ದೀಪಾವಳಿ ಸಂಭ್ರಮ: ತೆರಿಗೆ ಪಾವತಿಸದೆಯೇ ಎಷ್ಟು ಹಣ ಉಡುಗೊರೆ ಪಡೆಯಬಹುದು?
ದೀಪಾವಳಿ ಎಂದರೆ ಎಲ್ಲೆಡೆ ಸಡಗರ. ಕೆಲವರು ಬೋನಸ್ಗಾಗಿ ಕಾಯುತ್ತಿದ್ದರೆ, ಇನ್ನು ಕೆಲವರು ಉಡುಗೊರೆಗಾಗಿ ಕಾಯುತ್ತಾರೆ. ಉಡುಗೊರೆಯನ್ನು ನೀಡುವುದು ದೀಪಾವಳಿ ಹಬ್ಬದ ಸಂಭ್ರಮದ ಒಂದು ಭಾಗವೂ ಹೌದು. ಸಿಹಿತಿಂಡಿ, ಭರ್ಜರಿ ಭೋಜನ, ವಸ್ತುಗಳು ಮಾತ್ರವಲ್ಲದೇ ಹಲವಾರು ಮಂದಿ ಹಣವನ್ನು ಉಡುಗೊರೆಯಾಗಿ ಈ ದೀಪಾವಳಿ ಸಂದರ್ಭದಲ್ಲಿ ನೀಡುತ್ತಾರೆ.
ಇನ್ನು ಈ ಸಂದರ್ಭದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರು ಎಲ್ಲರೂ ಉಡುಗೊರೆಯನ್ನು ಪಡೆಯುವ ಕಾತುರದಲ್ಲಿ ಇರುತ್ತಾರೆ. ಇನ್ನು ಕೆಲವರು ಬೋನಸ್ಗಾಗಿ ಕಾಯುವವರು ಇರುತ್ತಾರೆ. ಐದು ಸಾವಿರಕ್ಕಿಂತ ಅಧಿಕ ಮೌಲ್ಯದ ಬೋನಸ್ಗೆ ತೆರಿಗೆ ಇರುತ್ತದೆ ಎಂದು ಈಗಾಗಲೇ ಆರ್ಎಸ್ಎಂ ಇಂಡಿಯಾದ ಸ್ಥಾಪಕ ಡಾ ಸುರೇಶ್ ಸುರಾನ ತಿಳಿಸಿದ್ದಾರೆ.
ದೀಪಾವಳಿ ಬೋನಸ್ಗಾಗಿ ಕಾತುರ: ಹಣದ ಸದ್ಬಳಕೆಗೆ ಇಲ್ಲಿದೆ ಟಿಪ್ಸ್
ಆದರೆ ದೀಪಾವಳಿ ಹಬ್ಬದ ನೆಪದಲ್ಲಿ ಹಣವನ್ನು ಉಡುಗೊರೆ ನೀಡಿದರೆ ಹೇಗೆ? ಇದು ಉತ್ತಮ ಆಯ್ಕೆಯೇ? ನೀವು ದೀಪಾವಳಿ ಸಂಭ್ರಮದಲ್ಲಿ ಹಣವನ್ನು ಉಡುಗೊರೆಯಾಗಿ ನೀಡಿದಾಗ ಆ ಹಣದ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ?, ತೆರಿಗೆ ಇಲ್ಲದೆ ಉಡುಗೊರೆ ಪಡೆಯಬೇಕಾದರೆ ಎಷ್ಟು ಉಡುಗೊರೆಯನ್ನು ಪಡೆದುಕೊಳ್ಳಬಹುದು?. ಈ ಬಗ್ಗೆ ಆರ್ಎಸ್ಎಂ ಇಂಡಿಯಾದ ಸ್ಥಾಪಕ ಡಾ ಸುರೇಶ್ ಸುರಾನ ತನ್ನ ಎಫ್ಇ ಆನ್ಲೈನ್ ಇಮೇಲ್ ಮಾತುಕತೆಯ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ತಿಳಿಯಲು ಮುಂದೆ ಓದಿ.

ತೆರಿಗೆ ಇಲ್ಲದೆ ಎಷ್ಟು ಹಣವನ್ನು ಉಡುಗೊರೆಯಾಗಿ ಪಡೆಯಬಹುದು?
ಆದಾಯ ತೆರಿಗೆ ಕಾಯಿದೆ, 1961 ('ಐಟಿ ಕಾಯಿದೆ') ಸೆಕ್ಷನ್ 56(2)(x) ನಿಬಂಧನೆಗಳ ಪ್ರಕಾರ, ಓರ್ವ ವ್ಯಕ್ತಿಗೆ ಒಂದು ಆರ್ಥಿಕ ವರ್ಷ ಅವಧಿಯಲ್ಲಿ ಐವತ್ತು ಸಾವಿರಕ್ಕಿಂತ ಅಧಿಕ ಹಣವು ಉಡುಗೊರೆಯಾಗಿ ದೊರೆತರೆ ಆ ವ್ಯಕ್ತಿಯು ಆ ವ್ಯಕ್ತಿಯು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಯಾವುದೇ ವಿನಾಯಿತಿ ಇಲ್ಲ. ಈ ಉಡುಗೊರೆಯಾಗಿ ಬಂದ ಹಣವನ್ನು ಬೇರೆ ಮೂಲಗಳಿಂದ ಬಂದ ಆದಾಯ ಎಂದು ಪರಿಗಣಿಸಲಾಗುತ್ತದೆ. ಇನ್ನು ಸರಳವಾಗಿ ಹೇಳುವುದಾದರೆ, ಓರ್ವ ವ್ಯಕ್ತಿಯು ಒಬ್ಬ ವ್ಯಕ್ತಿ ಅಥವಾ ಹಲವು ಮಂದಿಯಿಂದ ಒಂದು ಹಣಕಾಸು ವರ್ಷದಲ್ಲಿ 50,000 ಕ್ಕಿಂತ ಅಧಿಕ ಹಣವನ್ನು ಉಡುಗೊರೆಯಾಗಿ ಪಡೆದರೆ ಆ ವ್ಯಕ್ತಿ ತೆರಿಗೆಯನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಾಗುತ್ತದೆ. ನೀವು ಈ ತೆರಿಗೆಯ ವಿನಾಯಿತಿ ಪಡೆಯಬೇಕಾದರೆ ಒಂದೇ ಒಂದು ಆಯ್ಕೆ ಇದೆ. ಅದು ಉಡುಗೊರೆಯು 50,000 ಕ್ಕಿಂತ ಅಧಿಕ ಆಗದಿರುವುದು.

ಹಣವನ್ನು ದೀಪಾವಳಿ ಉಡುಗೊರೆಯಾಗಿ ನೀಡುವುದು ಸರಿಯೇ?
ನಾವು ಹಣವನ್ನು ದೀಪಾವಳಿಯ ಉಡುಗೊರೆಯಾಗಿ ನೀಡುವುದು ಸರಿಯೇ, ತಪ್ಪೇ ಎಂಬುವುದು ಆ ವ್ಯಕ್ತಿಯ ಮೇಲೆ ನಿರ್ಧರಿತವಾಗುತ್ತದೆ. ನೀವು ಹಣವನ್ನು ನೀಡುವುದಾದರೆ ಆ ವ್ಯಕ್ತಿಗೆ ಹಣದ ಅಗತ್ಯವನ್ನು ಗಮನಕ್ಕೆ ತೆಗೆದುಕೊಂಡು ಉಡುಗೊರೆಯಾಗಿ ಹಣವನ್ನು ನೀಡಬಹುದು. ಅದು ಕೂಡಾ ನೀವು ಹಣವನ್ನು ಉಡುಗೊರೆಯಾಗಿ ನೀಡುವಾಗ ಅದು ತೆರಿಗೆಗೆ ಒಳಪಡದಂತೆ ನೀಡಿದರೆ ಆ ಹಣವು ಸಂಪೂರ್ಣವಾಗಿ ಆ ವ್ಯಕ್ತಿಗೆ ವಿನಿಯೋಗಿಸಲು ಸಾಧ್ಯವಾಗುತ್ತದೆ.

ತಂದೆಯಿಂದ ಹಣವನ್ನು ಉಡುಗೊರೆಯಾಗಿ ಪಡೆದರೆ ತೆರಿಗೆ ಇದೆಯೇ?
ನೀವು ಹಣವನ್ನು ಉಡುಗೊರೆಯಾಗಿ ಪಡೆಯುವ ಸಂದರ್ಭದಲ್ಲಿ ನಿಮಗೆ ಆ ಹಣವು ಪೋಷಕರು ನೀಡಿದರೆ ತೆರಿಗೆ ಇದೆಯೇ ಎಂಬ ಪ್ರಶ್ನೆ ಮೂಡಬಹುದು. ಒಬ್ಬ ವ್ಯಕ್ತಿಯು ತಮ್ಮ ಸಂಬಂಧಿಕರಿಂದ ಉಡುಗೊರೆಗಳನ್ನು ಪಡೆದರೆ, ಸೆಕ್ಷನ್ 56(2)(x) ನ ನಿಬಂಧನೆಗಳು ಅನ್ವಯವಾಗುವುದಿಲ್ಲ ಎಂದು ಐಟಿ ಕಾಯಿದೆ ಸ್ಪಷ್ಟವಾಗಿ ಹೇಳುತ್ತದೆ. ಹಾಗೆಯೇ ಸಂಬಂಧಿಗಳು ಯಾರು ಆಗುತ್ತಾರೆ ಎಂಬುವುದನ್ನು ಈ ಕಾಯ್ದೆಯಲ್ಲಿ ವ್ಯಾಖ್ಯಾನ ಮಾಡಲಾಗಿದೆ.
* ವ್ಯಕ್ತಿಯ ಪತ್ನಿ ಅಥವಾ ಪತಿ
* ವ್ಯಕ್ತಿಯ ಸಹೋದರ ಅಥವಾ ಸಹೋದರಿ
* ವ್ಯಕ್ತಿಯ ಪತ್ನಿ/ಪತಿಯ ಸಹೋದರ ಅಥವಾ ಸಹೋದರಿ
* ಪೋಷಕರ ಸಹೋದರ ಅಥವಾ ಸಹೋದರಿ
* ವ್ಯಕ್ತಿಯ ಯಾವುದೇ ರಕ್ತಸಂಬಂಧಿ ಅಥವಾ ವಂಶಸ್ಥರು
* ವ್ಯಕ್ತಿಯ ಪತಿ/ಪತ್ನಿಯ ರಕ್ತಸಂಬಂಧಿ
* ನಿಮ್ಮ ಅಥವಾ ನಿಮ್ಮ ಸಂಗಾತಿಯ ಸಹೋದರ/ಸಹೋದರಿಯ ಸಂಗಾತಿ

ಸ್ನೇಹಿತರಿಗೆ ನಗದು ಉಡುಗೊರೆಗೆ ತೆರಿಗೆ ವಿಧಿಸಬಹುದೇ?
ಹೌದು, ಐಟಿ ಕಾಯಿದೆಯು ಸಂಬಂಧಿಕರ ವಿಷಯದಲ್ಲಿ ಮಾಡುವಂತೆ ಸ್ನೇಹಿತರಿಂದ ಪಡೆದ ನಗದು ಉಡುಗೊರೆಗಳಿಗೆ ಸ್ಪಷ್ಟವಾಗಿ ವಿನಾಯಿತಿ ನೀಡಲಾಗುವುದಿಲ್ಲ. ಹೀಗಾಗಿ ಸ್ನೇಹಿತರಿಂದ ಐವತ್ತು ಸಾವಿರಕ್ಕಿಂತ ಅಧಿಕ ಉಡುಗೊರೆಯನ್ನು ಪಡೆದರೆ ಅದಕ್ಕೆ ತೆರಿಗೆ ಇದೆ. ಇನ್ನು ಈ ತೆರಿಗೆಯನ್ನು ಯಾರು ಪಾವತಿ ಮಾಡುವುದು ಎಂಬುವುದು ಕೂಡಾ ಒಂದು ಪ್ರಶ್ನೆ ನಿಮಗೆ ಮೂಡಬಹುದು. ತೆರಿಗೆಯನ್ನು ಯಾರು ಹಣವನ್ನು ಉಡುಗೊರೆಯಾಗಿ ಪಡೆಯುತ್ತಾರೋ ಅವರೇ ಪಾವತಿ ಮಾಡಬೇಕಾಗುತ್ತದೆ.