ನವದೆಹಲಿ, ಜೂನ್ 9: ಮನೆ ಖರೀದಿ ಕನಸು ನನಸು ಮಾಡಿಕೊಳ್ಳುವ ಸಂದರ್ಭ ಬಂದಾಗ ಮನೆ ಯಾರ ಹೆಸರಿನಲ್ಲಿ ಖರೀದ ಮಾಡಬೇಕು ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಮಹಿಳೆಯರ ಹೆಸರಿನಲ್ಲಿ ಮನೆ ಖರೀದಿ ಮಾಡಿದರೆ ನೀವು ಸಾಕಷ್ಟು ಹೆಚ್ಚುವರಿ ಲಾಭಗಳನ್ನು ಪಡೆದುಕೊಳ್ಳಬಹುದು.
ರಿಯಲ್ ಎಸ್ಟೇಟ್ ವಲಯದಲ್ಲಿ ಮಹಿಳೆಯರಿಂದ ಹೂಡಿಕೆ ಉತ್ತೇಜನಕ್ಕೆ ಅನೇಕ ಬ್ಯಾಂಕ್ ಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಆಫರ್ ಮಾಡುತ್ತಿವೆ. ಸಾಮಾನ್ಯವಾಗಿ ಮಹಿಳೆಯರಿಗೆ 5 ರಿಂದ 10 ಮೂಲಾಂಶದಷ್ಟು ರಿಯಾಯಿತಿ ಸಿಗುತ್ತದೆ. ಅಂದರೆ ಪುರುಷರಿಗೆ ಹೋಲಿಸಿದರೆ ಶೇಕಡ 0.05 ರಿಂದ 0.10 ಯಷ್ಟು ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ ಸಾಲ ಸಿಗುತ್ತದೆ. ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಹಾಗೇ ಕ್ರೆಡಿಟ್ ಸ್ಕೋರ್ ಕೂಡ ಆಧಾರಿತವಾಗಿರುತ್ತದೆ. ಅತ್ಯಲ್ಪ ಬಡ್ಡಿ ದರ ಎಂದು ಕಂಡರೂ ದೀರ್ಘಾವಧಿಯಲ್ಲಿ ಗಣನೀಯ ಮೊತ್ತ ಉಳಿತಾಯ ಸಾಧ್ಯವಾಗುತ್ತದೆ.

ಭಾರತೀಯ ಸ್ಟೇಟ್ ಬ್ಯಾಂಕ್ - ಎಸ್ ಬಿ ಐ ನಲ್ಲಿ ಸಾಲ ತೆಗೆದುಕೊಂಡರೆ, ಆರಂಭಿಕ ಬಡ್ಡಿ ದರ ಪುರುಷರಿಗೆ ಶೇಕಡ 9.15 ರಷ್ಟಿರಲಿದೆ. ಆದರೆ ಎಸ್ ಬಿ ಐ, ಮಹಿಳೆಯರಿಗೆ ಶೇಕಡ 0.05 ರಷ್ಟು ಬಡ್ಡಿ ಕಡಿಮೆ ಮಾಡುತ್ತದೆ. ಹೀಗಾಗಿ, ಮಹಿಳೆಯರಿಗೆ ನೀಡುವ ಸಾಲದ ಮೇಲಿನ ಬಡ್ಡಿಯ ಆರಂಭಿಕ ದರ ಶೇಕಡ 9.10 ರಷ್ಟಿರಲಿದೆ. ಅದೇ ರೀತಿ, ಸೆಂಟ್ರಲ್ ಬ್ಯಾಂಕ್ ನ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಬಡ್ಡಿ ದರ ಶೇಕಡ 8.35 ರಿಂದ 9.25 ರಷ್ಟಿದ್ದು, ಇತರರಿಗೆ ಶೇಕಡ 8.5 ರಿಂದ 9.5 ರಷ್ಟಿದೆ. ದೀರ್ಘಾವಧಿಯಲ್ಲಿ ಲಕ್ಷಗಟ್ಟಲೇ ಹಣ ಉಳಿಯುತ್ತದೆ.
ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದರೆ ಏನಾದರೂ ರಿಯಾಯಿತಿ ಸಿಗುತ್ತದೆಯಾ? ಎಂಬುದನ್ನು ಸಹ ತಿಳಿದುಕೊಳ್ಳಬೇಕು. ಕೋ-ಬಾರೋವರ್ ಅಂದರೆ ಜಂಟಿಯಾಗಿ ಸಾಲ ಪಡೆದವರ ಪೈಕಿ ಅಥವಾ ಸಾಲದ ಸಹ ಅರ್ಜಿದಾರರಾಗಿ ಒಬ್ಬರು ಮಹಿಳೆ ಇದ್ದರೆ ಆಗ ಕೂಡ ಕೆಲವು ಬ್ಯಾಂಕ್ ಗಳು ರಿಯಾಯಿತಿ ಕೊಡುತ್ತವೆ.
ಅನೇಕ ರಾಜ್ಯ ಸರ್ಕಾರಗಳು ಮಹಿಳೆಯರು ಮನೆ ಖರೀದಿಸಿದರೆ ಸ್ಟ್ಯಾಂಪ್ ಡ್ಯೂಟಿ ಮೊತ್ತದಲ್ಲಿ ಕನ್ಸಿಷನ್ ಕೊಟ್ಟಿದೆ. ಆಸ್ತಿಯ ಜಂಟಿ ಮಾಲೀಕರಾದರೂ ಈ ರಿಯಾಯಿತಿ ಸಿಗುತ್ತದೆ. ಉದಾಹರಣೆಗೆ, ದೆಹಲಿಯಲ್ಲಿ, ಮಹಿಳೆಯರು ಮನೆ ಖರೀದಿಸಿದರೆ ಆಸ್ತಿ ಮೌಲ್ಯದ ಶೇಕಡ 4 ರಷ್ಟು ಸ್ಟ್ಯಾಂಪ್ ಡ್ಯೂಟಿ, ಪುರುಷರಿಗಾದರೆ ಶೇಕಡ 6 ರಷ್ಟು ಸ್ಟ್ಯಾಂಪ್ ಡ್ಯೂಟಿ ಇದೆ.. ಅದೇ ರೀತಿ ಹರಿಯಾಣದಲ್ಲಿ ಪುರುಷರಿಗೆ ಆಸ್ತಿ ಮೌಲ್ಯದ ಶೇಕಡ 7 ರಷ್ಟು ಸ್ಟ್ಯಾಂಪ್ ಡ್ಯೂಟಿ ಆದರೆ ಮಹಿಳೆಯರಿಗೆ ಶೇಕಡ 5 ರಷ್ಟಿದೆ.
ಹೆಣ್ಣು ಮಕ್ಕಳ ಮನೆ ಒಡೆತನ ಉತ್ತೇಜಿಸಲು ಭಾರತ ಸರ್ಕಾರ ಅನೇಕ ಯೋಜನೆಗಳನ್ನ ಘೋಷಿಸಿದೆ. ಮಹಿಳೆಯರಿಗೆ ಬಡ್ಡಿ ಸಬ್ಸಿಡಿ ಸಿಗುತ್ತದೆ. ಈ ಪೈಕಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕೂಡ ಒಂದು. ಮಹಿಳೆಯರ ಹೆಸರಿನಲ್ಲಿ ಸಾಲ ಮಾಡಿ ಮನೆ ಖರೀದಿ ಮಾಡಿದದರೆ ಸುಮಾರು ಆರು ಲಕ್ಷ ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ.


Click it and Unblock the Notifications