For Quick Alerts
ALLOW NOTIFICATIONS  
For Daily Alerts

ಕೊರೊನಾ ಗಂಟುಮೂಟೆ ಕಟ್ಟಿದ ಮೇಲೆ..."ದುಡ್ಡಿನ ವಿಚಾರದಲ್ಲಿ ಹೇಗಿರಬೇಕು?"

By ಅನಿಲ್ ಆಚಾರ್
|

ಕೊರೊನಾ ಆತಂಕ ನಮ್ಮನ್ನು ಬಿಟ್ಟು ಯಾವಾಗ ದೂರ ಆಗಬಹುದು ಎಂಬ ಬಗ್ಗೆ ಯಾರಿಗೂ ನಿಖರವಾದ ಅಂದಾಜಿಲ್ಲ. ಆದರೆ ಇದು ಬಿಟ್ಟುಹೋದ ನಂತರ ಬದುಕು ಈ ಹಿಂದಿನ ರೀತಿ ಇರೋದಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯ. ವರ್ಕ್ ಫ್ರಮ್ ಹೋಂ, ಮನೆಯಲ್ಲಿ ಕುಟುಂಬದ ಜತೆಗೆ ಸಮಯ ಕಳೆಯೋದು, ಮನೆಯಿಂದ ಆಚೆಯೇ ಹೋಗದಂತೆ ಉಳಿಯೋದು.. ಏನೆಲ್ಲ ನಮ್ಮೆಲ್ಲರ ಪಾಲಿನ ಕನಸುಗಳಾಗಿದ್ದವೋ ಅದು ಇಂದು ನಿಜವಾಗಿದೆ.

ಆದರೆ, ಅದೇ ಕನಸು ನಿಜವಾಗಿರುವುದು ನಮ್ಮ ಭಯಕ್ಕೂ ಕಾರಣವಾಗಿದೆ. ಕೆಲವರಂತೂ ಕೊರೊನಾ ಆತಂಕ ದೂರವಾದರೂ ಸರ್ಕಾರವೇ ಬಿಗ್ ಬಾಸ್ ಥರ ನಮ್ಮನ್ನು ನಿಯಂತ್ರಿಸುತ್ತದೆ ಎನ್ನುವ ಕ್ರಿಯೇಟಿವ್ ಭವಿಷ್ಯ ನುಡಿಯುತ್ತಿದ್ದಾರೆ. ಇರಲಿ, ಕೊರೊನಾ ಗಂಟುಮೂಟೆ ಕಟ್ಟುಕೊಂಡು ನಮ್ಮೆಲ್ಲರಿಂದ ಕಳಚಿಕೊಳ್ಳುತ್ತದೆ ಅಂದುಕೊಳ್ಳೋಣ. ಆಗ ಮತ್ತೆ ಮಾಮೂಲಿ ಬದುಕಿನ ಬಂಡಿ ಸಾಗಬೇಕಲ್ಲ, ಅದಕ್ಕೆ ಎಂಥ ಸಿದ್ಧತೆ ಬೇಕು? ಅದನ್ನೇ ಈ ಲೇಖನದಲ್ಲಿ ವಿವರಿಸಲಾಗುತ್ತಿದೆ.

 

ಎಷ್ಟು ಸಿಂಪಲ್ಲಾಗಿ ಸಾಧ್ಯವೋ ಅಷ್ಟು ಸಿಂಪಲ್ ಆದ ವಿವರಗಳು ನಿಮಗಾಗಿ.

ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ

ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ

ಹಣವನ್ನು, ಅದರಲ್ಲೂ ನಗದನ್ನು ನಿಮ್ಮ ಅಗತ್ಯಕ್ಕೆ ಸಿಗುವಂತೆ ಇಟ್ಟುಕೊಳ್ಳಿ. ತುಂಬ ಎಚ್ಚರಿಕೆಯಿಂದ ಖರ್ಚು ಮಾಡಿ. ಈಗಿನ ಪರಿಸ್ಥಿತಿಯಲ್ಲಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಥವಾ ಎಷ್ಟು ಸಂಬಳ ಬರುತ್ತಿತ್ತೋ ಅದಕ್ಕಿಂತ ಕಡಿಮೆ ಬರಬಹುದು, ಮತ್ತೂ ಒಂದು ಸಾಧ್ಯತೆ ಅಂದರೆ ಅಂದುಕೊಂಡಷ್ಟು ವೇತನ ಹೆಚ್ಚಳ ಆಗದಿರಬಹುದು. ಅಥವಾ ವೇತನ ಹೆಚ್ಚಳವೇ ಆಗದಿರಬಹುದು. ಸಾಧ್ಯವಾದಷ್ಟು ಮಟ್ಟಿಗೆ ಬ್ಯಾಂಕ್ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ. ಸ್ವಲ್ಪ ಸಮಯದ ಮಟ್ಟಿಗೆ ನಿರುದ್ಯೋಗ ಅನಿವಾರ್ಯ ಅಂತಾದರೆ ಸಂದರ್ಭಕ್ಕೆ ಅಗತ್ಯವಾದ ಕಲಿಕೆ ಕಡೆಗೆ ಗಮನ ನೀಡಿ. ತಾಳ್ಮೆಯಿಂದ ಇರುವುದನ್ನು, ಸಾಮಾಜಿಕವಾಗಿ, ಬೌದ್ಧಿಕವಾಗಿ ಗಟ್ಟಿಯಾಗಿ ಇರುಬೇಕಾದದ್ದನ್ನು ರೂಢಿಸಿಕೊಳ್ಳಿ.

ಸಾಲ ಬೇರೆ ಅಲ್ಲ, ಕಾಯಿಲೆ ಬೇರೆ ಅಲ್ಲ
 

ಸಾಲ ಬೇರೆ ಅಲ್ಲ, ಕಾಯಿಲೆ ಬೇರೆ ಅಲ್ಲ

ಇಂಥ ಸನ್ನಿವೇಶದಲ್ಲಿ ಸಾಲ ಬೇರೆ ಅಲ್ಲ, ಕಾಯಿಲೆ ಬೇರೆ ಅಲ್ಲ. ಸಾಲ ಮಾಡಲೇಬೇಡಿ. ಸಾಧ್ಯವಾದಷ್ಟೂ ಕ್ರೆಡಿಟ್ ಕಾರ್ಡ್ ಬಳಸಬೇಡಿ. ಈ ಹಿಂದೆ ಕ್ರೆಡಿಟ್ ಕಾರ್ಡ್ ಮೊತ್ತವನ್ನು ಹೇಗೆ ಪೂರ್ತಿ ಪಾವತಿಸುತ್ತಿದ್ದರೋ ಅದೇ ರೀತಿ ಮಾಡಿ. ಕನಿಷ್ಠ ಪಕ್ಷ ಕೊರೊನಾ ಪೂರ್ತಿಯಾಗಿ ತೊಲಗಿ ಹೋಗುವ ತನಕ ಡೆಬಿಟ್ ಕಾರ್ಡ್ ಮಾತ್ರ ಬಳಸಿ. ಒಂದು ವೇಳೆ ಈಗಾಗಲೇ ಮಾಡಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಕಷ್ಟ ಅಂತಾದಲ್ಲಿ ಸಂಬಂಧಪಟ್ಟವರ ಚರ್ಚೆ ಮಾಡಿ, ವಾಸ್ತವ ಸ್ಥಿತಿಯನ್ನು ತಿಳಿಸಿ, ಪರಿಹಾರ ಮಾರ್ಗಗಳ ಬಗ್ಗೆ ಆಲೋಚಿಸಿ. ತುಂಬ ಶ್ರಮಪಟ್ಟು ಗಳಿಸಿದ ಆಸ್ತಿಯನ್ನು ಮಾರಾಟ ಮಾಡಬೇಕಾದ ಸಂದರ್ಭ ಬಂದಲ್ಲಿ ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರಿ. ಅಂದುಕೊಂಡಿದ್ದಕ್ಕಿಂತ ಕಡಿಮೆ ಬೆಲೆ ಬಂದರೂ ಪರವಾಗಿಲ್ಲ. ಅದು ಚಿನ್ನ ಇರಬಹುದು ಅಥವಾ ಹೂಡಿಕೆ ಉದ್ದೇಶದಿಂದ ಖರೀದಿ ಮಾಡಿದ ಭೂಮಿಯೇ ಇರಬಹುದು. ಷೇರು, ಎಫ್. ಡಿ. ಯಾವುದಾದರೂ ಅಷ್ಟೇ. ನಿಮ್ಮ ತುರ್ತು ಪರಿಸ್ಥಿತಿಗೆ ಅಂತಲೇ ಇರುವಂಥವು ಎಂಬುದು ತಿಳಿದಿರಲಿ. ಸಮಯ ಚೆನ್ನಾಗಿ ಆದ ಮೇಲೆ ಇವೆಲ್ಲವನ್ನೂ ನೀವು ಖರೀದಿಸಬಹುದು. ಆದರೆ ಆಸ್ತಿ ಮೇಲೆ ಸಾಲ ಮಾಡುವಂಥ ರಿಸ್ಕ್ ಮೈಮೇಲೆ ಎಳೆದುಕೊಳ್ಳಬೇಡಿ.

ಸಟ್ಟಾ ವ್ಯವಹಾರಕ್ಕೋ ಜೂಜಾಟಕ್ಕೋ ಸಮಯ ಅಲ್ಲ

ಸಟ್ಟಾ ವ್ಯವಹಾರಕ್ಕೋ ಜೂಜಾಟಕ್ಕೋ ಸಮಯ ಅಲ್ಲ

ಕೆಲವರು ರಿಟೈರ್ ಮೆಂಟ್ ನಂತರ ಬೇಕಾಗುತ್ತದೆ ಎಂದು ಹಣ ಉಳಿತಾಯ ಮಾಡುತ್ತಿರಬಹುದು. ಇದನ್ನು ಯಾವ ಕಾರಣಕ್ಕೂ ಬಳಸುವುದು ಬೇಡ ಅಂದುಕೊಂಡಿದ್ದಿರಬಹುದು. ಆದರೆ ನಿಮ್ಮ ಆದಾಯಕ್ಕೆ ಖೋತಾ ಆಗುವ ಸಂದರ್ಭ ಬಂದಲ್ಲಿ ಅದನ್ನು ಬಳಸುವ ಆಯ್ಕೆ ಮುಕ್ತವಾಗಿಟ್ಟುಕೊಳ್ಳಿ. ಸಾಲ ಪಡೆಯುವುದಕ್ಕಿಂತ ಅಥವಾ ಆಸ್ತಿಯನ್ನು ಅಗ್ಗದ ಬೆಲೆಗೆ ಮಾರುವುದಕ್ಕಿಂತ ಅಥವಾ ಕ್ರೆಡಿಟ್ ಕಾರ್ಡ್ ಸಾಲ ಏರಿಕೆ ಮಾಡಿಕೊಳ್ಳುವುದಕ್ಕಿಂತ ಇದು ಉತ್ತಮ. ಒಂದು ಗುರಿಯ ಸಲುವಾಗಿ ಮತ್ತೊಂದು ಗುರಿಯನ್ನು ಕೈಬಿಡುತ್ತಿದ್ದೀರಿ, ಅಷ್ಟೆ ಎಂಬುದನ್ನು ನೆನಪಿನಲ್ಲಿಡಿ. ಹ್ಞಾಂ, ಇನ್ನೊಂದು ಮಾತು. ಕೆಲವು ಬುದ್ಧಿವಂತರು ಸಲಹೆ ಕೊಡುತ್ತಾರೆ. "ಆಸ್ತಿ ಖರೀದಿ ಮಾಡುವುದಕ್ಕೆ ಇದು ಸರಿಯಾದ ಸಮಯ ಅಥವಾ ಷೇರುಗಳ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಈಗ ಖರೀದಿ ಮಾಡಿದರೆ ಒಳ್ಳೆ ಲಾಭ ಮಾಡಬಹುದು" ಎನ್ನುತ್ತಾರೆ. ಅಂಥವರ ಮಾತಿಗೆ ಬಲಿಯಾಗಬೇಡಿ. ಸಟ್ಟಾ ವ್ಯವಹಾರಕ್ಕೋ ಅಥವಾ ಜೂಜಾಡುವುದಕ್ಕೋ ಇದು ಸಮಯ ಅಲ್ಲ.

ಆರೋಗ್ಯವನ್ನು ಕಾಪಾಡಿಕೊಳ್ಳಿ

ಆರೋಗ್ಯವನ್ನು ಕಾಪಾಡಿಕೊಳ್ಳಿ

ನಿಮ್ಮ ಕಣ್ಣು- ಕಿವಿಗಳನ್ನು ಜಾಗೃತವಾಗಿಟ್ಟುಕೊಳ್ಳಿ. ಈಗಾಗಲೇ ಮಾಡುತ್ತಿರುವ ಕೆಲಸದ ಜತೆಗೆ ಹೊಸ ಅವಕಾಶಗಳನ್ನು ಎದುರು ನೋಡಿ. ನಿಮಗಿರುವ ಕೌಶಲದ ಮೂಲಕ ಸಂಪಾದನೆ ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದು ಚಿಂತಿಸಿ. ಇ ಕಾಮರ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಂಥವೆಲ್ಲ ದಿಢೀರ್ ಪ್ರವರ್ಧಮಾನಕ್ಕೆ ಬಂದವು. ಕಲಿತ ವಿದ್ಯೆ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕೊರೊನಾ ನಂತರ ಯಾವುದಕ್ಕೆ ಬೇಡಿಕೆ ಬರಬಹುದು ಎಂಬುದನ್ನು ಆಲೋಚಿಸಿ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಯಾರಿಗೆ ಗೊತ್ತು, ಈಗಿರುವುದಕ್ಕಿಂತ ಹೆಚ್ಚು ಹೊಸ ಅವಕಾಶದಲ್ಲಿ ಮಿಂಚುವುದಕ್ಕೆ ನಿಮಗೆ ಅವಕಾಶ ಸಿಗಬಹುದು. ಈ ಕೊರೊನಾ ಬಿಕ್ಕಟ್ಟಿನಿಂದ ಎಲ್ಲರೂ ಪಾಠ ಕಲಿತು ಬಿಡುತ್ತಾರೆ, ದೊಡ್ಡ ಮಟ್ಟದ ಸ್ಪರ್ಧೆ ಎದುರಾಗಬಹುದು ಎಂದುಕೊಳ್ಳಬೇಡಿ. ಗಾಬರಿ ಆಗದೆ, ಹೊಸ ಚೈತನ್ಯದೊಂದಿಗೆ ಹೊರಬರುವ ವ್ಯಕ್ತಿಗೆ ಅವಕಾಶಗಳು ಹುಟ್ಟಬಹುದೇನೋ! ಆದರೆ ಈಗಿನ ಸ್ಥಿತಿಯನ್ನೇ ನೆನೆದು ಚಿಂತಿಸುತ್ತಾ ಕೂರುವುದು ಪ್ರಯೋಜನ ಇಲ್ಲ. ಕೊರೊನಾ ನಂತರ ಈ ವಿಶ್ವ ಹೀಗಾಗುತ್ತದೆ, ಹಾಗಾಗುತ್ತದೆ ಅನ್ನೋ ಭವಿಷ್ಯವಾಣಿಯನ್ನೆಲ್ಲ ಮಜಾ ತಗೊಂಡು ಓದಿ. ವಾಸ್ತವದಲ್ಲಿ ಬದುಕಿ. ನಿಮ್ಮ ಬಳಿ ಇರುವ ಹಣವನ್ನು ನಿರ್ವಹಿಸುವುದು ಕಲಿಯಿರಿ. ಜತೆಗೆ ಆರೋಗ್ಯ ಕಾಪಾಡಿಕೊಳ್ಳಿ.

English summary

After Corona How Will Be Our Personal Finance Decision?

After Corona vanishes what are the personal finance matters need to be address? Here is an explainer.
Story first published: Monday, April 13, 2020, 14:25 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more