ಇಟಿಎಫ್ ಅಥವಾ ಇಂಡೆಕ್ಸ್ ಫಂಡ್! ಹೂಡಿಕೆಗೆ ಯಾವ್ದು ಹಿತ?
ಮೊದಲ ಬಾರಿಗೆ ಹೂಡಿಕೆ ಮಾಡಲು ಬಯಸುವವರಿಗೆ ಯಾವ ಸ್ಕೀಮ್ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುವುದು ಸಹಜ. ಇಟಿಎಫ್ ಮತ್ತು ಇಂಡೆಕ್ಸ್ ಫಂಡ್ಗಳಿಗೂ ಇದೇ ಗೊಂದಲವಿದೆ. ಆಶ್ಚರ್ಯವೆಂದರೆ ಒಳ್ಳೆಯ ಸಂಗತಿ ಆಯ್ಕೆ ಮಾಡಿಕೊಳ್ಳುವಾಗ ಗೊಂದಲ ಬರುವುದು ಸಾಮಾನ್ಯ. ಅನೇಕ ಸ್ಕೀಮ್ಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುವುದು ಸತ್ಯ. ಅದರಲ್ಲಿ ನಮಗೆ ಯಾವುದು ಒಳ್ಳೆಯದು ಎಂದು ಆಯ್ಕೆ ಮಾಡಲು ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಇಟಿಎಫ್ ಮತ್ತು ಸೂಚ್ಯಂಕ ನಿಧಿಗಳು:
ಶೇರ್ ಟ್ರೇಡಿಂಗ್ನಲ್ಲಿ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಿಲ್ಲ ಅನ್ನುವವರು ಇಟಿಎಫ್ ಮೂಲಕ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು. ಇದರ ಮೊತ್ತವೂ ಸಣ್ಣ ಪ್ರಮಾಣದಲ್ಲೇ ಇರುತ್ತದೆ. ಇಟಿಎಫ್ ವಿಸ್ತೃತ ರೂಪ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್. ಇಟಿಎಫ್ಗಳು ಷೇರುಗಳು ಮತ್ತು ಮ್ಯೂಚುವಲ್ ಫಂಡ್ಗಳಂತೆ ವಿಶಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ. ಇದನ್ನು ಷೇರು ಮಾರುಕಟ್ಟೆಗಳಲ್ಲಿ ಷೇರುಗಳ ರೂಪದಲ್ಲಿ ವಹಿವಾಟು ನಡೆಸಲಾಗುತ್ತದೆ.
ಅನುಭವಿ ಹಾಗೂ ಅನನುಭವಿ ಹೂಡಿಕೆದಾರರಿಬ್ಬರಿಗೂ ಇದು ಉತ್ತಮ ಆಯ್ಕೆ ಎಂದೇ ಹೇಳಬಹುದು. ಆದರೆ, ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ಜೊತೆಗೆ ಜಾಗೃತಿವೂ ಇರಬೇಕು. ಒಂದು ಸ್ಕೀಮ್ನಲ್ಲಿ ಹಣ ಹೂಡಿಕೆ ಮಾಡಿದರೆ ಏನೆಲ್ಲಾ ಲಾಭ ಹಾಗೂ ಸಂಕಷ್ಟ ಇದೆ ಎಂಬ ಸಂಗತಿಯನ್ನೂ ತಿಳಿದುಕೊಂಡಿರಬೇಕು.

ಒಂದು ವೇಳೆ ನೀವು ಇಟಿಎಫ್ ಮತ್ತು ಇಂಡೆಕ್ಸ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಅದರ ಬಗ್ಗೆ ಸುದೀರ್ಘ ಮಾಹಿತಿ ನಿಮ್ಮಲಿರಬೇಕು. ಈ ಸ್ಕೀಮ್ನಲ್ಲೇ ಇರುವ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಂಡಿರಬೇಕು. ಏನೆಲ್ಲಾ ನ್ಯೂನತೆಗಳಿವೆ? ಇದರ ವೈಶಿಷ್ಯಗಳೇನು? ಆಯ್ಕೆ ಮಾನದಂಡಗಳೇನು? ಎಂಬಿತ್ಯಾದಿ ಅಂಶಗಳ ಬಗ್ಗೆಯೂ ಮಾಹಿತಿ ಇರಬೇಕು.
ಆಯ್ಕೆ ಪ್ರಕ್ರಿಯೆ:
ಈ ಕೆಳಗೆ ತಿಳಿಸಲಾದ ವ್ಯತ್ಯಾಸದ ಅಂಶಗಳನ್ನು ಪರಿಗಣಿಸಿ ಮತ್ತು ಇವುಗಳು ನಿಮ್ಮ ಹೂಡಿಕೆ ಪ್ರಕ್ರಿಯೆಗೆ ಹೇಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಪರಿಶೀಲಿಸಿ.
ಬೆಲೆ ನಿಗದಿ:
ಇಟಿಎಫ್ ಹಣವನ್ನು ಎಲ್ಲಾ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾಗಿರುತ್ತದೆ. ಇಕ್ವಿಟಿ ವಹಿವಾಟಿನ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ನೀವು ಖರೀದಿಸಬಹುದು. ವ್ಯಾಪಾರ ವಹಿವಾಟು ದಿನವಿಡೀ ಇರುವುದರಿಂದ ಸ್ಟಾಕ್ ಬೆಲೆಗಳಲ್ಲಿ ನಿತ್ಯ ಏರಿಳಿತ ಇದ್ದೇ ಇರುತ್ತದೆ. ಯಾವ ದರ ಇದೆ ಎಂಬುದನ್ನು ಪ್ರತಿದಿನ ಒಮ್ಮೆ ಮಾತ್ರ ಬಹಿರಂಗಪಡಿಸಲಾಗುತ್ತದೆ. ಕಡಿಮೆ ರಿಸ್ಕ್ ಜೊತೆ ಗರಿಷ್ಠ ವೈವಿಧ್ಯತೆಯನ್ನು ಸಾಧಿಸಲು ಹಾಗೂ ರಿಯಾಯಿತಿಯನ್ನು ಪಡೆಯಲು ಇಟಿಎಫ್ ಸೂಕ್ತವಾದ ಆಯ್ಕೆ ಎಂಬುದು ಹಲವರ ಅಂಬೋಣ. ಅಲ್ಲದೆ, ಮ್ಯೂಚುವಲ್ ಫಂಡ್ನ ವೌಲ್ಯವು ಎನ್ಎವಿ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ.

ವೆಚ್ಚ ಕಡಿಮೆ:
ಹಾಗೇ ನೋಡಿದರೆ ಇಟಿಎಫ್ ಫಂಡ್ ಪ್ರಯೋಜನವೆಂದರೆ ಕಡಿಮೆ ವೆಚ್ಚ. ನಿರ್ಗಮನ, ಪ್ರವೇಶ ವೆಚ್ಚ ಹಾಗೂ ನಿರ್ವಹಣಾ ಶುಲ್ಕ ಸೇರಿದಂತೆ ಎಲ್ಲವೂ ಒಟ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ಬ್ರೋಕರ್ಗಳು ವಹಿವಾಟುಗಳಿಗೆ ಕಮಿಷನ್ ವಿಧಿಸಿದರೆ, ನೀವು ಇಟಿಎಫ್ ಅನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡುವಾಗ ಪ್ರತಿ ಬಾರಿಯೂ ಸ್ಥಿರವಾದ ವೆಚ್ಚವನ್ನು ಪಾವತಿಸಬೇಕು. ಇದು ನಿಮ್ಮ ಆದಾಯವನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಷೇರು ಮಾರುಕಟ್ಟೆಯಲ್ಲಿ ನೀವೇ ವಹಿವಾಟು ನಡೆಸುವ ಆಯ್ಕೆಯನ್ನು ಸಹ ಆಯ್ದುಕೊಳ್ಳಬಹುದು.
ಕನಿಷ್ಠ ಹೂಡಿಕೆ ಅಗತ್ಯ:
ಹೂಡಿಕೆಗೆ ಬಂದಾಗ ಇದು ಹೆಚ್ಚು ಪರಿಗಣಿಸಲಾದ ಅಂಶಗಲ್ಲಿ ಒಂದಾಗಿದೆ. ಇಟಿಎಫ್ ಮತ್ತು ಇಂಡೆಕ್ಸ್ ಫಂಡ್ಗಳಲ್ಲಿ ಕನಿಷ್ಠ ಹೂಡಿಕೆ ಮಾಡಬೇಕು. ಅನೇಕ ಸಂದರ್ಭಗಳಲ್ಲಿ, ಇಟಿಎಫ್ಗಳು ಸೂಚ್ಯಂಕ ನಿಧಿಗಳಿಗಿಂತ ಕಡಿಮೆ ಕನಿಷ್ಠ ಬಂಡವಾಳ ಹೂಡಿಕೆ ಅವಶ್ಯಕತೆಗಳನ್ನು ಬೇಡುತ್ತವೆ. ಹೂಡಿಕೆ ಮಾಡಲು ಒಂದೇ ಷೇರನ್ನು ಖರೀದಿಸಲು ಅಗತ್ಯವಿರುವ ಮೊತ್ತ ಬೇಕಾಗಿರುತ್ತದೆ. ಆದಾಗ್ಯೂ, ಸೂಚ್ಯಂಕ ನಿಧಿಗಳಿಗೆ, ದಲ್ಲಾಳಿಗಳು ಆಗಾಗ್ಗೆ ಸರಾಸರಿ ಷೇರು ಬೆಲೆಗಿಂತ ಹೆಚ್ಚಿನ ಕನಿಷ್ಠಗಳನ್ನು ವಿಧಿಸುತ್ತಾರೆ.
ಹೆಚ್ಚು ರಿಸ್ಕ್ ಇಲ್ಲ:
ಇಟಿಎಫ್ ಹೂಡಿಕೆ ಮಾಡುವಾಗ ಕೆಲವು ಮಾನದಂಡಗಳನ್ನು ಪರಿಗಣಿಸಬೇಕಾಗುತ್ತದೆ. ಅಲ್ಲದೆ, ನೀವು ಇಟಿಎಫ್ ಘಟಕಗಳನ್ನು ಎಷ್ಟು ಸುಲಭವಾಗಿ ಖರೀದಿಸಬಹುದೋ ಅಷ್ಟೇ ಸುಲಭವಾಗಿ ಮಾರಾಟ ಮಾಡಬಹುದು. ಇಲ್ಲಿ ನಿರ್ದಿಷ್ಟ ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಪಟ್ಟಿ ಮಾಡಿರುವ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡುವುದರಿಂದ ಹೆಚ್ಚು ಸಮಸ್ಯೆ ಉಂಟಾಗುವುದಿಲ್ಲ. ಯಾವ ಕಂಪನಿ ಬೆಳವಣಿಗೆ ಹೇಗೆ ಎಂಬುದು ಗಮನಿಸಿ ಹೂಡಿಕೆ ಮಾಡಿದರೆ ನಷ್ಟವನ್ನು ತಪ್ಪಿಸಬಹುದು. ಯಾವುದೇ ಹೂಡಿಕೆ ಆದರೂ ಮರುಪಾವತಿಗೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ.

ಡಿಮ್ಯಾಟ್ ಖಾತೆ ಅವಶ್ಯಕ:
ಇಟಿಎಫ್ ಹೂಡಿಕೆಯೂ ಕೆಲವೊಂದು ಮಿತಿಗಳನ್ನು ಒಳಗೊಂಡಿದೆ. ಅಂದರೆ ಈ ಸ್ಕೀಮ್ ಆಯ್ಕೆ ಮಾಡುವಾಗ ಪರಿಗಣಿಸಬೇಕಾದ ಒಂದು ಸಮಸ್ಯೆ ಡಿಮ್ಯಾಟ್ ಖಾತೆ ಹೊಂದಿರಬೇಕು. ನೀವು ಇಟಿಎಫ್ಗಳಲ್ಲಿ ಹೂಡಿಕೆ ಮಾಡುವುದರಿಂದ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಹೊಂದಿರುವುದು ಅವಶ್ಯವಾಗಿದೆ. ಆದರೆ ಸೂಚ್ಯಂಕ ನಿಧಿಗಳು ಅಗತ್ಯವಿಲ್ಲ. ಈ ಖಾತೆಗಳಿಗೆ ಸಂಬಂಧಿಸಿದ ನಿರ್ವಹಣಾ ಶುಲ್ಕವು ಪ್ರಸ್ತುತ ಅವುಗಳನ್ನು ಹೊಂದಿರದ ಹೂಡಿಕೆದಾರರಿಗೆ ಹೆಚ್ಚುವರಿ ವೆಚ್ಚವಾಗಬಹುದು. ಡಿಮ್ಯಾಟ್ ಖಾತೆಯನ್ನು ರಚಿಸಲು ಬಯಸದ ಹೂಡಿಕೆದಾರರು ತಮ್ಮ ಹಣವನ್ನು ಎಫ್ಒಎಫ್ (ಫಂಡ್ ಆಫ್ ಫಂಡ್) ಹಾಕಬಹುದು. ಅದು ನಂತರ ಆಯ್ದ ಇಟಿಎಫ್ನಲ್ಲಿ ಹೂಡಿಕೆ ಮಾಡುತ್ತದೆ.
ಉಪಸಂಹಾರ:
ಇವು ಸರಕಾರಿ ಬಾಂಡ್ಗಳಂತೆ ಸ್ಥಿರವಾಗಿರುವುದಿಲ್ಲ ಬೆಲೆ ಏರಿಳಿತ ಹೊಂದಿರುತ್ತದೆ. ಹಾಗಾಗಿ ಹೂಡಿಕೆ ಮಾಡುವ ಮೊದಲು ಎಲ್ಲಾ ದಾಖಲೆಗಳು ಮತ್ತು ಯೋಜನೆಗೆ ಸಂಬಂಧಿಸಿದ ಷರತ್ತುಗಳನ್ನು ಎಚ್ಚರಿಕೆಯಿಂದ ಓದಬೇಕು. ಮಾಹಿತಿ ಸಂಪೂರ್ಣವಾಗಿ ನೀಡಲಾಗಿದ್ದು, ಲೇಖನದ ಆಧಾರದ ಮೇಲೆ ಹೂಡಿಕೆ ಮಾಡಿ ಅದರಿಂದ ಉಂಟಾದ ಯಾವುದೇ ನಷ್ಟಗಳಿಗೆ ಲೇಖಕರು, ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.