For Quick Alerts
ALLOW NOTIFICATIONS  
For Daily Alerts

ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

|

ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸಿನೆಸ್ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್ ಐಡಿಯಾ ಆಗಿ ಹೊರ ಹೊಮ್ಮುತ್ತಿದೆ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಮಳಿಗೆ ಬಾಡಿಗೆ ಹಿಡಿಯುವುದು ಅತಿ ಕಷ್ಟಕರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು ಅತಿ ಸಹಜವಾಗುತ್ತಿದೆ.

ಪಟ್ಟಣ ಹಾಗೂ ನಗರಗಳಲ್ಲಿ ಇಂದು ಒಂದು ಚಿಕ್ಕ ಮಳಿಗೆ ಬಾಡಿಗೆ ಹಿಡಿಯಬೇಕೆಂದರೂ ದೊಡ್ಡ ಮೊತ್ತದ ಭದ್ರತಾ ಠೇವಣಿ ಹಾಗೂ ಮಾಸಿಕ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್ನು ಸ್ವಂತದ ಮಳಿಗೆ ಖರೀದಿಸಬೇಕೆಂದರೆ ನೀವು ಶ್ರೀಮಂತರಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಆದರೆ ಈ ಎಲ್ಲ ಪ್ರತಿಕೂಲ ಸ್ಥಿತಿಗಳನ್ನು ಮೀರಿ ನೀವು ಮನೆಯಿಂದಲೇ ಲಾಭದಾಯಕವಾದ ಉದ್ಯಮ ಆರಂಭಿಸಿ ಹಣ ಸಂಪಾದಿಸಬಹುದು.

 

ಮನೆಯಿಂದಲೇ ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ?

ಪ್ರಾಮಾಣಿಕತೆ ಹಾಗೂ ಪರಿಶ್ರಮ ಇದ್ದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಮನೆಯಿಂದಲೇ ಮಾಡಬಹುದಾದ 18 ಪ್ರಮುಖ ಬಿಸಿನೆಸ್ ಐಡಿಯಾಗಳನ್ನು ಇಲ್ಲಿ ತಿಳಿಸಲಾಗಿದ್ದು, ನೀವೂ ನೋಡಿ.

1. ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಎಂಎಲ್‌ಎಂ

ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಇದು ಭಾರತದಲ್ಲಿ ಮನೆಯಿಂದಲೇ ಮಾಡಬಹುದಾದ ಅತಿ ಪ್ರಮುಖ ಬಿಸಿನೆಸ್ ಆಗಿದೆ. ಆರೋಗ್ಯ, ಪೌಷ್ಟಿಕಾಂಶ ಆಹಾರ, ಸೌಂದರ್ಯವರ್ಧಕ ವಸ್ತುಗಳು ಹೀಗೆ ಹಲವಾರು ಕ್ಷೇತ್ರಗಳ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ಜಾಲವನ್ನು ವೃದ್ಧಿಸುತ್ತಿರುವುದರಿಂದ ಎಂಎಲ್‌ಎಂ ವಲಯದಲ್ಲಿನ ಅವಕಾಶಗಳು ಹೆಚ್ಚಾಗುತ್ತಿವೆ.

ಅತೀ ಕಡಿಮೆ ಬಂಡವಾಳದಲ್ಲಿ ವರ್ಷಕ್ಕೆ 8-10 ಲಕ್ಷ ಹಣ ಗಳಿಸುವ ಬಿಸಿನೆಸ್

2. ಬೇಬಿ ಸಿಟ್ಟಿಂಗ್

ತೊಟ್ಟಿಲು ಮನೆ ಅಥವಾ ಬೇಬಿ ಸಿಟ್ಟಿಂಗ್ ಇದು ಮನೆಯಲ್ಲಿಯೇ ಮಾಡಬಹುದಾದ ಉತ್ತಮ ಕೆಲಸವಾಗಿದೆ. ಆದರೆ ಶಿಶು ಹಾಗೂ ಚಿಕ್ಕಮಕ್ಕಳನ್ನು ಪ್ರೀತಿ ಹಾಗೂ ಜತನದಿಂದ ನೋಡಿಕೊಳ್ಳುವ ಅನುಭವಿಕ ಹೆಂಗಸರು ಅಥವಾ ದಂಪತಿಗಳು ಮಾತ್ರ ಈ ವ್ಯವಹಾರಕ್ಕೆ ಕೈ ಹಾಕುವುದು ಸೂಕ್ತ. ಮಹಾನಗರಗಳು ಮಾತ್ರವಲ್ಲದೆ ಇಂದು ಎರಡನೆ ದರ್ಜೆಯ ನಗರಗಳಲ್ಲಿ ಸಹ ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಬೇಬಿ ಸಿಟ್ಟಿಂಗ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ಸಾಮಾನ್ಯವಾಗಿ ಉದ್ಯೋಗಸ್ಥ ಹೆಣ್ಣು ಮಕ್ಕಳಿಗೆ 3 ತಿಂಗಳು ಹೆರಿಗೆ ರಜೆ ಇರುತ್ತದೆ. ಹೀಗಾಗಿ ಹೆರಿಗೆಯ ಮೂರು ತಿಂಗಳ ನಂತರ ಅವರು ಕೆಲಸಕ್ಕೆ ಹೋಗುವುದು ಅನಿವಾರ್ಯ. ಅಂದರೆ ಕನಿಷ್ಠ ಮೂರು ತಿಂಗಳ ಕೂಸನ್ನು ಸಹ ನೀವು ಆರೈಕೆ ಮಾಡಲು ಸಂಪೂರ್ಣವಾಗಿ ಸಿದ್ಧರಿರಬೇಕಾಗುತ್ತದೆ. ಬೇಬಿ ಸಿಟ್ಟಿಂಗ್ ಆರಂಭಿಸಲು ಅಂಥ ದೊಡ್ಡ ಬಂಡವಾಳವೇನೂ ಬೇಕಿಲ್ಲ. ಮಕ್ಕಳಿಗೆ ಬರೆಯಲು ಕ್ರೇಯಾನ್ಸ್, ಪೇಪರು, ಆಟಿಕೆ, ಡೈಪರ್ಸ್, ಮಕ್ಕಳ ಊಟ ಹಾಗೂ ತಿಂಡಿ, ಪ್ರಥಮ ಚಿಕಿತ್ಸೆ ಕಿಟ್ ಮುಂತಾದ ಸಾಮಾನುಗಳೊಂದಿಗೆ ಬೇಬಿ ಸಿಟ್ಟಿಂಗ್ ಆರಂಭಿಸಬಹುದು.

3. ಕೇಟರಿಂಗ್
 

3. ಕೇಟರಿಂಗ್

ಕೇಟರಿಂಗ್ ಅಥವಾ ಊಟ, ತಿಂಡಿ ಸರಬರಾಜು ವ್ಯವಹಾರ ಅತಿ ಲಾಭದಾಯಕ ಬಿಸಿನೆಸ್ ಆಗಿದೆ. ಪಾರ್ಟಿಗಳು, ಮದುವೆ ಅಥವಾ ಇನ್ನಾವುದೇ ಮೀಟಿಂಗ್ ಹೀಗೆ ಯಾವುದೇ ಸಮಾರಂಭವಿದ್ದರೂ ಅಲ್ಲಿ ಊಟ, ತಿಂಡಿಯ ವ್ಯವಸ್ಥೆ ಆಗಲೇಬೇಕು. ಈಗ ಅಡುಗೆ ಮಾಡುತ್ತ ಕುಳಿತುಕೊಳ್ಳುವಷ್ಟು ಸಮಯ ಯಾರಿಗೂ ಇಲ್ಲ. ಹೀಗಾಗಿ ಎಲ್ಲವನ್ನೂ ರೆಡಿ ಮಾಡಿಕೊಂಡು ಸ್ಥಳಕ್ಕೆ ಬಂದು ಬಡಿಸುವ ಕೇಟರಿಂಗ್ ವ್ಯವಹಾರ ಜೋರಾಗಿ ನಡೆಯುತ್ತಿದೆ. ಇದನ್ನು ಆರಂಭಿಸಬೇಕಾದರೆ ಅಡುಗೆ ಕೌಶಲ, ಆಡಳಿತ ಜಾಣ್ಮೆ ಮುಂತಾದುವು ಇರಬೇಕಾಗುತ್ತದೆ.

ಇನ್ನು ಪಾರ್ಟಿ ಆರಂಭದಿಂದ ಮುಗಿಯುವವರೆಗೆ ಏನೇನು ತಿನಿಸುಗಳು ಬೇಕಾಗುತ್ತವೆ ಎಂಬುದನ್ನು ಲಿಸ್ಟ್ ಮಾಡಿ ಅದರ ಪ್ರಕಾರ ಬಡಿಸಬೇಕಾಗುತ್ತದೆ. ಅಲ್ಲದೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೆನು ತಯಾರಿಸಬೇಕಾಗುತ್ತದೆ. ಊರಿನಲ್ಲಿರುವ ಹೋಲಸೇಲ್ ವ್ಯಾಪಾರಸ್ಥರು ಹಾಗೂ ವೈನ್ ಶಾಪ್‌ಗಳೊಂದಿಗೆ ಮಾತನಾಡಿ ಕಡಿಮೆ ದರದಲ್ಲಿ ವಸ್ತುಗಳು ಸಿಗುವಂತೆ ಒಪ್ಪಂದ ಮಾಡಿಕೊಂಡರೆ ಲಾಭಾಂಶ ಹೆಚ್ಚಾಗುತ್ತದೆ.

4. ಸಾಂಪ್ರದಾಯಿಕ ಅಡುಗೆ

ಈ ವ್ಯವಹಾರ ಆರಂಭಿಸಲು ಸಹ ಅತ್ಯುತ್ತಮ ಅಡುಗೆ ಕೌಶಲ ಹೊಂದಿರುವುದು ಅತಿ ಅಗತ್ಯ ಅಂಶಗಳಲ್ಲೊಂದಾಗಿದೆ. ಸಾಂಪ್ರದಾಯಿಕ ಮಾಂಸಾಹಾರಿ ಆಹಾರ, ರುಚಿಕಟ್ಟಾದ ಉಪ್ಪಿನಕಾಯಿ, ರೆಡಿ ಟು ಮಿಕ್ಸ್ ಸಾಂಬಾರ ಪೌಡರ್, ಸಿಹಿ ತಿಂಡಿ ಸೇರಿದಂತೆ ಹಲವಾರು ಸಾಂಪ್ರದಾಯಿಕ ಶೈಲಿಯ ಅಡುಗೆಗಳ ವ್ಯಾಪಾರ ಆರಂಭಿಸಬಹುದಾಗಿದೆ.

ಅಡುಗೆ ಪದಾರ್ಥಗಳು ಬೇಗನೆ ಕೆಡುವ ವಸ್ತುವಾದ್ದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಚಿಕ್ಕ ಪ್ರಮಾಣಗಳಲ್ಲಿ ಆಹಾರ ತಯಾರಿಸುವುದು ಸೂಕ್ತ. ಊರಿನಲ್ಲಿರುವ ಸಾಂಪ್ರದಾಯಿಕ ಪದಾರ್ಥಗಳ ಅಂಗಡಿಯ ಮೂಲಕ ನಿಮ್ಮ ಆಹಾರ ವಸ್ತುಗಳನ್ನು ಮಾರಾಟ ಮಾಡಬಹುದು.

5. ಫೋಟೊಗ್ರಫಿ

ನಿಮ್ಮ ಬಳಿ ಉತ್ತಮ ಗುಣಮಟ್ಟದ ಡಿಜಿಟಲ್ ಕ್ಯಾಮೆರಾ ಹಾಗೂ ಪ್ಯಾರಾಬೊಲಿಕ್ ರಿಫ್ಲೆಕ್ಟರ್‌ಗಳಿದ್ದಲ್ಲಿ ನೀವು ಫೋಟೊಗ್ರಫಿ ಬಿಸಿನೆಸ್ ಆರಂಭಿಸಬಹುದು. ಮನೆಯಿಂದಲೇ ಮಾಡಬಹುದಾದ ಈ ವೃತ್ತಿಗೆ ಬೇಕಾಗಿರುವುದು ಉತ್ತಮ ಚಿತ್ರ ಸೆರೆ ಹಿಡಿಯುವ ಕೌಶಲ ಮಾತ್ರ.

6. ಊಟ ಸಪ್ಲೈ ಮಾಡುವುದು

ಊಟ ಅಥವಾ ಟಿಫಿನ್ ಸಪ್ಲೈ ಮಾಡುವುದು ಮನೆಯಿಂದಲೇ ಮಾಡಬಹುದಾದ ಮತ್ತೊಂದು ಅತ್ಯುತ್ತಮ ಬಿಸಿನೆಸ್ ಆಗಿದೆ. ಹೇಗಿದ್ದರೂ ಮನೆಯಲ್ಲಿ ನಿತ್ಯ ಅಡುಗೆ ತಯಾರಿಸಲಾಗುತ್ತದೆ. ಈ ವ್ಯವಹಾರ ಆರಂಭಿಸಿದಲ್ಲಿ ಅಲ್ಲಿಯೇ ಇನ್ನಷ್ಟು ಹೆಚ್ಚು ಪ್ರಮಾಣದ ಆಹಾರ ತಯಾರಿಸಬೇಕಾಗುತ್ತದೆ ಅಷ್ಟೆ.

ಆದರೆ ಈ ವ್ಯವಹಾರಕ್ಕೆ ಹೆಚ್ಚು ಸಂಖ್ಯೆಯ ಕೆಲಸಗಾರರು ಬೇಕಾಗುತ್ತಾರೆ ಎಂಬುದು ಗೊತ್ತಿರಲಿ. ತರಕಾರಿ ಹೆಚ್ಚಲು, ಪಾತ್ರೆ ತೊಳೆಯಲು, ಅಡುಗೆ ಪ್ಯಾಕ್ ಮಾಡಲು ಹೀಗೆ ಇನ್ನೂ ಹಲವಾರು ಕೆಲಸಗಳಿಗೆ ಕೆಲಸದವರನ್ನು ನೇಮಿಸಿಕೊಳ್ಳಬೇಕಾಗುತ್ತದೆ.

7. ಪ್ಯಾಕಿಂಗ್ ಹಾಗೂ ರಿ-ಪ್ಯಾಕಿಂಗ್

ಕೈಗಾರಿಕಾ ವಸಾಹತುಗಳು ಹಾಗೂ ವಾಣಿಜ್ಯ ಪ್ರದೇಶಗಳ ಹತ್ತಿರ ವಾಸಿಸುವವರಿಗೆ ಮನೆಯಿಂದಲೇ ಪ್ಯಾಕಿಂಗ್ ಹಾಗೂ ರಿ-ಪ್ಯಾಕಿಂಗ್ ಬಿಸಿನೆಸ್ ಆರಂಭಿಸಲು ಸೂಕ್ತವಾಗಿದೆ. ಕೈಗಾರಿಕೆಗಳಿಂದ ನಿಮಗೆ ವಸ್ತುಗಳು ತುಂಬಿದ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಆ ಬಾಕ್ಸ್‌ಗಳನ್ನು ಬಿಚ್ಚಿ ಅದರಲ್ಲಿ ಇರುವ ವಸ್ತುಗಳಲ್ಲಿ ಯಾವುದಾದರೂ ವಸ್ತು ಗುಣಮಟ್ಟದ್ದಾಗಿಲ್ಲದಿದ್ದರೆ ಅದನ್ನು ತೆಗೆದು ಬೇರೆ ಪೀಸ್ ಸೇರಿಸಬೇಕಾಗುತ್ತದೆ. ನಂತರ ಮತ್ತೆ ಬಾಕ್ಸ್ ಅನ್ನು ಮೊದಲಿನಂತೆ ಪ್ಯಾಕ್ ಮಾಡಿ ಕಳಿಸಬೇಕಾಗುತ್ತದೆ.

8. ಕಂಪ್ಯೂಟರ್ ರಿಪೇರಿ ಕೆಲಸ

ಪಿಸಿ ಅಥವಾ ಲ್ಯಾಪಟಾಪ್‌ಗಳನ್ನು ಹೇಗೆ ರಿಪೇರಿ ಮಾಡುವುದು ಎಂಬುದನ್ನು ಕಲಿಯುವುದು ಇತ್ತೀಚಿನ ದಿನಗಳಲ್ಲಿ ಅತಿ ಸುಲಭವಾಗಿದೆ. ನಿಮ್ಮೂರಿನಲ್ಲಿಯೇ ಹಲವಾರು ಸಂಸ್ಥೆಗಳು ಕಡಿಮೆ ಫೀಸ್‌ನಲ್ಲಿ ಕಂಪ್ಯೂಟರ್ ರಿಪೇರಿ ತರಬೇತಿ ನೀಡುತ್ತವೆ. ಇಂಥ ಕೋರ್ಸ್ ಕಲಿತುಕೊಂಡಲ್ಲಿ ಕೆಲವು ಬೇಸಿಕ್ ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ಮನೆಯಲ್ಲಿಯೇ ಕಂಪ್ಯೂಟರ್ ರಿಪೇರಿ ಕೆಲಸ ಆರಂಭಿಸಬಹುದು.

9. ಮುತ್ತು, ಹವಳ ಪೋಣಿಸುವುದು

ಮುತ್ತು ಹಾಗೂ ಹವಳ ಪೋಣಿಸುವಿಕೆ ವ್ಯವಹಾರ ಸಹ ಮನೆಯಿಂದ ಮಾಡಲು ಉತ್ತಮವಾಗಿದೆ. ಫ್ಯಾನ್ಸಿ ಡ್ರೆಸ್‌ಗಳಿಗೆ ಮುತ್ತು ಪೋಣಿಸುವುದು ಅಥವಾ ಆಧ್ಯಾತ್ಮಿಕ ಪ್ರಾರ್ಥನೆಯ ಸರ ಮಾಡುವುದು ಅಥವಾ ಗ್ರಾಹಕರ ಬೇಡಿಕೆಗೆ ತಕ್ಕಂತೆ ಅವರ ಡ್ರೆಸ್‌ಗಳಿಗೆ ಮಿಂಚುವ ಮುತ್ತು ಪೋಣಿಸುವುದು ಹೀಗೆ ಹಲವಾರು ಕೆಲಸಗಳನ್ನು ಮಾಡಿ ದುಡ್ಡು ಸಂಪಾದಿಸಬಹುದು.

10. ಬಿಟ್ ಕಾಯಿನ್ ಮೈನಿಂಗ್

ಬಿಟ್ ಕಾಯಿನ್ ಮೈನಿಂಗ್ ಬಗ್ಗೆ ಬಹುತೇಕ ನೀವು ಈವರೆಗೂ ಕೇಳಿರಲಿಕ್ಕಿಲ್ಲ. ಆದರೆ ಜಗತ್ತಿನ ಅತಿ ದೊಡ್ಡ ಕ್ರಿಪ್ಟೊ ಕರೆನ್ಸಿಯಾಗಿರುವ ಬಿಟ್ ಕಾಯಿನ್ ಭಾರತೀಯ ಹೂಡಿಕೆದಾರರಿಗೆ ಅಚ್ಚುಮೆಚ್ಚಿನ ಹೂಡಿಕೆ ಮಾರ್ಗವಾಗಿ ಹೊರಹೊಮ್ಮಿದೆ.

ಬಿಟ್ ಎಂಬುದು ವಾಸ್ತವದಲ್ಲಿ ಕಾಣದ ಕರೆನ್ಸಿಯಾಗಿದ್ದು ಇದಕ್ಕೆ ಇಂಟರನೆಟ್ ಜಗತ್ತಿನಲ್ಲಿ ಮಾತ್ರ ಅಸ್ತಿತ್ವವಿದೆ. ಈ ಬಿಟ್ ಕಾಯಿನ್ ವ್ಯವಹಾರಗಳನ್ನು ನೋಡಿಕೊಳ್ಳುವವರನ್ನು 'ಬ್ಲಾಕ್ ಚೇನ್' ಕರೆಯಲಾಗುತ್ತದೆ ಹಾಗೂ ಇವುಗಳನ್ನು 'ಬ್ಲಾಕ್' ಗಳಾಗಿ ಬಂಡಲ್ ಮಾಡುವವರಿಗೆ ಬಿಟ್ ಕಾಯಿನ್ ಮೈನರ್ಸ್ ಎಂದು ಕರೆಯಲಾಗುತ್ತದೆ.

11. ಯೋಗ ಹಾಗೂ ಧ್ಯಾನದ ಕ್ಲಾಸ್ ನಡೆಸುವುದು

ಒತ್ತಡದ ಆಧುನಿಕ ಜೀವನ ಶೈಲಿಯು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಯೋಗ ಹಾಗೂ ಧ್ಯಾನಕ್ಕೆ ಎಲ್ಲಿಲ್ಲದ ಮಹತ್ವ ಬರುತ್ತಿದೆ. ನೀವು ಒಂದು ಬಾರಿ ಯೋಗ ಹಾಗೂ ಧ್ಯಾನವನ್ನು ಕಲಿತರೆ ಮನೆಯಲ್ಲಿಯೇ ಈ ಕೋರ್ಸ್‌ಗಳನ್ನು ಆರಂಭಿಸಬಹುದು. ಕೆಲವು ಬ್ಯಾಚ್‌ಗಳಲ್ಲಿ ಕೋರ್ಸ್ ಆರಂಭಿಸಿದಲ್ಲಿ ಉತ್ತಮ ಹಣ ಸಂಪಾದನೆ ಮಾಡಬಹುದಾಗಿದೆ.

12. ವಾಸ್ತು ಹಾಗೂ ಫೆಂಗ್ ಶುಯಿ ಕನ್ಸಲ್ಟನ್ಸಿ

ನಮ್ಮ ದೇಶದಲ್ಲಿ ಪುರಾತನ ಕಾಲದಿಂದಲೂ ಹಲವಾರು ನಂಬಿಕೆಗಳು ಬೆಳೆದು ಬಂದಿವೆ. ತಮ್ಮ ಹೊಸ ಆಫೀಸು ಅಥವಾ ಮನೆಯನ್ನು ಯಾವ ರೀತಿ ಸಿಂಗರಿಸಬೇಕು ಎಂಬುದನ್ನು ತಿಳಿಯಲು ಹಲವಾರು ಜನ ವಾಸ್ತು ಹಾಗೂ ಫೆಂಗ್ ಶುಯಿ ನಿಪುಣರನ್ನು ಭೇಟಿ ಮಾಡುತ್ತಾರೆ. ಇನ್ನು ಜೀವನದಲ್ಲಿ ಕೆಟ್ಟ ಸಮಯ ನಡೆದಾಗ ಸಹ ಜನರಿಗೆ ಇಂಥ ಸಲಹೆ ಬೇಕಾಗುತ್ತವೆ. ವಾಸ್ತು ಎಂಬುದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸರಿಯಾದ ಉಪಯೋಗದ ಬಗ್ಗೆ ತಿಳಿಸಿದರೆ, ಫೆಂಗ್ ಶುಯಿ ಎಂಬುದು ಚೀನಾದ ವಾಸ್ತು ಶಾಸ್ತ್ರವಾಗಿದೆ.

13. ಗ್ರಾಫಿಕ್ ಡಿಸೈನಿಂಗ್

ಗ್ರಾಫಿಕ್ ಡಿಸೈನ್ ಸ್ಟುಡಿಯೊ ಆರಂಭಿಸುವುದು ಮನೆಯಿಂದಲೇ ಮಾಡಬಹುದಾದ ಮತ್ತೊಂದು ಉತ್ತಮ ಬಿಸಿನೆಸ್ ಐಡಿಯಾ ಆಗಿದೆ. ಇದಕ್ಕಾಗಿ ನಿಮ್ಮ ಬಳಿ ಗ್ರಾಫಿಕ್ ಕಾರ್ಡ್ ಅಳವಡಿಸಿದ ಶ್ರೇಷ್ಠ ಗುಣಮಟ್ಟದ ಕಂಪ್ಯೂಟರ್ ಇರುವುದು ಅವಶ್ಯಕ. ಲೋಗೊ, ಸೈನ್ ಬೋರ್ಡ್‌ಗಳು, ಜಾಹೀರಾತು ಡಿಸೈನ್, ಆಮಂತ್ರಣ ಪತ್ರಿಕೆ ಡಿಸೈನ್ ಹೀಗೆ ಹಲವಾರು ಕೆಲಸಗಳನ್ನು ಗ್ರಾಫಿಕ್ ಡಿಸೈನ್ ಒಳಗೊಂಡಿದೆ. ಜೊತೆಗೆ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪುಸ್ತಕಗಳ ಮುಖಪುಟವನ್ನು ಸಹ ವಿನ್ಯಾಸ ಮಾಡಿಕೊಡಬಹುದಾಗಿದೆ.

14. ಟೇಲರಿಂಗ್

ಒಳ್ಳೆಯ ಹೊಲಿಗೆ ಮಶೀನ್ ಇದ್ದವರು ಹಾಗೂ ಟೇಲರಿಂಗ್ ಜ್ಞಾನ ಹೊಂದಿದವರು ಟೇಲರಿಂಗ್ ವೃತ್ತಿಯನ್ನು ಆರಂಭಿಸಬಹುದಾಗಿದೆ. ಹೊಸ ವಿನ್ಯಾಸದ ಡ್ರೆಸ್ ಹೊಲಿಯುವಿಕೆ, ವಿವಾಹ ವಿಶೇಷ ಉಡುಪುಗಳ ತಯಾರಿ ಹಾಗೂ ಇನ್ನಿತರ ವಿಶೇಷ ಸಂದರ್ಭಗಳ ಡ್ರೆಸ್ ತಯಾರಿಸುವುದರಿಂದ ಹೆಚ್ಚು ಆದಾಯ ಗಳಿಸಬಹುದು. ಮನೆಯ ಹತ್ತಿರದಲ್ಲೇ ಇರುವ ಶಾಲೆ ಅಥವಾ ಬಾಲವಾಡಿಗಳನ್ನು ಸಂಪರ್ಕಿಸಿ ಅವರಿಗೆ ಯೂನಿಫಾರ್ಮ ಹೊಲಿದು ಕೊಡುವ ಗುತ್ತಿಗೆಯನ್ನು ಸಹ ಹಿಡಿಯಬಹುದು.

15. ಸೋಪ್ ತಯಾರಿಕೆ

ಸುವಾಸಿತ ಹಾಗೂ ಉತ್ತಮ ಗುಣಮಟ್ಟದ ಸೋಪನ್ನು ಮನೆಯಲ್ಲಿ ತಯಾರಿಸಲು ಒಂದಿಷ್ಟು ಪೂರ್ವ ಜ್ಞಾನ ಬೇಕಾಗುತ್ತದೆ. ವಿವಿಧ ರೀತಿಯ ಗಿಡಮೂಲಿಕೆಗಳು, ಬೀಜಗಳು, ಬೇರು, ಹಣ್ಣು ಮುಂತಾದುವುಗಳ ಗುಣಗಳ ಬಗ್ಗೆ ವಿಶೇಷ ಜ್ಞಾನವಿದ್ದಲ್ಲಿ ವಿಶಿಷ್ಟ ರೀತಿಯ ಸೋಪುಗಳನ್ನು ತಯಾರಿಸಿ ಗ್ರಾಹಕರನ್ನು ಆಕರ್ಷಿಸಬಹುದು. ಹಾಗೆಯೇ ಎಣ್ಣೆಗಳ ಬಗ್ಗೆ ವಿಶೇಷ ಜ್ಞಾನ ಇದ್ದರೆ ಇನ್ನೂ ಹೆಚ್ಚು ಅನುಕೂಲ.

16. ಗಿಫ್ಟ್ ವಸ್ತುಗಳ ತಯಾರಿಕೆ

ಒಟ್ಟು ಎರಡು ಬಗೆಯಲ್ಲಿ ಗಿಫ್ಟ್ ವಸ್ತುಗಳನ್ನು ತಯಾರಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಸಿಗದಂಥ ಕೈಯಿಂದಲೇ ತಯಾರಿಸಿದ ವಿಶಿಷ್ಟ ರೀತಿಯ ಗಿಫ್ಟ್ ವಸ್ತುಗಳನ್ನು ತಯಾರಿಸುವುದು ಲಾಭದಾಯಕವಾಗಿದೆ. ಹಲವಾರು ಗ್ರಾಹಕರು ಎಲ್ಲ ಕಡೆಯೂ ಸಿಗದಂಥ ವಿಶಿಷ್ಟ ಗಿಫ್ಟ್ ವಸ್ತುಗಳ ಹುಡುಕಾಟದಲ್ಲಿರುತ್ತಾರೆ. ಕೈಯಿಂದ ತಯಾರಿಸಿದ ಸಾಂಪ್ರದಾಯಿಕ ರೀತಿಯ ವಸ್ತುಗಳ ಮೂಲಕ ಇವರನ್ನು ಸೆಳೆಯಬಹುದು.

17. ವಿಮಾ ಏಜೆಂಟ್ ಆಗುವುದು

ವಿಮಾ ಏಜೆನ್ಸಿ ಹಾಗೂ ವಿಮಾ ಏಜೆಂಟ್ ಎರಡೂ ವಿಭಿನ್ನ ವೃತ್ತಿಗಳಾಗಿವೆ. ವಿಮಾ ಏಜೆಂಟ್ ಆದವರು ನಿರ್ದಿಷ್ಟ ಕಂಪನಿಯ ವಿಮಾ ಉತ್ಪನ್ನಗಳನ್ನು ಪಾರ್ಟ ಟೈಂ ಆಗಿ ಅಥವಾ ಫುಲ್ ಟೈಂ ಆಗಿ ಗ್ರಾಹಕರಿಗೆ ಮಾರುತ್ತಾರೆ. ಇನ್ನು ವಿಮಾ ಏಜೆನ್ಸಿ ಮಾಡಿದರೆ ವಿವಿಧ ಕಂಪನಿಗಳ ಜೀವವಿಮೆ, ಆರೋಗ್ಯ ವಿಮೆ, ವಾಹನ ವಿಮೆ ಹೀಗೆ ಹಲವಾರು ರೀತಿಯ ವಿಮಾ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಬಹುದಾಗಿದೆ.

18. ವೆಬ್ಸೈಟ್ ಡಿಸೈನಿಂಗ್

ಐಟಿ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರು ಮನೆಯಿಂದಲೇ ಸುಲಭವಾಗಿ ವೆಬ್ಸೈಟ್ ಡಿಸೈನಿಂಗ್ ಕೆಲಸ ಆರಂಭಿಸಬಹುದು. ಇದು ತುಂಬಾ ಲಾಭದಾಯಕ ಬಿಸಿನೆಸ್‌ಗಳಲ್ಲೊಂದಾಗಿದೆ. ವೆಬ್ಸೈಟ್ ಡಿಸೈನಿಂಗ್‌ನ ಬೇಸಿಕ್ ಜ್ಞಾನ ಹಾಗೂ ಹೆಚ್ಚಿನ ಕ್ರಿಯಾಶೀಲತೆಯಿಂದ ಉತ್ತಮ ಗುಣಮಟ್ಟದ ವೆಬ್ಸೈಟ್‌ಗಳನ್ನು ತಯಾರಿಸಿದರೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಈಗ ಗೊ ಡ್ಯಾಡಿ ಹಾಗೂ ಬಿಗ್ ರಾಕ್ ನಂಥ ವೆಬ್ಸೈಟ್‌ಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಡೊಮೈನ್ ನೇಮ್‌ಗಳು ಲಭ್ಯವಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ವೆಬ್ಸೈಟ್ ಮೂಲಕ ಮನೆಯಿಂದಲೇ ಜನ ಯಾವುದೇ ರೀತಿಯ ಬಿಸಿನೆಸ್ ಆರಂಭಿಸಬಹುದಾಗಿದ್ದು, ಅವರಿಗೆ ಸರಿಹೊಂದುವಂತಹ ವೆಬ್ಸೈಟ್ ಮಾಡಿ ಕೊಟ್ಟಲ್ಲಿ ಉತ್ತಮ ಹಣ ಸಂಪಾದಿಸಬಹುದು.

ಮನೆಯಿಂದಲೇ ಬಿಸಿನೆಸ್ ಆರಂಭಿಸುವ ಮುನ್ನ ಈ ವಿಷಯಗಳತ್ತ ಒಮ್ಮೆ ಗಮನಹರಿಸಿ

ಯಾವುದೇ ವ್ಯವಹಾರ ಆರಂಭಿಸುವ ಮುನ್ನ ಆ ವಿಷಯಕ್ಕೆ ಸಂಬಂಧಿಸಿದಂತೆ ಆಳವಾದ ಜ್ಞಾನ ನಿಮ್ಮಲ್ಲಿದೆಯಾ ಎಂಬುದನ್ನು ಮೊದಲು ಪರಿಶೀಲಿಸಬೇಕು. ಹಾಗೆಯೇ ನೀವು ಆರಂಭಿಸಬೇಕೆಂದುಕೊಂಡಿರುವ ವ್ಯಾಪಾರ ಹಾಗೂ ತಯಾರಿಸುವ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಎಷ್ಟು ಡಿಮ್ಯಾಂಡ್ ಇದೆ ಎಂಬುದನ್ನು ಸಹ ಸರ್ವೆ ಮಾಡಿ ತಿಳಿದುಕೊಳ್ಳುವುದು ಅತಿ ಅವಶ್ಯ. ಅದಕ್ಕಾಗಿ ಈ ಕೆಳಗಿನ ಅಂಶಗಳ ಬಗ್ಗೆ ಅಧ್ಯಯನ ನಡೆಸುವುದು ಸೂಕ್ತ.

* ನಿಮ್ಮ ಗ್ರಾಹಕರು ಯಾರು ಎಂಬುದನ್ನು ಗುರುತಿಸುವಿಕೆ.

* ಈಗಾಗಲೇ ಮಾರುಕಟ್ಟೆಯಲ್ಲಿ ಅದೇ ರೀತಿಯ ವ್ಯಾಪಾರ ಮಾಡುತ್ತಿರುವ ಕಂಪನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು.

* ನೀವು ತಯಾರಿಸಬೇಕೆಂದಿರುವ ವಸ್ತುಗಳ ಮಾರುಕಟ್ಟೆ ಮೌಲ್ಯ.

* ಕಾನೂನಾತ್ಮಕ ಪ್ರಕ್ರಿಯೆಗಳು ಏನಾದರೂ ಇದ್ದಲ್ಲಿ.

* ಸರಿಯಾದ ದರ ನಿಗದಿ.

* ನಿಮ್ಮ ಉತ್ಪನ್ನಗಳನ್ನು ಸೂಕ್ತವಾಗಿ ಜಾಹಿರಾತು ಹಾಗೂ ಮಾರ್ಕೆಟಿಂಗ್ ಮಾಡುವುದು.

ಒಟ್ಟಾರೆಯಾಗಿ ಉತ್ತಮ ಕೌಶಲ ಹಾಗೂ ಪರಿಶ್ರಮದಿಂದ ಕೆಲಸ ಮಾಡಿದಲ್ಲಿ ಮನೆಯಿಂದಲೇ ಲಾಭದಾಯಕವಾಗಿ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ.

Read more about: business ideas money investment
English summary

Successful 18 Home Based Business Ideas

Setting up a home based business in India is perhaps the most prudent thing to do nowadays.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more