ಬೆಂಗಳೂರು, ಜೂನ್ 26: ಉಳಿತಾಯ ಖಾತೆ ತೆರೆಯಲು ಈಗ ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕು ಎನ್ನುವ ಪ್ರಮೇಯ ಇಲ್ಲ. ಮನೆಯಲ್ಲೇ ಕುಳಿತು ನಿಮ್ಮ ಉಳಿತಾಯ ಖಾತೆ ಓಪನ್ ಮಾಡಬಹುದು. ಮನೆಯಲ್ಲೇ ಕುಳಿತು ನೀವು ಆನ್ ಲೈನ್ ನಲ್ಲಿಯೇ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಇದನ್ನು ಡಿಜಿಟಲ್ ಸೇವಿಂಗ್ಸ್ ಅಕೌಂಟ್ ಅಂತ ಕರೆಯಲಾಗುತ್ತದೆ. ಇವತ್ತು ನಾವು ಡಿಜಿಟಲ್ ಸೇವಿಂಗ್ಸ್ ಅಕೌಂಟ್ ಬಗ್ಗೆ ತಿಳಿದುಕೊಳ್ಳೋಣ.
ಡಿಜಿಟಲ್ ಉಳಿತಾಯ ಖಾತೆಯು ಅನ್ನೋದು ವಾಸ್ತವವಾಗಿ ಆನ್‌ಲೈನ್ ಸೇವಿಂಗ್ ಅಕೌಂಟ್. ಇದನ್ನು ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ತೆರೆಯಬಹುದು ಮತ್ತು ನಿರ್ವಹಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಿಂದ ನೀವು ತಕ್ಷಣ ಈ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆ. ಜನರು ತಮ್ಮ ಉಳಿತಾಯವನ್ನು ಇದರಲ್ಲಿ ಠೇವಣಿ ಮಾಡಲು ಸಾಧ್ಯವಿದೆ. ಬ್ಯಾಲೆನ್ಸ್ ಮೇಲೆ ಇಲ್ಲಿ ಬಡ್ಡಿ ಸಹ ಸಿಗುತ್ತದೆ.

ಡಿಜಿಟಲ್ ಅಕೌಂಟ್ ತೆರೆಯಲು ನೀವು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಬ್ಯಾಂಕ್ ಶಾಖೆಗೆ ತೆರಳಿ ಹಲವಾರು ಪುಟಗಳ ಫಾರ್ಮ್ ಭರ್ತಿ ಮಾಡುವ ಅಗತ್ಯವಿಲ್ಲ. ಬ್ಯಾಂಕ್‌ಗಳು, ಫಿನ್‌ಟೆಕ್ ಕಂಪನಿಗಳು ಈ ರೀತಿಯ ಸೌಲಭ್ಯವನ್ನು ಒದಗಿಸುತ್ತವೆ. ಈ ಖಾತೆಯನ್ನು ತೆರೆಯಲು, ನೀವು ವೀಡಿಯೊ KYC ಮಾಡಬೇಕಾಗಿದೆ ಮತ್ತು ನಿಮ್ಮ ಆಧಾರ್ ವಿವರ ನೀಡಬೇಕಾಗುತ್ತದೆ. ಝೀರೋ ಬ್ಯಾಲೆನ್ಸ್ ನಲ್ಲಿ ಆನ್‌ಲೈನ್ ನಲ್ಲಿಯೇ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ಅನೇಕ ಬ್ಯಾಂಕುಗಳು ಒದಗಿಸುತ್ತವೆ.
ಡಿಜಿಟಲ್ ಉಳಿತಾಯ ಖಾತೆಯ ಲಾಭಗಳನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ. ಮೊದಲನೆಯದಾಗಿ ನೀವು ಬ್ಯಾಂಕ್ ಶಾಖೆಗೆ ಅಲೆದಾಡುವ ತಾಪತ್ರಯವಿಲ್ಲ. ಇನ್ನೊಂದು ಪ್ರಯೋಜನವೆಂದರೆ ನೀವು ವರ್ಚುವಲ್ ಡೆಬಿಟ್ ಕಾರ್ಡ್ ಅನ್ನು ಪಡೆದುಕೊಳ್ಳಲು ಸಾಧ್ಯವಿದೆ. ನೀವು ಡೆಬಿಟ್ ಕಾರ್ಡ್‌ಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ವರ್ಚುವಲ್ ಡೆಬಿಟಡ್ ಕಾರ್ಡ್ ಆಕ್ಸಸ್ ಪಡೆದುಕೊಳ್ಳಬಹುದು. ನಾವು ಸಾಮಾನ್ಯವಾಗಿ ಬಳಕೆ ಮಾಡುತ್ತಿರುವ ಡೆಬಿಟ್ ಕಾರ್ಡ್ ರೀತಿಯದ್ದೇ ಡಿಜಿಟಲ್ ಕಾರ್ಡ್ ಇದಾಗಿದೆ.
ನೀವು ಆನ್‌ಲೈನ್ ಶಾಪಿಂಗ್ ಮಾಡಲು, ನಿಮ್ಮ ಬಿಲ್ ಪಾವತಿಗೂ ಸೇರಿದಂತೆ ಇತರೆ ವಹಿವಾಟಿಗೂ ಇದನ್ನು ಬಳಸಬಹುದು. ಶಾಪಿಂಗ್ ಹೊರಟಾಗ ಕೈಯಲ್ಲಿ ಕಾರ್ಡ್ ಹಿಡಿದು ಹೋಗುವ ಅಗತ್ಯವೇ ಇರೋದಿಲ್ಲ. ಒಂದು ವೇಳೆ ಬೇಕೆಂದರೆ ಫಿಸಿಕಲ್ ಕಾರ್ಡ್ ಕೂಡ ಪಡೆದುಕೊಳ್ಳಬಹುದು.
ಫಿಸಿಕಲ್ ಕಾರ್ಡ್ ಪಡೆದುಕೊಳ್ಳಲು ನೀವು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ರಿಕ್ವೆಸ್ಟ್ ಕಳಿಸಬೇಕಾಗುತ್ತದೆ. ಇಲ್ಲವೇ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕಾಗುತ್ತದೆ. ಫಿಸಿಕಲ್ ಕಾರ್ಡ್ ಗೆ ನೀವು ವಿತರಣಾ ಶುಲ್ಕ ಮತ್ತು ವಾರ್ಷಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮತ್ತೊಂದು ಗಮನಾರ್ಹ ಪ್ರಯೋಜನವೆಂದರೆ NEFT, IMPS, ಮತ್ತು RTGS ನಂತಹ ಎಲ್ಲಾ ಆನ್‌ಲೈನ್ ವಹಿವಾಟುಗಳು ಇಲ್ಲಿ ನಿಮಗೆ ಉಚಿತವಾಗಿ ದೊರೆಯುತ್ತದೆ. ಯಾವುದೇ ಶುಲ್ಕದ ತಲೆಬಿಸಿ ಇಲ್ಲದೆ ನಿಮಗೆ ಬೇಕಾದಷ್ಟು ಪಾವತಿ ಮತ್ತು ಹಣ ವರ್ಗಾವಣೆ ಮಾಡಬಹುದು. ಜೊತೆಗೆ ನಿಮಗೆ ಉಚಿತ ಇಮೇಲ್ ಮತ್ತು SMS ಅಲರ್ಟ್ ಸರ್ವೀಸ್ ಸಹ ಸಿಗುತ್ತದೆ. ನೀವು EMI ಮತ್ತು SIP ಪೇಮೆಂಟ್ ಗಳನ್ನು ಶೆಡ್ಯೂಲ್ ಮಾಡಿ ಇಡಬಹುದು. ನೀವು ಮಾಡುವ ವೆಚ್ಚದ ಮೇಲೆ ಕ್ರೆಡಿಟ್ ಕಾರ್ಡ್ ರೀತಿ ರಿವಾರ್ಡ್ ಮತ್ತು ಕ್ಯಾಶ್ ಬ್ಯಾಕ್ ಸಹ ಸಿಗುತ್ತದೆ.
ಡಿಜಿಟಲ್ ಸೇವಿಂಗ್ಸ್ ಅಕೌಂಟ್ ನಲ್ಲಿ ನೀವು ಸಾಮಾನ್ಯ ಉಳಿತಾಯನ ಖಾತೆಯ ಲಾಭದ ಜತೆಗೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಉಳಿತಾಯ ಖಾತೆ ತೆರೆಯುವ ಆಲೋಚನೆ ಇದ್ದರೆ ಮನೆಯಲ್ಲೇ ಕುಳಿತು ಡಿಜಿಟಲ್ ಖಾತೆಗಾಗಿ ಆನ್ ಲೈನ್ ನಲ್ಲಿಯೇ ರಿಕ್ವೆಸ್ಟ್ ಸಲ್ಲಿಸಬಹುದು.


Click it and Unblock the Notifications