ಬ್ಯಾಂಕ್ ಗ್ರಾಹಕರ ಗಮನಕ್ಕೆ: ಹಣ ವಿಥ್ ಡ್ರಾ ಮಾಡಲು ಹೊಸ ನಿಯಮ
ಜನರು ಬ್ಯಾಂಕ್ ಗಳಿಗೆ ಭೇಟಿ ನೀಡುವ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ನಗದು ವಿಥ್ ಡ್ರಾಗೆ ಹೊಸ ನಿಯಮ ಪರಿಚಯಿಸಿದೆ. ದೇಶಾದ್ಯಂತ ಲಾಕ್ ಡೌನ್ ಇರುವ ಅವಧಿಯಲ್ಲಿ ಈ ನಿಯಮವು ಅನ್ವಯ ಆಗುತ್ತದೆ. ಈಗಿನ ನಡೆಯಿಂದ ಜನಜಂಗುಳಿ ಕಡಿಮೆ ಆಗುತ್ತದೆ. ಎಲೆಕ್ಟ್ರಾನಿಕ್ ವ್ಯವಹಾರಗಳನ್ನು ಹೆಚ್ಚು ಮಾಡುವ ಮೂಲಕ ಒತ್ತಡ ಕಡಿಮೆ ಮಾಡಲು ಈ ನಿರ್ಧಾರಕ್ಕೆ ಬರಲಾಗಿದೆ.
ನಿರ್ದಿಷ್ಟ ದಿನಾಂಕ ನೀಡಿ, ಆ ದಿನಗಳಲ್ಲಿ ಮಾತ್ರ ಹಣ ವಿಥ್ ಡ್ರಾ ಮಾಡಲು ಐಬಿಎ ಸೂಚಿಸಿದೆ. ಆ ಮೂಲಕ ಬ್ಯಾಂಕ್ ಶಾಖೆಯ ಹೊರಗೆ ಜನ ಗುಂಪು ಸೇರದಂತೆ ಎಚ್ಚರ ವಹಿಸಬಹುದು ಎಂಬುದು ಈ ತೀರ್ಮಾನದ ಹಿಂದಿನ ಉದ್ದೇಶ. ಗ್ರಾಹಕರ ಖಾತೆಯ ಸಂಖ್ಯೆ ಕೊನೆ ಎರಡು ಸಂಖ್ಯೆಯ ಆಧಾರದ ಮೇಲೆ ನಿರ್ದಿಷ್ಟ ದಿನದಂದು ನಗದು ವಿಥ್ ಡ್ರಾ ಮಾಡಬಹುದು.

ಖಾತೆಯ ಕೊನೆ ಎರಡು ಸಂಖ್ಯೆ
ಈಗ ಖಾತೆಯಲ್ಲಿ ಕೊನೆ ಸಂಖ್ಯೆ 0 ಮತ್ತು 1 ಅಂತ ಇದ್ದರೆ ಅಂಥವರು ಮೇ 4ರಂದು ಹಣ ವಿಥ್ ಡ್ರಾ ಮಾಡಬಹುದು. ಅದೇ ರೀತಿ 2 ಮತ್ತು 3 ಸಂಖ್ಯೆ ಇದ್ದರೆ ಆ ಖಾತೆದಾರರು ಮೇ 5ನೇ ತಾರೀಕಿನಂದು ಹಣ ಡ್ರಾ ಮಾಡಬಹುದು. 4 ಹಾಗೂ 5 ಖಾತೆಯ ಕೊನೆ ಸಂಖ್ಯೆ ಆಗಿದ್ದಲ್ಲಿ ಮೇ 6ನೇ ತಾರೀಕು ಡ್ರಾ ಮಾಡಬಹುದು. ಈ ರೀತಿ ಮೇ 11ನೇ ತಾರೀಕಿನ ತನಕ ಹಣ ವಿಥ್ ಡ್ರಾ ಮಾಡುವುದಕ್ಕೆ ನಿಯಮ ಇರುತ್ತದೆ. ಇನ್ನು 6 ಮತ್ತು 7 ಕೊನೆ ಸಂಖ್ಯೆ ಇದ್ದಲ್ಲಿ ಮೇ 8ರಂದು ಹಾಗೂ 8 ಮತ್ತು 9 ಕೊನೆ ಸಂಖ್ಯೆ ಇದ್ದಲ್ಲಿ ಮೇ 11ನೇ ತಾರೀಕು ಹಣ ವಿಥ್ ಡ್ರಾ ಮಾಡಬಹುದು.

ಏಪ್ರಿಲ್ ನಲ್ಲಿ ದೊಡ್ಡ ಸರತಿ ಆಗಿತ್ತು
ಮೇ 11ನೇ ತಾರೀಕಿನ ನಂತರ ಈ ನಿಬಂಧನೆಯನ್ನು ತೆರವು ಮಾಡಲಾಗುತ್ತದೆ. ಆ ನಂತರ ಯಾವುದೇ ದಿನ ಬೇಕಾದರೂ ಹಣ ಡ್ರಾ ಮಾಡಬಹುದು. ಈ ಕ್ರಮವನ್ನು ಐಬಿಎ ತೆಗೆದುಕೊಂಡಿದೆ. ಏಪ್ರಿಲ್ ನಲ್ಲಿ ಬ್ಯಾಂಕ್ ಗಳ ಮುಂದೆ ದೊಡ್ಡ ಸರತಿ ಸೇರುವಂತಾಗಿತ್ತು. ಆಗ ಹಣ ವಿಥ್ ಡ್ರಾ ಮಾಡಲು ಇಷ್ಟೊಂದು ಜನ ಸೇರಿದ ಮೇಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗಲಿಲ್ಲ. ಅಂದಹಾಗೆ ಗ್ರಾಹಕರು ಎಟಿಎಂನಿಂದ ಕೂಡ ಹಣ ವಿಥ್ ಡ್ರಾ ಮಾಡಬಹುದು ಅದಕ್ಕೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಮಾಹಿತಿಯನ್ನು ನೀಡಲಾಗಿದೆ.

ಸರ್ಕಾರದಿಂದ 500 ರುಪಾಯಿ ಡೆಪಾಸಿಟ್
ಇನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸರ್ಕಾರದಿಂದ ಮಹಿಳೆಯರ ಖಾತೆಗೆ 500 ರುಪಾಯಿ ಡೆಪಾಸಿಟ್ ಮಾಡುತ್ತಿದೆ. ಈ ಹಣವನ್ನು ತೆಗೆದುಕೊಳ್ಳುವುದಕ್ಕೆ ಏಕಾಏಕಿ ಬ್ಯಾಂಕ್ ಗಳಿಗೆ ಬರುವ ಅಗತ್ಯ ಇಲ್ಲ. ಇದು ಖಾತೆಗಳಲ್ಲಿ ಸುರಕ್ಷಿತವಾಗಿ ಇರುತ್ತದೆ ಎಂದು ಬ್ಯಾಂಕ್ ಗಳಿಂದ ತಿಳಿಸಲಾಗಿದೆ. ಅಂದ ಹಾಗೆ ಏಪ್ರಿಲ್ ತಿಂಗಳ ಮೊತ್ತವನ್ನು ಈಗಾಗಲೇ ಖಾತೆಗಳಿಗೆ ಜಮೆ ಮಾಡಲಾಗಿದೆ. ಮೇ ತಿಂಗಳಲ್ಲಿ ಹಾಕಬೇಕಾದ ಮೊತ್ತದ ಜಮೆ ಆಗುತ್ತಿದೆ ಎಂದು ಮಾಹಿತಿ ದೊರೆತಿದೆ. ಅಂದ ಹಾಗೆ ಮೂರನೇ ಅವಧಿಗೆ ದೇಶಾದ್ಯಂತ ಮೇ 4ರಿಂದ ಮತ್ತೆ ಲಾಕ್ ಡೌನ್ ಎರಡು ವಾರಗಳ ಕಾಲ ಮುಂದುವರಿದಿದೆ. ಆದರೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.