳ ಬೆಲೆಗಳು ಸ್ಥಳೀಯ ಉತ್ಪಾದನೆ ಮಾತ್ರವಲ್ಲದೆ ಚೀನಾ, ಕೀನ್ಯಾ, ಶ್ರೀ ಲಂಕಾ ಅಥವಾ ಟರ್ಕಿ ಹೀಗೆ ಹೊರ ದೇಶಗಳಲ್ಲಿನ ಕೃಷಿ ಉತ್ಪಾದನಾ ಮಟ್ಟವನ್ನು ಸಹ ಆಧರಿಸಿ ನಿರ್ಧರಿಸಲ್ಪಡುತ್ತವೆ.

ಹೂಡಿಕೆ ಆರಂಭಿಸುವಾಗ ಆದಷ್ಟೂ ಗ್ರಾಹಕ ಬಳಕೆ ವಸ್ತುಗಳು, ಆಹಾರ, ಪೇಂಟ್, ಬೈಕ್‌ಗಳು ಹೀಗೆ ಸರಳವಾದ ಉತ್ಪಾದನಾ ಕಂಪನಿಗಳಲ್ಲಿ ಹಣ ತೊಡಗಿಸಿ. ನಂತರದ ದಿನಗಳಲ್ಲಿ ಮತ್ತಷ್ಟು ಸಂಕೀರ್ಣವಾದ ಉದ್ದಿಮೆಗಳಲ್ಲಿ ಇನ್ವೆಸ್ಟ್ ಮಾಡುವುದು ಸೂಕ್ತ.

ಯಾವುದೇ ಉದ್ಯಮದ ಬಗ್ಗೆ ಸ್ಪಷ್ಟವಾಗಿ ಅರಿತುಕೊಳ್ಳಲು ನಿಮಗೆ ಸಾಧ್ಯವಾಗದ ಪಕ್ಷದಲ್ಲಿ ಸುಮ್ಮನೆ ಅದರಿಂದ ದೂರವಾಗಿ ಬೇರೆ ರೀತಿಯ ಉದ್ಯಮದ ಕಡೆಗೆ ಗಮನಹರಿಸುವುದೇ ಲೇಸು. ದೂರದರ್ಶನ ಸೀರಿಯಲ್ ತಯಾರಿಸುವುದು ಅಥವಾ ಚಲನ ಚಿತ್ರ ನಿರ್ಮಾಣ ಮುಂತಾದ ಸಂಕೀರ್ಣ ರೀತಿಯ ವ್ಯವಹಾರಗಳ ಬಗ್ಗೆ ನಿಮಗೆ ತಿಳಿದುಕೊಳ್ಳಲು ಕಷ್ಟವಾದಲ್ಲಿ ಅದನ್ನು ಸಹಜವಾಗಿ ಸ್ವೀಕರಿಸಿ. ಅಂಥ ಉದ್ಯಮ ಬಿಟ್ಟು ನಿಮಗೆ ತಿಳಿದ ಅಥವಾ ತಿಳಿಯಬಹುದಾದ ಉದ್ಯಮದ ಬಗ್ಗೆ ಗಮನಹರಿಸಿ. ಹೂಡಿಕೆ ಮಾಡಬೇಕೆಂದಿರುವ ಉದ್ಯಮಗಳ ಪಟ್ಟಿ ತಯಾರಿಸಿ ಅವುಗಳ ಬಗ್ಗೆ ಗೂಗಲ್ ಅಲರ್ಟ್ ಸೆಟ್ ಮಾಡಿ ಹಾಗೂ ಪ್ರತಿ ಬಾರಿ ಅಲರ್ಟ್ ಬಂದಾಗ ಅದನ್ನು ನೋಟ್ ಮಾಡಿಟ್ಟುಕೊಂಡು ಓದಿ.

ಪರಿಣಿತರಿಂದ ತಿಳಿದುಕೊಳ್ಳಿ

ಪರಿಣಿತರಿಂದ ತಿಳಿದುಕೊಳ್ಳಿ

ಒಂದು ಉದ್ಯಮದ ಬಗ್ಗೆ ತಿಳಿಯಬೇಕಾದರೆ ಈಗಾಗಲೇ ಆ ಉದ್ಯಮದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳೊಂದಿಗೆ ಮಾತನಾಡುವುದು ಅತಿ ಸೂಕ್ತವಾಗಿದೆ. ಅಂಥವರೊಂದಿಗೆ ಮಾತನಾಡಿ ಆ ಕ್ಷೇತ್ರಕ್ಕೆ ಸಂಬಂಧಿಸಿದ ಮುಂಚೂಣಿಯ ಕಂಪನಿಗಳು ಯಾವವು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಯಾವುದೋ ಕಂಪನಿ ತನ್ನ ಡಿಸ್ಟ್ರಿಬ್ಯೂಟರ್‌ಗಳಿಗೆ ಹೆಚ್ಚು ಅವಧಿಯವರೆಗೆ ಕ್ರೆಡಿಟ್ ನೀಡುತ್ತಿರಬಹುದು ಅಥವಾ ಹೆಚ್ಚು ಮಾರ್ಜಿನ್ ನೀಡುತ್ತಿರಬಹುದು. ಕೆಲವೊಮ್ಮೆ ಕಂಪನಿಗಳು ತಮ್ಮ ಉತ್ಪಾದನೆಯ ಬಗ್ಗೆ ವ್ಯಾಪಕವಾಗಿ ಜಾಹಿರಾತು ನೀಡಿ ಅವುಗಳಿಗೆ ಮಾರುಕಟ್ಟೆಯಲ್ಲಿ ಶೀಘ್ರವಾಗಿ ಸ್ಥಾನ ಸಿಗುವಂತೆ ಮಾಡಿರಬಹುದು. ಆದರೆ ಉತ್ಪಾದನೆಗಳನ್ನು ಬಳಸುವ ಕೊನೆಯ ತುದಿಯ ಗ್ರಾಹಕರಿಂದ ಮಾಹಿತಿ ಸಂಗ್ರಹಿಸಬೇಕು. ಅವರು ಮೊದಲು ಯಾವ ಬ್ರ್ಯಾಂಡ್ ಬಳಸುತ್ತಿದ್ದರು ಹಾಗೂ ಈಗ ಯಾವ ಬ್ರ್ಯಾಂಡ್ ಬಳಸುತ್ತಿದ್ದಾರೆ ಮತ್ತು ಅದಕ್ಕೆ ಕಾರಣಗಳೇನು ಎಂಬ ಬಗ್ಗೆ ಅಧ್ಯಯನ ಮಾಡಬೇಕು. ಒಮ್ಮೆ ಉಪಯೋಗಿಸಿದ ಹೊಸ ಬ್ರ್ಯಾಂಡ್‌ನ ಉತ್ಪನ್ನವನ್ನು ಗ್ರಾಹಕ ಮತ್ತೊಮ್ಮೆ ಬಳಸಲು ಇಚ್ಛೆ ಪಡುತ್ತಿರುವನಾ ಎಂಬುದು ಸಹ ಮಹತ್ವದ ಸಂಗತಿಯಾಗಿದೆ.

ನೀವು ಶ್ರೀಮಂತರಾಗಬಯಸುವಿರಾ? ಈ 5 ಮಾರ್ಗ ತಪ್ಪದೇ ಅನುಸರಿಸಿ ನೋಡಿ..

ಚಿಂತನೆಗೆ ಸಮಯ ಮೀಸಲಿಡಿ

ಚಿಂತನೆಗೆ ಸಮಯ ಮೀಸಲಿಡಿ

ಇತ್ತೀಚಿನ ಯುವ ಜನತೆ ತಕ್ಷಣ ನಿರ್ಧಾರ ಕೈಗೊಂಡು ಹೂಡಿಕೆಗೆ ಮುಂದಾಗುತ್ತಿದ್ದಾರೆ. ಆದರೆ ಹೂಡಿಕೆ ಎಂಬುದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ತಕ್ಷಣದಲ್ಲಿ ಯಾವುದೇ ದೊಡ್ಡ ಲಾಭದ ಖಾತ್ರಿ ಇರಲಾರದು ಹಾಗೂ ಇನ್ವೆಸ್ಟ್ ಮಾಡುವುದು ಮಕ್ಕಳಾಟವಲ್ಲ ಎಂಬುದನ್ನು ಅರಿತಿರಬೇಕು. ನೀವು ಹೂಡಿಕೆ ಮಾಡಬೇಕೆಂದಿರುವ ಉದ್ಯಮ ವಲಯದ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ ನಂತರ ಆ ವಲಯದಲ್ಲಿನ ಪೈಪೋಟಿ, ಲಾಭ ನಷ್ಟಗಳು ಯಾವ ರೀತಿಯಾಗಿರುತ್ತವೆ ಎಂಬ ಬಗ್ಗೆ ತಿಳಿದುಕೊಳ್ಳಿ. ಇಷ್ಟಾದ ನಂತರ ಹೂಡಿಕೆಗೆ ಯಾವ ನಿರ್ದಿಷ್ಟ ಕಂಪನಿ ಸೂಕ್ತ ಎಂಬುದರ ಬಗ್ಗೆ ಚಿತ್ರಣ ಸ್ಪಷ್ಟವಾಗಲಾರಂಭಿಸುತ್ತದೆ. ಕನಿಷ್ಠ ಮುಂದಿನ 15 ರಿಂದ 20 ವರ್ಷಗಳಾದರೂ ಕಂಪನಿಯು ಅಸ್ತಿತ್ವದಲ್ಲಿರಬೇಕು ಅಂಥ ಉದ್ಯಮವನ್ನು ಗುರುತಿಸಿ. ನಿಶ್ಚಿತ ಲಾಭ ಗಳಿಸುತ್ತಿರುವ ಹಾಗೂ ಸಮರ್ಥ ಕಂಪನಿಗಳ ಪಟ್ಟಿ ತಯಾರಿಸಿ.

ಉದಾಹರಣೆಗೆ ನೆಸ್ಲೆ ಕಂಪನಿಯ ನೆಸ್ ಕ್ಯಾಫೆ ಕಾಫಿ ಪುಡಿಗೆ ಪೈಪೋಟಿ ನೀಡಬಲ್ಲ ಉತ್ಪನ್ನ ಮತ್ತೊಂದು ಈವರೆಗೆ ಬಂದಿಲ್ಲ. ಹಾಗೆಯೇ ಜಿಎಸ್‌ಕೆಯ ಹಾರ್ಲಿಕ್ಸ್ ಉತ್ಪನ್ನವೂ ಕೂಡ. ಅದರಂತೆ ಬೈಕ್‌ಗಳ ವಲಯದಲ್ಲಿ ಇಂದಿಗೂ ಹೀರೊ ಹೊಂಡಾ ಹಾಗೂ ಬಜಾಜ್ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿವೆ. ಹೀರೊ ಹಾಗೂ ಹೊಂಡಾ ಕಂಪನಿಗಳು ಪ್ರತ್ಯೇಕವಾದ ನಂತರ ಹೊಂಡಾ ಅತಿ ವೇಗದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತು. ಒಂದು ದಿನ ಅದು ನಂಬರ್ ಒನ್ ಆದರೂ ಆಶ್ಚರ್ಯವಿಲ್ಲ. ಆದರೆ ಈ ಸಂದರ್ಭದಲ್ಲಿ ಹೀರೊ ಹಾಗೂ ಬಜಾಜ್ ಕಂಪನಿಗಳ ಭವಿಷ್ಯ ಹೇಗಿರಲಿದೆ ಎಂಬುದು ಚಿಂತನೆಗೆ ಹಚ್ಚುವ ವಿಚಾರವಾಗಿದೆ.

ಶೋಧನೆ ಮಾಡಿ

ಶೋಧನೆ ಮಾಡಿ

ವಾರೆನ್ ಬಫೆಟ್ ಅವರು ಹೂಡಿಕೆ ಮಾಡುವ ಮುನ್ನ ಕೆಲ ಫಿಲ್ಟರ್‌ಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಅಂದರೆ ಕೆಲ ಮಾನದಂಡಗಳ ಮೂಲಕ ಶೋಧಿಸುವುದು ಎಂದರ್ಥ. ಅವರು ಹೇಳಿದ ಫಿಲ್ಟರ್‌ಗಳು ಹೀಗಿವೆ:

ಫಿಲ್ಟರ್ ನಂ.1: ನಿಮಗೆ ಉದ್ಯಮ ಅರ್ಥವಾಗಿದೆಯೆ? ಇನ್ಫೊಸಿಸ್ ಕಂಪನಿ 10 ವರ್ಷಗಳ ನಂತರ ಹೇಗಿರಬಹುದು? ಇಂಥ ಪ್ರಶ್ನೆಗಳ ಉತ್ತರ ಕಂಡುಕೊಳ್ಳಲು ನಿಮಗೆ ಕಷ್ಟವಾದಲ್ಲಿ ಇವನ್ನು ಬಿಟ್ಟು ಬೇರೆ ಕಂಪನಿಗಳತ್ತ ಹೊರಳಬೇಕು. ಬರುವ ದಶಕದಲ್ಲಿ ಸಿಂಫನಿ ಕಂಪನಿಯು ಹೆಚ್ಚು ಕೂಲರ್‌ಗಳನ್ನು ಮಾರಾಟ ಮಾಡಲಿದೆ ಎಂದು ನಿಮಗೆ ಅನಿಸುತ್ತದೆಯೆ? ಇದಕ್ಕೆ ಉತ್ತರ ಸಿಕ್ಕರೆ ಆ ಉದ್ಯಮದಲ್ಲಿ ಇನ್ನಷ್ಟು ಆಳಕ್ಕಿಳಿಯಲು ನೀವು ಸಮರ್ಥರಾಗಿದ್ದೀರಿ ಎಂದರ್ಥ.

ಫಿಲ್ಟರ್ ನಂ.2 : ನಿರ್ದಿಷ್ಟ ಉದ್ಯಮ ಪೈಪೋಟಿಯನ್ನು ಎದುರಿಸಿ ನಿಲ್ಲಲು ಸಮರ್ಥವಾಗಿದೆಯೆ? ಇತ್ತೀಚಿನ ಆಧುನಿಕ ತಂತ್ರಜ್ಞಾನ ಆಧರಿತ ಉತ್ಪಾದನೆಗಳಾದ ಹೋವರ್ ಬೋರ್ಡ್ಸ್, ವಿಆರ್ ಹೆಡಸೆಟ್ಸ್, ಫಿಟ್ನೆಸ್ ಟ್ರ್ಯಾಕರ್ಸ್, ವುಡನ್ ಸನ್ ಗ್ಲಾಸ್‌ಗಳು ಮತ್ತು ಪವರ್ ಬ್ಯಾಂಕ್‌ಗಳ ಬಗ್ಗೆ ವಿಚಾರ ಮಾಡಿ. ಮುಂದಿನ 10 ವರ್ಷಗಳ ನಂತರವೂ ಇವುಗಳಲ್ಲಿ ಯಾವ ವಸ್ತುಗಳು ಮಾರುಕಟ್ಟೆಯಲ್ಲಿ ಇರಬಹುದು? ನಿರ್ಧರಿಸುವುದು ಕಷ್ಟಕರವಾಗಿದೆ ಅಲ್ಲವೆ? ಹಾಗಾದರೆ ಬೇರೆ ವಸ್ತುಗಳತ್ತ ಗಮನ ಹರಿಸಿ. ಕೋಲ್ಗೇಟ್ ಇನ್ನೂ ಹಲವಾರು ವರ್ಷ ಮಾರುಕಟ್ಟೆಯಲ್ಲಿ ಇರಬಹುದು. ಹಾಗೆಯೇ ಏರಿಯಲ್, ನೆಸ್‌ಕೆಫೆ, ಮಾರುತಿ ಹಾಗೂ ಇದೇ ರೀತಿಯ ಅಗತ್ಯವಾದ ಹಾಗೂ ನಿರಂತರ ಸೇವೆಗಳನ್ನು ನೀಡುವ ಕಂಪನಿಗಳು ಮಾರುಕಟ್ಟೆಯಲ್ಲಿ ಇರಬಹುದು. ಅಂದರೆ ಹೂಡಿಕೆ ಮಾಡುವ ಮುನ್ನ 'ಅಗತ್ಯವಾದ' ಹಾಗೂ 'ನಿರಂತರ' ಈ ಎರಡು ಅಂಶಗಳನ್ನು ಅತಿ ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಿ.

ಫಿಲ್ಟರ್ ನಂ.3 : ಕಂಪನಿಯ ಆಡಳಿತ ಮಂಡಳಿ ವಿಶ್ವಾಸಾರ್ಹವಾಗಿದೆಯೆ? ಯಾವುದೇ ಕಂಪನಿಯ ಆಡಳಿತ ಮಂಡಳಿಯ ವಿಶ್ವಾಸಾರ್ಹತೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅತಿ ಕ್ಲಿಷ್ಟಕರ ವಿಷಯವಾಗಿದೆ. ಸತ್ಯಂ ಕಂಪ್ಯೂಟರ್ಸ್ ಬಗ್ಗೆ ಎಲ್ಲರೂ ಕೇಳಿದ್ದೇವೆ. ಕಂಪನಿಯ ಎಂಡಿ ರಾಮಲಿಂಗರಾಜು ಲೆಕ್ಕ ಪತ್ರಗಳಲ್ಲಿ ವಂಚನೆ ಮಾಡಬಹುದು ಎಂಬ ಬಗ್ಗೆ ದೇಶದ ಯಾವುದೇ ಆರ್ಥಿಕ ತಜ್ಞ ಅಂದುಕೊಂಡಿರಲಿಲ್ಲ. ಆದರೂ ಆಡಳಿತ ಮಂಡಳಿಗಳು ಅವ್ಯವಹಾರದಲ್ಲಿ ನಿರತವಾದರೆ ಅದು ಬೇಗನೆ ಹೊರ ಜಗತ್ತಿಗೆ ತಿಳಿಯುತ್ತದೆ.

ರೂಬಿ ಮಿಲ್ಸ್ ಎಂ.ಡಿ. ಯನ್ನು 1000 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಸಿಬಿಐ ಇತ್ತೀಚೆಗಷ್ಟೆ ಬಂಧಿಸಿದೆ. ಕೆಲ ವರ್ಷಗಳ ಹಿಂದೆ ಸಾವಿರ ಕೋಟಿ ರೂ. ಮೌಲ್ಯದ ಗ್ಲಾಸ್ ಕಂಟೇನರ್ ಕಂಪನಿಯೊಂದರ ಎಂಡಿ ಏರಪೋರ್ಟನಲ್ಲಿ ಸಹಪ್ರಯಾಣಿಕರೊಬ್ಬರ ಬ್ಲ್ಯಾಕಬೆರ್ರಿ ಮೊಬೈಲ್ ಕದ್ದು ಸಿಕ್ಕಿ ಬಿದ್ದಿದ್ದರು. ಹೀಗಾಗಿ ಕಳಂಕ ಹೊತ್ತ ಆಡಳಿತ ಮಂಡಳಿಗಳ ಕಂಪನಿಗಳಲ್ಲಿ ಹೂಡಿಕೆ ಮಾಡದಿರುವುದೇ ಸೂಕ್ತ. ಹೊರ ಜಗತ್ತಿಗೆ ತಿಳಿದಿರುವದಕ್ಕಿಂತ ಹೆಚ್ಚು ಅವ್ಯವಹಾರಗಳು ಕಂಪನಿಯೊಳಗೆ ನಡೆಯುತ್ತಿರಬಹುದು. ಯಾವುದೇ ಕಂಪನಿಯ ಆಡಳಿತ ಮಂಡಳಿಯ ಅವ್ಯವಹಾರಗಳ ಬಗ್ಗೆ ಮಾಹಿತಿ ತಿಳಿದಾಗ ಅವನ್ನು ದಾಖಲಿಸಿಟ್ಟುಕೊಳ್ಳಿ.

ಫಿಲ್ಟರ್ ನಂ.4 : ಶೇರು ಮೌಲ್ಯ ವಾಸ್ತವಿಕವಾಗಿದೆಯೆ? ಮಾರುಕಟ್ಟೆಯಲ್ಲಿ ಕಂಪನಿಯ ಶೇರು ಮೌಲ್ಯ ಎಷ್ಟಿದೆ ಎಂಬುದನ್ನು ಗಮನಿಸಿ. ಅವಾಸ್ತವಿಕ ಮೌಲ್ಯ ಇರುವಾಗ ಒಳ್ಳೆಯ ಕಂಪನಿಯಾಗಿದ್ದರೂ ಹೂಡಿಕೆ ಮಾಡಕೂಡದು. 2000ನೇ ಇಸ್ವಿಯಲ್ಲಿ ಶೇರು ಮಾರುಕಟ್ಟೆ ಅತಿ ಉನ್ನತ ಮಟ್ಟದಲ್ಲಿದ್ದಾಗ ಇನ್ಫೊಸಿಸ್ ಶೇರು ಕೊಂಡವರು ತಮ್ಮ ಬಂಡವಾಳ ಮರಳಿ ಪಡೆಯಲು ವರ್ಷಗಟ್ಟಲೆ ಕಾಯಬೇಕಾಯಿತು. ಅವರು ಅದೃಷ್ಟವಂತರಾಗಿದ್ದರಿಂದ ಕೊನೆಗೂ ಬಂಡವಾಳ ಮರಳಿ ಬಂದಿತು. ಆದರೆ 2007 ರ ಅಂತ್ಯದಲ್ಲಿ ಹಾಗೂ 2008 ರ ಆರಂಭದಲ್ಲಿ ಇನಫ್ರಾಸ್ಟ್ರಕ್ಚರ್ ಶೇರುಗಳ ಮೇಲೆ ಹೂಡಿಕೆ ಮಾಡಿದವರು ಮುಂದಿನ ಹತ್ತು ವರ್ಷಗಳಲ್ಲಿ ಬಹುತೇಕ ತಮ್ಮ ಎಲ್ಲ ಹಣವನ್ನು ಕಳೆದುಕೊಂಡರು. ಈಗಿನ ಮಾರುಕಟ್ಟೆಯಲ್ಲಿ ಎಫ್‌ಎಂಸಿಜಿ, ಸಿಮೆಂಟ್ ಹಾಗೂ ರಿಟೇಲ್ ವಲಯದ ಶೇರುಗಳು ಅವಾಸ್ತವಿಕವಾದ ಹೆಚ್ಚು ಮೌಲ್ಯ ಹೊಂದಿವೆ.

ತಾಳಿದವನು ಬಾಳಿಯಾನು

ತಾಳಿದವನು ಬಾಳಿಯಾನು

ಹೂಡಿಕೆ ಮಾಡಲು ಸೂಕ್ತ ಕಂಪನಿಯನ್ನು ಗುರುತಿಸಿದ್ದರೆ, ಅದರ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿದ್ದರೆ ಹಾಗೂ ಮೇಲೆ ತಿಳಿಸಲಾದ ಎಲ್ಲ ಫಿಲ್ಟರ್ ಪರೀಕ್ಷೆಗಳಲ್ಲಿ ಆ ಕಂಪನಿ ಪಾಸಾಗಿದ್ದರೆ ಹೂಡಿಕೆ ಮಾಡುವ ಮುನ್ನ ಕೊಂಚ ತಾಳ್ಮೆ ವಹಿಸಿ. ಶೇರುಗಳಿಂದ ಆದಾಯ ಬರಬೇಕಾದರೆ ದೀರ್ಘಾವಧಿಯವರೆಗೆ ಕಾಯಬೇಕಾಗುತ್ತದೆ. ಕೆಲ ಬಾರಿ ವರ್ಷಗಳ ಕಾಲ ಹಿಡಿಯುತ್ತದೆ. ಒಂದೆರಡು ವರ್ಷಗಳಲ್ಲಿ ನಿಮ್ಮ ಹೂಡಿಕೆ ದುಪ್ಪಟ್ಟಾಗುತ್ತದೆ ಎಂದು ಭಾವಿಸುವಂತಿಲ್ಲ. ಸಾಕಷ್ಟು ಶೇರುಗಳು ವರ್ಷಗಳ ಕಾಲ ನಿಶ್ಚಲವಾಗಿದ್ದು ನಂತರ ದೊಡ್ಡ ಮೌಲ್ಯ ಗಳಿಸಿದ ಉದಾಹರಣೆಗಳಿವೆ. ಇನ್ನು ಕೆಲ ಬಾರಿ ಹೂಡಿಕೆ ಮಾಡಲು ಉತ್ತಮ ಆಯ್ಕೆಗಳು ಸಿಗದಿರಬಹುದು. ಇಂಥ ಸಂದರ್ಭದಲ್ಲಿ ಮಾರುಕಟ್ಟೆ ಹಾಗೂ ಕಂಪನಿಗಳ ಅಧ್ಯಯನ ನಡೆಸಲು ಸಮಯ ಉಪಯೋಗಿಸಿ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆದಲ್ಲಿ ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆಗೆ ಉತ್ತಮ ಪ್ರತಿಫಲ ಸಿಗಲು ಸಾಧ್ಯ.

English summary

How to Find Investment Ideas? Learn from Warren Buffett

Many investors, especially those who are new, do not know how to go about investing or where they can find ideas for investing.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more