ಕೂತು ತಿಂದವನಿಗೆ ಕುಡಿಕೆ ಹೊಣ್ಣು ಇದ್ದರೂ ಸಾಲದ ಎಂಬ ಗಾದೆ ಮಾತಿದೆ. ಅಂದರೆ ಪರಿಶ್ರಮ ಪಡದ ವ್ಯಕ್ತಿಯೊಬ್ಬ ಹಿರಿಯರು ಸಂಪಾದಿಸಿದ ಆಸ್ತಿಯನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳಬಲ್ಲ ಎಂಬುದು ಇದರ ಸಂಕ್ಷಿಪ್ತ ರೂಪ. ಇನ್ನು ಹಿರಿಯರ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಪರಿಶ್ರಮ ಪಡದೆ ಕೂತು ತಿಂದುಕೊಂಡು ಬದುಕಿದರೆ ಆತನ ಬಳಿ ಎಷ್ಟೇ ಸಂಪತ್ತು ಇದ್ದರೂ ಅದು ಸಾಕಾಗಲ್ಲ ಎಂಬ ಮಾತಿದೆ. ಆದರೆ ಸದ್ಯ ಕಾಲ ಬದಲಾಗಿದ್ದು, ಹಿರಿಯರು ಸಂಪಾದಿಸಿದ ಆಸ್ತಿಯನ್ನು ಮಕ್ಕಳು ಉಳಿಸುವುದಲ್ಲದೆ ಮತ್ತಷ್ಟು ಬೆಳೆಯಲು ಪರಿಶ್ರಮ ಹಾಕುತ್ತಿರುವ ಸಂಗತಿ ಕೂಡ ಹೆಚ್ಚುತ್ತಿದೆ.
ಇದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಗುತ್ತಿದೆ. ಸದ್ಯ ನಾವು ಹೇಳಹೊರಟಿರುವವರ ಸಂಗತಿ ಎಂದರೆ ಅಕ್ಷಲಿ ಶಾ ಬಗ್ಗೆ. ಭಾರತದ ಮಟ್ಟಿಗೆ ಹೇಳುವುದಾದರೆ ಅನೇಕ ಯುವ ವಾಣಿಜ್ಯೋದ್ಯಮಿಗಳು ತಮ್ಮ ಕೌಟುಂಬಿಕ ವ್ಯವಹಾರಗಳಲ್ಲಿ ನಾಯಕತ್ವ ವಹಿಸಿಕೊಳ್ಳುತ್ತಿದ್ದು, ಹಿರಿಯ ಪರಂಪರೆಯನ್ನು ಉಳಿಸುವತ್ತ ಹೆಜ್ಜೆ ಹಾಕುತ್ತಿರುವುದು ಉತ್ತಮ ಸಂಗತಿಯೇ ಸರಿ.

ಇನ್ನು ಅಕ್ಷಲಿ ಶಾ ಅವರ ತಂದೆ ದೇವೇಂದ್ರ ಶಾ ಅವರು ಕಠಿಣ ಪರಿಶ್ರಮ ಪಟ್ಟು ಸ್ಥಾಪಿಸಿದ ಪರಾಗ್ ಮಿಲ್ಕ್ ಫುಡ್ಸ್ ಲಿಮಿಟೆಡ್ ಕಂಪೆನಿಯ ಉನ್ನತಿಗೆ ಮಗಳು ಕೂಡ ಪರಿಶ್ರಮ ಪಡುತ್ತಿದ್ದು, ಜವಾಬ್ದಾರಿಯನ್ನು ಕೂಡ ತೆಗೆದುಕೊಂಡಿದ್ದಾಳೆ. ಸದ್ಯ ಕಂಪೆನಿಯಲ್ಲಿ ಅಕ್ಷಲಿ ಅವರು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಮುನ್ನಡೆಯುತ್ತಿದ್ದಾಳೆ. ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಪರಿಣತಿ ಹೊಂದಿರುವ ಕಂಪೆನಿಯು ಸದ್ಯ 2556 ಕೋಟಿ ರೂ. ಮೌಲ್ಯವನ್ನು ಹೊಂದಿದ್ದು, ಅಕ್ಷಲಿ ಗಣನೀಯ ಕೊಡುಗೆ ನೀಡುತ್ತಿದ್ದಾಳೆ.
ಎರಡನೇ ತಲೆಮಾರಿನ ಅಕ್ಷಲಿ
ತಂದೆಯಿಂದ ಮಗಳು ಜವಾಬ್ದಾರಿ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಯಮ ಸದ್ಯದ ಮಟ್ಟಿಗೆ ಎರಡನೇ ತಲೆಮಾರಿನಲ್ಲಿ ನಡೆಯುತ್ತಿದೆ. ಇನ್ನು ಅಕ್ಷಲಿ ಅವರು ಡೈರಿ ಉದ್ಯಮದಲ್ಲಿ ಈ ಮುನ್ನವೇ ಸೇರ್ಪಡೆಯಾಗಿದ್ದು, 14 ವರ್ಷಗಳ ಪರಿಣತಿಯನ್ನು ಹೊಂದಿದ್ದಾಳೆ. ಈಗಾಗಲೇ ಅಕ್ಷಲಿ ಪರಾಗ್ ಮಿಲ್ಕ್ ಫುಡ್ಸ್‌ನಲ್ಲಿ ಒಂದು ದಶಕದ ಕಾರ್ಯತಂತ್ರದ ನಾಯಕತ್ವವನ್ನು ಕೂಡ ವಹಿಸಿಕೊಂಡಿದ್ದಾಳೆ. ಅಂದರೆ ಕಂಪೆನಿಯಲ್ಲಿ 2010 ರಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಅಕ್ಷಲಿ, ಬಳಿಕ ಕ್ರಮೇಣ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದಲ್ಲಿ ಹಿರಿಯ ಉಪಾಧ್ಯಕ್ಷೆ ಸ್ಥಾನ ಸೇರಿದಂತೆ ಕಂಪೆನಿಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದಳು. ಸದ್ಯ ಎಕ್ಸಿಕ್ಯೂಟಿವ್ ಡೈರೆಕ್ಟನ್ ಹುದ್ದೆಯನ್ನು ನಿರ್ವಹಿಸುತ್ತಿದ್ದು, ಕಂಪೆನಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾಳೆ.
ವಿದ್ಯಾಭ್ಯಾಸ
ಈಗ 33 ವರ್ಷ ವಯಸ್ಸಿನ ಅಕ್ಷಲಿ ಅವರು ಎಸ್‌ಪಿ ಜೈನ್ ವಿಶ್ವವಿದ್ಯಾಲಯದಿಂದ ಫ್ಯಾಮಿಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾಳೆ. ಅಲ್ಲದೆ ಮಾರಾಟ, ಮಾರುಕಟ್ಟೆ, ಹಣಕಾಸು ಮತ್ತು ಕಾರ್ಯತಂತ್ರದ ಯೋಜನೆಗಳಲ್ಲಿ ವ್ಯಾಪಕ ಅನುಭವವನ್ನು ಕೂಡ ಗಳಿಸಿದ್ದಾಳೆ.
ಪರಾಗ್ ಮಿಲ್ಕ್ ಫುಡ್ಸ್ ಕಂಪೆನಿ ಬಗ್ಗೆ...
ಇನ್ನು ಪರಾಗ್ ಮಿಲ್ಕ್ ಫುಡ್ಸ್ ಬಗ್ಗೆ ಹೇಳುವುದಾದರೆ ಕಂಪೆನಿ 1992 ರಲ್ಲಿ ಸ್ಥಾಪನೆಯಾಗಿದ್ದು, ಒಂದು ಸಾಧಾರಣ ಡೈರಿ ಉದ್ಯಮದಿಂದ ದೇವೇಂದ್ರ ಶಾ ಸಂಸ್ಥೆ ಆರಂಭಿಸಿದ್ದರು. ಆದರೆ ದೇವೇಂದ್ರ ಶಾ ಅವರ ನಾಯಕತ್ವ, ಅದರಲ್ಲೂ ಎಲ್ಲಕ್ಕಿಂತ ಮುಖ್ಯವಾಗಿ ಅವರ ಕಠಿಣ ಪರಿಶ್ರಮದಿಂದ ಹೆಸರಾಂತ ಬ್ರಾಂಡ್ ಆಗಿ ಬೆಳೆದಿದೆ. ಗೋವರ್ಧನ್, ಗೋ, ಪ್ರೈಡ್ ಆಫ್ ಕೌಸ್ ಮತ್ತು ಟಾಪ್ ಅಪ್ ಮುಂತಾದ ಸಹ ಸಂಸ್ಥೆಗಳು ಕೂಡ ಕಂಪೆನಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಹೆಚ್ಚಿನ ಮೌಲ್ಯದ ವಿಭಾಗಗಳ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಅಕ್ಷಲಿ ಪ್ರಮುಖ ಪಾತ್ರ ಕೂಡ ಮುಖ್ಯ ಪಾತ್ರ ವಹಿಸಿದೆ. "ಫಾರ್ಮ್ ಟು ಹೋಮ್" ಪ್ರೈಡ್ ಆಫ್ ಹಸುಗಳ ವ್ಯವಹಾರ, ಕ್ರೀಡಾ ಪೋಷಣೆ ವಿಭಾಗದ ಅಡಿಯಲ್ಲಿ ಅವತಾರ್ ಹಾಲೊಡಕು ಪ್ರೋಟೀನ್ ಬಿಡುಗಡೆ ಮತ್ತು ಪಾನೀಯಗಳ ವಿಸ್ತರಣೆಯಂತಹ ಪ್ರಮುಖ ಯೋಜನೆಗಳನ್ನು ಮುನ್ನಡೆಸುವಲ್ಲಿ ಅಕ್ಷಲಿ ಮುಖ್ಯ ಪಾತ್ರ ವಹಿಸಿದ್ದಾರೆ.
ಯುವಜನತೆಗೆ ರೋಲ್ ಮಾಡೆಲ್
ಹಿರಿಯರು ಸಂಪಾದಿಸಿದ ಆಸ್ತಿ ಅಥವಾ ಹಣವನ್ನು ಬೇಕಾಬಿಟ್ಟಿ ರೀತಿಯಲ್ಲಿ ಖರ್ಚು ಮಾಡುತ್ತಾ ಕಾಲಹರಣ ಮಾಡುವ ಕೆಲವೊಂದು ಯುವ ಜನತೆಗೆ ನಡುವೆ ಅಕ್ಷಲಿ ಅವರು ಭಿನ್ನವಾಗಿ ಕಾಣುತ್ತಾರೆ. ತಂದೆಯ ಮಹತ್ವಾಕಾಂಕ್ಷೆಯ ಕಂಪೆನಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡು ಹೋಗಲು ಅಕ್ಷಲಿ ಹತ್ತು ಹಲವು ಯೋಜನೆಗಳನ್ನು ಕೂಡ ರೂಪಿಸಿದ್ದು, ಎಲ್ಲಾ ಯುವ ಜನತೆಗೆ ಮಾದರಿಯಾಗಿದ್ದಾರೆ.


Click it and Unblock the Notifications