Englishहिन्दी മലയാളം தமிழ் తెలుగు

ಗೃಹಸಾಲದ ಮೇಲಿನ ಇ.ಎಂ.ಐ. ಯನ್ನು ನಿರ್ವಹಿಸುವುದಕ್ಕಾಗಿ ಚತುರ ಮಾರ್ಗೋಪಾಯಗಳು ಇಲ್ಲಿವೆ.

Posted By: Gururaja Achar
Subscribe to GoodReturns Kannada

ಮನೆ ಕಟ್ಟುವುದಕ್ಕಾಗಿ ಲೋನ್ ಅಥವಾ ಗೃಹಸಾಲವನ್ನು ಪಡೆದುಕೊಳ್ಳುವುದು ನಿಜಕ್ಕೂ ಬಲು ದೊಡ್ಡ ಬದ್ಧತೆಯೇ ಆಗಿರುತ್ತದೆ. ಕ್ರಮಬದ್ಧವಾದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿಕೊಂಡು, ಬೇರೆ ಉದ್ದೇಶಕ್ಕಾಗಿ ಮೀಸಲಾಗಿರಿಸಿರುವ ನಿಮ್ಮಉಳಿತಾಯದ ಹಣವೂ ಬರಿದಾಗಲು ಆಸ್ಪದ ಕೊಡದ ರೀತಿಯಲ್ಲಿ,

ನಿಮ್ಮ ಕನಸಿನ ಮನೆಯನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಲೋನ್ ಪಡೆದುಕೊಳ್ಳುವುದು ಸರಿಯಾದ ತೀರ್ಮಾನವೇ ಆಗಿರುತ್ತದೆ. ಆದರೆ, ಲೋನ್ ಹಣಕ್ಕೆ ಬಡ್ಡಿಯನ್ನು ಪಾವತಿಸುವ ವಿಚಾರಕ್ಕೆ ಬಂದಾಗ ನಿಜಕ್ಕೂ ಅದೊಂದು ತಲೆನೋವಿನ ಸಂಗತಿಯಾಗಿಯೇ ಪರಿಣಮಿಸುತ್ತದೆ. ಆದರೂ ಕೂಡಾ, ನಾವಿಲ್ಲಿ ಸೂಚಿಸಿರುವ ಕೆಲವೊಂದು ಅಭ್ಯಾಸಗಳನ್ನು ರೂಢಿ ಮಾಡಿಕೊಂಡಲ್ಲಿ ಬಡ್ಡಿ ಕಟ್ಟುವ ಸಂಗತಿಯನ್ನೂ ಸಹ ನೀವು ಅಷ್ಟೇನೂ ಕಷ್ಟವಿಲ್ಲದಂತೆ ನಿಭಾಯಿಸಬಹುದಾಗಿದೆ.

ನಿಮ್ಮ ಇ.ಎಂ.ಐ. ಅನ್ನು ಯೋಜಿಸಿಕೊಳ್ಳಿರಿ

ನೀವು ನಿಮ್ಮ ವೇತನವನ್ನು ಪಡೆದುಕೊಳ್ಳುವ ದಿನಾಂಕಕ್ಕೆ ಹತ್ತಿರವಾದ ಅನುಕೂಲಕರ ದಿನದಂದು ನಿಮ್ಮ ಇ.ಎಂ.ಐ. (ಈಕ್ವಲ್ ಮಂಥ್ಲಿ ಇನ್ಸ್ಟಾಲ್ಮೆಂಟ್) ಪಾವತಿಯನ್ನು ನಿಗದಿಪಡಿಸಿಕೊಳ್ಳಬಹುದು. ನಿಮ್ಮ ಮತ್ತೊಂದು ಮನೆಯಿಂದ ಬಾಡಿಗೆಯ ಆದಾಯದಂತಹ ಇನ್ನಿತರ ಯಾವುದಾದರೂ ಸ್ಥಿರ ಆದಾಯ ಮೂಲಗಳಿದ್ದಲ್ಲಿ, ನೀವು ನಿಮ್ಮ ಇ.ಎಂ.ಐ. ಪಾವತಿಯ ದಿನವನ್ನಾಗಿ ತಿಂಗಳ ಆರಂಭದ ಯಾವುದಾದರೊಂದು ದಿನವನ್ನು ನಿಗದಿಪಡಿಸಿಕೊಳ್ಳಬಹುದು. ಏಕೆಂದರೆ, ಬಾಡಿಗೆಯ ಹಣವು ಸಾಮಾನ್ಯವಾಗಿ ತಿಂಗಳ ಆರಂಭದ ದಿನದಂದು ಪಾವತಿಸಲ್ಪಡುತ್ತದೆ. ಇ.ಎಂ.ಐ. ಪಾವತಿಯನ್ನು ಸರಿಯಾದ ರೀತಿಯಲ್ಲಿ ಯೋಜಿಸಿಕೊಳ್ಳದೇ ಹೋದಲ್ಲಿ, ಪಾವತಿಸಬೇಕಾದ ದಿನಾಂಕದಂದು ಹಣಕಾಸಿನ ಮುಗ್ಗಟ್ಟು ಎದುರಾಗಬಹುದು ಹಾಗೂ ಇದರ ಪರಿಣಾಮವಾಗಿ ನಿಗದಿತ ದಿನದಂದು ನಿಮಗೆ ನಿಮ್ಮ ಇ.ಎಂ.ಐ. ಅನ್ನು ಪಾವತಿಸಲು ಸಾಧ್ಯವಾಗದೇ ಹೋಗಬಹುದು. ಕ್ರಮಬದ್ಧವಾಗಿ ಇ.ಎಂ.ಐ. ಅನ್ನು ಪಾವತಿಸದೇ ಹೋದಲ್ಲಿ, ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಋಣಾತ್ಮಕ ಪರಿಣಾಮವುಂಟಾಗುತ್ತದೆ. ಅದೇ ಒಂದು ವೇಳೆ ನಿಮ್ಮ ಇ.ಎಂ.ಐ. ಪಾವತಿಯು ಕಾಲಬದ್ಧವಾಗಿದ್ದರೆ, ಅದು ನಿಮ್ಮನ್ನು ಓರ್ವ ಯೋಗ್ಯ ಸಾಲಗಾರನನ್ನಾಗಿಸುತ್ತದೆ.

ಹೆಚ್ಚಿನ ಮೊತ್ತದ ಇ.ಎಂ.ಐ. ಅನ್ನು ಪಾವತಿಸಿರಿ

ಸಾಧ್ಯವಾದಲ್ಲಿ, ನೀವು ಕೊಡಬೇಕೆಂದು ನಿಗದಿಯಾಗಿರುವ ಮೊತ್ತಕ್ಕಿಂತಲೂ ಹೆಚ್ಚಿನ ಪ್ರಮಾಣದ ಇ.ಎಂ.ಐ. ಅನ್ನು ಪ್ರತಿಬಾರಿಯೂ ಪಾವತಿಸಲು ಪ್ರಯತ್ನಿಸಿರಿ. ಹೀಗೆ ಮಾಡಿದಲ್ಲಿ ನಿಮ್ಮ ಲೋನ್ ಅಥವಾ ಸಾಲದ ಒಟ್ಟು ಅವಧಿಯನ್ನು ಕೆಲ ತಿಂಗಳುಗಳವರೆಗೆ ಅಥವಾ ಒಂದು ವರ್ಷದವರೆಗೂ ತಗ್ಗಿಸಿಕೊಳ್ಳಬಹುದು. ಹಾಗೆ ಹೆಚ್ಚಿನ ಪ್ರಮಾಣದ ಇ.ಎಂ.ಐ. ಅನ್ನು ಪಾವತಿಸುವುದಕ್ಕೋಸ್ಕರವಾಗಿ, ಅವಶ್ಯಕ ಆದಾಯವನ್ನು ನಿಮ್ಮಿಂದ ಹುಟ್ಟುಹಾಕಲು ಸಾಧ್ಯವಿದೆಯೆಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ನಿಮ್ಮ ಈಕ್ವಿಟಿಯನ್ನೋ ಅಥವಾ ಇತರ ಹೂಡಿಕೆಗಳನ್ನೋ ಸುಧಾರಿಸಿಕೊಳ್ಳುವುದರ ಮೂಲಕ ಬಹುಶ: ನಿಮಗೆ ನಿಮ್ಮ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾದೀತು. ನಿಮಗೆ ಸಾಧ್ಯವಾದಾಗಲೆಲ್ಲಾ ಭಾಗಶ:ವಾಗಿ ನಿಮ್ಮ ಲೋನ್ ನ ಮೊತ್ತವನ್ನು ಮರುಸಂದಾಯ ಮಾಡುವ ಆಯ್ಕೆಯನ್ನೂ ನೀವು ಪ್ರಯತ್ನಿಸಬಹುದು. ಉದಾಹರಣೆಗೆ, ಒಂದು ವೇಳೆ ನೀವು ಬೋನಸ್ ಅನ್ನು ಪಡೆದುಕೊಳ್ಳುವವರಿದ್ದಲ್ಲಿ ಅಥವಾ ನಿಮ್ಮ ಯಾವುದಾದರೂ ವಿಮಾ ಪಾಲಿಸಿಯು ಪರಿಪಕ್ವವಾಗುವ ಹಂತವನ್ನು ತಲುಪಿದ್ದಲ್ಲಿ, ಹಾಗೆ ಪಡೆದುಕೊಳ್ಳುವ ಹಣವನ್ನು ನೀವು ನಿಮ್ಮ ಲೋನ್ ಮರುಪಾವತಿಗಾಗಿ ಬಳಸಿಕೊಳ್ಳಬಹುದು. ಹೀಗೆ ಮಾಡುವುದರ ಮೂಲಕವೂ ನೀವು ನಿಮ್ಮ ಲೋನ್ ನ ಅವಧಿಯನ್ನು ಕಡಿತಗೊಳಿಸಿಕೊಳ್ಳಬಹುದು.

ನಿಮ್ಮ ಹೂಡಿಕೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿರಿ

ಲೋನ್ ಅನ್ನು ಮರುಪಾವತಿಸುವ ನಿಟ್ಟಿನಲ್ಲಿ, ನಗದು ಹಣದ ಒಳಹರಿವು ನಿಯಮಿತವಾದ ರೀತಿಯಲ್ಲಿ ಇರುವುದು ಅತ್ಯಾವಶ್ಯಕ. ವೇತನವು ಒಂದು ಸ್ಥಿರ ಆದಾಯ ಮೂಲವಾಗಿದ್ದರೂ ಸಹ, ಆದಾಯದ ಇನ್ನಿತರ ಮೂಲಗಳೂ ಇದ್ದಲ್ಲಿ, ನಗದು ಹಣದ ಒಳಹರಿವು ವೃದ್ಧಿಗೊಳ್ಳುವುದಕ್ಕೆ ಅಂತಹ ಇತರ ಮೂಲಗಳು ನೆರವಾಗುತ್ತವೆ. ಹೀಗಾದಾಗ, ನಿಮ್ಮ ಮನೆಯ ಲೋನ್ ನ ಮರುಪಾವತಿಗಾಗಲೀ ಅಥವಾ ಬಡ್ದಿಯ ಪಾವತಿಗಾಗಿ ಆಗಲೀ ನೀವು ಕೇವಲ ನಿಮ್ಮ ವೇತನವನ್ನಷ್ಟೇ ಅವಲಂಬಿಸಿರಬೇಕಾದ ಪ್ರಮೇಯವು ಇರುವುದಿಲ್ಲ. ಆದಾಯದ ಮತ್ತೊಂದು ಮೂಲವು ಕೇವಲ ನಿಮ್ಮ ಇ.ಎಂ.ಐ. ನ ಪಾವತಿಗಷ್ಟೇ ನೆರವಾಗುವುದಲ್ಲ, ಜೊತೆಗೆ ನೀವು ನಿಮ್ಮ ಲೋನ್ ನ ಅಸಲು ಹಣವನ್ನೇ ಭಾಗಶ:ವಾಗಿಯಾದರೂ ಅವಧಿಗೆ ಮುಂಚಿತವಾಗಿಯೇ ಸಂದಾಯ ಮಾಡಿಬಿಡಬಹುದು ಹಾಗೂ ತನ್ಮೂಲಕ ನಿಮ್ಮ ಸಾಲದ ಹೊರೆಯನ್ನು ಅಷ್ಟರಮಟ್ಟಿಗೆ ತಗ್ಗಿಸಿಕೊಳ್ಳಬಹುದು.

ಬ್ಯಾಂಕ್ ಅನ್ನು ಬದಲು ಮಾಡಿಕೊಳ್ಳಿರಿ

ತಮ್ಮ ಬಡ್ಡಿದರಗಳ ರಿಸೆಟ್ ಪಿರಿಯೆಡ್ ಗಳನ್ನು ಬದಲಾವಣೆಗೊಳಪಡಿಸುವ ನಿಟ್ಟಿನಲ್ಲಿ ಲೋನ್ ಗಳನ್ನು ಕೊಡಮಾಡುವ ಬ್ಯಾಂಕ್ ಗಳು ಆಗಾಗ್ಗೆ ಬೇರೆ ಬೇರೆ ಕಾಲಾವಧಿಗಳಲ್ಲಿ ತಮ್ಮ ಬಡ್ಡಿ ದರಗಳನ್ನು ತಗ್ಗಿಸುವುದೂ ಇರುತ್ತದೆ. ಕಡಿಮೆ ಬಡ್ಡಿದರಗಳಿಂದ ಪ್ರಯೋಜನವಾದೀತೆಂದು ನಿಮಗನಿಸಿದಲ್ಲಿ, ನೀವು ಲೋನ್ ಪಡೆದುಕೊಳ್ಳುವ ನಿಮ್ಮ ಬ್ಯಾಂಕ್ ಅನ್ನು ಬದಲಾಯಿಸಿಕೊಳ್ಳಬಹುದು. "ಬ್ಯಾಲೆನ್ಸ್ ಟ್ರಾನ್ಸ್ ಫ಼ರ್ ಸ್ಕೀಮ್" ನಂತಹ ಯೋಜನೆಯು ತಮ್ಮ ಪೂರ್ಣಪ್ರಮಾಣದ ಇಲ್ಲವೇ ಪಾವತಿಯಾಗದೇ ಬಾಕಿ ಉಳಿದಿರುವ ದೊಡ್ಡ ಪ್ರಮಾಣದ ಗೃಹಸಾಲದೊಂದಿಗೆ, ತಮ್ಮ ಈಗಿನ ಬ್ಯಾಂಕ್ ನಿಂದ, ತಮ್ಮ ಆಯ್ಕೆಯ ಬೇರೆ ಯಾವುದಾದರೂ ಬ್ಯಾಂಕ್ ನೊಂದಿಗೆ ಮನೆಸಾಲದ ವ್ಯವಹಾರವನ್ನು ಬದಲಾಯಿಸಿಕೊಳ್ಳಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಆದರೂ ಕೂಡಾ, ಪದೇ ಪದೇ ಹೀಗೆ ಬ್ಯಾಂಕ್ ಗಳನ್ನು ಬದಲಿಸುತ್ತಲೇ ಇರಬಾರದು. ಹಾಗೇನೇ ಬಡ್ಡಿದರಗಳಲ್ಲಿ ತೀರಾ ನಗಣ್ಯವೆನಿಸುವಂತಹ ವ್ಯತ್ಯಾಸವಿದ್ದಾಗಲೂ ಬ್ಯಾಂಕ್ ಅನ್ನು ಬದಲಾಯಿಸಿಕೊಳ್ಳುವುದು ಸೂಕ್ತವಲ್ಲ. ಏಕೆಂದರೆ, ಹಾಗೆ ಬ್ಯಾಂಕ್ ಅನ್ನು ಬದಲಾಯಿಸಿಕೊಳ್ಳುವಾಗ, ನೀವು ಲೋನ್ ಅಪ್ರೈಸಲ್ ಗೆ ಹಾಗೂ ಕಡತದ ಕೆಲಸಗಳೊಂದಿಗೆ ಅಂಡರ್ ರೈಟಿಂಗ್ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ. ಈ ಸೌಕರ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ನಿಮಗೆ ನಿಗದಿತ ಶುಲ್ಕವನ್ನೂ ವಿಧಿಸಲಾಗುತ್ತದೆ. ಹೊಸ ಹೊಸ ಯೋಜನೆಗಳಿಗಾಗಿ, ವಿವಿಧ ಬ್ಯಾಂಕ್ ಗಳ ಬ್ಯಾಂಕ್ ದರಗಳನ್ನು ಪರಿಶೀಲಿಸುತ್ತಾ ಇರಿ.

Read more about: home loan
English summary

ಗೃಹಸಾಲದ ಮೇಲಿನ ಇ.ಎಂ.ಐ. ಯನ್ನು ನಿರ್ವಹಿಸುವುದಕ್ಕಾಗಿ ಚತುರ ಮಾರ್ಗೋಪಾಯಗಳು ಇಲ್ಲಿವೆ.

Here we tell you how to make the maximum use of your home loan EMI.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns