ಚಹಾ ಮಾರಿ 38 ವರ್ಷ ವಯಸ್ಸಿನ ಯುವಕ ಚೀನಾದಲ್ಲಿ ಬಿಲಿಯನೇರ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾನೆ ಎಂದರೆ ನಂಬಲೇಬೇಕು. ತನ್ನ ಊರಿನಲ್ಲಿ ಒಂದು ಸಣ್ಣ ಬಬಲ್ ಟೀ ಅಂಗಡಿಯನ್ನು ತೆರೆದು ತನ್ನ ಚಹಾ ಮಾರಾಟದ ಪ್ರಯಾಣವನ್ನು ಪ್ರಾರಂಭಿಸಿದ ಯುವಕ ಇಂದು ತನ್ನ ಕಂಪನಿಯಡಿಯಲ್ಲಿ 10,000 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದಾನೆ
ಹೌದು ಗುಮಿಂಗ್ ಹೋಲ್ಡಿಂಗ್ಸ್‌ನ ಸಂಸ್ಥಾಪಕರಾಗಿರುವ ಕೇವಲ 38 ವರ್ಷ ವಯಸ್ಸಿನ ಯುವ ಉದ್ಯಮಿ ಯುನಾನ್ ವಾಂಗ್ ಅವರು , ಹಾಂಗ್ ಕಾಂಗ್‌ನಲ್ಲಿ ತಮ್ಮ ಕಂಪನಿಯ ಯಶಸ್ವಿ ಐಪಿಒ (Initial Public Offering) ನಂತರ ಚೀನಾದ ಅತ್ಯಂತ ಹೊಸ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. "ಗುಡ್ ಮಿ" (Good Me) ಎಂಬ ಜನಪ್ರಿಯ ಬ್ರ್ಯಾಂಡ್‌ನ ಅಡಿಯಲ್ಲಿ ಚಹಾವನ್ನು ಮಾರಾಟ ಮಾಡುವ ಗುಮಿಂಗ್, ಚೀನಾದಾದ್ಯಂತ ಯಶಸ್ವಿಯಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ.

ಈ ಯಶಸ್ಸಿನ ಕಥೆಯು ವಾಂಗ್ ಅವರ ಸತತ ಪರಿಶ್ರಮ ಮತ್ತು ದೂರದೃಷ್ಟಿಯ ಫಲಿತಾಂಶ ಎಂದರೆ ತಪ್ಪಗಲಾರದು. ಗುಮಿಂಗ್ ಕೇವಲ ಕೆಲವೇ ವರ್ಷಗಳಲ್ಲಿ ಚೀನಾದಲ್ಲಿ ಸುಮಾರು 9.1% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದ್ದು, ಇದು ಸಾಮಾನ್ಯ ಸಾಧನೆಯಲ್ಲ. ಅವರ ಪ್ರಯಾಣವು ತವರೂರಿನಲ್ಲಿ ಒಂದು ಸಣ್ಣ ಬಬಲ್ ಟೀ ಅಂಗಡಿಯನ್ನು ತೆರೆಯುವುದರೊಂದಿಗೆ ಪ್ರಾರಂಭವಾಗಿ ಇಂದು ಬೃಹತ್ ಉದ್ಯಮವಾಗಿ ಮಾರುಕಟ್ಟೆಯಲ್ಲಿ ತನ್ನದೇ ಆದ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ.
ಯುನಾನ್ ವಾಂಗ್ ಒಲಿದ ಅದೃಷ್ಟ
ಗುಮಿಂಗ್ ಹೋಲ್ಡಿಂಗ್ಸ್ ಅಧ್ಯಕ್ಷ ಮತ್ತು ಸಿಇಒ ಆಗಿರುವ ಯುನಾನ್ ವಾಂಗ್ 1.2 ಬಿಲಿಯನ್ ಡಾಲರ್‌ಗಳ ಬೃಹತ್ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಫೋರ್ಬ್ಸ್ ಏಷ್ಯಾ ಅಂದಾಜಿಸಿದೆ. ಎಂಜಿನಿಯರ್ ಆಗಿ ವೃತ್ತಿ ಪ್ರಾರಂಭಿಸಿದ ಯುನಾನ್,ಚೀನಾದ ಹ್ಯಾಂಗ್‌ಝೌನಲ್ಲಿರುವ ಝೆಜಿಯಾಂಗ್ ಸೈ-ಟೆಕ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಮೊದಲ ಅಂಗಡಿ
ಬ್ಲೂಮ್‌ಬರ್ಗ್ ಪ್ರಕಾರ , ಅವರು ಸುಮಾರು 15 ವರ್ಷಗಳ ಹಿಂದೆ ಅಂದರೆ 2010 ರಲ್ಲಿ ತಮ್ಮ ಹುಟ್ಟೂರು ಡಾಕ್ಸಿಯಲ್ಲಿ ತಮ್ಮ ಮೊದಲ ಚಹಾ ಅಂಗಡಿಯನ್ನು ತೆರೆದಿದ್ದು, ಇದು ಶಾಂಘೈ ಬಳಿ ಇದ್ದು 200,000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿತ್ತು. ಆರಂಭದಲ್ಲಿ, ಮಾರಾಟ ನಿಧಾನವಾಗಿತ್ತು, ಆದರೆ ಕೈಗೆಟುಕುವ ಬೆಲೆ ಮತ್ತು ಗುಣಮಟ್ಟದ ಮೇಲೆ ಅವರ ಗಮನವು ವ್ಯವಹಾರವನ್ನು ಬೆಳೆಸಲು ಸಹಾಯ ಮಾಡಿತು. ಸೆಪ್ಟೆಂಬರ್ 2024 ರ ಹೊತ್ತಿಗೆ, ಗ್ಯೂಮಿಂಗ್ 17 ಪ್ರಾಂತ್ಯಗಳಿಗೆ ವಿಸ್ತರಿಸಿ ಚೀನಾದ ಅತಿದೊಡ್ಡ ಹೊಸದಾದ ಬಬಲ್ ಟೀ ಸರಪಳಿಗಳಲ್ಲಿ ಒಂದಾಯಿತು.
ಬೋಬಾ ಟೀ ಎಂದೂ ಕರೆಯಲ್ಪಡುವ ಬಬಲ್ ಟೀ, ಜಾಗತಿಕ ಖ್ಯಾತಿ ಪಡೆದುಕೊಳ್ಳುತ್ತಿದೆ. ವಾಂಗ್ ಅವರ ಯಶಸ್ಸಿನ ಕಥೆಯು, ಕೇವಲ ಒಂದು ಸಣ್ಣ ಬಬಲ್ ಟೀ ಅಂಗಡಿಯಿಂದ ಪ್ರಾರಂಭವಾಯಿತು. ಆದರೆ ಅವರ ದಣಿವರಿಯದ ಪ್ರಯತ್ನ ಮತ್ತು ಗ್ರಾಹಕರನ್ನು ಮೆಚ್ಚಿಸುವ ರುಚಿಕರವಾದ ಚಹಾವನ್ನು ಒದಗಿಸುವ ಗುರಿಯಿಂದಾಗಿ, ಗುಮಿಂಗ್ ಇಂದು ಚೀನಾದಲ್ಲಿ ಮನೆಮಾತಾಗಿದೆ.
ಏನಿದು ಬಬಲ್ ಟೀ
ತೈವಾನ್‌ನಲ್ಲಿ, ಬಬಲ್ ಟೀ ಜನಪ್ರಿಯ ಪಾನೀಯವಾಗಿದ್ದು, ಇದು ಐಸ್ಡ್ ಟೀ ಅನ್ನು ಹಾಲು ಮತ್ತು ಟಪಿಯೋಕಾ ಮುತ್ತುಗಳು ಅಥವಾ "ಬೋಬಾ" ನೊಂದಿಗೆ ಇದನ್ನು ಮಾಡಲಾಗುತ್ತದೆ. ಬೋಬಾ" ಎಂಬ ಪದವು ತಾಂತ್ರಿಕವಾಗಿ ಬಬಲ್ ಹಾಲಿನ ಚಹಾದಲ್ಲಿ ಕಂಡುಬರುವ ಟಪಿಯೋಕಾ ಮುತ್ತುಗಳನ್ನು ಸೂಚಿಸುತ್ತದೆ. ಈ ಮುತ್ತುಗಳು ಚಹಾದ ಮೇಲೆ ತೇಲುತ್ತಿರುವ ಗುಳ್ಳೆಗಳಂತೆ ಕಾಣುತ್ತವೆ. ಇದನ್ನು ಬಬಲ್ ಟೀ, ಪರ್ಲ್ ಟೀ, ಬಬಲ್ ಮಿಲ್ಕ್ ಟೀ, ಬೋಬಾ, ಬೋಬಾ ಫ್ರೂಟ್ ಟೀ ಅಥವಾ ಟಪಿಯೋಕಾ ಟೀ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ.


Click it and Unblock the Notifications