ನವದೆಹಲಿ, ಡಿಸೆಂಬರ್ 26: ಕೃತಕ ಬುದ್ಧಿಮತ್ತೆ ಆವಿಷ್ಕಾರದ ಪರಿಣಾಮ ಮಾನವ ಸಂಪನ್ಮೂಲದ ಬೇಡಿಕೆ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಸರ್ಚ್ ಎಂಜಿನ್ ಕಂಪೆನಿಗೆ ಗೂಗಲ್ ತನ್ನ ಜಾಹೀರಾತು ಮಾರಾಟ ವಿಭಾಗದ ಮರುಸಂಘಟನೆ ಹೆಸರಿನಲ್ಲಿ ತನ್ನ 30,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಗೂಗಲ್ ಈ ವರ್ಷದ ಆರಂಭದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತವಾಗಿದೆ. ದಿ ಇನ್ಫರ್ಮೇಷನ್‌ನ ವರದಿಯ ಪ್ರಕಾರ, ಜಾಹೀರಾತು ಮಾರಾಟ ವಿಭಾಗದಲ್ಲಿನ ಹಲವು ಉದ್ಯೋಗಗಳನ್ನು ಕೈಬಿಡಲಾಗುತ್ತಿದೆ. ಏಕೆಂದರೆ ಗೂಗಲ್ ಹೊಸ ಎಐ ಆಧಾರಿತ ಟೂಲ್‌ಗಳನ್ನು ಪರಿಚಯಿಸಿದೆ. ಅದು ಗ್ರಾಹಕರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಉದ್ಯೋಗಿಗಳ ಅಗತ್ಯವನ್ನು ಕಡಿಮೆ ಮಾಡಿ ಹೊಸ ಜಾಹೀರಾತುಗಳನ್ನು ಸ್ವಯಂಚಾಲಿತವಾಗಿ ಸೂಚಿಸಬಹುದು ಮತ್ತು ರಚಿಸಬಹುದು ಎಂದು ತಿಳಿಸಿದೆ.

ಗೂಗಲ್ ತನ್ನ ಎಐ ಚಾಲಿತ ಪ್ರಚಾರ ಯೋಜಕ, ಪರ್ಫಾರ್ಮೆನ್ಸ್ ಮ್ಯಾಕ್ಸ್ ಅನ್ನು 2021 ರಲ್ಲಿ ಪ್ರಾರಂಭಿಸಿತು. ಆದರೆ ಕಂಪನಿಯು ಈ ವರ್ಷದ ಆರಂಭದಲ್ಲಿ ಗೂಗಲ್ ಐ/ಒ ಈವೆಂಟ್‌ನಲ್ಲಿ ಜಾಹೀರಾತು ಪರಿಕರಕ್ಕೆ ಕೃತಕ ಬುದ್ಧಿಮತ್ತೆ ಆಧಾರಿತ ಟೂಲ್‌ಗಳನ್ನು ಸೇರಿಸಲು ನಿರ್ಧರಿಸಿತು, ಇದರಿಂದಾಗಿ ಕೆಲಸ ಸುಲಭವಾಗಿದೆ.
ಹೆಚ್ಚಿನ ಸಂಖ್ಯೆಯ ಜಾಹೀರಾತುದಾರರು ಈಗ ಪರ್ಫಾರ್ಮೆನ್ಸ್ ಮ್ಯಾಕ್ಸ್ ಅನ್ನು ಅಳವಡಿಸಿಕೊಂಡಿದ್ದಾರೆ. ಇದು ಯೂಟ್ಯೂಬ್, ಸರ್ಚ್, ಪಬ್ಲಿಷ್, ಡಿಸ್ಕವರ್, ಜಿಮೇಲ್ ಮತ್ತು ಮ್ಯಾಪ್‌ಗಳಂತಹ ನಿರ್ದಿಷ್ಟ ಗೂಗಲ್ ಸೇವೆಗಾಗಿ ಜಾಹೀರಾತುಗಳನ್ನು ಮಾರಾಟ ಮಾಡುವಲ್ಲಿ ಪರಿಣತಿ ಹೊಂದಿರುವ ಉದ್ಯೋಗಿಗಳ ಅಗತ್ಯವನ್ನು ತೆಗೆದುಹಾಕಿದೆ.
ಜಾಹೀರಾತು ಮಾರಾಟ ವಿಭಾಗದ ಪುನರ್‌ರಚನೆಯ ಸುದ್ದಿಯನ್ನು ಅಮೆರಿಕದ ಗೂಗಲ್‌ನ ಅಧ್ಯಕ್ಷರು ಮತ್ತು ಗ್ಲೋಬಲ್ ಪಾರ್ಟ್‌ನರ್ಸ್, ಸೀನ್ ಡೌನಿ, ಕಳೆದ ವಾರದ ಸಭೆಯಲ್ಲಿ ಆಂತರಿಕವಾಗಿ ಘೋಷಿಸಿದ್ದರು. ಆದರೆ ಮರುಸಂಘಟನೆಯು ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆಯೇ ಎಂದು ಕಾರ್ಯನಿರ್ವಾಹಕರು ಹೇಳಲಿಲ್ಲ ಎಂದು ದಿ ಇನ್ಫರ್ಮೇಷನ್ ವರದಿ ಮಾಡಿದೆ.
12,000 ಜನರನ್ನು ತೆಗೆದ ಸುಂದರ್ ಪಿಚೈ:
ಸಭೆಯಲ್ಲಿ ಉದ್ಯೋಗಿಯೊಬ್ಬರು ಸುಂದರ್ ಪಿಚೈ ಅವರನ್ನು, "ನಮ್ಮ ಉದ್ಯೋಗಿಗಳನ್ನು ಕಡಿಮೆ ಮಾಡಲು ನಾವು ಕಠಿಣ ನಿರ್ಧಾರವನ್ನು ತೆಗೆದುಕೊಂಡು ಸುಮಾರು 1 ವರ್ಷವಾಗಿದೆ. ಈ ನಿರ್ಧಾರವು ನಮ್ಮ ಬೆಳವಣಿಗೆ, ಪಿ&ಎಲ್ ಮತ್ತು ನೈತಿಕತೆಯ ಮೇಲೆ ಯಾವ ಪರಿಣಾಮ ಬೀರಿತು?" ಎಂದು ಪ್ರಶ್ನಿಸಿದರು.
ಇದಕ್ಕೆ ಗೂಗಲ್ ಸಿಇಒ ಪ್ರತಿಕ್ರಿಯಿಸಿ, ಉದ್ಯೋಗಿಗಳ ನೈತಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಇದು ಕಂಪನಿಗೆ ಅತ್ಯಂತ ಕಷ್ಟಕರವಾದ ನಿರ್ಧಾರಗಳಲ್ಲಿ ಒಂದಾಗಿದೆ. ಗೂಗಲ್‌ನಲ್ಲಿ ನಾವು 25 ವರ್ಷಗಳಲ್ಲಿ ಈ ನಿರ್ಧಾರ ಮಾಡಿರಲಿಲ್ಲ. ಇದು ಕಷ್ಟ, ಆದರೆ ಅಗತ್ಯ. ಕಳೆದ ವರ್ಷ ಕಂಪನಿಯು ಆ ಉದ್ಯೋಗಗಳನ್ನು ಕಡಿತಗೊಳಿಸದಿದ್ದರೆ ಬೇರೆ ದಾರಿ ಇಲ್ಲ ಎಂದರು.


Click it and Unblock the Notifications