For Quick Alerts
ALLOW NOTIFICATIONS  
For Daily Alerts

ಮಲೆನಾಡಿನಲ್ಲಿ ಮತ್ತೆ ಮನೆಗಳ ಮುಂದೆಯೇ ಮದುವೆ

By ಅನಿಲ್ ಆಚಾರ್
|

ಭಾರತದಲ್ಲಿ ಮದುವೆಗಳ ಹಿಂದೆ ದೊಡ್ಡ ಮಟ್ಟದ ಎಕನಾಮಿಕ್ಸ್ ಇದೆ. ಇದನ್ನು ಕರ್ನಾಟಕದ, ಅದರಲ್ಲೂ ಮಲೆನಾಡಿನ ಮದುವೆಗಳಿಗೆ ಅನ್ವಯಿಸಿ ಹೇಳುವುದೆಂದರೆ ಸಂಭ್ರಮದ ಜತೆಗೆ ಎಷ್ಟೋ ಮಂದಿಯ ಪಾಲಿಗೆ ವ್ಯಾಪಾರ- ವ್ಯವಹಾರ, ಆದಾಯ ಎಲ್ಲವೂ ಹೌದು. ಆದರೆ ಕೊರೊನಾದ ಕಾರಣಕ್ಕೆ ಮತ್ತೆ ಹಳೆಯ ದಿನಗಳು ಮಲೆನಾಡಿನ ಭಾಗದಲ್ಲಿ ವಾಪಸಾಗಿವೆ.

ಕೊರೊನಾ ನಂತರ ಮನೆಗಳ ಮುಂದೆಯೇ ಮದುವೆಗಳಾಗುತ್ತಿವೆ. ಅದ್ಧೂರಿಯಾಗಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಮಾಡುವುದಕ್ಕೆ ಸರ್ಕಾರದ ಲಾಕ್ ಡೌನ್ ಅನುವು ಮಾಡಿಕೊಡುತ್ತಿಲ್ಲ. ಐವತ್ತು ಜನರೊಳಗೆ ಮದುವೆಗೆ ಆಹ್ವಾನಿಸಬೇಕು. ಅದು ಕೂಡ ವಧು- ವರ ಎರಡೂ ಕಡೆಯವರು ಸೇರಿ ಐವತ್ತು ಮಂದಿ ಮಾತ್ರ.

"ಐತ್ತರಿಂದ ಇನ್ನೂರು -ಮುನ್ನೂರು ಜನರಾದರೂ ಮನೆಗಳ ಮುಂದೆಯೇ ಮಾಡಬಹುದು ಅನ್ನುವಷ್ಟು ಜಾಗ ನಮ್ಮ ಕಡೆ ಇರುತ್ತದೆ. ಈ ಹಿಂದೆಲ್ಲ ನಮ್ಮ ಮದುವೆ ಆಗಿದ್ದು ಮನೆ ಮುಂದೆಯೇ. ಈಗ ಮತ್ತೆ ಆ ದಿನಗಳನ್ನು ನೋಡುವಂತಾಗಿದೆ" ಎಂದರು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ನೆಂಪೆ ಗ್ರಾಮದ ಎನ್.ಪಿ. ಕೃಷ್ಣಸ್ವಾಮಿ.

ಆಭರಣ ವ್ಯಾಪಾರ ಜೋರಾಗಿ ನಡೆಯುವ ಸಮಯ
 

ಆಭರಣ ವ್ಯಾಪಾರ ಜೋರಾಗಿ ನಡೆಯುವ ಸಮಯ

ಇನ್ನು ಕೊರೊನಾ ಬಂದ ಸಮಯ ಏನಿದೆ, ಮಾರ್ಚ್ ಕೊನೆ, ಏಪ್ರಿಲ್ ಹಾಗೂ ಮೇ ತಿಂಗಳು ಮದುವೆ ಮುಹೂರ್ತಗಳ ಸಮಯ. ಆಭರಣ ವ್ಯಾಪಾರ ಜೋರಾಗಿ ನಡೆಯುವ ಸಮಯ. ಇಡೀ ವರ್ಷದಲ್ಲಿ ಆಗುವ ವ್ಯಾಪಾರದ ಶೇಕಡಾ 40ರಷ್ಟು ನಮಗೆ ಏಪ್ರಿಲ್- ಮೇ ತಿಂಗಳಲ್ಲೇ ಆಗುತ್ತದೆ. ಆದರೆ ಈ ಸಲ ಏನೇನೂ ಇಲ್ಲ. ಹೆಚ್ಚೆಂದರೆ ಎಂಟರಿಂದ ಹತ್ತು ಮದುವೆಗೆ ಒಡವೆ ಮಾರಿರಬೇಕು ಅಷ್ಟೇ ಎಂದರು ತೀರ್ಥಹಳ್ಳಿಯ ಅನ್ನಪೂರ್ಣ ಜ್ಯುವೆಲ್ಲರ್ಸ್ ಮಾಲೀಕರಾದ ದಿನೇಶ್ ರಾವ್. ಈ ಹಿಂದೆ ಮದುವೆ ಸಂದರ್ಭದಲ್ಲಿ ಮಧುಮಗಳ ಒಡವೆ ಮಾತ್ರ ಅಲ್ಲ. ಆಕೆಯ ಅಕ್ಕ- ತಂಗಿ, ತಾಯಿ... ಹೀಗೆ ಇಡೀ ಕುಟುಂಬದವರ ಒಡವೆಗಳ ಬದಲಾವಣೆ, ಆಲ್ಟರೇಷನ್, ಹೊಸದಾದ ಆರ್ಡರ್ ಒಂದಲ್ಲ ಒಂದು ಬರುತ್ತಿತ್ತು. ಈ ಸಲ ಎರಡು ತಿಂಗಳಲ್ಲಿ ನಮ್ಮ ಕೈ ಕಚ್ಚಿ ಹೋಗಿದೆ. ಇನ್ನು ಸಣ್ಣ- ಪುಟ್ಟ ಜ್ಯುವೆಲ್ಲರಿಗಳ ಬಳಿ ಹೊಸ ಡಿಸೈನ್ ಗಳು, ಹೆಚ್ಚಿನ ಆಯ್ಕೆಗಳು ಇಲ್ಲ. ಜತೆಗೆ ಕೆಲಸ ಮಾಡುತ್ತಿದ್ದ ಹುಡುಗರು ವಾಪಸ್ ಊರುಗಳಿಗೆ ಹೋಗಿದ್ದಾರೆ. ನಮ್ಮ ಹತ್ತಿರವೂ ಹೆಚ್ಚಿನ ಸರಕು ಇಲ್ಲ ಎಂದು ಅವರ ಹೇಳಿದರು.

ಮಧುಮಕ್ಕಳಲ್ಲಿ ಸಂಭ್ರಮ ಕಾಣುತ್ತಿಲ್ಲ

ಮಧುಮಕ್ಕಳಲ್ಲಿ ಸಂಭ್ರಮ ಕಾಣುತ್ತಿಲ್ಲ

ಒಡವೆ- ವಸ್ತ್ರ ಮದುವೆ ಸಂಭ್ರಮದ ಭಾಗ. ನೂರಾರು ಸಂಖ್ಯೆಯಲ್ಲಿ ಬರುವ ಬಂಧುಗಳು, ಸ್ನೇಹಿತರ ಮಧ್ಯೆ ಒಡವೆ- ಸೀರೆ, ಬಟ್ಟೆಗಳನ್ನು ಇಲ್ಲಿ ತಂದೆ, ಅಲ್ಲಿ ಖರೀದಿಸಿದೆ ಅಂತ ಹೇಳಿಕೊಳ್ಳುವುದು ಕೂಡ ಸಂತೋಷದ ಭಾಗ. ಈಗ ಮದುವೆಗೆ ಜನರೇ ಸೇರುವಂತಿಲ್ಲ. ಆ ಕಾರಣಕ್ಕೆ ಮಧುಮಕ್ಕಳಲ್ಲಿ ಕೂಡ ಸಂಭ್ರಮ ಕಾಣುತ್ತಿಲ್ಲ. ಮೊದಲಿಗೆ ಹದಿನಾಲ್ಕು ದಿನದ ಲಾಕ್ ಡೌನ್ ಘೋಷಣೆ ಮಾಡಿದಾಗ ಬಹುತೇಕರು ಮದುವೆಗಳನ್ನು ಮುಂದಕ್ಕೆ ಹಾಕಿದರು. ಆದರೆ ಎರಡು, ಮೂರನೇ ಬಾರಿ ಹೊತ್ತಿಗೆ ಇದ್ಯಾವಾಗ ಪೂರ್ತಿ ಆಗುತ್ತದೋ ಏನೋ ಎಂಬ ಲೆಕ್ಕಾಚಾರದಲ್ಲಿ, ಇಟ್ಟ ಮುಹೂರ್ತವನ್ನು ಮುಂದಕ್ಕೆ ಹಾಕಲಾಗದೆ, ಕಡಿಮೆ ಜನರು ಇದ್ದರೂ ಪರವಾಗಿಲ್ಲ ಎಂದು ಮನೆಗಳ ಮುಂದೆಯೇ ಮದುವೆ ಮಾಡಿದ್ದಾರೆ. ಮತ್ತೂ ಕೆಲವರು ಮದುವೆಯನ್ನು ಆಗಸ್ಟ್- ಸೆಪ್ಟೆಂಬರ್ ಗೆ ಮುಂದಕ್ಕೆ ಹಾಕಿಕೊಂಡವರಿದ್ದಾರೆ. ಒಟ್ಟಾರೆ ನೋಡಿದಾಗ ಒಂದು ಮದುವೆ ಸೀಸನ್ ನಲ್ಲಿ ಏನೇನೂ ವ್ಯಾಪಾರ ಆಗದೆ ಮುಗಿದುಹೋಗಿದೆ ಎನ್ನುತ್ತಾರೆ ದಿನೇಶ್.

ಬೇಸರಕ್ಕೆ ಒಳಗಾಗಿರುವವರು ಹೆಣ್ಣುಮಕ್ಕಳು
 

ಬೇಸರಕ್ಕೆ ಒಳಗಾಗಿರುವವರು ಹೆಣ್ಣುಮಕ್ಕಳು

ಇನ್ನು ಇವತ್ತಿನ ದರಕ್ಕೆ 22 ಕ್ಯಾರಟ್ ಒಂದು ಗ್ರಾಮ್ ಚಿನ್ನ 4350 ರುಪಾಯಿಯನ್ನು ದಾಟಿದೆ. ಇನ್ನು ವೇಸ್ಟೇಜ್, ಮೇಕಿಂಗ್ ಚಾರ್ಜ್, ಜಿಎಸ್ ಟಿ ಅಂತೆಲ್ಲ ಲೆಕ್ಕ ಹಾಕಿದರೆ ಒಡವೆ ಖರೀದಿಗೆ ಒಂದು ಗ್ರಾಮ್ ಗೆ 5 ಸಾವಿರ ಹತ್ತಿರ ಹತ್ತಿರ, ಕೆಲವು ಡಿಸೈನಿನದು ಅದನ್ನೂ ಮೀರುತ್ತದೆ. ಒಂದು ಮಗುವಿಗೆ ಕಿವಿ ಚುಚ್ಚಬೇಕು ಅಂದರೆ, ಒಂದು ಗ್ರಾಮ್ ಚಿನ್ನದ ಓಲೆಗೆ ಐದು ಸಾವಿರ ರುಪಾಯಿ ದಾಟಿ ಹೋಗುತ್ತದೆ. ಒಂದು ಕಡೆ ಆದಾಯ ಇಲ್ಲ, ಮತ್ತೊಂದು ಕಡೆ ವಸ್ತುಗಳು ದುಬಾರಿ. ಇನ್ನು ಮದುವೆ ವಿಚಾರಕ್ಕೆ ವಾಪಸ್ ಬರುವುದಾದರೆ, ಕೆಲವರಿಗೆ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಆಸೆ ಇರುತ್ತದೆ. ಅಂಥವರಿಗೆ ಈಗಿನ ಸನ್ನಿವೇಶ ಬಹಳ ಬೇಸರ ತರುತ್ತಿದೆ. ಆದರೆ ಆರ್ಥಿಕ ಅನುಕೂಲ ಇಲ್ಲದವರು ತಮ್ಮಿಂದ ಸಾಧ್ಯವಾದ ಮಟ್ಟಿಗೆ ಮದುವೆ ಮಾಡಿ, ನಿಟ್ಟುಸಿರು ಬಿಡುತ್ತಿದ್ದಾರೆ. ಸಾಲ ಇಲ್ಲದೆ ಸರಳವಾಗಿ ಮದುವೆ ಆಯಿತಲ್ಲ ಎಂಬ ಸಮಾಧಾನ ಅದು. ಆದರೆ ಈಗಿನ ಸನ್ನಿವೇಶದಿಂದ ಹೆಚ್ಚು ಬೇಸರಕ್ಕೆ ಒಳಗಾಗಿರುವವರು ಹೆಣ್ಣುಮಕ್ಕಳು. ಮದುವೆ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡವರಿಗೆ ಅಲಂಕಾರ ಮಾಡಿಸಿಕೊಳ್ಳಲು ಬ್ಯೂಟಿಷಿಯನ್ಸ್ ಕೂಡ ಸಿಗುತ್ತಿಲ್ಲ.

ವ್ಯಾಪಾರಿಗಳಿಗೆ ಸಂಕಷ್ಟ

ವ್ಯಾಪಾರಿಗಳಿಗೆ ಸಂಕಷ್ಟ

ವರ್ಷಕ್ಕೆ ಇಂತಿಷ್ಟು ಚಿನ್ನ ಎಂದು ಖರೀದಿಸುತ್ತಿದ್ದ ಗ್ರಾಹಕರು ಹಾಗೂ ಆ ರೀತಿಯ ಮನಸ್ತತ್ವದವರು ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದ್ದರಿಂದ ಚಿನ್ನ ಖರೀದಿ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಆಭರಣ ಮಾರಾಟ ಮಾಡುವ ವಲಯದವರಿಗೆ ಇದು ಒಂದು ಕಡೆ ಹೊಡೆತವಾಯಿತು. ಇನ್ನು ಮದುವೆ ಸೇರಿದಂತೆ ಯಾವುದೇ ಸಮಾರಂಭಗಳು ಕೊರೊನಾದ ಕಾರಣಕ್ಕೆ ನಡೆಯುತ್ತಲೇ ಇಲ್ಲ. ಒಂದು ವೇಳೆ ತುಂಬ ಕಡಿಮೆ ಜನರು ಭಾಗವಹಿಸಿ, ಕಾರ್ಯಕ್ರಮ ನಡೆದರೂ ಒಡವೆ- ವಸ್ತು ಖರೀದಿಸಿ ಸಂಭ್ರಮಿಸುವ ಮನಸ್ಥಿತಿಯಲ್ಲಿ ಜನರು ಇಲ್ಲ. ಬಾಡಿಗೆ- ಮತ್ತಿತರ ವೆಚ್ಚಗಳನ್ನು ಭರಿಸಿ, ಸೀಸನ್ ನಲ್ಲಿ ವ್ಯಾಪಾರವೂ ಇಲ್ಲದಂತಾಗಿ ಈ ಭಾಗದ ಆಭರಣ ವ್ಯಾಪಾರಿಗಳು ಕಂಗಾಲಾಗಿರುವುದು ನಿಜ. ಸರ್ಕಾರದಿಂದ ಗ್ಯಾರಂಟಿ ಅಗತ್ಯವಿಲ್ಲದ ಸಾಲ ಯೋಜನೆಯನ್ನು ತರಲಾಗಿದೆ. ಆದರೆ ಅದನ್ನು ನೀಡಲು ಬ್ಯಾಂಕ್ ಗಳಲ್ಲಿ ತಯಾರಿಲ್ಲ. ಇದು ಸದ್ಯದ ಸನ್ನಿವೇಶ.

English summary

Malnad Belt Again Witnessing Marriage In Front Of Home

Due to Corona lock down and restrictions Malnad belt region again witnessing marriage in front of house.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more