ಬದಲಾವಣೆ ಎಂಬುದು ಕೂಡ ಈಚಿನ ದಿನಗಳಲ್ಲಿ ಅತಿ ವೇಗವಾಗಿದೆ. ಅ ಬದಲಾವಣೆಗಳಲ್ಲಿ ಹೆಚ್ಚಿನವು ಕೃತಕವಾಗಿ, ಅಸ್ವಾಭಾವಿಕವಾಗಿವೆ. ಬ್ಯಾಂಕ್ ಗಳ ಚಟುವಟಿಕೆಗಳ ಮೇಲೆ ಹಿಂದಿನಿಂದಲೂ ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದು, ಅವುಗಳ ಮೇಲೆ ಅಪಾರವಾದ ನಂಬಿಕೆ, ಅಚಲವಾದ ವಿಶ್ವಾಸ ಇದೆ.
ಬ್ಯಾಂಕಿಂಗ್ ವ್ಯವಸ್ಥೆಯು ನಮ್ಮ ದೇಶದಲ್ಲಿ ಸುಭದ್ರವಾಗಿ ಇಂದಿಗೂ ಜನಸಾಮಾನ್ಯರಲ್ಲಿ ನಂಬಿಕೆ ಉಳಿಸಿಕೊಂಡಿದೆ ಎಂದರೆ ಅದಕ್ಕೆ ನಮ್ಮಲ್ಲಿರುವ ಬಿಗಿಯಾದ ನಿಯಂತ್ರಕರ ಹಿಡಿತ ಮತ್ತು ಸರಕಾರದ ಕ್ರಮಗಳು ಕಾರಣ. ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಂತ್ರಣದಲ್ಲಿ ಎಲ್ಲವೂ ಸಾಗುತ್ತಿದೆ. ಒಂದು ಕಾಲದಲ್ಲಿ ಬ್ಯಾಂಕ್ ಬಡ್ಡಿದರವನ್ನು ಯಾರೊಬ್ಬ ಗ್ರಾಹಕರು ಪ್ರಶ್ನಿಸದೆ ಪಾಲಿಸುತ್ತಿದ್ದರು.
ಆದರೆ, ಈಗ ಗ್ರಾಹಕರೂ ಬ್ಯಾಂಕ್ ಬಡ್ಡಿ ದರದಲ್ಲಿ ಚೌಕಾಶಿ ಮಾಡಿ, ಲಾಭ ಪಡೆದುಕೊಳ್ಳುವ ಪದ್ಧತಿಗೆ ಬದಲಾಗಿದ್ದೇವೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಬಿಗಿ ಕ್ರಮಗಳಿಂದಾಗಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಸ್ವಲ್ಪ ಮಟ್ಟಿನ ಸ್ಥಿರತೆ ಕಂಡುಕೊಂಡಿದೆ.

ಅಮೆರಿಕಾದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹೇಳಬೇಕಾದರೆ 2008ರಲ್ಲಿ 25 ಬ್ಯಾಂಕ್ ಗಳು, 2009ರಲ್ಲಿ ನೂರಾ ನಲವತ್ತು ಬ್ಯಾಂಕ್ ಗಳು, 2010ರಲ್ಲಿ 157ಬ್ಯಾಂಕ್ ಗಳು, 2011ರಲ್ಲಿ ಅರವತ್ತು ಬ್ಯಾಂಕ್ ಗಳಷ್ಟು ದಿವಾಳಿತನ ಕಂಡಿವೆ ಮತ್ತು ಹೂಡಿಕೆದಾರರನ್ನು ಅತಂತ್ರಗೊಳಿಸಿವೆ. ಈ ಸಂದರ್ಭದಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಉಲ್ಲೇಖನಾರ್ಹ.
1960ರಲ್ಲಿ ದುರ್ಬಲ ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಅಧಿಕಾರ ನೀಡಿದ ಕಾರಣ 1951ರಲ್ಲಿದ್ದ 566 ಬ್ಯಾಂಕ್ ಗಳನ್ನು 1969ರ ವೇಳೆಗೆ 85ಕ್ಕೆಇಳಿಸಲಾಯಿತು ಮತ್ತು ಆ ಸಂದರ್ಭದಲ್ಲಿ 50 ಕೋಟಿಗೂ ಹೆಚ್ಚಿನ ಡಿಪಾಜಿಟ್ಟು ಹೊಂದಿದ್ದಂತಹ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
ವಿಲೀನಗೊಂಡ ಉದಾಹರಣೆಗಳು:
ಇದೇ ರೀತಿ 1980ರಲ್ಲಿ ಇನ್ನೂರು ಕೋಟಿ ರುಪಾಯಿಗಳಿಗೂ ಹೆಚ್ಚಿನ ಡಿಪಾಜಿಟ್ಟು ಉಳ್ಳಂತಹ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಇದರಿಂದ ಸದೃಡ ಬ್ಯಾಂಕಿಂಗ್ ವ್ಯವಸ್ಥೆ ಮುಂದುವರಿದು, ಬ್ಯಾಂಕ್ ಗಳ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಸುಭದ್ರ ಎಂದರೆ, ಬ್ಯಾಂಕ್ ಗಳು ವಿಫಲವಾಗಿರುವ ಸಂದರ್ಭದಲ್ಲಿ ಅವುಗಳನ್ನು ಬೇರೆ ಸ್ಥಿರವಾದ, ಸುಭದ್ರವಾದ ಬ್ಯಾಂಕ್ ಗಳಲ್ಲಿ ವಿಲೀನಗೊಳಿಸಿ ಡಿಪಾಜಿಟ್ಟುದಾರರ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ.
2002ರಲ್ಲಿ ನೆಡುಂಗಡಿ ಬ್ಯಾಂಕ್ ವಿಫಲವಾದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನಗೊಳಿಸಲಾಯಿತು.
2004ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವಿಫಲವಾದ ಕಾರಣ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ವಿಲೀನಗೊಳಿಸಲಾಯಿತು.
2006 ರಲ್ಲಿ ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ವಿಫಲವಾದ ಕಾರಣ ಅದನ್ನು ಐಡಿಬಿಐ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಯಿತು.
ಈ ಎಲ್ಲಾ ವಿಲೀನಗಳಲ್ಲಿ ಗ್ರಾಹಕರ ಡಿಪಾಜಿಟ್ ಹಣವು ಸುಭದ್ರವಾಗಿದ್ದು, ಯಾರಿಗೂ ಹಾನಿಯಾಗಲಿಲ್ಲ.
ಆರೂವರೆ ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದರು:
ಈ ಸಂದರ್ಭದಲ್ಲಿ ಆಗಬಹುದಾದ ಕೆಲವು ಬದಲಾವಣೆಗಳು ಹೇಗೆ ಕೈ ತಪ್ಪಿ ಅವಕಾಶ ವಂಚಿತರನ್ನಾಗಿ ಮಾಡಬಹುದು ಎಂಬುದಕ್ಕೆ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನ 2001ರ ಬೆಳವಣಿಗೆ ಸೂಕ್ತ ಉದಾಹರಣೆ ಆಗಬಹುದಾಗಿದೆ. 2001ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಒಂದು ಸದೃಢ ಬ್ಯಾಂಕ್ ಆಗಿದ್ದು, ಬ್ಯಾಂಕ್ ನ ಚೇರ್ಮನ್ ಏಪ್ರಿಲ್ 4, 2001 ರಲ್ಲಿ ಷೇರುದಾರರಿಗೆ ಬರೆದ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಆ ಸಂದರ್ಭದಲ್ಲಿ ಈ ಬ್ಯಾಂಕ್ ಕ್ಯಾಪಿಟಲ್ ಮಾರ್ಕೆಟ್ ನ ಪ್ರತಿಷ್ಠಿತ ಸ್ಟಾಕ್ ಎಕ್ಸ್ ಚೇಂಜ್ ಗಳಾಗಿದ್ದ ಬಿಎಸ್ ಇ, ಎನ್ ಎಸ್ ಇ, ಸಿಎಸ್ ಇ, ಮತ್ತು ಡಿಎಸ್ ಇ ಗಳಿಗೆ ಕ್ಲಿಯರಿಂಗ್ ಬ್ಯಾಂಕ್ ಆಗಿದ್ದು, 280 ಬ್ರೋಕರ್ ಗಳು ಇದರ ಗ್ರಾಹಕರಾಗಿದ್ದರು. ಮಾರ್ಚ್ 2001 ರ ಅಂತ್ಯದಲ್ಲಿ ಈ ಬ್ಯಾಂಕ್ ರು. 13,350 ಕೋಟಿ ವ್ಯವಹಾರವನ್ನು ಹೊಂದಿತ್ತು.
ಗ್ಲೋಬಲ್ ಟ್ರಸ್ಟ್ ಬ್ಯಾಂಕ್ 2001 ರ ಮಾರ್ಚ್ ಅಂತ್ಯದಲ್ಲಿ 103 ಎಟಿಎಂಗಳನ್ನು 20 ನಗರದ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದು, ಸುಮಾರು ರು.7,750 ಕೋಟಿ ಡಿಪಾಜಿಟ್ ಮತ್ತು ಸುಮಾರು ರು.5,600 ಕೋಟಿ ಅಡ್ವಾನ್ಸಸ್ ಹೊಂದಿದ್ದಲ್ಲದೆ ಆರೂವರೆ ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿದ್ದರು.
ಶಿಫಾರಸನ್ನು ಆಗಿನ ನಿರ್ದೇಶಕರು ಒಪ್ಪಲಿಲ್ಲ:
ಈ ಎಲ್ಲಾ ಬೆಳವಣಿಗೆಗಳ ಕಾರಣ ಈ ಬ್ಯಾಂಕ್ ಅನ್ನು ಯುಟಿಐ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ವಿಚಾರ ಬಂದು, ಮೊದಲು ಎಸ್ ಬಿಐ ಕ್ಯಾಪ್ಸ್, ನಂತರ ಅಂತರರಾಷ್ಟ್ರೀಯ ಸಂಸ್ಥೆ ಡೆಲೋಟ, ಹಸ್ಕಿನ್ ಅಂಡ್ ಸೆಲ್ಸ್ ವಿಲೀನದ ಅನುಪಾತವನ್ನು ಸಹ ಶಿಫಾರಸನ್ನು ಮಾಡಿದವು.
ಪ್ರತಿ ಒಂದು ಷೇರಿಗೆ 2.25 ಷೇರು ಯುಟಿಐ ಬ್ಯಾಂಕ್ ನೀಡಬಹುದೆಂಬ ಈ ಶಿಫಾರಸು ಆಗಿನ ಬೋರ್ಡ್ ಆಫ್ ಡೈರೆಕ್ಟರ್ಸ್ ಗೆ ಸರಿ ಕಾಣದ ಕಾರಣ ಈ ವಿಲೀನದ ಪ್ರಸ್ತಾವ ಕೈಬಿಟ್ಟರು. ಇದು ಮುಂದಿನ ವರ್ಷಗಳಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನ ಷೇರುದಾರರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಯಿತು.
ಈ ಸಂದರ್ಭದಲ್ಲಿ ಓದುಗರು ಗಮನಿಸಬೇಕಾದ ಅಂಶವೆಂದರೆ ಆಗಿನ ಯುಟಿಐ ಬ್ಯಾಂಕ್ ಈಗ ಹೆಸರು ಬದಲಾವಣೆಯಿಂದ ಆಕ್ಸಿಸ್ ಬ್ಯಾಂಕ್ ಎಂದಾಗಿದ್ದು, ಇದು ಸೆನ್ಸೆಕ್ಸ್ ನಲ್ಲಿನ ಪ್ರತಿಷ್ಠಿತ ಕಂಪೆನಿಯಾಗಿದೆ. ಒಂದು ವೇಳೆ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಈ ಬ್ಯಾಂಕ್ ನಲ್ಲಿ ವಿಲೀನಗೊಂಡಿದ್ದಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನ ಠೇವಣಿದಾರರಿಗಿಂತ ಷೇರುದಾರರು ಹೆಚ್ಚು ಸಂತುಷ್ಟರಾಗಿರುತ್ತಿದ್ದರಲ್ಲವೇ? ಈ ವಿಲೀನ ಕೈಗೂಡಿದ್ದರೆ ಆಗ ಯುಟಿಐ ಬ್ಯಾಂಕ್ ನ ಪರಿಸ್ಥಿತಿ ಹೇಗಿರುತ್ತಿತ್ತೋ ಓದುಗರೇ ಕಲ್ಪಿಸಿಕೊಳ್ಳಬೇಕು.


Click it and Unblock the Notifications