For Quick Alerts
ALLOW NOTIFICATIONS  
For Daily Alerts

6 ತಿಂಗಳ ವೇತನ, ಇನ್ಷೂರೆನ್ಸ್ ನೀಡಿ ಕೆಲಸದಿಂದ ತೆಗೆಯುತ್ತಿರುವ ಬೆಂಗಳೂರಿನ ಕಂಪೆನಿ

|

ಕೊರೊನಾ ಎಂಬುದು ಗಾಯದ ಮೇಲಿನ ಬರೆ ಎಂಬಂತಾಯಿತು. ಆರ್ಥಿಕತೆ ಹಿಂಜರಿತ ಇದ್ದ ಸಂದರ್ಭದಲ್ಲೇ ಎರಗಿದ ಕೊರೊನಾದಿಂದಾಗಿ ಉದ್ಯೋಗ ಕಡಿತ ಸಾಮಾನ್ಯ ಎಂಬಂತಾಗಿದೆ. ಬೆಂಗಳೂರಿನಲ್ಲಿನ ಪ್ರತಿಷ್ಠಿತ ಬಿಪಿಒ ಒಂದರಲ್ಲಿ ಶೇಕಡಾ 30ರಷ್ಟು ಉದ್ಯೋಗ ಕಡಿತ ಮಾಡಲು ಹುಕುಂ ಬಂದಿದೆ ಎಂಬುದನ್ನು ಆ ಕಂಪೆನಿಯಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರು ಹೇಳುತ್ತಾರೆ.

ಆರು ತಿಂಗಳ ಸಂಬಳ ಕೊಡ್ತಾರೆ ಹಾಗೂ ಆರು ತಿಂಗಳಿಗೆ ಕಂಪೆನಿಯ ಇನ್ಷೂರೆನ್ಸ್ ಕವರ್ ಆಗುತ್ತದೆ. ಒಂದು ದಿನಕ್ಕೆ ಮುಂಚೆ ಎಚ್.ಆರ್. ಕಡೆಯಿಂದ ಕಾಲ್ ಬರುತ್ತದೆ. ನೀವು ನಾಳೆಯಿಂದ ಕೆಲಸ ಮಾಡುವ ಅಗತ್ಯ ಇಲ್ಲ. ಕಂಪೆನಿಯಿಂದ ಕೊಟ್ಟಿರುವ ಆಕ್ಸೆಸ್ ಕಾರ್ಡ್, ಲ್ಯಾಪ್ ಟಾಪ್ ಯಾವುದಿದೆಯೋ ಅದನ್ನು ವಾಪಸ್ ಮಾಡಿ. ಈ ಬಗ್ಗೆ ಯಾರ ಜತೆಗೂ ಚರ್ಚೆ ಕೂಡ ಮಾಡಬೇಡಿ ಎಂಬ ಹುಕುಂ ಜತೆಗೆ ಕಾಲ್ ಕಟ್ ಆಗುತ್ತದೆ.

 

ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಗಳನ್ನು ತೆಗೆಯಲು ಬಳಸುತ್ತಿರುವ ಮಾರ್ಗ ಇದು.

ಕೆಲಸದಿಂದ ತೆಗೆಯಲು ಪಟ್ಟಿ ಸಿದ್ಧ

ಕೆಲಸದಿಂದ ತೆಗೆಯಲು ಪಟ್ಟಿ ಸಿದ್ಧ

"ಇಷ್ಟು ಜನರನ್ನು ಕಂಪೆನಿಯಿಂದ ತೆಗೆಯಬೇಕು ಎಂದು ನಿರ್ಧಾರ ಆಗಿದೆ. ಆದರೆ ಯಾರನ್ನು ತೆಗೆಯಬೇಕು ಅನ್ನೋದಕ್ಕೆ ಕೆಲವು ಮಾನದಂಡಗಳನ್ನು ಹಾಕಿಕೊಳ್ಳಲಾಗಿದೆ. ಸ್ವಭಾವ, ಪಡೆಯುತ್ತಿದ್ದ ಸಂಬಳಕ್ಕೆ ಮಾಡುತ್ತಿದ್ದ ಕೆಲಸ, ಉದ್ಯೋಗದಲ್ಲಿ ಇದ್ದ ಆಸಕ್ತಿ ಇವನ್ನೆಲ್ಲ ಅಳೆದು ಪಟ್ಟಿ ಸಿದ್ಧ ಮಾಡಲಾಗುತ್ತಿದೆ" ಎಂದು ಹೇಳಿದರು ಹೆಸರು ಬಹಿರಂಗ ಮಾಡಲು ಬಯಸದ ಬಿಪಿಒ ಕಂಪೆನಿಯೊಂದರ ಟೀಮ್ ಲೀಡರ್. "ನಾನು ಈಗಾಗಲೇ ಮುಂದಿನ ಹಂತಕ್ಕೆ ಪ್ರಮೋಷನ್ ತೆಗೆದುಕೊಳ್ಳುವುದಕ್ಕೆ ಎಲಿಜಿಬಿಬಲ್. ನಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್ ವಾಪಸ್ ಹೋಗಿದೆ. ಈಗ ಬಹುತೇಕ ಜನರನ್ನು ಕೆಲಸದಿಂದ ತೆಗೆದಿದ್ದಾರೆ. ನನಗಿಂತ ಕೆಳ ಹಂತದವರು ಮಾಡುವ ಕೆಲಸವನ್ನೂ ನಾನೇ ಮಾಡ್ತಿದ್ದೀನಿ. ಒಂದು ದಿನಕ್ಕೆ ಹದಿನಾಲ್ಕು ಗಂಟೆಗಿಂತ ಹೆಚ್ಚು ಕೆಲಸ ಮಾಡ್ತೀನಿ. ಈ ಬಗ್ಗೆ ನನ್ನ ಮ್ಯಾನೇಜರ್ ನ ಕೇಳಿದರೆ, ಕೆಲಸ ಉಳಿದಿದೆಯಲ್ಲಾ ಅದಕ್ಕೆ ಸಂತೋಷ ಪಡಿ. ನೀವೇನಾದರೂ ಹೆಚ್ಚು ಮಾತನಾಡಿದರೆ ಈ ಕೆಲಸವೂ ಇಲ್ಲ ಅನ್ನೋ ಹಾಗೆ ಆಗುತ್ತದೆ" ಎಂದರು ಅದೇ ಬಿಪಿಒನಲ್ಲಿ ಟೀಮ್ ಲೀಡರ್ ಹುದ್ದೆಯಲ್ಲಿ ಇರುವ ಮತ್ತೊಬ್ಬ ವ್ಯಕ್ತಿ.

ಈಗ 10% ವೇತನ ಹೆಚ್ಚು ಸಿಕ್ಕರೂ ಸಾಕು
 

ಈಗ 10% ವೇತನ ಹೆಚ್ಚು ಸಿಕ್ಕರೂ ಸಾಕು

ಆರ್ಥಿಕ ಸಮಸ್ಯೆ ಆಗುವ ಮುಂಚೆ ಯಾರನ್ನಾದರೂ ಕೆಲಸದಿಂದ ತೆಗೆಯುವ ಮುನ್ನ ಸಾವಿರ ಸಲ ಯೋಚನೆ ಮಾಡುತ್ತಿದ್ದರು. ದೂರುಗಳು ಬಂದು, ಪರ್ಫಾರ್ಮೆನ್ಸ್ ಸರಿ ಇಲ್ಲದೆ, ಎಷ್ಟು ತಿಳಿ ಹೇಳಿದರೂ ಸರಿ ಹೋಗದಿದ್ದಲ್ಲಿ ಅಂಥವರನ್ನು ಕೊನೆ ಆಯ್ಕೆ ಎಂಬಂತೆ, ಬೇರೆ ಕಡೆ ಉದ್ಯೋಗ ಹುಡುಕುವುದಕ್ಕೆ ಸಮಯ ನೀಡಿ, ಕೆಲಸದಿಂದ ತೆಗೆಯಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಹತ್ತು ವರ್ಷದ ಮೇಲೆ ಅನುಭವ ಇರುವಂಥವರನ್ನೂ ಪರ್ಫಾರ್ಮೆನ್ಸ್ ಇಲ್ಲ ಎಂಬುದು ಸೇರಿದಂತೆ ನಾನಾ ಕಾರಣಗಳಿಗಾಗಿ ಕೆಲಸದಿಂದ ತೆಗೆಯಲಾಗುತ್ತಿದೆ. ಲಿಂಕ್ಡ್ ಇನ್ ನಲ್ಲಿ ರಾಶಿ ರಾಶಿ ಸಿ.ವಿ.ಗಳು (ಕರಿಕ್ಯುಲಮ್ ವೀಟೆ) ಅಪ್ ಲೋಡ್ ಆಗಿವೆ. ಈಗ ಉದ್ಯೋಗದಾತ ಕಂಪೆನಿಗಳಿಗೆ ಚೌಕಾಸಿ ಮಾಡುವುದಕ್ಕೆ ಬಹಳ ಒಳ್ಳೆ ಅವಕಾಶ. ಮುಂಚೆಲ್ಲ ಆಗಿದ್ದರೆ ಈ ಹಿಂದೆ ಪಡೆಯುತ್ತಿದ್ದ ಸಂಬಳಕ್ಕಿಂತ 40% ವರೆಗೆ ಹೆಚ್ಚು ನೀಡುವಂತೆ ಬೇಡಿಕೆ ಇಡುತ್ತಿದ್ದವರು, ಈಗ 10% ಹೆಚ್ಚು ಸಿಕ್ಕರೂ ಅಥವಾ ಅದು ಸಿಗದಿದ್ದರೂ ಕೆಲಸ ಸಿಕ್ಕಲಿ ಸಾಕು ಎಂಬ ಸ್ಥಿತಿಗೆ ಬಂದಿದ್ದಾರೆ.

ಬಹಳ ಪ್ರಾಜೆಕ್ಟ್ ಗಳು ವಾಪಸ್ ಹೋಗಿವೆ

ಬಹಳ ಪ್ರಾಜೆಕ್ಟ್ ಗಳು ವಾಪಸ್ ಹೋಗಿವೆ

ಬಹಳ ಪ್ರಾಜೆಕ್ಟ್ ಗಳು ವಾಪಸ್ ಹೋಗುತ್ತಿವೆ. ಅದಕ್ಕೆ ಮುಖ್ಯವಾಗಿ ಕಾರಣ ಅಮೆರಿಕದಲ್ಲಿ ಆರ್ಥಿಕ ಸ್ಥಿತಿ. ಭಾರತಕ್ಕೆ ಬಂದಿರುವ ಕೆಲಸಗಳಲ್ಲಿ ಅಲ್ಲಿನದೇ ಹೆಚ್ಚು. ಕೊರೊನಾ ಹೊಡೆತದಿಂದ ಅಲ್ಲಿನ ಜನರಿಗೇ ಕೆಲಸ ಇಲ್ಲದಂತಾಗಿರುವಾಗ ಅದನ್ನು ಬೇರೆ ದೇಶಕ್ಕೆ, ಕಡಿಮೆ ಖರ್ಚಿನಲ್ಲಿ ಆಗುತ್ತದೆ ಎಂಬ ಕಾರಣಕ್ಕೆ ನೀಡುತ್ತಾರಾ? ಇನ್ನು ಕೊರೊನಾಗೆ ಮುಂಚೆ ಭಾರತಕ್ಕೆ ಬರಬೇಕಿದ್ದ ಹೊಸ ಕೆಲಸಗಳಿಗೆ ತಡೆಯಾಗಿವೆ. ಈಗಿನ ಕೆಲವು ಪ್ರಾಜೆಕ್ಟ್ ಗಳು ವಾಪಸ್ ಹೋಗಿವೆ. ಒಂದು ವೇಳೆ ಆ ಕೆಲಸವು ಇಲ್ಲೇ ಉಳಿದುಕೊಂಡಿದ್ದಲ್ಲಿ ಅವರಿಗೆ ವಿಪರೀತ ಉಳಿತಾಯ ತೋರಿಸಬೇಕು. ಹಾಗೆ ಹಣ ಉಳಿತಾಯ ಮಾಡಿಕೊಟ್ಟ ಮಾತ್ರಕ್ಕೆ ದೀರ್ಘ ಕಾಲ ಇಲ್ಲೇ ಆ ಪ್ರಾಜೆಕ್ಟ್ ಗಳು ಉಳಿಯುತ್ತವೆ ಎಂಬ ಯಾವ ಖಾತ್ರಿಯೂ ಇಲ್ಲ. ಆದ್ದರಿಂದ ಉದ್ಯೋಗದಿಂದ ತೆಗೆಯುವ, ವೇತನ ಕಟ್ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಹೇಗೋ ಕೆಲಸವನ್ನು ಉಳಿಸಿಕೊಂಡು ಬಂದಿದ್ದವರೇ ಟಾರ್ಗೆಟ್ ಆಗುತ್ತಿದ್ದು, ಅಂಥವರಿಗೆ 'ಫೈನಲ್ ಸೆಟ್ಲ್ ಮೆಂಟ್' ಮಾಡಿ ಕಳುಹಿಸಲಾಗುತ್ತಿದೆ.

ಕೆಲವರ ಹಿತ ಕಾಯಲು ಹಲವರನ್ನು ಬಲಿ ಕೊಡಬೇಕಾಗುತ್ತದೆ

ಕೆಲವರ ಹಿತ ಕಾಯಲು ಹಲವರನ್ನು ಬಲಿ ಕೊಡಬೇಕಾಗುತ್ತದೆ

ಇನ್ನು ಕೆಲ ಕ್ಷೇತ್ರಗಳಲ್ಲಿ ಕಾರ್ಮಿಕರ ಒಕ್ಕೂಟವನ್ನು ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲ. ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವಾಗ ಕಂಪೆನಿಗಳು ತಾವಾಗಿಯೇ ಒಂದಿಷ್ಟು ಪರಿಹಾರ ನೀಡಿದರೆ ಆಯಿತು, ಇಲ್ಲದಿದ್ದಲ್ಲಿ ಅದು ಕೂಡ ಸಿಗುವುದಿಲ್ಲ. ಈ ಹಿಂದೆ ಸಾಕಷ್ಟು ಹೋರಾಟಗಳು ಇದಕ್ಕಾಗಿಯೇ ನಡೆದಿವೆ. ಪ್ರಸ್ತುತ ಸನ್ನಿವೇಶದಲ್ಲಿ ಸಹ ಹಲವಾರು ಮಂದಿ ಉದ್ಯೋಗಿಗಳು ಸೇವಾ ಭದ್ರತೆಗಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ನಿಯಮಗಳನ್ನು ಬಿಗಿ ಮಾಡಿದರೆ ಆ ಕಂಪೆನಿಗಳು ಬೇರೆ ದೇಶಗಳಿಗೆ ಹೋಗಬಹುದು. ಇದರಿಂದ ಇತರ ಉದ್ಯೋಗವೂ ಇಲ್ಲದಂತಾಗುತ್ತದೆ. ಕೆಲವರ ಹಿತ ಕಾಪಾಡುವ ಪ್ರಯತ್ನದಲ್ಲಿ ಹಲವರನ್ನು ಬಲಿ ಕೊಟ್ಟಂತಾಗುತ್ತದೆ ಎಂಬುದು ಒಂದು ವಾದ. ಆದರೆ ಇಡೀ ಜಾಬ್ ಮಾರ್ಕೆಟ್ ನೆಲ ಕಚ್ಚಿರುವಾಗ ಏಕಾಏಕಿ ಉದ್ಯೋಗದಿಂದ ತೆಗೆದರೆ ಮತ್ತೊಂದನ್ನು ಹುಡುಕಿಕೊಳ್ಳುವುದು ಹೇಗೆ ಎಂಬುದು ಕೆಲಸ ಕಳೆದುಕೊಂಡವರ ಅಳಲು. ಇಲ್ಲಿನ ಉದಾಹರಣೆ ಒಂದು ಕಂಪೆನಿಗೆ ಸೀಮಿತ ಆಗಿರಬಹುದು. ಆದರೆ ಹಲವೆಡೆ ಸ್ಥಿತಿ ಹೀಗೇ ಇದೆ.

English summary

Pink Slip To Bengaluru BPO Employees With 6 Month Salary And Insurance Coverage

Bengaluru based company sacking employees due to Corona effect. Giving 6 month salary and insurance coverage.
Company Search
COVID-19