ಅತ್ಯುತ್ತಮ ಟರ್ಮ್ ಲೈಫ್ ಇನ್ಶುರೆನ್ಸ್ ಆಯ್ಕೆ ಮಾಡುವುದು ಹೇಗೆ?
ಬದುಕೆಂದರೆ ಅನಿಶ್ಚಿತತೆಗಳ ಆಗರ. ಇಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಯಾವಾಗ ಬೇಕಾದರೂ ಘಟಿಸಬಹುದು. ಹಾಗಾಗಿ ನಿಮ್ಮ ಜೀವನಕ್ಕೆ ಭದ್ರತೆ ಒದಗಿಸುವುದು ತುಂಬಾ ಮುಖ್ಯ. ಜೀವನದಲ್ಲಿ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದಾಗ ಕುಟುಂಬದ ಆರ್ಥಿಕ ಸ್ಥಿರತೆಗೆ ಜೀವ ವಿಮಾ ಪಾಲಿಸಿಯು ಟಾನಿಕಿನಂತೆ ಕೆಲಸ ಮಾಡುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಅನಿಶ್ಚಿತ ಘಟನೆಗಳಿಂದ ನಿಮ್ಮನ್ನು ಪಾರು ಮಾಡಬಹುದು.
ನಮ್ಮಲ್ಲಿ ಹೆಚ್ಚಿನವರು ಟರ್ಮ್ ಪ್ಲಾನ್ ಅನ್ನು ಮಾಡಿಸಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಾಗ, ವಿಮೆ ಮೊತ್ತ, ಪಾಲಿಸಿಯ ಅವಧಿ, ಯಾವ ವಿಮೆಯನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತು ಗೊಂದಲಕ್ಕೆ ಒಳಗಾಗುತ್ತಾರೆ. ಹಾಗಾಗಿ ನಿಮಗೆ ಸಹಾಯ ಮಾಡುವ ಕೆಲವು ಸಂಗತಿಗಳು ಇಲ್ಲಿವೆ.

ನಿಮಗೆ ಜೀವ ವಿಮೆ ಬೇಕೇ?
1. ನಿಮಗೆ ಜೀವ ವಿಮೆ ಬೇಕೇ?
ನಿಮಗೆ ಜೀವ ವಿಮೆ ಬೇಕೇ? ಎಂಬ ಪ್ರಶ್ನೆಯನ್ನು ಮೊದಲು ನಿಮ್ಮನ್ನು ಕೇಳಿಕೊಳ್ಳಿ. ಇದು ನಿಮಗೆ ಟರ್ಮ್ ಇನ್ಶೂರೆನ್ಸ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುವ ಉತ್ತರವಾಗಿದೆ. ಪಾಲಿಸಿ ಮಾಡಿಸುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಿಮ್ಮ ಕುಟುಂಬ, ಆದಾಯ ಗಳಿಕೆ, ಆರೋಗ್ಯ ಮುಂತಾದ ವಿಷಯಗಳನ್ನು ಯೋಚಿಸಬೇಕಾಗುತ್ತದೆ. ಅಲ್ಲದೆ, ನಿಮ್ಮನ್ನು ಅವಲಂಬಿತರಾಗಿ ಕುಟುಂಬದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದು ಮುಖ್ಯವಾಗುತ್ತದೆ. ಒಬ್ಬ ಅವಿವಾಹಿತ ವ್ಯಕ್ತಿಯ ಆರ್ಥಿಕ ಕರ್ತವ್ಯಗಳು ವಿವಾಹಿತ ಹಾಗೂ ಮಕ್ಕಳಿರುವ ವ್ಯಕ್ತಿಗಳಿಗಿಂತ ಭಿನ್ನವಾಗಿರುತ್ತದೆ. ಇದನ್ನು ತಲೆಯಲ್ಲಿಟ್ಟುಕೊಂಡು ಪಾಲಿಸಿ ಬಗ್ಗೆ ಯೋಚಿಸಬೇಕು. ಭವಿಷ್ಯದ ಮೇಲೆ ಎಚ್ಚರಿಕೆ ಮತ್ತು ಆರ್ಥಿಕ ವೃದ್ಧಿ ಬಗ್ಗೆ ಕಾಳಜಿ ಹೊಂದಿರಬೇಕು.

ಅವಧಿಯನ್ನು ಗುರುತಿಸಿ
2. ನಿಮ್ಮ ಅಗತ್ಯತೆ, ಪ್ರೀಮಿಯಂ ಮತ್ತು ಅವಧಿಯನ್ನು ಗುರುತಿಸಿ
ನೀವು ಮಾಡಿಸುವ ಜೀವ ವಿಮಾ ಪಾಲಿಸಿಯು ಒಂದು ವೇಳೆ ನೀವು ಅನಿರೀಕ್ಷಿತವಾಗಿ ನಿಧನರಾದರೆ ನಿಮ್ಮ ಕುಟುಂಬಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ನಿರ್ಧರಿಸಿರಬೇಕು. ಎಷ್ಟು ಕವರೇಜ್ ಬೇಕು ಎಂದು ಒಮ್ಮೆ ನೀವು ನಿರ್ಧರಿಸಿದ ನಂತರ, ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದಿರಬೇಕು. ಯಾವುದೇ ಪಾಲಿಸಿ ಇರಲಿ ಅದರ ಅವಧಿಯು ಚಿಕ್ಕದಾಗಿರಬಾರದು, ಏಕೆಂದರೆ ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸುವ ಮೊದಲು ವಿಮೆಯು ಮುಗಿದು ಹೋಗಬಹುದು. ಹಾಗಂತ ಪಾಲಿಸಿ ತುಂಬಾ ದೀರ್ಘವಾಗಿರಬಾರದು, ಏಕೆಂದರೆ ಪ್ರೀಮಿಯಂ ಕಟ್ಟಲು ಮುಂದೆ ಆರ್ಥಿಕ ಸಂಕಷ್ಟ ಉಂಟಾಗಬಹುದು.

ಹಕ್ಕು ಇತ್ಯರ್ಥ ಪ್ರಮಾಣ ಹಾಗೂ ಇತರ ಅನುಪಾತಗಳು
3. ಯಾವುದೇ ಜೀವ ವಿಮೆ ಪಾಲಿಸಿಯನ್ನು ಮಾಡಿಸುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು?
ಹಕ್ಕು ಇತ್ಯರ್ಥ ಪ್ರಮಾಣ:
ವಿಮೆಯೊಂದಿಗೆ ಮುಂದುವರಿಯುವ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶಗಳಲ್ಲಿ ಇದು ಒಂದಾಗಿದೆ. ಯಾವುದೊ ಒಂದು ಕಂಪನಿಯಲ್ಲಿ ನೀವು ಪಾಲಿಸಿ ತೆಗೆದುಕೊಂಡಿದ್ದೀರಾ ಎಂದು ಭಾವಿಸೋಣ. ಆದರೆ ಪಾಲಿಸಿದಾರ ಅಕಾಲಿಕ ಮರಣ ಹೊಂದುತ್ತಾನೆ. ನಂತರ ನಾಮಿನಿದಾರ ಪಾಲಿಸಿ ಹಣವನ್ನು ಕ್ಲೈಮ್ ಮಾಡಲು ವಿಮಾ ಕಂಪನಿಗೆ ತೆರಳುತ್ತಾನೆ. ಅಂದರೆ ಇಂತಹ ಪ್ರಕರಣದಲ್ಲಿ ಎಷ್ಟು ನಾಮಿನಿದಾರರಿಗೆ ಕಂಪನಿ ಹಣ ನೀಡಿದೆ ಎಂಬುದು ಮುಖ್ಯವಾಗುತ್ತದೆ. ನೂರು ಜನ ಕ್ಲೈಮ್ ಮಾಡಿದ್ದರೆ ಶೇ. 98-99ರಷ್ಟು ಜನರಿಗೆ ಹಣ ಸಂದಾಯವಾಗಿದ್ದರೆ ಅಂತಹ ಕಂಪನಿ ಆಯ್ಕೆ ಮಾಡುವುದು ಒಳ್ಳೆಯದು. ಅದು ಬಿಟ್ಟು ನಾಮಿನಿದಾರರಿಗೆ ಸರಿಯಾದ ಹಣ ನೀಡಲು ಕಂಪನಿಗಳಿದ್ದರೆ ವಿಮೆಯ ನಿಜವಾದ ಉದ್ದೇಶವೇ ಈಡೇರುವುದಿಲ್ಲ.
ಟರ್ಮ್ ವಿಮೆಯನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಕೆಲವು ಇತರ ಅನುಪಾತಗಳು:
1. ಮೊತ್ತ ಇತ್ಯರ್ಥ ಪ್ರಮಾಣ
2. ಹಕ್ಕು ನಿರಾಕರಣೆ ಪ್ರಮಾಣ
3. ಮೊತ್ತದ ನಿರಾಕರಣೆ ಪ್ರಮಾಣ

4. ರೈಡರ್ಸ್
ಅಪಘಾತ ಅಥವಾ ಯಾವುದಾದರೂ ಕಾಯಿಲೆಗೆ ತುತ್ತಾಗಿ ಪಾಲಿಸಿದಾರ ಅಂಗವಿಕಲನಾಗಬಹುದು. ಇದು ದುಡಿಯುತ್ತಿದ್ದ ಪಾಲಿಸಿದಾರರ ಸಾಮರ್ಥ್ಯ ಹಾಗೂ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ, ಪಾಲಿಸಿದಾರರ ಕುಟುಂಬಕ್ಕೆ ಆಸ್ಪತ್ರೆ ಖರ್ಚುಗಳನ್ನು ಪೂರೈಸಲು ಕಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ಪಾಲಿಸಿದಾರನ ರಕ್ಷಣೆಗೆ ಟರ್ಮ್ ಇನ್ಶೂರೆನ್ಸ್ ಪಾಲಿಸಿಯು ಹಲವಾರು ಉಪ ಅಂಶಗಳನ್ನು ಒಳಗೊಂಡಿದೆ (ರೈಡರ್ಸ್)
ಈ ಯೋಜನೆಯಲ್ಲಿ ಗಂಭೀರ ಆರೋಗ್ಯ ಸಮಸ್ಯೆ, ಅಪಘಾತದಿಂದ ಉಂಟಾದ ಅಂಗವೈಕಲ್ಯತೆ ಎಂಬ ಎರಡು ವಿಧಗಳಿವೆ.
ಅಂಗವಿಕಲತೆ (ರೈಡರ್)
ಅಪಘಾತದಲ್ಲಿ ಅಂಗ ನ್ಯೂನತೆ ಉಂಟಾಗಿ ಪಾಲಿಸಿದಾರ ಅಂಗವಿಕಲನಾದರೆ ಒಂದು ನಿರ್ದಿಷ್ಟ ಸಮಯದವರೆಗೆ ಮಾಸಿಕ ಆದಾಯ ಈ ಯೋಜನೆ ಅಡಿ ಸಿಗುತ್ತದೆ.
ಗಂಭೀರ ಸಮಸ್ಯೆ (ರೈಡರ್) - ಪಾಲಿಸಿದಾರರಿಗೆ ಯಾವುದೇ ಗಂಭೀರ ಕಾಯಿಲೆಗಳು ಇರುವುದು ಪತ್ತೆಯಾದರೆ, ಈ ಯೋಜನೆ ಪ್ರಕಾರ ಅವರಿಗೆ ಭಾರಿ ಮೊತ್ತದ ಹಣ ಸಿಗುತ್ತದೆ. ವ್ಯಕ್ತಿ ಮೃತಪಟ್ಟಾಗ ಎಷ್ಟು ಹಣ ಸಿಗುತ್ತದೆಯೋ ಅದರಂತೆ ಹಣ ದೊರೆಯುತ್ತದೆ

5. ಟರ್ಮ್ ಜೀವ ವಿಮೆಯನ್ನು ಪಡೆಯುವುದು ಹೇಗೆ?
ನೀವು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಟರ್ಮ್ ವಿಮೆಯನ್ನು ಖರೀದಿಸಲು ಎರಡು ಮಾರ್ಗಗಳಿವೆ. ಆನ್ಲೈನ್ ವಿಮೆ ಎಂದರೇನು? ಆನ್ಲೈನ್ ಟರ್ಮ್ ಇನ್ಶೂರೆನ್ಸ್ಗೆ ವಿಮಾದಾರರಾಗಲು ಮಧ್ಯವರ್ತಿ ಗಳ ಸಹಕಾರ ಬೇಕಾಗಿಲ್ಲ. ಆದಾಗ್ಯೂ, ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಟರ್ಮ್ ಇನ್ಶೂರೆನ್ಸ್ ಪಡೆಯುವ ನಡುವೆ ಹಲವು ವ್ಯತ್ಯಾಸಗಳಿವೆ. ಆನ್ಲೈನ್ ಮತ್ತು ಆಫ್ಲೈನ್ ವಿಮೆಯ ಯಾವುದೇ ಆದರೂ ನೀವು ಇದರ ಪ್ರಯೋಜನ ಪಡೆಯಲು ಒಂದು ಹೆಜ್ಜೆ ಹತ್ತಿರವಾಗುತ್ತೀರಿ.
ಆಫ್ಲೈನ್ ಟರ್ಮ್ ಇನ್ಶುರೆನ್ಸ್ ಪ್ಲಾನ್ ಪಡೆಯಲು ಸ್ಥಳೀಯ ಏಜೆಂಟ್ಗಳ ಮೂಲಕ ಅಥವಾ ಹತ್ತಿರದ ವಿಮಾ ಸಂಸ್ಥೆಗಳ ಶಾಖಾ ಕಚೇರಿಗಳಿಗೆ ಭೇಟಿ ನೀಡಿ ಸಲಹೆ- ಸೂಚನೆ ಪಡೆದುಕೊಳ್ಳಬಹುದು. ಇದಕ್ಕೆ ನಿಮ್ಮ ಸಮ್ಮತಿ ಇದ್ದರೆ ಸ್ಥಳೀಯ ಏಜೆಂಟ್ಗಳು ನಿಮಗೆ ಉತ್ತಮವಾದ ಪಾಲಿಸಿಯನ್ನು ಸೂಚಿಸುತ್ತಾರೆ. ಅಲ್ಲದೆ, ವಿವಿಧ ಪಾಲಿಸಿಗಳ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡುತ್ತಾರೆ. ವಿಮೆಗಳ ಬಗ್ಗೆ ಮಾಹಿತಿ ಇಲ್ಲದವರಿಗೆ ಈ ವಿಧಾನ ಹೆಚ್ಚು ಉಪಯುಕ್ತಕರವಾಗಿದೆ.
ಇಂಟರ್ನೆಟ್ ವಿಧಾನವು ಲಭ್ಯವಿಲ್ಲದಿದ್ದಾಗ, ಟರ್ಮ್ ಇನ್ಶೂರೆನ್ಸ್ ಯೋಜನೆಗಳನ್ನು ಆಫ್ಲೈನ್ನಲ್ಲಿ ಪಡೆಯುವುದು ಏಕೈಕ ಪರ್ಯಾಯವಾಗಿದೆ. ಹೀಗಾಗಿ ವಿಮೆ ಮಾಡಿಸಲು, ನವೀಕರಿಸಲು ಹಾಗೂ ಹಣ ಪಡೆಯಲು ಹಲವು ಮಂದಿ ಈ ವಿಧಾನದ ಮೂಲಕ ಹೋಗುತ್ತಾರೆ.