ವೆಬ್ ಪೋರ್ಟಲ್ ಗಳಲ್ಲಿ, ಟೀವಿಗಳಲ್ಲಿ, ಪತ್ರಿಕೆಗಳಲ್ಲಿ ಷೇರು ಸೂಚ್ಯಂಕ ಗರಿಷ್ಠ ಮಟ್ಟಕ್ಕೆ, ಸಾರ್ವಕಾಲಿಕ ಎತ್ತರಕ್ಕೆ ಏರಿತು ಎಂಬುದನ್ನು ನೋಡಿರುತ್ತೀರಿ, ಓದಿರುತ್ತೀರಿ. ಆದರೆ ಇದರಿಂದ ಬಂಡವಾಳ ಹರಿದು ಬಂದಿದೆಯಾ ಎಂಬುದನ್ನು ನೋಡಬೇಕು. ಮಾರುಕಟ್ಟೆ ಮೌಲ್ಯ, ಬಂಡವಾಳವನ್ನು ಸಹ ಪರಿಗಣಿಸಬೇಕು.
ಈ ವಾರ ಅಂದರೆ ಸಂವೇದಿ ಸೂಚ್ಯಂಕವು ಏಪ್ರಿಲ್ ಮೂರರಂದು ಸಾರ್ವಕಾಲೀನ ದಾಖಲೆಯ ಮಟ್ಟ 39,270.14 ತಲುಪಿ ವಿಜೃಂಭಿಸಿತು. ಆಗಸ್ಟ್ 2018ರ ಅಂತ್ಯದಲ್ಲಿ ಸಂವೇದಿ ಸೂಚ್ಯಂಕ 38,989.65ರ ಗರಿಷ್ಠ ತಲುಪಿದ್ದು, ಅಂದಿನ ಸರ್ವಕಾಲೀನ ಗರಿಷ್ಠ ದಾಖಲೆಯಾಗಿದೆ. ಈ ಎರಡು ಗರಿಷ್ಠಗಳ ನಡುವೆ ಸಂವೇದಿ ಸೂಚ್ಯಂಕ ಸುಮಾರು ಆರು ಸಾವಿರ ಅಂಶಗಳಿಗಿಂತ ಹೆಚ್ಚಿನ ಕುಸಿತ ಕಂಡು, ಪುಟಿದೆದ್ದಿದೆ ಎಂಬುದು ಗಮನಾರ್ಹ ಅಂಶವಾಗಿದೆ.
ಆದರೆ, ಈ ಸಂದರ್ಭದಲ್ಲಿ ಒಂದು ಪ್ರಮುಖ ಅಂಶವನ್ನು ಗಮನಿಸಬೇಕಾಗಿದೆ. ಅದೆಂದರೆ ಸಂವೇದಿ ಸೂಚ್ಯಂಕವು ಏಪ್ರಿಲ್ 3ರಂದು ನಿರ್ಮಿಸಿದ ದಾಖಲೆ ಹಂತದಲ್ಲಿ ಪೇಟೆಯ ಬಂಡವಾಳ ಮೌಲ್ಯವು ರು.151.62 ಲಕ್ಷ ಕೋಟಿಯಾಗಿತ್ತು. ಆದರೆ ಆಗಸ್ಟ್ ನಲ್ಲಿನ ದಾಖಲೆ ನಿರ್ಮಿಸಿದ ದಿನ ಪೇಟೆಯ ಬಂಡವಾಳ ಮೌಲ್ಯವು ರು.159.34 ಲಕ್ಷ ಕೋಟಿಯಲ್ಲಿತ್ತು.

ಅಂದರೆ ಈ ಸರ್ವಕಾಲೀನ ಗರಿಷ್ಠ ಮತ್ತು ಆಗಸ್ಟ್ ನ ಮಟ್ಟಕ್ಕೂ 280 ಪಾಯಿಂಟುಗಳ ಏರಿಕೆಯಿದ್ದರೂ ಪೇಟೆಯ ಬಂಡವಾಳ ಮೌಲ್ಯವು ರು.7 ಲಕ್ಷ ಕೋಟಿಯಷ್ಟು ಇಳಿಕೆ ಕಂಡಿದೆ. ಅಂದರೆ ಪೇಟೆಯ ಚಟುವಟಿಕೆಯು ವಿಶಾಲವಾದ ತಳಹದಿಯ ಮೇಲಿರದೆ ಕೇವಲ ಕೆಲವೇ ಪ್ರಮುಖ ಸೆನ್ಸೆಕ್ಸ್ ಕಂಪನಿಗಳ ಮೇಲೆ ಕೇಂದ್ರೀಕೃತವಾಗಿತ್ತು ಎನ್ನಬಹುದಾಗಿದೆ.
ಪೇಟೆಯ ಚಟುವಟಿಕೆಯು ಎಷ್ಟು ಹರಿತ - ತ್ವರಿತ ಎಂದರೆ ಆಗಸ್ಟ್ ಅಂತ್ಯದಲ್ಲಿ ಪೇಟೆಯ ಬಂಡವಾಳ ಮೌಲ್ಯವು ರು.159.34 ಲಕ್ಷ ಕೋಟಿಯಷ್ಟಿದ್ದರೂ ನಂತರದ ಕುಸಿತದಲ್ಲಿ ಅಕ್ಟೊಬರ್ 26 ರಂದು ಪೇಟೆಯ ಬಂಡವಾಳ ಮೌಲ್ಯ ರು.133.31 ಲಕ್ಷ ಕೋಟಿಗೆ ಕುಸಿದಿತ್ತು. ಅಲ್ಲಿಂದ ರು.151.62 ಲಕ್ಷ ಕೋಟಿಗೆ ಪುಟಿದೆದ್ದಿರುವುದು ಪೇಟೆಯ ಚಲನೆಯ ವೇಗಕ್ಕೆ ಹಿಡಿದ ಕನ್ನಡಿಯಾಗಿದೆ.
ಮುಖ್ಯವಾಗಿ ಪೇಟೆಯ ಚಲನೆಯು ವಹಿವಾಟುದಾರರ, ವಿತ್ತೀಯ ಸಂಸ್ಥೆಗಳ, ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಜೊತೆಗೆ ಅಂತರ ರಾಷ್ಟ್ರೀಯ ಪೇಟೆಗಳ ಏರಿಳಿತಗಳು, ಬೆಳವಣಿಗೆಗಳು, ಸ್ವದೇಶಿ ನಿಯಂತ್ರಣ ಸಂಸ್ಥೆಗಳ ನಿರ್ಧಾರಗಳು, ಕಾರ್ಪೊರೇಟ್ ವಲಯದ ಬದಲಾವಣೆಗಳು ಹೆಚ್ಚು ಪ್ರಭಾವಿ ಆಗಿರುವುದರೊಂದಿಗೆ ಲೋಕಸಭಾ ಚುನಾವಣೆಗಳು ಸಹ ಸಮೀಪಿಸುತ್ತಿರುವುದರಿಂದ ಅಲ್ಪಕಾಲೀನ ಏರಿಳಿತಗಳು ಹತ್ತಾರು ಅವಕಾಶಗಳನ್ನು ಒದಗಿಸಿಕೊಡುತ್ತಿವೆ.
ಕಂಪನಿಗಳ ಸಾಧನೆಯ ಮಟ್ಟವನ್ನು ಅಳೆಯುವ ಮಾನದಂಡಗಳು ಆಂತರಿಕವಾಗಿರದೆ ಬಾಹ್ಯ ಬೆಳವಣಿಗೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಒಟ್ಟಿನಲ್ಲಿ ಈಗಿನ ಸಂದರ್ಭದಲ್ಲಿ ನಾಯಿಯ ನಿದ್ದೆಯಂತೆ ಹೆಚ್ಚಿನ ಎಚ್ಚರ, ಬಕ ಧ್ಯಾನದಂತೆ ಸದಾ ಲಾಭ ಗಳಿಕೆಯ ಗುರಿಯಿದ್ದಲ್ಲಿ ಸಂತೃಪ್ತ ಗಜ ಸ್ನಾನದ ತೃಪ್ತಿ ಲಭಿಸುತ್ತದೆ. ಸಂದರ್ಭವನ್ನು ಅರಿತು ಚಟುವಟಿಕೆ ಅತ್ಯಗತ್ಯ.


Click it and Unblock the Notifications