Englishहिन्दी മലയാളം தமிழ் తెలుగు

ಗೃಹ ವಿಮೆ ಯಾಕೆ ಖರೀದಿಸಬೇಕು? ಇಲ್ಲಿವೆ ಪ್ರಮುಖ ಸಂಗತಿಗಳು

Written By: Siddu
Subscribe to GoodReturns Kannada

ಸ್ವಂತ ಮನೆಯೊಂದನ್ನು ಹೊಂದುವುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಹಲವು ವರ್ಷಗಳ ಕಠಿಣ ದುಡಿಮೆಯ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಜೀವಮಾನದ ದುಡಿಮೆಯನ್ನೇ ಮುಡಿಪಾಗಿಟ್ಟು ಪಡೆದ ಈ ಮನೆಯ ರಕ್ಷಣೆಯ ಕಾಳಜಿಯನ್ನು ವಹಿಸದಿದ್ದರೆ ಈ ಶ್ರಮ ವ್ಯರ್ಥವಾಗುತ್ತದೆ. ಈ ಅಗತ್ಯತೆಯನ್ನು ಕಂಡುಕೊಂಡ ಕಟ್ಟಡ ನಿರ್ಮಾತೃದಾರರು ಈಗ ಬಗೆ ಬಗೆಯ ವಿನ್ಯಾಸದ ಮನೆಗಳನ್ನು ಸಿದ್ಧ ರೂಪದಲ್ಲಿ ನೀಡುತ್ತಿದ್ದು, ಇದರ ಮೊಬಲಗನ್ನು ಬ್ಯಾಂಕ್ ಸಾಲದ ಮೂಲಕ ಕಂತುಗಳಲ್ಲಿ ತೀರಿಸಬಹುದು. ಈ ವ್ಯವಸ್ಥೆಯಿಂದ ಇಂದು ಲಕ್ಷಾಂತರ ಜನರು ಮನೆಗಳನ್ನು ಹೊಂದುವ ಕನಸನ್ನು ನನಸಾಗಿಸಿದ್ದಾರೆ. ಆದರೆ ಇದನ್ನು ರಕ್ಷಿಸಲು ಅಗತ್ಯವಾದ ವಿಮೆಯ ಬಗ್ಗೆ ಅನಾದರ ತೋರುತ್ತಿದ್ದಾರೆ. ಹೆಚ್ಚಿನ ಜನರಿಗೆ ಹೀಗೊಂದು ವಿಮೆ ಇದೆ ಎಂದೇ ಗೊತ್ತಿಲ್ಲ!

ಗೃಹ ವಿಮೆ ಎಂದರೆ ಹೆಸರೇ ಸೂಚಿಸುವಂತೆ ವಾಸಿಸುವ ಮನೆಗೆ ಅಥವಾ ಮನೆಯ ಪ್ರಮುಖ ವಸ್ತುಗಳಿಗೆ ಏನಾದರೂ ಘಾಸಿ ಅಥವಾ ನಷ್ಟವಾದರೆ ಇದನ್ನು ತುಂಬಿಕೊಡುವ ವ್ಯವಸ್ಥೆಯೇ ಆಗಿದೆ. ಗೃಹ ವಿಮೆಯನ್ನು ಪಡೆಯುವ ಮೂಲಕ ನೀವು ಪಡೆಯಬಹುದಾದ ನೆಮ್ಮದಿ ಹಾಗೂ ಲಾಭಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ಪ್ರಕೋಪಗಳಿಂದ ರಕ್ಷಣೆ ಒದಗಿಸುತ್ತದೆ

ಒಂದು ಒಟ್ಟಾರೆ ಅಥವಾ ಸಂಪೂರ್ಣ ಗೃಹವಿಮೆ ನಿಮ್ಮ ಮನೆಯನ್ನು ಕೆಲವಾರು ಆಪತ್ಕಾಲೀನ ಸ್ಥಿತಿಗಳಿಂದ ರಕ್ಷಣೆ ಒದಗಿಸುತ್ತದೆ. ಉದಾಹರಣೆಗೆ ಭಯೋತ್ಪಾದಕಾ ಧಾಳಿ, ಅಕಸ್ಮಿಕ ಬೆಂಕಿ ಅಪಘಾತ, ನೈಸರ್ಗಿಕ ವಿಕೋಪಗಳಾದ ಸಿಡಿಲು, ಮಹಾಪೂರ, ಭೂಕಂಪ, ಚಂಡಮಾರುತ ಇತ್ಯಾದಿಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಈ ವಿಮೆಯನ್ನು ಗ್ರಾಹಕನ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗುತ್ತದೆ. ಉದಾಹರಣೆಗೆ ಗ್ರಾಹಕನ ಮನೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಅತಿ ಹೆಚ್ಚಾಗಿರುವ ಸ್ಥಳದಲ್ಲಿದ್ದರೆ ಈ ಚಂಡಮಾರುತದಿಂದ ಮನೆಗೆ ಆಗುವ ಹಾನಿಯಿಂದಾಗುವ ನಷ್ಟಗಳನ್ನು ತುಂಬಿಕೊಡುವಂತೆ ರೂಪಿಸಿಕೊಳ್ಳಬಹುದು.

ವೈಯಕ್ತಿಯ ವಸ್ತುಗಳ ನಷ್ಟ ಅಥವಾ ಹಾನಿಯ ವಿರುದ್ದ ರಕ್ಷಣೆ

ಗೃಹವಿಮೆಯಲ್ಲಿ ಮನೆಯ ಕಟ್ಟಡ ಮಾತ್ರವಲ್ಲ, ನಿತ್ಯಬಳಕೆಯ ವಸ್ತುಗಳ ಮೇಲೂ ವಿಮೆ ಮಾಡಿಸಬಹುದು. ಮನೆಯ ಸದಸ್ಯರಿಗೆ ಸೇರಿದ ಅಮೂಲ್ಯ ಚಿನ್ನ, ವಜ್ರ ಮೊದಲಾದ ಆಭರಣಗಳು, ದುಬಾರಿ ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣ, ವೈಭವದ ವಸ್ತುಗಳು ಹಾಗೂ ಕಲಾಕೃತಿಗಳು ಮೊದಲಾದವು ಸೇರಿವೆ. ಕಳ್ಳತನ ಮೊದಲಾದ ಸಂದರ್ಭಗಳಲ್ಲಿ ಅಥವಾ ಸಿಡಿಲು ಬಡಿದು ಮನೆಯ ಅಷ್ಟೂ ವಿದ್ಯುತ್ ಉಪಕರಣಗಳು ಹಾನಿಗೊಂಡ ಸಮಯದಲ್ಲಿ ಈ ವಿಮೆ ಆ ಉಪಕರಣವನ್ನು ರಿಪೇರಿ ಮಾಡಿಸುವ ಅಥವಾ ಹೊಸದನ್ನು ನೀಡುವ ಮೂಲಕ ಆ ನಷ್ಟವನ್ನು ಭರಿಸುತ್ತದೆ.

ಈ ವಿಮೆಯನ್ನು ಪಡೆಯುವುದು ಹೇಗೆ?

ಇದನ್ನು ಸುಲಭವಾಗಿ ಪಡೆಯಬಹುದು. ಪ್ರಾರಂಭದಲ್ಲಿ ನಿಮ್ಮ ಮನೆಯ ವಿಮೆ ಏನೇನನ್ನು ಒಳಗೊಂಡಿರಬೇಕು ಎಂಬುದನ್ನು ಗುರುತಿಸಿಕೊಳ್ಳಬೇಕು. ಅನ್ವಯವಾಗದ ಆಯ್ಕೆಗಳನ್ನು ಬಿಟ್ಟುಬಿಡಬೇಕು. ಉದಾಹರಣೆಗೆ ಮಳೆ ಅತಿ ಕಡಿಮೆ ಬೀಳುವ ಪ್ರದೇಶದಲ್ಲಿ ಅತಿವೃಷ್ಟಿಯ ವಿಮೆ ಬೇಡ. ವಿಮೆಯನ್ನು ಒದಗಿಸುವ ವಿವಿಧ ಸಂಸ್ಥೆಗಳ ಉತ್ಪನ್ನಗಳು ಹಾಗೂ ಇವುಗಳು ನೀಡುವ ಸೇವೆಯನ್ನು ಹೋಲಿಸಿ ನೋಡಿ ನಿಮ್ಮ ಮನೆಗೆ ಅತಿ ಹೆಚ್ಚು ಸೂಕ್ತವಾಗುವ ವಿಮೆಯನ್ನು ಆರಿಸಿಕೊಳ್ಳಬೇಕು. ಬಳಿಕವೇ ಅರ್ಜಿಯನ್ನು ಸಲ್ಲಿಸಬೇಕು.

ಕಟ್ಟಳೆಗಳನ್ನು ಓದಲು ಮರೆಯದಿರಿ

ಯಾವುದೇ ವಿಮಾ ಸೌಲಭ್ಯದಲ್ಲಿ ಸಂಸ್ಥೆ ತನ್ನದೇ ಆದ ಕಟ್ಟಳೆಗಳನ್ನು ಒದಗಿಸಿರುತ್ತದೆ. ಟರ್ಮ್ಸ್ ಅಂಡ್ ಕಂಡೀಶನ್ಸ್ ಎಂದು ಚಿಕ್ಕ ಅಕ್ಷರಗಳಲ್ಲಿ ಅಪಾರವಾದ ಪದಗಳ ಮೂಲಕ ಇದನ್ನು ಒದಗಿಸಿರಲಾಗಿರುತ್ತದೆ. ಕೊಂಚ ಹೆಚ್ಚು ಸಮಯ ಮತ್ತು ವ್ಯವಧಾನದಿಂದ ಈ ಮಾಹಿತಿಯನ್ನೊಮ್ಮೆ ಓದಿಕೊಳ್ಳಬೇಕು. ಇದರ ಮೂಲಕ ಈ ವಿಮೆಯಲ್ಲಿ ಯಾವ ವಿಷಯಗಳನ್ನು ಪರಿಗಣಿಸಲಾಗಿರುತ್ತದೆ ಹಾಗೂ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬಹುದು. ಅಲ್ಲದೇ ಇದಕ್ಕೆ ತಗಲುವ ವೆಚ್ಚದ ಬಗ್ಗೆಯೂ ಜಾಗರೂಕರಾಗಿರಬೇಕು. ಏಕೆಂದರೆ ನಿಯಮಿತ ಪ್ರಮಾಣದಲ್ಲಿ ಸಲ್ಲಿಸಬೇಕಾದ ಪ್ರೀಮಿಯಂ ನಿಮ್ಮ ಜೇಬಿಗೆ ಕನ್ನ ಹಾಕುವಷ್ಟಿರಬಾರದು.

ನಿಖರ ಮಾಹಿತಿ, ಪರಿಶೀಲನೆ ಅಗತ್ಯ

ಅಲ್ಲದೇ ವಿಮೆಯಲ್ಲಿ ಒಳಗೊಳ್ಳುವ ವಸ್ತುಗಳ ನಿಖರ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಇದರ ಪುರಾವೆಗಳನ್ನು, ಉದಾಹರಣೆಗೆ ಖರೀದಿ ಮೊತ್ತದ ರಸೀದಿಗಳನ್ನು ಒದಗಿಸುವುದು ತುಂಬಾ ಉತ್ತಮ. ಇದರಿಂದ ಸರಿಯಾದ ಮೊತ್ತಕ್ಕೆ ವಿಮೆ ಇಳಿಸಬಹುದು. ಅಲ್ಲದೇ ಪ್ರತಿ ಮೂರು ಅಥವಾ ಐದು ವರ್ಷಗಳಿಗೊಮ್ಮೆ ಮನೆಯ ವಿಮೆಯ ಮೊತ್ತವನ್ನು ಪರಿಶೀಲಿಸುತ್ತಿರಬೇಕು. ಏಕೆಂದರೆ ಮನೆ ಸ್ಥಿರಾಸ್ತಿಯಾಗಿದ್ದು ಇದರ ನವೀಕರಣದ ವೆಚ್ಚ ಹಣದುಬ್ಬರದಿಂದಾಗಿ ಪ್ರತಿವರ್ಷವೂ ಏರುತ್ತಲೇ ಹೋಗುತ್ತದೆ.

ಕೊನೆ ಮಾತು

ಅಂತಿಮವಾಗಿ, ಗೃಹ ವಿಮೆ ಇದೆ ಎಂಬ ಒಂದೇ ಅಂಶ ನಿಮಗೆ ಅತಿ ಹೆಚ್ಚಿನ ನೆಮ್ಮದಿ ನೀಡಬಹುದು. ಏಕೆಂದರೆ ಎಷ್ಟೋ ಸಂದರ್ಭಗಳಲ್ಲಿ ಕಳ್ಳತನ, ಸಿಡಿಲು, ಅತಿವೃಷ್ಟಿ, ಪಕ್ಕದ ಮರ ಬಿದ್ದು ಮನೆಯ ಛಾವಣಿ ಕುಸಿಯುವುದು ಮೊದಲಾದ, ಊಹೆಗೇ ನಿಲುಕದ ಸಂದರ್ಭಗಳಲ್ಲಿ ನೆರೆಯವರ ಸಾಂತ್ವಾನ, ಪೊಲೀಸರ ಭರವಸೆಗಿಂತಲೂ ವಿಮೆಯೇ ಹೆಚ್ಚಿನ ನೆಮ್ಮದಿ ನೀಡಿರುವುದನ್ನು ವಿಮೆ ಪಡೆದವರು ತಮ್ಮ ಅನುಭವದ ಮೂಲಕ ತಿಳಿಸುತ್ತಾರೆ.

English summary

Home insurance policy: Why you need to buy it

While owning a home is an aspiration for many people, it is often the culmination of many years of hard work. Given the money and effort that goes into buying such an asset, it is only fair that it is kept safe and secure.
Story first published: Monday, October 16, 2017, 17:12 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns