ಬೆಂಗಳೂರು, ಜುಲೈ 30: ನಿವೃತ್ತಿಗಾಗಿ ಕೆಲವರು ಯೋಜನೆ ರೂಪಿಸಿಕೊಂಡಿದ್ದರೆ ಇನ್ನು ಕೆಲವರು, ನಿವೃತ್ತಿ ಜೀವನದಲ್ಲಿ ಆರ್ಥಿಕ ಪರಿಸ್ಥಿತಿಯೂ ಕೆಟ್ಟದಾಗಿರಬಹುದು ಎಂದು ಯೋಚಿಸುವವರು ಇದ್ದಾರೆ. ನಮಗೆ ಬರುತ್ತಿದ್ದ ನಿಯಮಿತ ಆದಾಯದ ಕೊರತೆಯು ತಮ್ಮ ಭವಿಷ್ಯದ ಜೀವನದ ಮೇಲೆ ಪರಿಣಾಮ ಬೀರಬಹುದು ಎಂಬ ಭಯ ಅವರಿಗೆ ಮನದೊಳಗೆ ಕಾಡುತ್ತಿರುತ್ತದೆ.
ಆದರೆ ಇಂತಹ ಯೋಚನೆಗಳನ್ನು ಬಿಟ್ಟು ನೋಡುವುದಾದರೆ, ಭಾರತದ ಹಿರಿಯ ನಾಗರಿಕರಿಗಾಗಿಯೇ ಅನೇಕ ಆರ್ಥಿಕ ಪ್ರಯೋಜನಗಳು ಇವೆ. ಇವುಗಳು ನಿಜಕ್ಕೂ ನಿವೃತ್ತಿಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಕೆಲವು ಪ್ರಮುಖ ಆರ್ಥಿಕ ಪ್ರಯೋಜನಗಳ ಬಗ್ಗೆ ನೋಡೋಣ.

1) ಠೇವಣಿಗಳ ಮೇಲಿನ ಹೆಚ್ಚಿನ ಬಡ್ಡಿ ದರ
ಹಿರಿಯ ನಾಗರಿಕರಿಗೆ ಉಳಿತಾಯ ಮತ್ತು ಹೂಡಿಕೆ ವಿಚಾರಕ್ಕೆ ಬಂದ್ರೆ ಅವರು ಇತರರಿಗಿಂತ ಸ್ಥಿರ ಠೇವಣಿ, ಮರುಕಳಿಸುವ ಠೇವಣಿ ಮತ್ತು ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿದರಗಳಿಗೆ ಅರ್ಹರಾಗಿರುತ್ತಾರೆ. ಉದಾಹರಣೆಗೆ, ಹಿರಿಯ ನಾಗರಿಕ ಸ್ಥಿರ ಠೇವಣಿಗಳು ಸಾಮಾನ್ಯ ಸ್ಥಿರ ಠೇವಣಿಗಳಿಗಿಂತ 0.25 ಪ್ರತಿಶತದಿಂದ 0.75 ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ.
2) ಆದಾಯ ತೆರಿಗೆ ಪ್ರಯೋಜನಗಳು
ಹಿರಿಯ ನಾಗರಿಕರಿಗೆ ತೆರಿಗೆ ರಿಯಾಯಿತಿಗಳು ಮತ್ತು ಕಡಿಮೆ ತೆರಿಗೆ ದರಗಳಂತಹ ಹಲವಾರು ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. 60 ರಿಂದ 80 ವರ್ಷದೊಳಗಿನ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ಮತ್ತು 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂ. ಅಲ್ಲದೆ, ಹಿರಿಯ ನಾಗರಿಕರು ಆರೋಗ್ಯ ವಿಮೆ ಅಥವಾ ಅವರ ವೈದ್ಯಕೀಯ ವೆಚ್ಚಗಳ ಮೇಲೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80Dಅಡಿಯಲ್ಲಿ 50,000 ರೂ.ವರೆಗೆ ಕಡಿತವನ್ನು ಪಡೆಯಬಹುದು.
3) ಪಿಂಚಣಿ ಯೋಜನೆಗಳು
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಂತಹ ಅನೇಕ ನಿವೃತ್ತಿ ಯೋಜನೆಗಳಿವೆ. ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಿರಿಯ ನಾಗರಿಕರು ನಿವೃತ್ತಿಯ ನಂತರ ನಿಗದಿತ ಮಾಸಿಕ ಆದಾಯವನ್ನು ಪಡೆಯಬಹುದು. ಅಲ್ಲದೆ, ಈ ಯೋಜನೆಗಳು ಸುರಕ್ಷಿತ ಹೂಡಿಕೆಗಳನ್ನು ನೀಡುತ್ತವೆ.
4) ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಗಳು
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಮನೆ ಬಾಗಿಲಿಗೆ ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಬ್ಯಾಂಕ್‌ಗಳು ನಗದು ಅಥವಾ ಇತರ ಸೇವೆಗಳನ್ನು ಒದಗಿಸಬೇಕಾಗುತ್ತದೆ. 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ KYC, ಅಥವಾ ಪ್ರಮುಖ ಬ್ಯಾಂಕಿಂಗ್ ವಹಿವಾಟು ಸೇವೆಗಳನ್ನು ವಿಶೇಷ ನಿಯಮಗಳ ಅಡಿಯಲ್ಲಿ ಡೋರ್ ಸ್ಟೆಪ್‌ನಲ್ಲಿ ನೀಡುತ್ತವೆ. ಸೇವೆಗಳಿಗಾಗಿ ಸಹಾಯವಾಣಿಯನ್ನು ಸಂಪರ್ಕಿಸಿದರೆ ನಿಮ್ಮ ಅಗತ್ಯತೆಗಳು ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಅನುಕೂಲಕರವಾದ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಬ್ಯಾಂಕ್ ಗಳು ನೀಡುತ್ತವೆ.
5) ಆರೋಗ್ಯ ವಿಮೆ
ವಯೋವೃದ್ದರಾದಂತೆ ವೈದ್ಯಕೀಯ ನೆರವು ಬೇಕಾಗಿರುತ್ತದೆ. ಹಿರಿಯ ನಾಗರಿಕರ ಅಗತ್ಯತೆಗಳನ್ನು ಪರಿಹರಿಸಲು ವಿವಿಧ ಆರೋಗ್ಯ ವಿಮಾ ಯೋಜನೆಗಳು ವೈದ್ಯಕೀಯ ಬಿಕ್ಕಟ್ಟಿನ ಸಮಯದಲ್ಲಿ ಹಣಕಾಸಿನ ನೆರವು ನೀಡುತ್ತವೆ.
6) ಸಾರ್ವಜನಿಕ ಸಾರಿಗೆ
ಅನೇಕ ರಾಜ್ಯ ಸಾರಿಗೆ ಇಲಾಖೆಗಳು ಬಸ್ ಅಥವಾ ರೈಲು ಸೇವೆಗಳನ್ನು ಬಳಸುವ ಹಿರಿಯ ನಾಗರಿಕರಿಗೆ ದರದಲ್ಲಿ 50 ಪ್ರತಿಶತದವರೆಗೆ ರಿಯಾಯಿತಿಯನ್ನು ನೀಡುತ್ತವೆ. ಇದು ಅವರ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7) ಆಸ್ತಿ ತೆರಿಗೆಯಿಂದ ವಿನಾಯಿತಿ
ಭಾರತದಲ್ಲಿನ ಅನೇಕ ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗೆ ಆಸ್ತಿ ತೆರಿಗೆಯ ಮೇಲೆ ರಿಯಾಯಿತಿಗಳನ್ನು ನೀಡುತ್ತವೆ. ಇದು ವಯಸ್ಸಾದ ಆಸ್ತಿ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ತಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
8) ಆಸ್ತಿಯ ಉಡುಗೊರೆಯ ಮೇಲೆ ಮುದ್ರಾಂಕ ಶುಲ್ಕ ವಿನಾಯಿತಿ
ಕೆಲವು ರಾಜ್ಯಗಳು ಹಿರಿಯ ನಾಗರಿಕರು ತಮ್ಮ ಮನೆ ಅಥವಾ ಕೃಷಿ ಭೂಮಿಯನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಿದಾಗ ಅವರಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡುತ್ತವೆ.


Click it and Unblock the Notifications