ಪಾಸ್ ವರ್ಡ್ ಮರೆತಿದ್ದಕ್ಕೆ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.
ಕಳೆದ ಕೆಲವು ತಿಂಗಳಲ್ಲಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಅದ್ಯಾವ ಪರಿಯಲ್ಲಿ ಮೇಲೇರಿದೆ ಅಂದರೆ, ನಿಮ್ಮ ಬಳಿ ಬಿಟ್ ಕಾಯಿನ್ ಇದೆ ಅಂದರೇನೇ ಲಕ್ಷಾಧೀಶರು. ವಿಶ್ವದಾದ್ಯಂತ ಹೂಡಿಕೆದಾರರು ಬಿಟ್ ಕಾಯಿನ್ ನಲ್ಲಿ ಹಣ ಹೂಡಿದ್ದಾರೆ. ಈ ಹಿಂದೆ ಯಾವುದೋ ಜಮಾನದಲ್ಲಿ ಬಿಟ್ ಕಾಯಿನ್ ಮೇಲೆ ಹಣ ಹಾಕಿದ್ದವರ ನಸೀಬು ಹೇಳುವುದೇ ಬೇಡ, ಅಷ್ಟು ಅದ್ಭುತ ಅಂದುಕೊಳ್ಳಿ.
$ 40 ಸಾವಿರ ಗಡಿ ದಾಟಿದ ಬಿಟ್ ಕಾಯಿನ್; ಭಾರತದಲ್ಲಿನ ಮೌಲ್ಯ ರು. 30 ಲಕ್ಷ
ಆದರೆ, ಆರಂಭದ ಎಲ್ಲ ಹೂಡಿಕೆದಾರರು ಅದೃಷ್ಟವಂತರು ಅನ್ನುವುದಕ್ಕೆ ಆಗಲ್ಲ. ಅದಕ್ಕೆ ಈ ವರದಿಯಲ್ಲಿ ನಿಮಗೆ ಪರಿಚಯಿಸುವ ವ್ಯಕ್ತಿಯೇ ಒಂದು ಉದಾಹರಣೆ. ಲಕ್ಷಾಂತರ ರುಪಾಯಿ ಆಗಿರುವ ಬಿಟ್ ಕಾಯಿನ್ ಲಾಭ ಈತನ ಕಣ್ಣಿಗೆ ಕಾಣುತ್ತಿದೆ. ಆದರೆ ಅದನ್ನು ಪಡೆದುಕೊಳ್ಳುವ ಪಾಸ್ ವರ್ಡ್ ಕಳೆದುಕೊಂಡಿರುವ ಕಾರಣ ಆ ಲಾಭವನ್ನು ಪಡೆಯುವುದಕ್ಕೆ ಆಗುತ್ತಿಲ್ಲ.

7002 ಬಿಟ್ ಕಾಯಿನ್ ಗಳು ಖರೀದಿ
ಬಹಳ ರೋಚಕ, ಆಸಕ್ತಿದಾಯಕ ಹಾಗೂ ಅಯ್ಯೋ ಪಾಪ ಎನಿಸುವಂಥ ಕಥೆ ಈತನದು. ಹೆಸರು ಸ್ಟೆಫಾನ್ ಥಾಮಸ್. ಬಿಟ್ ಕಾಯಿನ್ ಮೌಲ್ಯ $ 10ಕ್ಕಿಂತ ಕಡಿಮೆ ಇದ್ದಾಗ ಈತ ಹೂಡಿಕೆ ಮಾಡಿದ್ದ. ಈತ ಖರೀದಿಸಿದ್ದು 7002 ಬಿಟ್ ಕಾಯಿನ್ ಗಳು. ಆದರೆ ಇವತ್ತಿಗೆ ಆ ಪೈಕಿ ಒಂದನ್ನು ಸಹ ಮಾರಲಾಗದ ಸ್ಥಿತಿಯಲ್ಲಿ ಇದ್ದಾರೆ. ಈ ಹಿಂದೆ ಥಾಮಸ್ ತನ್ನೆಲ್ಲ ಬಿಟ್ ಕಾಯಿನ್ ಕೀಗಳನ್ನು ಸಣ್ಣ, ಎನ್ ಕ್ರಿಪ್ಟ್ ಆದ ಹಾರ್ಡ್ ಡ್ರೈವ್- ಐರನ್ ಕೀನಲ್ಲಿ ಇರಿಸಿದ್ದರು. ಸರಿಯಾದ ಪಾಸ್ ವರ್ಡ್ ಹಾಕಿ, ಈ ಐರನ್ ಕೀ ಅನ್ ಲಾಕ್ ಮಾಡುವುದಕ್ಕೆ ಹತ್ತು ಬಾರಿ ಮಾತ್ರ ಪ್ರಯತ್ನ ಮಾಡಬಹುದು. ಒಂದು ವೇಳೆ ಈ ಎಲ್ಲ ಹತ್ತು ಪ್ರಯತ್ನಗಳೂ ತಪ್ಪಾದಲ್ಲಿ ಹಾರ್ಡ್ ಡ್ರೈವ್ ಎನ್ ಕ್ರಿಪ್ಟ್ ಮರೆತುಬಿಡಬೇಕು.

ಈವತ್ತಿನ ಮೌಲ್ಯಕ್ಕೆ 1800 ಕೋಟಿ ರು.
ಈ ಪುಣ್ಯಾತ್ಮ ಥಾಮಸ್ ತಾನು ಪಾಸ್ ವರ್ಡ್ ಮರೆತಿರುವುದಷ್ಟೇ ಅಲ್ಲ, ಐರನ್ ಕೀ ಅನ್ ಲಾಕ್ ಮಾಡುವ ಎಲ್ಲ ಹತ್ತು ಪ್ರಯತ್ನಗಳು ವಿಫಲವೂ ಆಗಿದ್ದಾರೆ. ಆ ಕಾರಣಕ್ಕೆ ಈಗ ತನ್ನದೇ 7002 ಬಿಟ್ ಕಾಯಿನ್ ಗಳನ್ನು ಪಡೆಯುವುದಕ್ಕೆ ಆಗುತ್ತಿಲ್ಲ. ಒಮ್ಮೆ ಊಹಿಸಿ ನೋಡಿ, ಈವತ್ತಿನ ಮೌಲ್ಯಕ್ಕೆ 1800 ಕೋಟಿ ರು. ಆಗುತ್ತದೆ. ಅಷ್ಟು ಮೊತ್ತದ ಬಿಟ್ ಕಾಯಿನ್ ತನ್ನದೇ ಇದ್ದರೂ ಆತ ಅದನ್ನು ಪಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಥಾಮಸ್ ಗೆ ಹೇಗಾಗಿರಬಹುದು? ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸರಿ, ಬಿಟ್ ಕಾಯಿನ್ ಮಾರಾಟ ಮಾಡುವ- ವ್ಯವಹರಿಸುವ ಸಂಸ್ಥೆ- ಆಡಳಿತ ಮಂಡಳಿ ಅಥವಾ ಟೆಕ್ನಿಕಲ್ ಎಕ್ಸ್ ಪರ್ಟ್ ಸಹಾಯ ಪಡೆದು, ಹಣ ತೆಗೆದುಕೊಳ್ಳಬಹುದು ಅಲ್ಲವಾ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು.

ಪಾಸ್ ವರ್ಡ್ ಮರೆತರೆ ಬಿಟ್ ಕಾಯಿನ್ ಸಹ ಮರೆತಂತೆ
ಅಲ್ಲೇ ಇರುವುದು ಸ್ಟೋರಿಯಲ್ಲಿ ಟ್ವಿಸ್ಟ್. ಈ ಡಿಜಿಟಲ್ ಕರೆನ್ಸಿಯನ್ನು ಯಾರು ಖರೀದಿ ಮಾಡುತ್ತಾರೋ ಅವರವರಿಗೆ ಅದರಲ್ಲಿ ವ್ಯವಹರಿಸುವ ಪೂರ್ಣಾಧಿಕಾರ ಇರುತ್ತದೆ. ಆ ಕೀ ಸಂಪೂರ್ಣವಾಗಿ ವಿಶಿಷ್ಟವಾಗಿರುತ್ತದೆ ಮತ್ತು ಯಾರು ಖರೀದಿಸಿರುತ್ತಾರೋ ಅವರಿಂದ ಮಾತ್ರ ಅದನ್ನು ಬಳಸುವುದಕ್ಕೆ ಸಾಧ್ಯ. ಅದನ್ನು ಮರೆತು ಬಿಟ್ಟಿದ್ದೀನಿ, ಅದನ್ನು ತಿಳಿಯುವುದಕ್ಕೆ ಸಹಾಯ ಮಾಡಿ ಅನ್ನೋದಿಕ್ಕೆ ಆಗಲ್ಲ. ಈಗ ಥಾಮಸ್ ವಿಚಾರವನ್ನೇ ಹೇಳುವುದಾದರೆ, ಆತ ಪಾಸ್ ವರ್ಡ್ ಮರೆತಿದ್ದಾರೆ. ಅಲ್ಲಿಗೆ ಇವತ್ತಿಗೆ 1800 ಕೋಟಿ ರುಪಾಯಿ ಮೌಲ್ಯದ 7002 ಬಿಟ್ ಕಾಯಿನ್ ಸಹ ಮರೆತಂತೆಯೇ ಸರಿ.

9,49,000 ಕೋಟಿ ರುಪಾಯಿ ಹೀಗೆ ತಗುಲಿ ಹಾಕಿಕೊಂಡಿದೆ
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಶೇಕಡಾ 20ರಷ್ಟು ಬಿಟ್ ಕಾಯಿನ್ ಗಳು ಈ ರೀತಿ ಕ್ರಿಪ್ಟೋ ವ್ಯಾಲೆಟ್ ನಲ್ಲಿ ಸಿಕ್ಕಿಕೊಂಡಿವೆ. ಅದರ ಮಾಲೀಕರಿಗೆ ಪಾಸ್ ವರ್ಡ್ ಮರೆತುಹೋಗಿದೆ. ಇವತ್ತಿನ ಲೆಕ್ಕಕ್ಕೆ ಹಣದ ಮೌಲ್ಯದಲ್ಲಿ ಹೇಳಬೇಕು ಅಂದರೆ $ 13000 ಕೋಟಿ. ಭಾರತದ ರುಪಾಯಿ ಲೆಕ್ಕದಲ್ಲಿ 9,49,000 ಕೋಟಿ. ನೀವು ಸರಿಯಾಗಿಯೇ ಓದುತ್ತಿದ್ದೀರಿ; 9.49 ಲಕ್ಷ ಕೋಟಿ ರುಪಾಯಿ. ಎಷ್ಟೋ ದೇಶಗಳ ಜಿಡಿಪಿಗಿಂತ ಹೆಚ್ಚಿನ ಮೊತ್ತ ಇದು. ಎಷ್ಟೇ ಪ್ರಯತ್ನದ ನಂತರವೂ ಮನುಷ್ಯರಿಂದ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಿಲದಂತೆ ಉಳಿದು ಹೋಗಿರುವ ಹಣ ಇದು. ಭಾರತದಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ ಎಷ್ಟಿದೆ ಗೊತ್ತಾ? 27,48,680.52 ರುಪಾಯಿ.