For Quick Alerts
ALLOW NOTIFICATIONS  
For Daily Alerts

ಸಾಲಗಾರರಿಗೆ, ಸಾಲ ಪಡೆಯುವವರಿಗೆ ಈ ಅಂಶಗಳು ಗೊತ್ತಿರಲಿ

|

ಸಾಲ ಎಂಬುದು ಹೊನ್ನ ಶೂಲವಿದ್ದಂತೆ ಎಂಬ ಗಾದೆ ಮಾತು ಜನಜನಿತ. ಅನವಶ್ಯಕ ವಸ್ತುಗಳ ಖರೀದಿಗೆ, ಶೋಕಿಗೆ ಸಾಲ ಮಾಡುವುದು ನಾವಾಗಿಯೇ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ. ಗ್ರಾಹಕನೊಬ್ಬನಿಗೆ ವಸ್ತುಗಳ ಖರೀದಿಗೆ ಎಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯವಿದೆ ಹಾಗೂ ಅದನ್ನೂ ಮೀರಿ ಆತ ಎಷ್ಟು ಖರ್ಚು ಮಾಡಲು ಬಯಸುತ್ತಾನೆ ಎಂಬುದರ ಮಧ್ಯದ ಅಂತರವೇ ಸಾಲ ನೀಡುವ ಕಂಪನಿಗಳಿಗೆ ವರದಾನವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಹಣಕಾಸು ಕಂಪನಿಗಳು ಅತ್ಯಂತ ಸುಲಭವಾಗಿ ಹಾಗೂ ಸರಳ ಪ್ರಕ್ರಿಯೆಗಳ ಮೂಲಕ ಸಾಲ ನೀಡುತ್ತಿವೆ. ಆದರೆ ಹಾಗಂತ ಅನವಶ್ಯಕವಾಗಿ ಸಾಲ ಮಾಡುವುದು, ಬಡ್ಡಿ ತೆರುವುದು ಯಾವತ್ತೂ ಸರಿಯಲ್ಲ. ಹೀಗಾಗಿ ಸಾಲ ಪಡೆಯುವ ಮುನ್ನ ಕೆಲವು ಮುಖ್ಯ ಅಂಶಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ವಿವಿಧ ಹಣಕಾಸು ಕಂಪನಿಗಳು ವಿಧಿಸುವ ಬಡ್ಡಿದರ, ನಿರ್ವಹಣಾ ಶುಲ್ಕ ಹಾಗೂ ಇನ್ನಿತರ ಶುಲ್ಕಗಳ ಬಗ್ಗೆ ಜಾಗೃತರಾಗಬೇಕು. ಸಾಲ ತೆಗೆದುಕೊಳ್ಳುವ ಮುಂಚೆ ಈ ಕೆಳಗಿನ ಅಂಶಗಳನ್ನು ತಿಳಿದುಕೊಂಡು ಪಾಲಿಸಿ ನೀವೂ ಜಾಣ ಸಾಲಗಾರರಾಗಬಹುದು.

 

ಸಾಲ ಪಡೆಯುವ ಮುನ್ನ ತಿಳಿದುಕೊಂಡಿರಬೇಕಾದ ಪ್ರಮುಖ ಅಂಶಗಳು:

ಮರುಪಾವತಿಯ ಸಾಮರ್ಥ್ಯ ಮೀರಿ ಸಾಲ ಮಾಡಬೇಡಿ

ಮರುಪಾವತಿಯ ಸಾಮರ್ಥ್ಯ ಮೀರಿ ಸಾಲ ಮಾಡಬೇಡಿ

ಒಂದೊಮ್ಮೆ ಇರುವ ಹಣದಲ್ಲಿಯೇ ನಿಮ್ಮ ಅಗತ್ಯಗಳು ಪೂರೈಸಬಲ್ಲವಾದರೆ ಸಾಲ ಪಡೆಯದಿರುವುದೇ ಕ್ಷೇಮಕರ. ಏನೇ ಆದರೂ ಸಾಲದ ಇಎಂಐ ಮಾಸಿಕ ಸಂಬಳದ ಶೇ.50 ರಷ್ಟನ್ನು ಮೀರದಂತಿರಲಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುಂಚೆ ಇಎಂಐ ಕ್ಯಾಲ್ಕುಲೇಟರ್ ಮೂಲಕ ಇಎಂಐ ಲೆಕ್ಕ ಹಾಕಿಕೊಳ್ಳಿ. ಒಂದು ವೇಳೆ ಸಾಲದ ಇಎಂಐ ನಿಮ್ಮ ಮಾಸಿಕ ಗಳಿಕೆಯ ಶೇ.50 ರಿಂದ 70ರ ಆಸುಪಾಸಿನಲ್ಲಿದ್ದರೆ ಭವಿಷ್ಯದ ಜೀವನಕ್ಕಾಗಿ ನಿಮಗೆ ಉಳಿತಾಯ ಮಾಡಲು ಸಾಧ್ಯವಾಗದು. ಇಂಥ ಸಂದರ್ಭಗಳಲ್ಲಿ ನಿಮ್ಮ ನಿವೃತ್ತಿ ಜೀವನ ಹಾಗೂ ಮಕ್ಕಳ ವಿದ್ಯಾಭ್ಯಾಸದ ಹಣಕಾಸು ಯೋಜನೆಗಳ ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಎದುರಾಗಬಹುದು. ಸಾಲ ಹಾಗೂ ಆದಾಯ ಇವುಗಳ ಮಧ್ಯೆ ಸಮತೋಲನವಿರುವಂತೆ ಮಾತ್ರ ಸಾಲ ಪಡೆದುಕೊಳ್ಳಿ.

ಶೋಕಿಗಾಗಿ ಸಾಲ ಮಾಡಕೂಡದು

ಶೋಕಿಗಾಗಿ ಸಾಲ ಮಾಡಕೂಡದು

ಮನಸೋ ಇಚ್ಛೆ ಖರ್ಚು ಮಾಡಲು ಸಾಲ ಮಾಡುವುದು ಮೂರ್ಖತನ. ಪ್ರವಾಸ ಕೈಗೊಳ್ಳಲು ಹಲವಾರು ಹಣಕಾಸು ಸಂಸ್ಥೆಗಳು ಸಾಲದ ಆಫರ್ ನೀಡುತ್ತಲೇ ಇರುತ್ತವೆ. ಆದರೆ ಮೋಜಿನ ಪ್ರವಾಸಕ್ಕಾಗಿ ದೊಡ್ಡ ಮೊತ್ತದ ಸಾಲ ಪಡೆದರೆ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ. ಪ್ರವಾಸ ಮಾಡುವುದೇ ಆದಲ್ಲಿ ನಿಮ್ಮ ಉಳಿತಾಯದ ಹಣದಿಂದಲೇ ಮಾಡುವುದು ಸೂಕ್ತ. ಇನ್ನು ಮನರಂಜನಾ ಉದ್ದೇಶಗಳಿಗಾಗಿ ಸಾಲ ಪಡೆದಲ್ಲಿ ಅದು ಖಂಡಿತವಾಗಿಯೂ ನಿಮ್ಮನ್ನು ಸಾಲದ ಬಲೆಯಲ್ಲಿ ಸಿಲುಕಿಸುತ್ತದೆ. ಹಾಗೆಯೇ ಸಾಲದ ಹಣವನ್ನು ಯಾವುದೋ ಹೂಡಿಕೆ ಯೋಜನೆಗಳಲ್ಲಿ ಯಾವತ್ತೂ ತೊಡಗಿಸಬಾರದು. ಎಷ್ಟೇ ಸುರಕ್ಷಿತ ಹೂಡಿಕೆಯಾಗಿರಲಿ ಅಥವಾ ಹೆಚ್ಚು ಆದಾಯ ನೀಡುವ ಹೂಡಿಕೆಯಾಗಿರಲಿ ಅವು ಸಾಲದ ಬಡ್ಡಿಗಿಂತ ಹೆಚ್ಚು ಆದಾಯ ನೀಡಲು ಸಾಧ್ಯವಿಲ್ಲ.

ಮರುಪಾವತಿ ಅವಧಿ ಆದಷ್ಟೂ ಚಿಕ್ಕದಾಗಿರಲಿ
 

ಮರುಪಾವತಿ ಅವಧಿ ಆದಷ್ಟೂ ಚಿಕ್ಕದಾಗಿರಲಿ

ಸಣ್ಣ ಮೊತ್ತದ ಇಎಂಐ ಆಮಿಷವೊಡ್ಡುವ ಹಣಕಾಸು ಕಂಪನಿಗಳು ಗ್ರಾಹಕ ಆದಷ್ಟೂ ಹೆಚ್ಚು ಮರುಪಾವತಿ ಅವಧಿಯನ್ನು ಆರಿಸಿಕೊಳ್ಳುವಂತೆ ಪ್ರಚೋದಿಸುತ್ತವೆ. ಗೃಹಸಾಲದ ವಿಷಯದಲ್ಲಿ ನೋಡಿದರೆ ಅತಿ ಹೆಚ್ಚು ಅಂದರೆ 30 ವರ್ಷಗಳವರೆಗೆ ಮರುಪಾವತಿ ಅವಧಿ ಸಿಗುತ್ತದೆ. ಆದರೆ ನಿಮ್ಮ ಇಎಂಐ ಪಾವತಿಸುವ ಸಾಮರ್ಥ್ಯ ನೋಡಿಕೊಂಡು ಆದಷ್ಟೂ ಕಡಿಮೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮರುಪಾವತಿ ಅವಧಿ ಹೆಚ್ಚಾದಷ್ಟೂ ಸಾಲಕ್ಕೆ ತೆರಬೇಕಾದ ಬಡ್ಡಿಯ ಒಟ್ಟು ಮೊತ್ತ ಹೆಚ್ಚಾಗುತ್ತ ಹೋಗುತ್ತದೆ. ಇಎಂಐ ಕ್ಯಾಲ್ಕುಲೇಟರ್ ಮೂಲಕ ವಿವಿಧ ಇಎಂಐ ಮೊತ್ತ ಹಾಗೂ ಅವಧಿಗಳನ್ನು ಚೆಕ್ ಮಾಡಿ. ನೀವು ಪಾವತಿಸಬಹುದಾದ ಗರಿಷ್ಠ ಇಎಂಐ ನೊಂದಿಗೆ ಕಡಿಮೆ ಮರುಪಾವತಿ ಅವಧಿಯನ್ನು ಆಯ್ದುಕೊಳ್ಳಿ.

ಸಾಲ ಮರುಪಾವತಿಯನ್ನು ಮುಂದೂಡಬೇಡಿ

ಸಾಲ ಮರುಪಾವತಿಯನ್ನು ಮುಂದೂಡಬೇಡಿ

ಯಾವುದೇ ರೀತಿಯ ಸಾಲ ಪಡೆದರೂ ಅದನ್ನು ಕಾಲಕಾಲಕ್ಕೆ ಮರುಪಾವತಿ ಮಾಡುವುದು ಅಗತ್ಯ. ಮರುಪಾವತಿ ವಿಷಯದಲ್ಲಿ ಶಿಸ್ತಿನಿಂದಿದ್ದರೆ ಹಣಕಾಸು ಜೀವನ ಉತ್ತಮವಾಗಿದ್ದು, ಸಾಕಷ್ಟು ಹಣ ಉಳಿತಾಯವಾಗುತ್ತದೆ. ತಡವಾದ ಇಎಂಐಗಳಿಗೆ ದಂಡ, ಚಕ್ರಬಡ್ಡಿ ಕಟ್ಟುವುದನ್ನು ತಪ್ಪಿಸಬಹುದು. ಅಲ್ಲದೆ ಇಎಂಐ ಪಾವತಿ ತಪ್ಪಿಸುವುದರಿಂದ ಕ್ರೆಡಿಟ್ ಪ್ರೊಫೈಲ್ ಹಾಳಾಗಿ ಭವಿಷ್ಯದಲ್ಲಿ ಸುಲಭವಾಗಿ ಸಾಲ ಸಿಗದಂತಾಗುತ್ತದೆ. ಜೀವನದಲ್ಲಿ ಉಳಿತಾಯ ಮಾಡುವುದು ಹಾಗೂ ಅದನ್ನು ಹೂಡಿಕೆ ಮಾಡುವುದು ಅಗತ್ಯವಾದರೂ, ಸಾಲದ ಮರುಪಾವತಿ ನಿಲ್ಲಿಸಿ ಹೂಡಿಕೆ ಮಾಡುವುದು ಸರಿಯಲ್ಲ. ನಿರ್ದಿಷ್ಟ ತಿಂಗಳಲ್ಲಿ ಎಲ್ಲ ಇಎಂಐಗಳನ್ನು ಕಟ್ಟಲು ಹಣ ಕಡಿಮೆ ಇದ್ದರೆ ಕನಿಷ್ಠ ಬಡ್ಡಿ ಹಾಗೂ ದಂಡದ ಮೊತ್ತಗಳನ್ನಾದರೂ ಚುಕ್ತಾ ಮಾಡಲು ಪ್ರಯತ್ನಿಸಿ.

ಕಡಿಮೆ ಬಡ್ಡಿದರಗಳ ಬಗ್ಗೆ ಪರಿಶೀಲಿಸಿ

ಕಡಿಮೆ ಬಡ್ಡಿದರಗಳ ಬಗ್ಗೆ ಪರಿಶೀಲಿಸಿ

ಸಾಲ ಪಡೆಯುವ ಮುನ್ನ ಯಾವ ಹಣಕಾಸು ಕಂಪನಿ ಅತಿ ಕಡಿಮೆ ಬಡ್ಡಿ ವಿಧಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸಾಲ ನೀಡುವ ಕ್ಷೇತ್ರದಲ್ಲಿ ಸಾಕಷ್ಟು ಪೈಪೋಟಿ ಇದ್ದು ಬ್ಯಾಂಕ್ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಆಗಾಗ ಹೊಸ ಬಡ್ಡಿದರಗಳನ್ನು ಘೋಷಿಸುತ್ತಿರುತ್ತವೆ. ಇಂಥ ಆಫರ್‌ಗಳ ಬಗ್ಗೆ ತಿಳಿದುಕೊಂಡು ಆದಷ್ಟೂ ಕಡಿಮೆ ಬಡ್ಡಿದರದ ಯೋಜನೆ ಆರಿಸಿಕೊಳ್ಳಬೇಕು. ಈಗಾಗಲೇ ಸಾಲ ಮಾಡಿದ್ದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬಡ್ಡಿಯ ಸಾಲಕ್ಕೆ ಬ್ಯಾಲೆನ್ಸ್ ಟ್ರಾನ್ಸಫರ್ ಮಾಡಿಕೊಂಡು ಉಳಿತಾಯ ಮಾಡಬಹುದು. ಒಂದು ವೇಳೆ ಅವಧಿಪೂರ್ವ ಸಾಲ ತೀರಿಸಲು ಬಯಸಿದಲ್ಲಿ ಅದಕ್ಕಾಗಿ ಕಂಪನಿ ವಿಧಿಸುವ ಶುಲ್ಕದ ಬಗ್ಗೆ ಮೊದಲು ತಿಳಿದುಕೊಳ್ಳಿ. ಅದನ್ನು ಕಟ್ಟಿದ ಮೇಲೆಯೂ ನಿಮಗೆ ಸಾಕಷ್ಟು ಬಡ್ಡಿ ಉಳಿತಾಯವಾಗುವಂತಿದ್ದರೆ ಮಾತ್ರ ಮುಂದುವರೆಯಬೇಕು.

ತೆರಿಗೆ ವಿನಾಯಿತಿಗಾಗಿ ಸಾಲ ಉಳಿಸಿಕೊಳ್ಳುವುದು ಬೇಡ

ತೆರಿಗೆ ವಿನಾಯಿತಿಗಾಗಿ ಸಾಲ ಉಳಿಸಿಕೊಳ್ಳುವುದು ಬೇಡ

ಕೆಲವು ರೀತಿಯ ಸಾಲಗಳ ಮೇಲೆ ಸರಕಾರ ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಉದಾಹರಣೆಗೆ ನೋಡುವುದಾದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ಹಾಗೂ 80ಇಇ ಅಡಿಯಲ್ಲಿ ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಹಾಗೆಯೇ ಶೈಕ್ಷಣಿಕ ಸಾಲದ ಬಡ್ಡಿ ಸಹ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಇಂಥ ಸಾಲಗಳಿಂದ ತೆರಿಗೆ ಉಳಿಯುತ್ತಿದೆ ಎಂಬ ಒಂದೇ ಕಾರಣದಿಂದ ಇವನ್ನು ಕಟ್ಟಿ ಮುಗಿಸದೆ ಹಾಗೆಯೇ ಉಳಿಸಿಕೊಳ್ಳುವುದು ಸರಿಯಲ್ಲ. ಸಾಲಕ್ಕಾಗಿ ಎಷ್ಟು ಬಡ್ಡಿ ಹೋಗುತ್ತಿದೆ ಹಾಗೂ ಅದೇ ಹಣವನ್ನು ಬೇರೆಡೆ ಹೂಡಿಕೆ ಮಾಡಿದ್ದಲ್ಲಿ ಎಷ್ಟು ಗಳಿಸಬಹುದು ಎಂಬ ಅಂಶಗಳನ್ನು ಹೋಲಿಕೆ ಮಾಡಿ ನೋಡಬೇಕಾಗುತ್ತದೆ.

ಕೊನೆ ಮಾತು

ಕೊನೆ ಮಾತು

ಸಾಲ ಪಡೆಯುವುದು ಈಗಿನ ದಿನಗಳಲ್ಲಿ ಅತ್ಯಂತ ಸುಲಭವಾಗಿದೆ. ಪರ್ಸನಲ್ ಲೋನ್, ಹೋಮ್ ಲೋನ್, ಕ್ರೆಡಿಟ್ ಕಾರ್ಡ್, ಇಎಂಐ ಕಾರ್ಡ್ ಹೀಗೆ ಹಲವಾರು ರೂಪಗಳಲ್ಲಿ ಸಾಲ ಸಿಗುತ್ತದೆ. ಆದರೆ ನಿಮ್ಮ ಅವಶ್ಯಕತೆ ಹಾಗೂ ಮರುಪಾವತಿಯ ಸಾಮರ್ಥ್ಯ ಮೀರಿ ಸಾಲದ ಬಲೆಗೆ ಬೀಳದಂತೆ ಜಾಗರೂಕರಾಗಿರಿ. 'ಬಡ್ಡಿ ಎಂಬುದು ಮಳೆ ಇಲ್ಲದೆ ಬರುವ ಬೆಳೆ' ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡಿ.

Read more about: loan money finance news
English summary

Want to be a smart borrower? Follow these 6 rules

Technology has made it easier for borrowers to compare interest rates offered by different lenders and zero in on an option that best matches their needs.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more