ನವದೆಹಲಿ, ಜುಲೈ 22: ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಆಗಿದೆ. ಬಿಲ್ ತುಂಬಬೇಕು. ಆದರೆ ಸಂಪೂರ್ಣ ಮೊತ್ತ ಪಾವತಿ ಮಾಡಲು ನನ್ನ ಬಳಿ ಸಾಕಷ್ಟು ದುಡ್ಡಿಲ್ಲವಲ್ಲ. ಅಯ್ಯೋ ಮಿನಿಮಮ್ ಡ್ಯೂ ಆಯ್ಕೆ ಇದೆಯಲ್ಲ. ಮಿನಿಮಮ್ ಡ್ಯೂ ತುಂಬಿದರೆ ಆಯಿತು ಎಂದು ಅಂದುಕೊಂಡಿದ್ದರೆ ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದೇ ಅರ್ಥ. ಕನಿಷ್ಠ ಬಾಕಿ ಮೊತ್ತ ಪಾವತಿ ಮಾಡಿಕೊಂಡು ಬಂದರೆ ನೀವು ಹೆಚ್ಚಿನ ಮೊತ್ತ ಬಡ್ಡಿ ಹೆಸರಿನಲ್ಲಿ ತೆರುತ್ತೀರಿ.
ಕೇವಲ ಕನಿಷ್ಠ ಬಾಕಿ ಮೊತ್ತ ಪಾವತಿ ಮಾಡಿದರೆ ಹೊಸ ಬಿಲ್ ನಲ್ಲಿ ಬಡ್ಡಿ ಸೇರುತ್ತಾ ಹೋಗುತ್ತದೆ. ಒಂದು ಲಕ್ಷ ರೂಪಾಯಿವರೆಗಿನ ಮೌಲ್ಯದ ವಸ್ತು ಖರೀದಿಸಿದ ಮೇಲೆ ನೀವು ಕನಿಷ್ಠ ಬಾಕಿ ಮೊತ್ತ ಪಾವತಿ ಮಾಡುತ್ತೀರಾ! ಆದರೆ ಬಾಕಿ ಮೊತ್ತ ಎಷ್ಟು ಉಳಿಯುತ್ತದೆಯೋ ಅದರ ಮೇಲೆ 35 ದಿನಗಳಿಗೆ ಬಡ್ಡಿ ಹಾಕಲಾಗುತ್ತದೆ. ಮುಂದಿನ ಬಿಲ್ ನಲ್ಲಿ ನೀವು ಪಾವತಿ ಮಾಡಿರೋ ಕನಿಷ್ಠ ಮೊತ್ತ ಕಡಿಮೆ ಆಗಿರುತ್ತದೆ. ನೀವೇನಾದರೂ ಬೇರೆ ಖರೀದಿ ಮಾಡಿದರೆ ಅದು ಸಹ ಬಿಲ್ ನಲ್ಲಿ ಸೇರಿರುತ್ತದೆ.

ನೀವು ಈ ಹೊಸ ವಸ್ತುಗಳನ್ನ ಖರೀದಿಸಿದ ದಿನದಿಂದ, ಎಷ್ಟು ದಿನ ಎನ್ನುವ ಆಧಾರದ ಮೇಲೆ ಬಡ್ಡಿ ಸೇರುತ್ತಾ ಹೋಗುತ್ತದೆ. ಈಗ, ಈ ಬಾಕಿ ಮೊತ್ತ ಆಧರಿಸಿ ಕನಿಷ್ಠ ಬಾಕಿ ಅಥವಾ ಮಿನಿಮಮ್ ಡ್ಯೂ ಮೊತ್ತ ನಿರ್ಧರಿಸಲಾಗತ್ತದೆ. ಮಿನಿಮಮ್ ಡ್ಯೂ ಮಾತ್ರ ಪಾವತಿಸುವುದಾದರೆ ಕ್ರೆಡಿಟ್ ಕಾರ್ಡ್ ಬಳಸೋವಾಗ ಎಚ್ಚರಿಕೆಯಿಂದ ಇರಿ.
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಆದಾಗ, ಪಾವತಿಗೆ ನಿಮಗೆ ಎರಡು ಆಯ್ಕೆಗಳಿರುತ್ತವೆ. ಒಂದು ಒಟ್ಟು ಬಾಕಿ ಮೊತ್ತವನ್ನ ಪಾವತಿಸುವುದು. ಇನ್ನೊಂದು ಕನಿಷ್ಠ ಬಾಕಿ ಮೊತ್ತ ಅಥವಾ ಮಿನಿಮಮ್ ಅಮೌಂಟ್ ಡ್ಯೂ ಪಾವತಿಸೋದು. ಒಟ್ಟು ಬಾಕಿ ಮೊತ್ತದ ಶೇಕಡ 5 ರಷ್ಟು ಮಿನಿಮಮ್ ಡ್ಯೂ ಇರುತ್ತದೆ. ಜನರು ತಮ್ಮ ಬಳಿ ಹಣ ಇಲ್ಲದೆ ಇದ್ದಾಗ ಕನಿಷ್ಠ ಬಾಕಿ ಮೊತ್ತ ಮಾತ್ರ ಪಾವತಿ ಮಾಡುತ್ತಾರೆ. ಆದರೆ ಅದರ ಲಾಭ ಸೀಮಿತವಾಗಿರುತ್ತದೆ. ಭಾರಿ ವೆಚ್ಚ ತಗಲುತ್ತದೆ.
ಆದರೆ ಮಿನಿಮಮ್ ಡ್ಯೂ ಅಮೌಂಟ್ ಪಾವತಿ ಮಾಡುವುದರಿಂದ ಲಾಭವೂ ಇದೆ. ಮಿನಿಮಮ್ ಡ್ಯೂ ಪಾವತಿಯಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಆ್ಯಕ್ಟೀವ್ ಆಗಿರುತ್ತದೆ. ಅಂದರೆ ನೀವು ಕ್ರೆಡಿಟ್ ಕಾರ್ಡ್ ಬಳಸುವುದನ್ನು ಮುಂದುವರಿಸಬಹುದು, ಹಾಗೇ ನಿಮ್ಮ ಬಾಕಿ ಕ್ರೆಡಿಟ್ ಲಿಮಿಟ್ ಬಳಸಿಕೊಳ್ಳಬಹುದು. ಎರಡನೇ ಲಾಭ ಎಂದರೆ ನೀವು ಪಾವತಿ ತಪ್ಪಿಸದೇ ಇರುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸುರಕ್ಷಿತವಾಗಿರುತ್ತದೆ. ಇನ್ನೊಂದು ಅನುಕೂಲ ಏನೆಂದರೆ ನೀವು ವಿಳಂಬ ಶುಲ್ಕ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.
ಆದರೆ ಹೆಚ್ಚಿನ ಬಡ್ಡಿ ದರ ಪಾವತಿಸಬೇಕಾಗುತ್ತದೆ. ಅಲ್ಲದೆ ಬಾಕಿ ಮೊತ್ತದಲ್ಲಿ ಅಷ್ಟೇನೂ ಕಡಿತ ವಾಗಲ್ಲ. ಬಾಕಿ ಮೊತ್ತ ಹೆಚ್ಚಾಗಿದ್ದರೆ ನಿಮ್ಮ ಕ್ರೆಡಿಟ್ ಲಿಮಿಟ್ ಕಡಿಮೆ ಆಗುತ್ತದೆ. ಅಂದರೆ ದೊಡ್ಡ ಮೊತ್ತದ ಖರೀದಿಗಳನ್ನು ಮಾಡಲು ಸಾಧ್ಯ ಆಗುವುದಿಲ್ಲ. ಅಂದ್ರೆ ಕ್ರೆಡಿಟ್ ಕಾರ್ಡ್ ನ ನೈಜ ಲಾಭ ಪಡೆಯಲು ಸಾಧ್ಯ ಆಗುವುದಿಲ್ಲ. ಬೇರೆ ಬೇರೆ ಕ್ರೆಡಿಟ್ ಕಾರ್ಡ್ ಗಳು ಬೇರೆಬೇರೆ ಬಡ್ಡಿ ದರ ವಿಧಿಸುತ್ತವೆ ಎನ್ನುವುದು ನೆನಪಿನಲ್ಲಿರಲಿ. ನಿಮ್ಮ ಬ್ಯಾಂಕ್ ಇಂಥ ಮಿನಿಮಮ್ ಡ್ಯೂ ಪಾವತಿ ಮಾಡುವ ಸಂದರ್ಭದಲ್ಲಿ ಯಾವ ಪ್ರಮಾಣದ ಬಡ್ಡಿ ವಿಧಿಸುತ್ತದೆ ಎನ್ನುವುದನ್ನು ತಿಳಿದುಕೊಂಡಿರಬೇಕು.


Click it and Unblock the Notifications