ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
ಕೇಂದ್ರ ಬಜೆಟ್ 2021ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ರು. 1 ಲಕ್ಷದ ತನಕ ಹೆಚ್ಚಳ ಮಾಡಬಹುದು. ಮಧ್ಯಮ ವರ್ಗದ ವೇತನದಾರ ತೆರಿಗೆ ಪಾವತಿದಾರರಿಗೆ ಅನುಕೂಲ ಎಂಬ ರೀತಿಯಲ್ಲಿ 2021ರ ಕೇಂದ್ರ ಬಜೆಟ್ ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಏರಿಕೆ ಮಾಡಬಹುದು ಎಂಬ ನಿರೀಕ್ಷೆ ಇದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಎಂಬುದು ನಿಶ್ಚಿತವಾದ ಕಡಿತ. ಕೆಲವು ತೆರಿಗೆದಾರರಿಗೆ ಇದು ದೊರೆಯಲಿದ್ದು, 2018- 19ರ ಬಜೆಟ್ ನಿಂದ ಮತ್ತೆ ಪರಿಚಯಿಸಲಾಯಿತು. ಮೊದಲಿಗೆ 40,000 ರುಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಲಾಯಿತು. ಆ ನಂತರ ಮಿತಿಯು ರು. 50,000ಕ್ಕೆ ವಿಸ್ತರಣೆ ಮಾಡಲಾಯಿತು.
ಅನೇಕ ಅಗತ್ಯ ವಸ್ತುಗಳ ಮೇಲಿನ ಸುಂಕ ತಗ್ಗುವ ಸಾಧ್ಯತೆ
ಸದ್ಯದ ಕೊರೊನಾ ಬಿಕ್ಕಟ್ಟಿನ ಸನ್ನಿವೇಶಕ್ಕೆ ಬಳಕೆಯನ್ನು ಹೆಚ್ಚಳ ಮಾಡಬೇಕು ಅಂದರೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 1,00,000 ರುಪಾಯಿಗೆ ಹೆಚ್ಚಳ ಮಾಡಬೇಕು ಎಂದು ಎಫ್ ಐಸಿಸಿಐ ಅಭಿಪ್ರಾಯ ಪಟ್ಟಿದೆ. ಈ ಮಧ್ಯೆ ಕೊರೊನಾ ಕಾರಣಕ್ಕೆ ವರ್ಕ್ ಫ್ರಮ್ ಹೋಮ್ ಹೆಚ್ಚಾಗಿದ್ದು, ಉದ್ಯೋಗಿಗಳಿಗೆ ವಿದ್ಯುತ್, ಇಂಟರ್ ನೆಟ್ ವೆಚ್ಚ ಸೇರಿದಂತೆ ಇತರ ಖರ್ಚುಗಳು ಜಾಸ್ತಿಯಾಗಿವೆ. ವೈದ್ಯಕೀಯ ಹಾಗೂ ಸಾರಿಗೆ ಭತ್ಯೆಯ ಬದಲಿಗೆ ಈ ಹಿಂದೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸಲಾಗಿತ್ತು.
ಆರ್ಥಿಕತೆ ಪುನಶ್ಚೇತನಕ್ಕಾಗಿ ಸರ್ಕಾರವು 2020ರಲ್ಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಬಾರಿ ಬಜೆಟ್ ನಲ್ಲಿ ಇನ್ನಷ್ಟು ವಿನಾಯಿತಿಗಳನ್ನು ಘೋಷಿಸಬಹುದು ಎಂದು ತೆರಿಗೆ ಪಾವತಿದಾರರು ನಿರೀಕ್ಷಿಸುತ್ತಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ದರವನ್ನು ಇಳಿಕೆ ಮಾಡಬಹುದಾ ಅಥವಾ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸಬಹುದಾ ಎಂಬ ಬಗ್ಗೆ ಕಾದು ನೋಡಬೇಕಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ 2021ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೂಡ ಇದೆ.