ಬಜೆಟ್ 2022: ಸರ್ಕಾರದಿಂದ ಬ್ಯಾಂಕ್ಗಳ ನಿರೀಕ್ಷೆಯೇನು?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ.
ಈ ಕೊರೊನಾ ವೈರಸ್ ಮೂರನೇ ಅಲೆಯ ಆತಂಕದ ನಡುವೆ ಮುಂದಿನ ತಿಂಗಳು ಬಜೆಟ್ ಅಧಿವೇಶನ ನಡೆಯಲಿದೆ. ಈ ನಡುವೆ ಕೋವಿಡ್ ಸೋಂಕಿನಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಜನ ಸಂಪರ್ಕವುಳ್ಳ ಉದ್ಯಮಕ್ಕೆ ತೆರಿಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲು ಬ್ಯಾಂಕುಗಳು ಸರ್ಕಾರವನ್ನು ವಿನಂತಿಸಿವೆ. ಆತಿಥ್ಯ, ವಾಯುಯಾನ, ಪ್ರಯಾಣ ಮತ್ತು ಪ್ರವಾಸೋದ್ಯಮ ಇತರ ಕ್ಷೇತ್ರಗಳಲ್ಲಿ ಕೊರೊನಾ ವೈರಸ್ನ ಹರಡುವಿಕೆಯಿಂದ ಹೆಚ್ಚು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಬ್ಯಾಂಕ್ಗಳು, ಯಾವುದೇ ಪರಿಹಾರವು ಅತ್ಯಂತ ಸ್ವಾಗತಾರ್ಹ ಎಂದಿದೆ.
ಬಜೆಟ್ 2022: ಪ್ರೀಮಿಯಂ, ತೆರಿಗೆ-ಮುಕ್ತ ವರ್ಷಾಶನಕ್ಕಾಗಿ ಜೀವ ವಿಮಾದಾರರ ಆಗ್ರಹ
ಹಿರಿಯ ಬ್ಯಾಂಕ್ ಸಿಬ್ಬಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಜನ ಸಂಪರ್ಕವುಳ್ಳ ಉದ್ಯಮಕ್ಕೆ ವಿಶೇಷವಾಗಿ ಹಾಸ್ಪಿಟಾಲಿಟಿ ವಲಯಕ್ಕೆ ಕೆಲವು ತೆರಿಗೆ ಪರಿಹಾರಗಳನ್ನು ನೀಡುವ ಬಗ್ಗೆ ಪರಿಗಣಿಸಲು ನಾವು ಸರ್ಕಾರವನ್ನು ಕೇಳಿದ್ದೇವೆ. ಈ ಕೆಲವು ಕ್ಷೇತ್ರಗಳಿಗೆ ಯಾವುದೇ ಬೆಂಬಲವನ್ನು ನೀಡದಿದ್ದರೆ, ಅವು ಎನ್ಪಿಎಗಳಾಗಿ ಪರಿವರ್ತನೆ ಆಗಲಿದೆ," ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರ ಬಜೆಟ್ಗೆ ಮುಂಚಿತವಾಗಿ ಭಾರತೀಯ ಬ್ಯಾಂಕ್ಗಳ ಸಂಘವು ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ ಎಂದು ಈ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ. ಇನ್ನು ಈ ಬ್ಯಾಂಕ್ ಬೇಡಿಕೆಗಳ ಅಥವಾ ಮನವಿಯ ಪಟ್ಟಿಯಲ್ಲಿ ಗೃಹ ಸಾಲದ ಮೇಲಿನ ಹೆಚ್ಚಿನ ತೆರಿಗೆ ವಿನಾಯಿತಿ ಮಾಡುವ ವಿಚಾರವೂ ಕೂಡಾ ಉಲ್ಲೇಖಿತವಾಗಿದೆ.
ಗೃಹ ಸಾಲದ ಮೇಲೆ ತೆರಿಗೆ ರಿಯಾಯಿಯಿ ಹೆಚ್ಚಿಸಿ
"ಇಂದು ಗೃಹ ಸಾಲದ ಮೇಲಿನ ತೆರಿಗೆ ರಿಯಾಯತಿ ತುಂಬಾ ಕಡಿಮೆಯಾಗಿದೆ. ಮನೆಗಳ ಬೆಲೆಗಳು ವರ್ಷಗಳಿಂದ ಹೆಚ್ಚುತ್ತಿವೆ. ಆದರೆ ತೆರಿಗೆ ರಿಯಾಯತಿ ತುಂಬಾ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ನಾವು ಪುನರ್ ವಿಮರ್ಶೆ ಮಾಡಬೇಕಾದ ಅಗತ್ಯವಿದೆ. ಗೃಹ ಸಾಲ ಪಡೆಯುವ ಜನರಿಗೆ ಇದು ಸಹಾಯಕವಾಗಲಿದೆ," ಎಂದು ತನ್ನ ಹೆಸರು ಬಹಿರಂಗಪಡಿಸಲು ಬಯಸದ ಬ್ಯಾಂಕಿಂಗ್ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ.
ಫಿಕ್ಸಿಡ್ ಡೆಪಾಸಿಟ್ಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಫಿಕ್ಸೆಡ್ ಡೆಪಾಸಿಟ್ಗಳಿಗೆ (ಎಫ್ಡಿ) ಲಾಕ್-ಇನ್ ಅವಧಿಯನ್ನು ಐದು ವರ್ಷದಿಂದ ಮೂರು ವರ್ಷಗಳವರೆಗೆ ಇಳಿಸುವ ವಿಷಯವನ್ನು ಭಾರತೀಯ ಬ್ಯಾಂಕ್ಗಳ ಸಂಘವು ಮತ್ತೊಮ್ಮೆ ಪ್ರಸ್ತಾಪ ಮಾಡಿದೆ. "ನಾವು ಈ 3 ವರ್ಷಗಳ ಎಫ್ಡಿ ಸಮಸ್ಯೆಯನ್ನು ಬಹಳ ಸಮಯದಿಂದ ಕೇಳುತ್ತಿದ್ದೇವೆ. ಈ ವರ್ಷ ಅದನ್ನು ಮತ್ತೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ನಾವು ಕಾದು ನೋಡೋಣ," ಎಂದು ತಿಳಿಸಿದ್ದಾರೆ.
ಬಜೆಟ್ 2022: ದ್ವಿಚಕ್ರ ವಾಹನ, ಬಳಸಿದ ಕಾರುಗಳ ಮೇಲಿನ ಜಿಎಸ್ಟಿ ಕಡಿತ ಮಾಡಿ: ಎಸ್ಎಡಿಎ
ಹೆಚ್ಚುವರಿಯಾಗಿ, ಹಣಕಾಸು ಸೇರ್ಪಡೆ ಮತ್ತು ಡಿಜಿಟಲ್ ಬ್ಯಾಂಕಿಂಗ್ನ ಉತ್ತೇಜನದಂತಹ 'ಸಾರ್ವಜನಿಕ ಒಳಿತಿನ' ಚಟುವಟಿಕೆಗಳಿಗೆ ಖರ್ಚು ಮಾಡಲು ಬ್ಯಾಂಕುಗಳು ತೆರಿಗೆ ಪ್ರೋತ್ಸಾಹವನ್ನು ಕೋರಿವೆ. ವಿದೇಶಿ ಮತ್ತು ದೇಶೀಯ ಬ್ಯಾಂಕ್ಗಳಿಗೆ ತೆರಿಗೆಯಲ್ಲಿ ಸಮಾನತೆಯ ಸಮಸ್ಯೆಯನ್ನು ಬ್ಯಾಂಕ್ಗಳ ಸಂಘವು ಪ್ರಸ್ತಾಪಿಸಿತು. ವಿದೇಶಿ ಬ್ಯಾಂಕುಗಳು ಹೆಚ್ಚಾಗಿ ಭಾರತದಲ್ಲಿನ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಮತ್ತು ಕಾರ್ಪೊರೇಟ್ ತೆರಿಗೆ ದರವನ್ನು 40 ಪ್ರತಿಶತ ಮತ್ತು ಹೆಚ್ಚುವ ಶುಲ್ಕಗಳು ಸೆಸ್ ವಿಧಿಸಲಾಗುತ್ತದೆ.
ಮತ್ತೊಂದೆಡೆ, ದೇಶೀಯ ಬ್ಯಾಂಕುಗಳು 22 ಪ್ರತಿಶತ ಕಾರ್ಪೊರೇಟ್ ತೆರಿಗೆ ಮತ್ತು ಹೆಚ್ಚುವರಿ ಶುಲ್ಕ ಮತ್ತು ಸೆಸ್ ಅನ್ನು ವಿಧಿಸುತ್ತವೆ. "ಈ ಹಿಂದೆಯೂ ಹಣಕಾಸು ಸಚಿವಾಲಯಕ್ಕೆ ಇದನ್ನು ನಾವು ಪ್ರಸ್ತಾಪ ಮಾಡಿದ್ದೇವೆ. ಆಶಾದಾಯಕವಾಗಿ, ಈ ಬಜೆಟ್ ಸಮಸ್ಯೆಯನ್ನು ಪರಿಹರಿಸಬಹುದು," ಎಂದು ಹಿರಿಯ ಬ್ಯಾಂಕರ್ ಒಬ್ಬರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022 ಅನ್ನು ಮಂಡಿಸಲಿದ್ದಾರೆ. ಹಣಕಾಸು ಸಚಿವೆ ಈಗಾಗಲೇ ಕಾರ್ಪೊರೇಟ್ ಮತ್ತು ಹಣಕಾಸು ವಲಯಗಳ ಮುಖ್ಯಸ್ಥರೊಂದಿಗೆ ಬಜೆಟ್ ಪೂರ್ವ ಸಭೆಗಳನ್ನು ನಡೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)