For Quick Alerts
ALLOW NOTIFICATIONS  
For Daily Alerts

ನವ ದಂಪತಿಗಳು ಪಾಲಿಸಬೇಕಾದ ಸೂತ್ರಗಳು ಯಾವುವು?

|

ಮದುವೆಯಾದ ಹೊಸತರಲ್ಲಿನ ಸಂಭ್ರಮ ಹಾಗೂ ಸಂತಸದ ಕ್ಷಣಗಳು ಅವಿಸ್ಮರಣೀಯ. ಸಂಗಾತಿಗಳಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆರಂಭಿಸುವ ಸಮಯವದು. ಹೀಗೆ ದಿನಗಳೆದಂತೆ ಮದುವೆಯ ಹೊಸತನ ಮಾಯವಾಗುತ್ತ ವೈವಾಹಿಕ ಜೀವನದ ಬಗ್ಗೆ ಗಂಭೀರತೆ ಮೂಡಲಾರಂಭಿಸುತ್ತದೆ. ಜೀವನದ ವಾಸ್ತವ ಸತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತ ಅದಕ್ಕೆ ಹೊಂದಿಕೊಳ್ಳುತ್ತ ಸಾಗಬೇಕಾಗುತ್ತದೆ.

ಮದುವೆಯೊಂದು ಪವಿತ್ರ ಬಂಧನವಾಗಿದ್ದು, ಇದನ್ನು ಅಪಾರ ಪ್ರೀತಿಯಿಂದ ಹಾಗೂ ಅಷ್ಟೆ ವಾಸ್ತವಿಕ ದೃಷ್ಟಿಕೋನದಿಂದ ಗಟ್ಟಿಗೊಳಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಮಯ ಹಾಗೂ ಶ್ರಮ ಎರಡೂ ಅಗತ್ಯ. ಹಾಗೆಯೇ ಬಾಂಧವ್ಯ ವೃದ್ಧಿ ಹಾಗೂ ಹಣಕಾಸು ನಿರ್ವಹಣೆಗೂ ಸಮಯ ಹಾಗೂ ಪರಿಶ್ರಮಗಳು ಬೇಕೆ ಬೇಕು.

ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

 

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ನವ ದಂಪತಿಗಳಿಗೆ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ನವ ದಂಪತಿಗಳ ಜೀವನದಲ್ಲಿ ಹಣಕಾಸು ಶಿಸ್ತು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಹಣಕಾಸು ಶಿಸ್ತು ಮೂಡಿಸಲು ಬಜೆಟ್ ಹಾಕಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಉಳಿತಾಯ ಮೊದಲು, ನಂತರ ಖರ್ಚು ಎಂಬ ನೀತಿಯನ್ನು ಅಳವಡಿಸಿಕೊಂಡಲ್ಲಿ ನವ ದಂಪತಿಗಳ ಬಾಳು ಸುಖಮಯವಾಗುತ್ತದೆ.

ಹಣಕಾಸಿನ ಭದ್ರ ಬಂಧನ

ಹಣಕಾಸಿನ ಭದ್ರ ಬಂಧನ

ಗಟ್ಟಿ ಬಾಂಧವ್ಯಕ್ಕೆ ಹಣಕಾಸಿನ ಭದ್ರ ಅಡಿಪಾಯ ಮುಖ್ಯ

ಜೀವನದಲ್ಲಿ ಹಣವೇ ಎಲ್ಲವೂ ಅಲ್ಲವಾದರೂ ಅದಿಲ್ಲದೆ ಜೀವನವಿಲ್ಲ. ಹೀಗಾಗಿ ನವದಂಪತಿಗಳು ವೈವಾಹಿಕ ಜೀವನದ ಆರಂಭಿಕ ಸಮಯದಲ್ಲಿಯೇ ತಮ್ಮಿಬ್ಬರ ವೈಯಕ್ತಿಕ ಹಾಗೂ ಕುಟುಂಬದ ಹಣಕಾಸು ಗುರಿಗಳನ್ನು ನಿರ್ಧರಿಸಿ ಅವುಗಳಿಗೆ ತಕ್ಕಂತೆ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಉನ್ನತ ಶಿಕ್ಷಣ ಪಡೆಯುವುದು, ಹವ್ಯಾಸ, ಸಮಾಜ ಸೇವೆಗಾಗಿ ದಾನ ಮಾಡುವುದು, ಸಂತಾನ, ರಜಾ ದಿನಗಳ ಪ್ರಯಾಣ, ಕಾರು ಕೊಳ್ಳುವುದು, ಮನೆ ಹೊಂದುವುದು ಹೀಗೆ ಹಲವಾರು ಖರ್ಚುಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಸಂಗಾತಿಗಳಿಬ್ಬರೂ ಮುಕ್ತವಾಗಿ ಚರ್ಚಿಸಿ ಜೀವನದಲ್ಲಿ ಅವುಗಳ ಆದ್ಯತೆಯನ್ನು ನಿರ್ಧರಿಸಬೇಕು.

ಹಣಕಾಸಿನ ಅವಶ್ಯಕತೆ ಹಾಗೂ ಗುರಿಗಳನ್ನು ಮೊದಲು ದೀರ್ಘಾವಧಿ ಹಾಗೂ ಅಲ್ಪಾವಧಿಯ ಆದ್ಯತೆಯ ಆಧಾರದಲ್ಲಿ ವಿಂಗಡಿಸಿಕೊಳ್ಳಬೇಕು. ನಂತರ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಆದಷ್ಟೂ ಶಿಸ್ತಿನಿಂದ ಅದನ್ನು ಪಾಲನೆ ಮಾಡಬೇಕಾಗುತ್ತದೆ. ಮದುವೆಗೂ ಮುನ್ನವೆ ನೀವು ಯಾವುದೋ ಸಾಲ ಪಡೆದಿರಬಹುದು. ಅದನ್ನು ತೀರಿಸುವುದು ಹೇಗೆ ಎಂಬುದನ್ನು ಸಹ ಆದ್ಯತೆಯ ಮೇರೆಗೆ ನಿರ್ಧರಿಸಬೇಕಾಗುತ್ತದೆ. ಕುಟುಂಬದ ಒಟ್ಟು ಆದಾಯ ಹಾಗೂ ಖರ್ಚುಗಳ ಲೆಕ್ಕ ಹಾಕಿ ಇದಕ್ಕೆಲ್ಲ ಸೂಕ್ತ ಯೋಜನೆ ತಯಾರಿಸಬೇಕಾಗುತ್ತದೆ.

ಸುಭದ್ರತೆಗೆ ಯೋಜನೆ-ಹೂಡಿಕೆ ಮುಖ್ಯ
 

ಸುಭದ್ರತೆಗೆ ಯೋಜನೆ-ಹೂಡಿಕೆ ಮುಖ್ಯ

ಪ್ರತಿ ತಿಂಗಳು ನಿಮ್ಮ ಆದಾಯ, ಖರ್ಚು ಹಾಗೂ ಉಳಿತಾಯಗಳನ್ನು ಲೆಕ್ಕ ಮಾಡಿ ಹೂಡಿಕೆ ಮಾಡಿದ್ದಲ್ಲಿ ಅವುಗಳ ಬಗ್ಗೆಯೂ ಒಂದು ಪಟ್ಟಿ ತಯಾರಿಸಿಟ್ಟುಕೊಳ್ಳಿ. ಪರ್ಯಾಯ ಆದಾಯ ಮೂಲವಿದ್ದಲ್ಲಿ ಅದರ ಬಗ್ಗೆಯೂ ನಿಗಾ ವಹಿಸಿ. ಹಾಗೆಯೇ ಕ್ರೆಡಿಟ್ ಕಾರ್ಡ ಹಾಗೂ ಇನ್ನಿತರ ಸಾಲಗಳ ಬಗ್ಗೆ ಲೆಕ್ಕವಿರಲಿ.

ಇದೆಲ್ಲ ಮಾಡಿದ ನಂತರ ಕೊನೆಯದಾಗಿ ಇಬ್ಬರೂ ನಿಮ್ಮ ಸಾಮಾನ್ಯ ಹಣಕಾಸು ಗುರಿಯ ಬಗ್ಗೆ ನಿರ್ಧರಿಸಿ ಯಾವ ರೀತಿ ಹೂಡಿಕೆ ಮಾಡಬಹುದು ಎಂಬುದನ್ನು ಗುರುತಿಸಿ. ಉತ್ತಮ ಆದಾಯ ನೀಡದ ಹೂಡಿಕೆಗಳನ್ನು ಮಾಡಿದ್ದಲ್ಲಿ ಅಂಥವನ್ನು ಹಿಂಪಡೆದು ಒಳ್ಳೆಯ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ. ಇಷ್ಟು ಮಾಡಿದ್ದಲ್ಲಿ ಹೊಸ ಹೂಡಿಕೆ ಯೋಜನೆಗಳ ಬಗ್ಗೆ ಗಮನಹರಿಸಬಹುದಾಗಿದೆ. ನವದಂಪತಿಗಳು ದೀರ್ಘಾವಧಿಯಲ್ಲಿ ಯಾವೆಲ್ಲ ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸಿದರೆ ಉತ್ತಮ ಎಂಬ ಬಗ್ಗೆ 5 ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಅವನ್ನು ಪಾಲಿಸಿ ಹಣಕಾಸು ಭದ್ರತೆ ನಿಮ್ಮದಾಗಿಸಿಕೊಳ್ಳಿ.

ನವದಂಪತಿಗಳಿಗಾಗಿ 5 ಉತ್ತಮ ಹೂಡಿಕೆ ಯೋಜನೆಗಳನ್ನು ಇಲ್ಲಿ ನೀಡಲಾಗಿದೆ..

1. ರಿಯಲ್ ಎಸ್ಟೇಟ್

1. ರಿಯಲ್ ಎಸ್ಟೇಟ್

ಸ್ವಂತ ಮನೆ ಹೊಂದುವುದು ಬಹುತೇಕ ಭಾರತೀಯರ ಆದ್ಯತೆಯ ವಿಷಯಗಳಲ್ಲೊಂದಾಗಿದೆ. ಸ್ವಂತ ಮನೆ ಮಾಡಿಕೊಳ್ಳುವುದು ಇಂದಿಗೂ ಅತಿ ದುಬಾರಿ ಖರ್ಚಿನ ವಿಷಯವಾಗಿದ್ದು ಜೀವನದಲ್ಲಿನ ಬಹುತೇಕ ಉಳಿತಾಯದ ಹಣವನ್ನು ಇದಕ್ಕಾಗಿ ಮೀಸಲಿಡಬೇಕಾಗುತ್ತದೆ. ಹೊಸ ಜೀವನ ಆರಂಭಿಸುವಾಗ ಸ್ವಂತ ಮನೆ ಮಾಡಿಕೊಳ್ಳಲು ಆದ್ಯತೆ ನೀಡುವುದು ಉತ್ತಮವಾಗಿದೆ.

ಆದರೆ ನವದಂಪತಿಗಳು ತಮ್ಮ ಇತಿಮಿತಿಗಳನ್ನು ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮನೆ ಕೊಳ್ಳುವ ಅಥವಾ ನಿರ್ಮಿಸುವ ಬಗ್ಗೆ ನಿರ್ಧರಿಸಬೇಕು. ಉತ್ತಮ ಬಡಾವಣೆ, ರಸ್ತೆ ಸಂಪರ್ಕ, ಮೂಲಭೂತ ಸೌಕರ್ಯಗಳಿರುವ ಪ್ರದೇಶದಲ್ಲಿ ಮನೆ ಮಾಡುವುದು ಸೂಕ್ತ. ಹೀಗೆ ಮಾಡಿದಲ್ಲಿ ಮುಂದೆ ಯಾವತ್ತೋ ಅದನ್ನು ಮಾರಬೇಕೆಂದಾಗ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯ ಸಿಗುವಂತಾಗುತ್ತದೆ.

ಆದರೆ ನಿಮ್ಮ ಪ್ರಸ್ತುತ ಹಾಗೂ ಭವಿಷ್ಯದ ಹಣಕಾಸು ಸ್ಥಿತಿಗತಿಗಳನ್ನು ಲೆಕ್ಕ ಹಾಕಿಯೇ ಮನೆಯ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಮನೆ ಕೊಂಡ ಮೇಲೆ ಜೀವನದ ನಿತ್ಯ ಖರ್ಚುಗಳಿಗೆ ಪರದಾಡುವಂತಾಗದಂತೆ ನೋಡಿಕೊಳ್ಳಬೇಕು. ಇನ್ನು ಕೇವಲ ವಾಸದ ದೃಷ್ಟಿಯಿಂದ ಮಾತ್ರವಲ್ಲದೆ ಉತ್ತಮ ಹೂಡಿಕೆಯಾಗಿಯೂ ಮನೆಯ ಮೇಲೆ ಹಣ ತೊಡಗಿಸಬಹುದು. ಹಣದುಬ್ಬರವನ್ನು ಮೀರಿ ಆಸ್ತಿಯ ಮೌಲ್ಯ ಬೆಳೆಯುವುದರಿಂದ ಇದೊಂದು ಉತ್ತಮ ಹೂಡಿಕೆಯಾಗಿದೆ. ಜೊತೆಗೆ ಮನೆಯನ್ನು ಬಾಡಿಗೆಗೆ ನೀಡಿ ಪರ್ಯಾಯ ಆದಾಯದ ಮೂಲ ಕಂಡುಕೊಳ್ಳಬಹುದು.

2. ಮಾಸಿಕ ಸಿಪ್ ಯೋಜನೆ (ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್)

2. ಮಾಸಿಕ ಸಿಪ್ ಯೋಜನೆ (ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್)

ತಮ್ಮ ಬಳಿ ದೊಡ್ಡ ಮೊತ್ತದ ಹಣ ಉಳಿತಾಯವಾದ ನಂತರವೇ ಹೂಡಿಕೆ ಆರಂಭಿಸೋಣ ಎಂಬುದು ಬಹುತೇಕ ನವದಂಪತಿಗಳ ಅನಿಸಿಕೆಯಾಗಿರುತ್ತದೆ. ಆದರೆ ಇದು ಸರಿಯಲ್ಲ. ಸಣ್ಣ ಸಣ್ಣ ಉಳಿತಾಯಗಳಿಂದಲೇ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು ಎಂಬುದು ತಿಳಿಯದ ಕಾರಣದಿಂದ ಇಂತ ಒಂದು ತಪ್ಪು ಗ್ರಹಿಕೆ ಮನೆ ಮಾಡಿದೆ. ದೊಡ್ಡ ಮೊತ್ತ ಸಂಗ್ರಹವಾಗಲಿ ಎಂದು ಕಾಯುತ್ತ ಅನಿರ್ದಿಷ್ಟಾವಧಿಯವರೆಗೆ ಹೂಡಿಕೆಯನ್ನು ಮುಂದೂಡುತ್ತ ಹೋಗುವುದು ಜಾಣತನವಲ್ಲ. ಸಣ್ಣ ಮೊತ್ತದಿಂದಲೇ ಹೇಗೆ ಉಳಿತಾಯ ಆರಂಭಿಸಬಹುದು ಎಂಬುದನ್ನು ತಿಳಿಯೋಣ.

ಮ್ಯೂಚುವಲ್ ಫಂಡ್‌ಗಳ ಇಕ್ವಿಟಿ ಯೋಜನೆಯ ಸಿಪ್‌ನಲ್ಲಿ ಮಾಸಿಕ ಕೇವಲ 1 ಸಾವಿರ ರೂಪಾಯಿ ತೊಡಗಿಸುತ್ತ ಹೋದಲ್ಲಿ ಮುಂದಿನ 20 ವರ್ಷಗಳಲ್ಲಿ 1 ಕೋಟಿ ರೂಪಾಯಿ ಉಳಿತಾಯ ಮಾಡಬಹುದು ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ?

ನಿಜವಾಗಿಯೂ ಇದು ಸಾಧ್ಯ. ಸಿಪ್ ಯೋಜನೆಯಲ್ಲಿ ಮಾಸಿಕವಾಗಿ ಸಣ್ಣ ಮೊತ್ತ ಹೂಡಿಕೆ ಮಾಡುತ್ತ ದೊಡ್ಡ ಮೊತ್ತದ ಆದಾಯ ಗಳಿಸಬಹುದು. ಇಕ್ವಿಟಿ ಆಧರಿತ ಸಿಪ್ ಯೋಜನೆಗಳಲ್ಲಿ ರಿಸ್ಕ್ ಅಂಶ ಜಾಸ್ತಿ ಇರುವುದರಿಂದ ಜಾಗೃತಿಯಿಂದ ಹೂಡಿಕೆ ಮಾಡುವುದು ಉತ್ತಮ.

3. ಜೀವ ವಿಮೆ

3. ಜೀವ ವಿಮೆ

ಬಹುತೇಕ ದಂಪತಿಗಳು ಜೀವವಿಮೆಯ ಬಗ್ಗೆ ನಿರಾಸಕ್ತಿ ಹೊಂದಿರುತ್ತಾರೆ. ಪಾಲಿಸಿ ಹೊಂದಿದ ಕುಟುಂಬದ ಪ್ರಮುಖ ಸದಸ್ಯನಿಗೆ ಜೀವನ ಪರ್ಯಂತ ವಿಮೆಯ ಭದ್ರತೆ ನೀಡುವುದರೊಂದಿಗೆ ಆಗಾಗ ಅದರಿಂದ ಬೋನಸ್ ಲಾಭಗಳು ಸಿಗುವುದು ಜೀವವಿಮೆಯ ವೈಶಿಷ್ಟ್ಯವಾಗಿದೆ. ವಿಮೆ ಹೊಂದಿದ ಕುಟುಂಬ ಸದಸ್ಯ ಅನಿರೀಕ್ಷಿತ ಸಾವಿಗೀಡಾದಲ್ಲಿ ಕುಟುಂಬಕ್ಕೆ ವಿಮೆಯ ಮೊತ್ತ ಸಿಗುತ್ತದೆ. ಅಂದರೆ ದಂಪತಿಗಳಿಬ್ಬರೂ ಜೀವವಿಮೆ ಕೊಂಡಿದ್ದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಏನಾದರೂ ಆದರೂ ಇನ್ನೊಬ್ಬರ ಮೇಲೆ ಹಣಕಾಸಿನ ಆಪತ್ತು ಬರದಂತೆ ತಡೆಯಬಹುದು. ಇದರಿಂದ ಕುಟುಂಬದ ಹಣಕಾಸು ಭದ್ರತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಇದರ ಜೊತೆಗೆ ತೆರಿಗೆ ವಿನಾಯಿತಿ ಸೌಲಭ್ಯಗಳು ಜೀವ ವಿಮೆಯ ಪ್ಲಸ್ ಪಾಯಿಂಟ್ ಆಗಿವೆ.

ಆದರೆ ವೈವಾಹಿಕ ಜೀವನದ ಆರಂಭದಲ್ಲಿಯೇ ಜೀವವಿಮೆ ಕೊಳ್ಳುವುದು ಸೂಕ್ತ. ವಿಮೆ ಕೊಳ್ಳಲು ತಡ ಮಾಡಿದಷ್ಟೂ ವಿಮಾ ಕಂತು ದುಬಾರಿಯಾಗುತ್ತವೆ ಹಾಗೂ ಅದರಿಂದ ದೊರಕುವ ಪ್ರಯೋಜನಗಳು ಕಡಿಮೆಯಾಗುತ್ತವೆ. ಇನ್ನು ಕಾಲಾವಧಿಯಲ್ಲಿ ಅನಾರೋಗ್ಯಕ್ಕೆ ತುತ್ತಾದಲ್ಲಿ ಜೀವ ವಿಮೆ ಖರೀದಿಸುವುದು ಮತ್ತೂ ದುಬಾರಿಯಾಗುತ್ತದೆ.

4. ಆರೋಗ್ಯ ವಿಮೆ

4. ಆರೋಗ್ಯ ವಿಮೆ

ಆರೋಗ್ಯ ಸೇವೆಗಳು ತೀರಾ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಆರೋಗ್ಯ ವಿಮೆ ಜೀವನದ ಅತಿ ಅಗತ್ಯ ಅಂಶಗಳಲ್ಲೊಂದಾಗಿದೆ. ನಿಮಗೆ ಈಗಾಗಲೇ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಆರೋಗ್ಯ ವಿಮೆಯ ಸೌಲಭ್ಯವಿದ್ದರೆ ಅದನ್ನು ಸಂಗಾತಿಗೂ ಅನ್ವಯಿಸುವಂತೆ ಮಾಡಬೇಕಾಗುತ್ತದೆ ಅಥವಾ ಕುಟುಂಬದ ಎಲ್ಲ ಸದಸ್ಯರಿಗೂ ಲಾಭವಾಗುವಂತೆ ಕುಟುಂಬ ಆರೋಗ್ಯ ವಿಮಾ ಪಾಲಿಸಿ ಪಡೆದುಕೊಳ್ಳಬೇಕು.

ಇನ್ನು ವಯಸ್ಸಾದ ಪಾಲಕರು ನಿಮ್ಮನ್ನು ಅವಲಂಬಿಸಿದ್ದರೆ ಅವರಿಗೂ ಆರೋಗ್ಯ ವಿಮೆ ಮಾಡಿಸುವುದು ಸೂಕ್ತ. ಅವರಿಗೆ ವಯಸ್ಸಾದಂತೆ ಸಹಜವಾಗಿಯೇ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತ ಚಿಕಿತ್ಸೆ ವೆಚ್ಚಗಳೂ ಹೆಚ್ಚಾಗುತ್ತ ಹೋಗುತ್ತವೆ. ಹಲವಾರು ಕಂಪನಿಗಳು ಹಿರಿಯ ನಾಗರಿಕರಿಗಾಗಿಯೇ ಆರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿವೆ. ಇವು ಕೊಂಚ ದುಬಾರಿ ಎನಿಸಿದರೂ ವಿಮೆಯ ಕವರೇಜ್ ದೃಷ್ಟಿಯಿಂದ ನೋಡಿದರೆ ವಿಮೆ ಮಾಡಿಸುವುದೇ ಜಾಣತನ.

ಮಾರುಕಟ್ಟೆಯಲ್ಲಿ ನೂರಾರು ಬಗೆಯ ಆರೋಗ್ಯ ವಿಮೆಯ ಯೋಜನೆಗಳು ಲಭ್ಯವಿವೆ. ಆದರೆ ಇವುಗಳಲ್ಲಿ ಅಡಕವಾಗಿರುವ ನಿಬಂಧನೆಗಳು, ಬಚ್ಚಿಟ್ಟ ವಿಷಯಗಳು ಇಂದಿಗೂ ಸಾಮಾನ್ಯ ನಾಗರಿಕರಿಗೆ ಗೊಂದಲಕಾರಿಯಾಗಿಯೇ ಇವೆ. ಹೀಗಾಗಿ ಆರೋಗ್ಯ ವಿಮೆ ಕೊಳ್ಳುವ ಮುನ್ನ ಸಾಕಷ್ಟು ಪರಿಶೀಲನೆ ನಡೆಸಿಯೇ ಮುಂದುವರಿಯಬೇಕು.

5. ಆಪತ್ ನಿಧಿ - ತುರ್ತು ನಿಧಿ

5. ಆಪತ್ ನಿಧಿ - ತುರ್ತು ನಿಧಿ

ಜೀವನ ಎಂಬುದು ಅನಿರೀಕ್ಷಿತತೆಗಳ ಸರಮಾಲೆಯಾಗಿದೆ. ಯಾವಾಗ ಏನು ಬೇಕಾದರೂ ಆಗಬಹುದು. ನಿಮ್ಮ ಅಥವಾ ಸಂಗಾತಿಯ ಕೆಲಸ ಹೋಗಬಹುದು, ಅನಾರೋಗ್ಯ ಬಾಧಿಸಬಹುದು, ಸಾವು ಸಂಭವಿಸಬಹುದು ಅಥವಾ ಇನ್ನಾವುದೋ ಪ್ರಕೃತಿ ವಿಕೋಪದಿಂದ ಭರಿಸಲಾಗದ ಹಾನಿಯಾಗಬಹುದು. ಹೀಗಾಗಿ ಎಲ್ಲ ಹೂಡಿಕೆಗಳ ಹೊರತಾಗಿ ಒಂದು ಆಪತ್ ನಿಧಿ ಅಥವಾ ತುರ್ತು ನಿಧಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಕನಿಷ್ಠ 3 ರಿಂದ 6 ತಿಂಗಳವರೆಗೆ ಜೀವನೋಪಾಯ ಸಾಗುವಷ್ಟು ತುರ್ತುನಿಧಿ ಸಂಗ್ರಹಿಸಿ ಇಟ್ಟುಕೊಂಡಿರಬೇಕಾಗುತ್ತದೆ.

ಈಗಾಗಲೇ ಹೂಡಿಕೆ ಮಾಡಿರುವ ಸ್ವತ್ತುಗಳನ್ನು ನಗದಾಗಿ ಪರಿವರ್ತಿಸಲು ಸಾಕಷ್ಟು ಸಮಯ ಬೇಕಾಗಬಹುದು. ಅಂಥ ಸಂದರ್ಭಗಳಲ್ಲಿ ಜೀವನ ನಿಂತ ನೀರಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ತುರ್ತು ನಿಧಿಯನ್ನು ಸಾಮಾನ್ಯ ಉಳಿತಾಯ ಖಾತೆಯಲ್ಲಿ ಅಥವಾ ನಿಶ್ಚಿತ ಠೇವಣಿ ರೂಪದಲ್ಲಿ ಅಥವಾ ಇನ್ನಾವುದಾದರೂ ಶೀಘ್ರವಾಗಿ ನಗದೀಕರಿಸಬಹುದಾದ ರೀತಿಯಲ್ಲಿ ಸಂಗ್ರಹಿಸಿ ಇಡುವುದು ಕ್ಷೇಮಕರ.

ಕೊನೆ ಮಾತು

ಕೊನೆ ಮಾತು

ಹಿಂದಿನ ಕಾಲದ ಜೀವನಕ್ಕೂ ಇಂದಿನ ಆಧುನಿಕ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಹಿಂದಿನ ನವ ದಂಪತಿಗಳಿಗಿಂತಲೂ ಇಂದಿನ ನವ ದಂಪತಿಗಳ ಮುಂದೆ ಸವಾಲುಗಳ ಬೆಟ್ಟವೇ ಇದೆ. ಇಂದಿನ ದಂಪತಿಗಳು ಆದಷ್ಟೂ ಬೇಗ ತಮ್ಮ ಜೀವನದ ಹಣಕಾಸು ನಿರ್ವಹಣೆಯ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕಾಗುತ್ತದೆ.

ಇಬ್ಬರೂ ಸಂಗಾತಿಗಳ ಮಧ್ಯೆ ಹಣಕಾಸು ಜವಾಬ್ದಾರಿಗಳ ಬಗ್ಗೆ ಮುಕ್ತ ಮಾತುಕತೆ ಮುಖ್ಯವಾಗಿದೆ. ಇಬ್ಬರ ಆದಾಯ ಹಾಗೂ ವೈಯಕ್ತಿಕ ಖರ್ಚುಗಳ ಬಗ್ಗೆ ಪಾರದರ್ಶಕವಾಗಿ ಚರ್ಚಿಸಿ ಯೋಜನೆ ರೂಪಿಸಿದಲ್ಲಿ ಜೀವನ ಸುಗಮವಾಗುತ್ತದೆ. ಸಂಗಾತಿಗಳಿಬ್ಬರೂ ಒಟ್ಟಾಗಿ ಹಣಕಾಸು ಜವಾಬ್ದಾರಿಯನ್ನು ಹೊತ್ತುಕೊಂಡಲ್ಲಿ ಜೀವನದಲ್ಲಿ ಎದುರಾಗಬಹುದಾದ ಎಲ್ಲ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು.

English summary

Best Investment Options for a Newly Married Couple?

Your common financial goals could be influenced by one or more goals – save to buy a home, buy a car, children’s education, plan for retirement, and so on.
Story first published: Tuesday, February 5, 2019, 10:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more