For Quick Alerts
ALLOW NOTIFICATIONS  
For Daily Alerts

ಮೊದಲ ತಿಂಗಳ ಸಂಬಳ: ಉಳಿತಾಯಕ್ಕೆ ಶ್ರೀಗಣೇಶ

By ವಿ. ಮಾಲಾ
|

ಹರೆಯದ ಕನಸುಗಳ ಬೆಂಬತ್ತಿ ಇಷ್ಟದ ಕೆಲಸ ಗಿಟ್ಟಿಸಿಕೊಂಡ ಇಂಚರಾಳ ವಯಸ್ಸು 25ರ ಆಸುಪಾಸು. ಹೆಣ್ಮಕ್ಕಳ ವಯಸ್ಸನ್ನು ನಾವು ಕೇಳಬಾರದು, ಅವರು ಹೇಳಬಾರದು. ಆದರೆ ಈಗಿನ್ನೂ ಮಾಸ್ಟರ್ಸ್ ಮುಗಿಸಿ ಕೆಲಸಕ್ಕೆ ಬಂದ ಫ್ರೆಶ್ ಮುಖ ಅಂದ್ರೆ ಒಂದು ಅಂದಾಜು ಸಿಗಲ್ವಾ ಹೇಳಿ? ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನುವಷ್ಟು ಚಂದದ ಹುಡುಗಿಯ ಮನಸಿನ ತುಂಬಾ ಭವಿಷ್ಯದ ಕನಸುಗಳು.

 

ಗಳಿಸು, ಗಳಿಸಿದ್ದನ್ನು ಉಡಾಯಿಸು (ಅರ್ನ್ ಅಂಡ್ ಬರ್ನ್) ಜಮಾನದ ಹುಡುಗಿ ತಲೆಯಲ್ಲಿ ಮೊದಲ ತಿಂಗಳ ಸಂಬಳ ಜಮಾ ಆದ ದಿನ ಏನೆಲ್ಲಾ ಓಡ್ತಿರಬಹುದು? ಅವಳ ಖುಷಿಗೆ ಬ್ರೇಕ್ ಬಿದ್ದಿದ್ದು ಅವರಪ್ಪನಿಗೆ ಮಾಡಿದ ಒಂದು ಕಾಲ್‌ನಿಂದ! ಛೇ ಅವನೆಂಥಾ ಅಪ್ಪಾ ಅಂದ್ಕೊಡ್ರಾ?

ಅಪ್ಪನಿಗೊಂದು ಫೋನು

"ಹಲೋ ಅಪ್ಪಾ, ನಾನು ಇಂಚರಾ ಮಾತಾಡ್ತಿದ್ದೀನಿ. ಮೊದಲ ತಿಂಗಳ ಸಂಬಳ ಅಂತ 30,000 ರುಪಾಯಿ ಬಂತು. ಈಗಿನ್ನೂ ಎಸ್‌ಎಂಎಸ್‌ ನೋಡ್ದೆ. ನಿಂಗೇ ಮೊದಲು ಹೇಳ್ತಿರೋದು. ನನ್ನ ಸಂಪಾದನೆ ಅಪ್ಪ. ಎಷ್ಟು ಖುಷಿ ಆಗ್ತಿದೆ ಗೊತ್ತಾ?" ಪ್ರತಿ ಶಬ್ದ ಉಚ್ಚರಿಸುವಾಗಲೂ ಖುಷಿ ತುಳುಕಿಸುತ್ತಿದ್ದ ಇಂಚರಾಳಿಗೆ ಮಾತು ಮುಗಿಸಲು ಸಾಧ್ಯವಾಗದಷ್ಟು ಗಂಟಲು ಉಬ್ಬಿತ್ತು.

ದುಡ್ಡಿನ ವಿಚಾರದಲ್ಲಿ 'ದೊಡ್ಡವರು' ಹೇಳಿದ 8 ಪಾಠಗಳು

"ಗ್ರೇಟ್ ಪುಟ್ಟಾ, ಒಳ್ಳೇದಾಯ್ತು. ದೇವರಿಗೆ ತುಪ್ಪದ ದೀಪ ಹಚ್ತೀನಿ ತಾಳು" ಅಂತ ಆ ಕಡೆ ಅಪ್ಪನೂ ಹೆಮ್ಮೆಯಿಂದ ಹೇಳಿದ್ದರು.

"ಈಗ್ಲೇ ಎಟಿಎಂಗೆ ಹೋಗ್ತಿದ್ದೀನಿ. ನಿಂಗೆ ಎಷ್ಟು ದುಡ್ಡು ಬೇಕು ಹೇಳಿ? ಏನು ತಂದ್ ಕೊಡ್ಲಿ ಹೇಳು? ಮನೆಗೆ ಸಾಮಾನೇನಾದ್ರೂ ಬೇಕಿತ್ತಾ?"

"ಏನೂ ಬೇಡ ಮಗಳೇ. ಸೀದಾ ಮನೆಗೆ ಬಾ ಸಾಕು. ಪೇ ಸ್ಲಿಪ್ ಕೈಗೆ ಸಿಗೋ ತನಕ ದುಡ್ಡು ಡ್ರಾ ಮಾಡಬೇಡ".

ಅಪ್ಪನ ಮಾತಿಗೆ ಇಂಚರಾಳ ಖುಷಿ ಠುಸ್ ಅಂದಿತ್ತು. ಆದರೆ ಅಪ್ಪ ಹಾಗೆ ಹೇಳಿದ್ರೆ ಏನೋ ಅರ್ಥ ಇರುತ್ತೆ ಅಂದ್ಕೊಂಡು ಸುಮ್ಮನೆ ಮನೆ ಕಡೆಗೆ ಹೊರಟಳು.

ಲೆಕ್ಕದ ಪುಸ್ತಕ

ಲೆಕ್ಕದ ಪುಸ್ತಕ

ಆರ್‌ಡಿ, ಎಫ್‌ಡಿ ಜಮಾನದ ಅಪ್ಪ ಎಲ್ಲವನ್ನೂ ಲೆಕ್ಕ ಬರೆದಿಡುವ ಪೈಕಿ. ಇಂಚರಾ ಮನೆಗೆ ಬರುವ ಹೊತ್ತಿಗೆ ಇಂಥದ್ದೇ ಯಾವುದೋ ಲೆಕ್ಕ ಬರೀತಾ ಇದ್ರು. ಮಗಳು ಖುಷಿಯಾಗಿ ಬರ್ತಾಳೆ ಆಂತ ಗೊತ್ತಿದ್ದ ಅವರಮ್ಮ ಶ್ಯಾವಿಗೆ ಪಾಯಸ ಮಾಡಿ ಕಾಯ್ತಾ ಇದ್ರು. ಮನೆಗೆ ಬಂದ ಮೇಲೂ ಇಂಚರಾಳದ್ದು ಅದೇ ಮಾತು. ಅಮ್ಮನಿಗೆ ಸೀರೆ ಕೊಡಿಸ್ತೀನಿ, ಅಪ್ಪನಿಗೆ ಮೊಬೈಲ್ ಕೊಡಿಸ್ತೀನಿ, ನಾನು ಡ್ರೆಸ್ ತಗೊಳ್ತೀನಿ, ಎಲ್ಲರೂ ಟೂರ್ ಹೋಗೋಣ... ಇಂಚರಾಳ ಖುಷಿ ಪಟ್ಟಿ ಬೆಳೆಯುತ್ತಲೇ ಇತ್ತು.

"ಸರಿ ಎಲ್ಲ ಮಾಡೋಣಂತೆ, ಎಲ್ಲ ಕೊಡಿಸುವಂತೆ. ಮೊದಲು ಕೈಕಾಲು ತೊಳ್ಕೊಂಡು ದೇವರಿಗೆ ನಮಸ್ಕಾರ ಮಾಡು. 10 ರುಪಾಯಿ ಮೀಸಲು ತೆಗೆದಿಡು. ಊಟ ಮಾಡು. ಆಮೇಲೆ ಮಾತಾಡೋಣ'". ಅಪ್ಪ ಮತ್ತೆ ಅವಳ ಉತ್ಸಾಹ ತಣ್ಣಗೆ ಮಾತಾಡಿದ್ರು.

ಊಟ ಮುಗಿದು ಲೋಕಾಭಿರಾಮ ಮಾತನಾಡುವಾಗ ಅಪ್ಪ ಲೆಕ್ಕದ ಪುಸ್ತಕ ಮಗಳ ಕೈಗಿಟ್ಟರು. ತಮಾಷೆ ಅಂದ್ರೆ ಆ ಲೆಕ್ಕದ ಪುಸ್ತಕ ಶುರುವಾಗಿದ್ದು ಇಂಚರಾ ಹುಟ್ಟಿದ ದಿನದಿಂದ...!

ಉಳಿತಾಯದ ಮೊದಲ ಪಾಠ
 

ಉಳಿತಾಯದ ಮೊದಲ ಪಾಠ

ನೀನು ಹುಟ್ಟೋ ಮೊದಲು ನನಗೆ ಉಳಿತಾಯದ ಪ್ರಜ್ಞೆ ಇರಲಿಲ್ಲ. ನನಗೆ ಹಣ ಉಳಿಸೋದು ಹೇಗೆ ಮತ್ತು ಏಕೆ ಅಂತ ಕಲಿಸಿದ ಗುರು ನೀನು ಅಂತ ಅಪ್ಪ ಇಂಚರಾಳ ಮುಖ ನೋಡಿದರು.

ಮೊದಲ ತಿಂಗಳ ಸಂಬಳ, ನಿನ್ನ ಸಂಪಾದನೆ ಎಲ್ಲವೂ ಫೈನ್. ನೀನು ದುಡಿದು ನಮ್ಮನ್ನು ಸಾಕಬೇಕಿಲ್ಲ ಅಥವಾ ನಿನ್ನನ್ನು ಸಾಕಿದ ಋಣ ತೀರಿಸೋಕೆ ಅಂತ್ಲೂ ನಮಗೆ ಹಣ ಕೊಡಬೇಕಿಲ್ಲ. ನೀನು ಯಾವಾಗ್ಲೂ ಚೆನ್ನಾಗಿರಬೇಕು. ಅದಷ್ಟೇ ನಮ್ಮ ಆಸೆ, ಕನಸು. ಒಂದು ರುಪಾಯಿ ಖರ್ಚು ಮಾಡುವಾಗಲೂ ಯೋಚನೆ ಮಾಡು. ಅಗತ್ಯ ಇದೆ ಅನ್ನಿಸಿದ್ರೆ ಮಾತ್ರ ಖರ್ಚು ಮಾಡು. ಅಗತ್ಯ ಇಲ್ಲದ ಖರ್ಚು ದುಂದುವೆಚ್ಚ. ಒಂದು ರುಪಾಯಿ ದುಡ್ಡು ಉಳಿಸಿದ್ರೂ, ಆ ರೂಪಾಯಿ ಗಳಿಸೋಕೆ ಪಡೋ ಶ್ರಮ, ಹಾಕೋ ಸಮಯ ಉಳಿಸಿದಂತೆ. ಅಂದ್ರೆ ಒಂದು ರುಪಾಯಿ ದುಡ್ಡು ಉಳಿಸಿದ್ರೆ ಮೂರು ರುಪಾಯಿ ಸಂಪಾದನೆ ಮಾಡಿದಂತೆ. ಈಗ ನೀನು ಸ್ವತಃ ದುಡೀತಾ ಇದ್ದೀ. ಬ್ಯಾಂಕ್‌ನಿಂದ ದುಡ್ಡು ಡ್ರಾ ಮಾಡುವ ಮೊದಲು, ಖರ್ಚು ಮಾಡುವ ಮೊದಲು ನನ್ನ ಈ ಮಾತು ನಿನಗೆ ನೆನಪಾಗಬೇಕು ನೋಡು.

ಮುಂದಿನದ್ದು ನೋಡು…

ಮುಂದಿನದ್ದು ನೋಡು…

ನೀನು ಎಷ್ಟು ದೊಡ್ಡವಳಾದ್ರೂ ನನ್ನ ಕಣ್ಣಿಗೆ ಪೊರಕೆ ಕಡ್ಡಿ ಹಿಡಿದು ಕೋಳಿಮರಿ ಓಡಿಸ್ತಾ ಇದ್ದ ಪುಟ್ಟ ಹುಡುಗಿ ಥರಾನೇ ಕಾಣ್ತೀ. ನೀನು ಎಷ್ಟು ಬುದ್ಧಿವಂತಳಾಗಿದ್ರೂ, ಎಷ್ಟೇ ಧೈರ್ಯವಂತೆಯಾಗಿದ್ರೂ ನಾನು ನಿನ್ನ ಅಪ್ಪ ಕಣೆ. ನಿನಗೆ ಏನೂ ಆಗಬಾರದು. ಒಳ್ಳೇ ಹುಡುಗನ್ನ ಮದುವೆಯಾಗಿ, ಎರಡು ಮಕ್ಕಳ ಹೆತ್ತು, ಅವರಿಗೆ ಭವಿಷ್ಯ ರೂಪಿಸಿ, ಸುಖವಾಗಿರಬೇಕು. ನಾನು ಹೋದ ಮೇಲೂ ನೀನು ಸುಖವಾಗಿಯೇ ಇರಬೇಕು ಅಂತ ಬಯಸುತ್ತೆ ನನ್ನ ಮನಸ್ಸು. ಅದಕ್ಕೆ ಹೇಳ್ತಿದ್ದೀನಿ ಕೇಳು....

ಇನ್ನೈದು ವರ್ಷಕ್ಕೆ ರಿಟೈರ್ಡ್ ಆಗುತ್ತೆ. ಆಮೇಲೂ ನಿನ್ನ ಅಮ್ಮನನ್ನು ನಾನು ನೋಡಿಕೊಳ್ಳಬಲ್ಲೆ. ನಿನ್ನ ಮೇಲೆ ನಾವು ಭಾವಾನಾತ್ಮಕವಾಗಿ (ಎಮೋಷನಲಿ) ಅವಲಂಬಿತರಾದರೂ ಆರ್ಥಿಕವಾಗಿ (ಫೈನಾನ್ಶಿಯಲಿ) ನಾವು ಸ್ವತಂತ್ರರು.

ನಿನ್ನ ಮದುವೆ ನಮ್ಮ ಜವಾಬ್ದಾರಿ. ಅದರ ಖರ್ಚಿಗೆ ಬೇಕಾದಷ್ಟು ದುಡ್ಡು ಕೂಡಿಟ್ಟಿದ್ದೀನಿ. ನನಗೆ ಸ್ವಂತ ಮನೆ ಮಾಡಲು ಆಗಲಿಲ್ಲ. ಆದ್ರೆ ನಿನ್ನನ್ನು ನಾಮಿನಿ ಮಾಡಿರುವ ಸುಮಾರು 50 ಲಕ್ಷದಷ್ಟು ದುಡ್ಡು ಇದೆ. ನಮ್ಮ ನಂತರ ನಿನಗೇ ಅದು ಬರುತ್ತೆ. ಇದೆಲ್ಲಾ ಇಷ್ಟು ದಿನ ನಿನಗೆ ಹೇಳಿರಲಿಲ್ಲ. ಆದ್ರೆ ಈಗ ಕಾಲ ಬಂದಿದೆ ಹೇಳ್ತಿದ್ದೀನಿ.

ನೀನು ಈಗ ಬೇರೆ ಕಡೆಗೆ ಗಮನ ಕೊಡಬೇಡ. ಕೆಲಸದಲ್ಲಿ ಬೇಗ ಮೇಲೆ ಬರಬೇಕು, ಒಳ್ಳೇ ಕೆಲಸಗಾರ್ತಿ ಅನ್ನಿಸಿಕೊಳ್ಳ್ಬೇಕು.

ಹೀಗೆ ಮಾಡಬಹುದಾ ನೋಡು…

ಹೀಗೆ ಮಾಡಬಹುದಾ ನೋಡು…

ನಿನಗೆ 30 ಸಾವಿರ ಸಂಬಳ ಬಂದ್ರೆ ಅದರಿಂದ ಮನೆ ಖರ್ಚಿಗೆ ಅಂತ ಒಂದು ರುಪಾಯಿ ತೆಗೆಯೋದು ನನಗೆ ಇಷ್ಟವಿಲ್ಲ. ನಿನಗೆ ಕೆಲಸ ಸಿಗದೆ ಇದ್ರೂ ನಾವು ನೋಡಿಕೊಳ್ತಿದ್ವಿ ತಾನೆ? ಆದ್ರೆ ನಿನಗೂ ನೂರೆಂಟು ಆಸೆ, ಕನಸುಗಳು ಇರುತ್ವೆ. ಅದಕ್ಕೆ ಅಂತ ತಿಂಗಳಿಗೆ ಒಂದೈದು ಸಾವಿರ ತೆಗಿ. ಉಳಿದ 25 ಸಾವಿರ ಬ್ಯಾಂಕ್‌ನಲ್ಲೇ ಇರಲಿ.

ನಿನಗೆ ಈಗ 25 ವರ್ಷ. 30 ವರ್ಷದೊಳಗೆ ಮದುವೆಯಾಗುತ್ತೆ. 35 ವರ್ಷದೊಳಗೆ ಮಕ್ಕಳಾಗಬಹುದು. ನಿನಗೆ 60 ವರ್ಷ ದಾಟುವ ಹೊತ್ತಿಗೆ ನಿನ್ನ ಮಕ್ಕಳು ಕೈಗೆ ಬಂದಿರ್ತಾರೆ. ಅವರ ಮದುವೆ ಕಡೆಗೆ ಗಮನ ಕೊಡಬೇಕಾಗಬಹುದು. ಗಂಡ ಎಂಥವನು ಸಿಗ್ತಾನೋ ನಮ್ಮ ಕೈಲಿಲ್ಲ. ಒಂದು ವೇಳೆ ಅವನು ಚೆನ್ನಾಗಿ ದುಡಿಯೋನೆ ಆಗಿದ್ರೆ ಒಳ್ಳೇದು. ನಿನ್ನ ಉಳಿತಾಯದ ದುಡ್ಡು ಮೂಲ ಬಂಡವಾಳ ಮಾಡಿ, ಒಬ್ಬರ ಸಂಬಳ ಸಾಲದ ಕಂತಿಗೆ ಹೋಗುವಂತೆ ಪ್ಲಾನ್ ಮಾಡಿ, ಸ್ವಂತ ಮನೆ ಅಂತ ಮಾಡ್ಕೊಳಿ. ಅದು ನನ್ನ ಆಸೆ.

ಈಗ ಮೊದಲ ತಿಂಗಳ ಸಂಬಳ ಬಂದಿದೆ ಅಲ್ವಾ? ನಾಳೆಯೇ ಬ್ಯಾಂಕ್‌ಗೆ ಹೋಗಿ ಒಂದು ಡಿಮ್ಯಾಟ್ ಅಕೌಂಟ್ ತೆಗಿ. ತಿಂಗಳಿಗೆ 10 ಸಾವಿರ ಮ್ಯೂಚ್ಯುವಲ್ ಫಂಡ್ ಗೆ ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲಾನ್) ಹೂಡಿಕೆ ಮಾಡು. 10 ಸಾವಿರ ಆರ್‌ಡಿ ಮಾಡು. ಉಳಿದ ಐದು ಸಾವಿರ ಹಾಗೇ ಎಸ್‌ಬಿಯಲ್ಲೇ ಇರಲಿ.

ತಿಂಗಳಿಗೆ ಐದು ಸಾವಿರ ಅಂದ್ರೆ ವರ್ಷಕ್ಕೆ 60 ಸಾವಿರ ಆಯ್ತು. ಇನ್ಮೇಲೆ ವರ್ಷಕ್ಕೊಂದು ಟೂರ್ ಹೋಗೋಣ. ಮಜಾ ಮಾಡೋಣ. ಆದ್ರೆ ನಮ್ಮ ಮಜಾ ಲಿಮಿಟ್ ವರ್ಷಕ್ಕೆ 60 ಸಾವಿರ ಮಾತ್ರ ಓಕೆನಾ?

ಉಳಿತಾಯ ಅಂದ್ರೆ ಜಿಪುಣತನ ಅಲ್ಲ

ಉಳಿತಾಯ ಅಂದ್ರೆ ಜಿಪುಣತನ ಅಲ್ಲ

ನಾನು ಹಳೇ ಕಾಲದವನು. 10 ಪೈಸೆಯ 10 ಕಾಯಿನ್ ಸೇರಿದ್ರೆ ಮಾತ್ರ ಒಂದು ರುಪಾಯಿ ಆಗುತ್ತೆ ಅಂತ ಅನುಭವಿಸಿ ತಿಳಿದೆ. ನೀವು ಈಗಿನ ಕಾಲದವರು. 10 ರುಪಾಯಿಯ 10 ನೋಟು ಸೇರಿದ್ರೆ 100 ರುಪಾಯಿ ಅಂತ ಗೊತ್ತಾಗುವ ಮೊದಲೇ ನೂರರ ನೋಟು ನೋಡಿರ್ತೀರಿ. ಆದ್ರೆ ಇಷ್ಟು ತಿಳ್ಕೊ. ಕೈಲಿ ಕಾಸಿದ್ದಾಗ ಮೊದಲು ಉಳಿಸಿಕೊಳ್ಳಬೇಕು. ಆಮೇಲೆ ಖರ್ಚು ಮಾಡಬೇಕು. ನಮ್ಮ ಹತ್ತಿರ ನಾಲ್ಕು ಕಾಸು ಇದ್ರೆ ಮಾತ್ರ ನಾವು ಇನ್ನೊಬ್ಬರ ಕಷ್ಟಕ್ಕೆ ಆಗಲು, ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಲು ಸಾಧ್ಯ. ಉಳಿತಾಯ ಅಂದ್ರೆ ಜಾಣತನ. ಜಿಪುಣತನ ಅಲ್ಲ.

ಚಾರ್ಟ್‌-1

ಚಾರ್ಟ್‌-1

10,000 ರುಪಾಯಿಗೆ ಮ್ಯೂಚ್ಯುವಲ್ ಫಂಡ್ ಇನ್ವೆಸ್ಟ್ ಮೆಂಟ್

ಈಕ್ವಿಟಿ- 7000 (ಸಣ್ಣ ವಯಸ್ಸು, ಹೆಚ್ಚು ರಿಸ್ಕ್)

ಲಾರ್ಜ್ ಕ್ಯಾಪ್- 2000

ಮಿಡ್ ಕ್ಯಾಪ್- 4000

ಸ್ಮಾಲ್ ಕ್ಯಾಪ್- 1000

ಶೇ 14ರ ಪ್ರತಿಫಲ ನಿರೀಕ್ಷೆಯಲ್ಲಿ 10 ವರ್ಷಕ್ಕೆ ಇಂಚರಾ ಕೈಗೆ ಸಿಗಬಹುದಾದ ಮೊತ್ತ- 18,13,482

ಡೆಟ್- 3000

ಲಿಕ್ವಿಡ್- 1000

ಡೆಟ್- 2000

ಶೇ 9ರ ಪ್ರತಿಫಲ ನಿರೀಕ್ಷೆಯಲ್ಲಿ 10 ವರ್ಷಕ್ಕೆ ಸಿಗಬಹುದಾದ ಮೊತ್ತ 5,80,543

ಆರ್‌ಡಿ

10,000 ರೂಪಾಯಿಗೆ ಶೇ 7ರ ಪ್ರತಿಫಲ ನಿರೀಕ್ಷೆಯಲ್ಲಿ 10 ವರ್ಷಕ್ಕೆ ಸಿಗಬಹುದಾದ ಮೊತ್ತ 17,40,945

ಇಂಚರಾ ಮಾಡಲು ಸಾಧ್ಯವಿರುವ ಇತರ ಉಳಿತಾಯಗಳು

ಎನ್‌ಪಿಎಸ್ (ನ್ಯೂ ಪೆನ್ಷನ್ ಸ್ಕೀಂ)

ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್)

ಇಎಲ್ ಎಸ್ಎಸ್ (ಈಕ್ವಿಟಿ ಲಿಂಕ್ಡ್ ಟ್ಯಾಕ್ಸ್ ಸೇವಿಂಗ್ ಸ್ಕೀಂ)

ಇಂಚರಾ ಗಮನ ಕೊಡಬೇಕಾದ ಸಂಗತಿಗಳು

ಹೆಲ್ತ್ ಇನ್ಷೂರೆನ್ಸ್

ಟರ್ಮ್ ಇನ್ಷೂರೆನ್ಸ್

English summary

Investment Plan For Career Beginners: Here Is An Ideal Model

Career beginners plan for investment. Here is an ideal model with mutual fund, RD and other options explained in Kannada.
Story first published: Thursday, December 5, 2019, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X