ಇಂದು, ನಾಳೆ ಚಂದಾದಾರಿಕೆಗೆ ತೆರೆದಿರಲಿದೆ ಎಲ್ಐಸಿ ಐಪಿಒ
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ವಾರಾಂತ್ಯದಲ್ಲೂ ಚಂದಾದಾರಿಕೆಗೆ ತೆರೆದಿರಲಿದೆ. ಶನಿವಾರ ಮತ್ತು ಭಾನುವಾರ ಚಂದಾದಾರಿಕೆಗೆ ನಡೆಸಲಾಗುತ್ತದೆ. ಇದಕ್ಕಾಗಿ ಭಾನುವಾರವೂ ಕೆಲವು ಬ್ಯಾಂಕ್ಗಳು ತೆರೆದಿರಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಭಾನುವಾರವೂ ಎಲ್ಐಸಿ ಐಪಿಒಗೆ ಅರ್ಜಿಗಳನ್ನು ಸ್ವೀಕಾರ ಮಾಡುವಂತೆ, ತಮ್ಮ ಕಚೇರಿ ತೆರೆದಿರುವಂತೆ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶಿಸಿದೆ. ಆರ್ಬಿಐ ನಿರ್ದೇಶನದಂತೆ ಹಲವಾರು ಬ್ಯಾಂಕುಗಳು ಭಾನುವಾರವೂ ಎಲ್ಐಸಿ ಐಪಿಒಗಾಗಿ ತೆರೆದಿರಲಿದೆ.
ಭಾನುವಾರವೂ ಎಸ್ಬಿಐನ ಎಲ್ಲಾ ಶಾಖೆಗಳು ಓಪನ್: ಇಲ್ಲಿದೆ ಕಾರಣ
ಎಲ್ಐಸಿ ಐಪಿಒ ಹೂಡಿಕೆದಾರರಿಗೆ ಮೇ 9 ರವರೆಗೆ ತೆರೆದಿರುತ್ತದೆ. ಎಲ್ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ. ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ.

ಆಸಕ್ತ ಚಂದಾದಾರರು ಲಾಟ್ಗಳಲ್ಲಿ ಅರ್ಜಿ ಸಲ್ಲಿಸಬಹುದು, ಒಂದು ಎಲ್ಐಸಿ ಐಪಿಒ ಲಾಟ್ 15 ಎಲ್ಐಸಿ ಷೇರುಗಳನ್ನು ಒಳಗೊಂಡಿರುತ್ತದೆ. ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್ಗಳಿಗೆ ಅರ್ಜಿ ಸಲ್ಲಿಸಬಹುದು. ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂಪಾಯಿ ಆಗಿದೆ. ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.
ಭಾನುವಾರವೂ ತೆರೆದಿರುವ ಎಸ್ಬಿಐ ಕಚೇರಿ
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಎಲ್ಐಸಿ ಐಪಿಒಗಾಗಿ ಅರ್ಜಿಗಳನ್ನು ಸ್ವೀಕಾರ ಮಾಡಲು ಎಲ್ಲಾ ಶಾಖೆಗಳನ್ನು ಭಾನುವಾರ ತೆರೆದಿರಲಿದೆ. ''ಎಲ್ಐಸಿ ಐಪಿಒ ಅರ್ಜಿ ಸ್ವೀಕಾರ ಮಾಡಲು ಮೇ 8 ರಂದು ನಮ್ಮ ಬ್ಯಾಂಕ್ನ ಎಲ್ಲಾ ಶಾಖೆಗಳು ತೆರೆದಿರುತ್ತದೆ,'' ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. "ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸುವ ನಮ್ಮ ಗ್ರಾಹಕರ ಅನುಕೂಲಕ್ಕಾಗಿ, ಅರ್ಜಿಗಳನ್ನು ಸ್ವೀಕರಿಸಲು ನಮ್ಮ ಎಲ್ಲಾ ಶಾಖೆಗಳು ಮೇ8, 2022 ರಂದು (ಭಾನುವಾರ) ತೆರೆದಿರುತ್ತವೆ ಎಂದು ತಿಳಿಸಲು ನಮಗೆ ಸಂತೋಷವಾಗಿದೆ," ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.