For Quick Alerts
ALLOW NOTIFICATIONS  
For Daily Alerts

ಕ್ರೀಡೆ ಎಂಬ ಅಕ್ಷಯ ಪಾತ್ರೆ; ಅದನ್ನೇ ನಾವು ಮರೆತು ಬಿಟ್ಟರೆ...

By ಅನಿಲ್ ಆಚಾರ್
|

"ನನ್ನ ಮಗ ಒಂದೋ ವರ್ಲ್ಡ್ ಕ್ಲಾಸ್ ಟೆನಿಸ್ ಪ್ಲೇಯರ್ ಆಗಬೇಕು ಅಥವಾ ವರ್ಲ್ಡ್ ಕ್ಲಾಸ್ ಟೆನಿಸ್ ಕೋಚ್ ಆಗಬೇಕು. ಇದೇ ನಮ್ಮ ಆಸೆ. ಇನ್ನು ಅವನ ಆಸಕ್ತಿಯೂ ಹಾಗೇ ಇದೆ" ಎಂದರು ತೀರ್ಥಹಳ್ಳಿ ಕೇಶವಮೂರ್ತಿ. ತಮ್ಮ ಮಗನನ್ನ ಐದನೇ ಕ್ಲಾಸಿನ ತನಕ ಮಾತ್ರ ಶಾಲೆಗೆ ಅಂತ ಕಳಿಸಿದ ಅವರು, ಆ ನಂತರ ಕೇವಲ ಅಡ್ಮಿಷನ್ ಮಾತ್ರ ಮಾಡಿಸ್ತಾರೆ. ಪಾಠ ಮಾಡುವುದು ಮನೆಯಲ್ಲೇ. ಅದು ಕೇಶವಮೂರ್ತಿ ಅವರ ಪತ್ನಿ.

ಶಾಲೆಗೆ ಹೋಗದ ಆ ಹುಡುಗ ಇಡೀ ದಿನ ಏನು ಮಾಡ್ತಾನೆ ಎಂಬ ಪ್ರಶ್ನೆ ಬರುವುದು ಸಹಜ. ಆತ ಎರಡು ಕಡೆ ಟೆನಿಸ್ ಕೋಚಿಂಗ್ ಸೇರಿದ್ದಾನೆ. ಒಂದು ಕ್ಲೇ ಗ್ರೌಂಡ್ ನಲ್ಲಿ ಆಡುವುದಕ್ಕೆ ಹಾಗೂ ಇನ್ನೊಂದು ಲಾನ್ ಟೆನಿಸ್ ಗೆ ಪ್ರತ್ಯೇಕ ತರಬೇತಿ ತೆಗೆದುಕೊಳ್ಳುತ್ತಿದ್ದಾನೆ. ಮಧ್ಯೆ ಮಧ್ಯೆ ಯಾವುದೇ ಟೆನಿಸ್ ಟೂರ್ನ್ ಮೆಂಟ್ ಇದ್ದರೂ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾನೆ.

 

ಈಗ ಈ ಲೇಖನದಲ್ಲಿ ಕೇಶವಮೂರ್ತಿ ಕುಟುಂಬ ಹಾಗೂ ಅವರ ಮಗನ ವಿಷಯ ಏಕೆ ಪ್ರಸ್ತಾವ ಮಾಡಲಾಗುತ್ತಿದೆ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಅದಕ್ಕೆ ಕಾರಣ ಇದೆ. ಶಿಕ್ಷಣ ಅಂದಾಕ್ಷಣ ಲಕ್ಷಗಟ್ಟಲೆ ಫೀ ಕಟ್ಟಿಯಾದರೂ ಒಂದೊಳ್ಳೆ ಶಾಲೆಯಲ್ಲಿ ಮಕ್ಕಳಿಗೆ ಸೀಟು ಗಿಟ್ಟಿಸಬೇಕು ಎಂಬ ಕಾಲ ಇದು. ಚೆನ್ನಾಗಿ ಓದಬೇಕು. ಎಂಜಿನಿಯರಿಂಗ್, ಡಾಕ್ಟರ್ ಆಗಬೇಕು. ಅಥವಾ ಅದಕ್ಕಿಂತ ದೊಡ್ಡದೇನೋ ಆಗಿ, ಕೈ ತುಂಬ ಸಂಪಾದಿಸಬೇಕು.

ಒಟ್ಟಿನಲ್ಲಿ ಆರ್ಥಿಕವಾಗಿ ಬಹಳ ಅನುಕೂಲಕರ ಸ್ಥಿತಿಯಲ್ಲಿ ಇರಬೇಕು ಅನ್ನೋದು ಬಹುತೇಕ ಪೋಷಕರ ಕನಸು, ಆಸೆ ಹಾಗೂ ಉದ್ದೇಶ ಎಲ್ಲವೂ ಆಗಿರುತ್ತದೆ. ಆದರೆ ಮಗನೋ ಮಗಳೋ ಕ್ರೀಡಾಪಟುವಾದರೆ ಅದರಿಂದ ಜೀವನ ನಡೆಸಬಹುದು ಎಂಬ ನಂಬಿಕೆ ಇರಲ್ಲ.

ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಜನರು ಕೇಳುತ್ತಾರಾ?

ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಜನರು ಕೇಳುತ್ತಾರಾ?

ಸೈನಾ ನೈಹ್ವಾಲ್, ಪಿ.ವಿ. ಸಿಂಧೂ, ಮಹೇಶ್ ಭೂಪತಿ, ಲಿಯಾಂಡರ್ ಪೇಸ್, ಅಭಿನವ್ ಭಿಂದ್ರಾ, ಸಚಿನ್ ತೆಂಡೂಲ್ಕರ್ ಹಾಗೂ ವಿಶ್ಬನಾಥನ್ ಆನಂದ್... ಇವರು ಹಾಗೂ ಇಂಥವರ ಎಸ್ಸೆಸ್ಸೆಲ್ಲಿ, ಪಿಯುಸಿ ಅಥವಾ ಡಿಗ್ರಿಯ ಮಾರ್ಕ್ಸ್ ಎಷ್ಟು ಯಾರಿಗಾದರೂ ಗೊತ್ತಿದೆಯಾ ಅಥವಾ ಬೇಕಿದೆಯಾ? ಭಾರತದಲ್ಲಿ ಕ್ರೀಡೆಯನ್ನು ವೃತ್ತಿ ಎಂದು ಆರಿಸಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಹಾಗೊಂದು ವೇಳೆ ಆರಿಸಿಕೊಂಡರೂ ಏಳನೇ ಕ್ಲಾಸ್ ತನಕ ಅಥವಾ ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಹೆಚ್ಚೆಂದರೆ ಡಿಗ್ರಿ ಹೊತ್ತಿಗೆ ಅದನ್ನು ಮರೆತು ಕೆಲಸದ, ಹಣದ ಬೆನ್ನತ್ತಿ ಹೊರಟು ಬಿಡುತ್ತಾರೆ. ಆದರೆ ಯಾವುದೋ ಒಂದು ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿ, ಅದರಲ್ಲಿ ಸಾಧನೆಯನ್ನು ಮಾಡಿ (ಅದು ಜಿಲ್ಲೆ, ರಾಜ್ಯ, ರಾಷ್ಟ್ರ ಅಥವಾ ಅಂತರರಾಷ್ಟ್ರೀಯ ಮಟ್ಟ ಯಾವುದಾದರೂ ಆಗಿರಬಹುದು), ಸಂತೃಪ್ತರಾಗಿರುವವರು ಎಷ್ಟು ಮಂದಿ ಸಿಗುತ್ತಾರೆ?

ಆಡಿ ಸಾಧನೆ ಮಾಡಿ, ಇಲ್ಲ ತರಬೇತುದಾರರಾಗಿ
 

ಆಡಿ ಸಾಧನೆ ಮಾಡಿ, ಇಲ್ಲ ತರಬೇತುದಾರರಾಗಿ

ತುಂಬ ಚೆನ್ನಾಗಿ ಟೇಬಲ್ ಟೆನಿಸ್ ಆಡುವ ಹುಡುಗನೋ ಅಥವಾ ಹುಡುಗಿಯೋ ಇದ್ದಲ್ಲಿ ಅವರನ್ನು ಚಿಕ್ಕ ವಯಸ್ಸಿನಿಂದಲೇ ಪ್ರೋತ್ಸಾಹಿಸಿ. ಅವರಿಗೆ ಸೂಕ್ತ ತರಬೇತಿ ಕೊಡಿಸಿ, ಅದರಲ್ಲಿ ನಿರ್ದಿಷ್ಟ ಹಂತದ ಗುರಿ ತಲುಪಿಕೊಂಡ ಮೇಲೆ ಹೆಸರಾಂತ ಶಾಲೆ- ಕಾಲೇಜುಗಳು ಪುಕ್ಕಟೆಯಾಗಿ ಪ್ರವೇಶ ನೀಡುತ್ತವೆ. ಅತ್ಯುತ್ಕೃಷ್ಟವಾದ ತರಬೇತಿ ಕೊಡಿಸುತ್ತವೆ. ಇನ್ನಷ್ಟು ಎತ್ತರಕ್ಕೆ ಏರಲು ಬೆಂಬಲವಾಗಿ ನಿಲ್ಲುತ್ತವೆ. ಆದರೆ ಆರಿಸಿಕೊಂಡ ಕ್ರೀಡೆಯ ಮೇಲೆ ಏಕಾಗ್ರತೆ, ಶಿಸ್ತು, ಪರಿಶ್ರಮ ಹಾಗೂ ಸಾಧನೆ ಇರಬೇಕು. ಇವೆಲ್ಲವೂ ಇಲ್ಲದೆ ಸುಮ್ಮನೆ ಮುಂದುವರಿದಲ್ಲಿ ಪ್ರಯೋಜನ ಆಗುವುದಿಲ್ಲ. ಒಂದು ವೇಳೆ ಕ್ರೀಡೆ ಆಡಿ ಸಾಧನೆ ಮಾಡಲು ಸಾಧ್ಯವಾಗದಿದ್ದಲ್ಲಿ ತರಬೇತಿ ನೀಡುವ ಮೂಲಕ ಹತ್ತಾರು ಮಂದಿಯನ್ನು ತಯಾರು ಮಾಡುವುದಕ್ಕೆ ಅವಕಾಶ ಇರುತ್ತದೆ. ಹಾಗೆ ತಯಾರು ಮಾಡಿ, ಅತ್ಯುತ್ತಮ ತರಬೇತುದಾರ ಎಂದು ಹೆಸರು, ಕೀರ್ತಿ, ಹಣ ಮಾಡಬಹುದು. ಅದಕ್ಕೆ ಅಗತ್ಯ ಇರುವ ಸರ್ಟಿಫಿಕೇಷನ್ ಮಾಡಿಕೊಳ್ಳಬೇಕು.

ಖರ್ಚು, ಶ್ರಮ ಕಡಿಮೆಯದೇನಲ್ಲ

ಖರ್ಚು, ಶ್ರಮ ಕಡಿಮೆಯದೇನಲ್ಲ

ಇವತ್ತಿನ ತಲೆಮಾರಿನವರಿಗೆ ಕ್ರಿಕೆಟ್ ಅಂದರೆ ಆಕರ್ಷಣೆ. ಎಲ್ಲರೂ ಕ್ರಿಕೆಟ್ ತರಬೇತಿ ಸೇರಲು ಬಯಸುವವರೇ. ಆದರೆ ಸ್ವಿಮ್ಮಿಂಗ್, ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಹಾಕಿ, ಕಬ್ಬಡಿ, ಅಥ್ಲೆಟಿಕ್ಸ್, ಚೆಸ್, ಕೇರಂ, ಗಾಲ್ಫ್, ಶೂಟಿಂಗ್, ವೇಟ್ ಲಿಫ್ಟಿಂಗ್, ಜಿಮ್ನಾಸ್ಟಿಕ್... ಹೀಗೆ ಕಲಿಯಲು ಹಾಗೂ ರಾಜ್ಯ, ದೇಶಕ್ಕೆ ಹೆಸರು ತರುವಂಥ ಸಾಧನೆ ಮಾಡಲು ಅವಕಾಶಗಳಿವೆ. ಆದರೆ ಇವೆಲ್ಲ ಕಡಿಮೆ ಖರ್ಚಿನಲ್ಲಿ, ಶ್ರಮ ಇಲ್ಲದೆ ಆಗುವಂಥದ್ದಲ್ಲ. ತೀರ್ಥಹಳ್ಳಿ ಕೇಶವಮೂರ್ತಿ ಅವರ ಉದಾಹರಣೆಯನ್ನು ಆರಂಭದಲ್ಲಿ ಹೇಳಿದೆನಲ್ಲ, ಅವರು ತಮ್ಮ ಮಗನಿಗಾಗಿ ಮಾಡುತ್ತಿರುವ ಖರ್ಚಿನಲ್ಲಿ ವರ್ಷಕ್ಕೆ ಇಬ್ಬರಂತೆ ಐಎಎಸ್ ಮಾಡುವವರ ಖರ್ಚು ನಿಭಾಯಿಸಬಹುದಿತ್ತು. ಆದರೆ ತಮ್ಮ ಮಗ ಟೆನಿಸ್ ನಲ್ಲಿ ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಕೇಳಿಸುವಂತೆ ಮಾಡಬೇಕು ಎಂಬ ಆಕಾಂಕ್ಷೆ ಅವರದು. ಅದು ಸಾಧ್ಯವೇ ಎಂದು ಪ್ರಶ್ನೆ ಮಾಡುವುದಕ್ಕಿಂತ ಪ್ರಯತ್ನವೇ ಮಾಡದಿರುವುದು ಎಷ್ಟು ಸರಿ ಅಲ್ಲವೇ?

ಉದ್ಯೋಗ, ಕಾಲೇಜು ಸೀಟು ಎಲ್ಲ ಸಿಗುತ್ತದೆ

ಉದ್ಯೋಗ, ಕಾಲೇಜು ಸೀಟು ಎಲ್ಲ ಸಿಗುತ್ತದೆ

ಕಾಮನ್ ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಒಲಂಪಿಕ್ಸ್ ನಡೆದಾಗ ಪದಕ ಪಟ್ಟಿಯಲ್ಲಿ ಭಾರತದ ಹೆಸರು ಬರುವಂತೆ ಮಾಡುವವರು ನೂರಾ ಮೂವತ್ತೈದು ಕೋಟಿ ಜನರ ದೃಷ್ಟಿಯಲ್ಲಿ ಎಂಥ ಸ್ಥಾನ ಪಡೆದಿರುತ್ತಾರೆ ಆಲೋಚಿಸಿ. ಅಷ್ಟೇ ಅಲ್ಲ, ಈ ಹಿಂದೆ ಸೈನಾ ನೈಹ್ವಾಲ್ ಮೇಲೆ ಗೆದ್ದು, ಚಿನ್ನದ ಪದಕ ಪಡೆದಿದ್ದ ಆಟಗಾರ್ತಿ ಏನು ಹೇಳಿದ್ದರು ಗೊತ್ತಾ: ಚಿನ್ನ ಪಡೆದ ನನಗಿಂತ ಹೆಚ್ಚಿನ ಹಣ, ಅವಕಾಶ, ಬಹುಮಾನ, ಪ್ರೋತ್ಸಾಹ ಸಿಗುತ್ತಿದೆ ಎಂದಿದ್ದರು. ಕ್ರೀಡೆಯನ್ನು ವೃತ್ತಿಯಾಗಿ ಆರಿಸಿಕೊಳ್ಳುವುದನ್ನು ನಿಮ್ಮ ಮಕ್ಕಳಿಗೆ ಕೂಡ ಪ್ರೋತ್ಸಾಹಿಸಿದರೆ ಎಷ್ಟೆಲ್ಲ ಸಾಧ್ಯತೆಗಳು ಇವೆ ಎಂದು ಯೋಚಿಸಿ. ಕ್ರೀಡೆ ಎಂದಾಕ್ಷಣ ಕ್ರಿಕೆಟ್ ಎಂಬ ಆಲೋಚನೆಯಿಂದ ಹೊರಬಂದು, ಮಕ್ಕಳಿಗೂ ಆಸಕ್ತಿ ಇರುವ ಕ್ರೀಡೆಯನ್ನು ಆಡಲು ಪ್ರೋತ್ಸಾಹಿಸಿದರೆ ಶಾಲೆ- ಕಾಲೇಜುಗಳಲ್ಲಿ ಸೀಟು, ಕ್ರೀಡಾ ಕೋಟಾದಲ್ಲಿ ಕೆಲಸ, ಬಹುಮಾನ, ಸನ್ಮಾನ, ಗೌರವ ಎಲ್ಲವೂ ಪಡೆಯುವ ಸಾಧ್ಯತೆ ಇದೆ. ಆದರೆ ಅದನ್ನೇ ವೃತ್ತಿಯಾಗಿ ಸ್ವೀಕರಿಸಬೇಕು. ನಿರ್ದಿಷ್ಟ ಹಂತದ ಸಾಧನೆ ಮಾಡಲೇಬೇಕು.

English summary

Why People In India Don't Take Sports As Profession?

Sports is a profession, which earns money for livelihood in many countries. But people in India don't take sports as profession why?
Company Search
COVID-19