ಕೇಂದ್ರ ಸರ್ಕಾರ ತನ್ನ ನೌಕರರಿಗೆ ಈಗಾಗಲೇ ಗುಡ್ ನ್ಯೂಸ್ ನೀಡಿದೆ. ನೌಕರರ ಕನಿಷ್ಠ ಮೂಲ ವೇತನ 7ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ₹18,000 ಹೆಚ್ಚಳ ಆಗಿದೆ. ಹಾಗೆಯೇ, ಪಿಂಚಣಿದಾರರಿಗೆ ಕನಿಷ್ಠ ಮೂಲ ಪಿಂಚಣಿ ₹9,000 ನಿಗದಿಪಡಿಸಲಾಗಿದೆ. ಇನ್ನು ಮುಂಬರುವ 8ನೇ ವೇತನ ಆಯೋಗದಲ್ಲಿ, ಸರ್ಕಾರವು 1.8 ರಿಂದ 2.86 ರವರೆಗಿನ ಫಿಟ್‌ಮೆಂಟ್ ಅಂಶವನ್ನು ಅನುಮೋದಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮಾರ್ಚ್ 2025 ರಲ್ಲಿ, ಕೇಂದ್ರ ಸರ್ಕಾರವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ/ಡಿಆರ್ ಅನ್ನು ಶೇಕಡಾ 2 ರಷ್ಟು ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚಳವು ಜನವರಿ 1, 2025 ರಿಂದ ಜಾರಿಗೆ ಬಂದಿದ್ದು, ಬಾಕಿ ಹಣವನ್ನು ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗಿತ್ತು.
ಕೇಂದ್ರ ಸರ್ಕಾರವು ವರ್ಷಕ್ಕೆ ಎಷ್ಟು ಬಾರಿ ಡಿಎ ಹೆಚ್ಚಿಸುತ್ತೆ?
ಮೊದಲನೆಯದು ಜನವರಿ 1 ರಿಂದ ಮತ್ತು ಎರಡನೆಯದು ಜುಲೈ 1 ರಿಂದ ಜಾರಿಗೆ ಬರುತ್ತದೆ. ಆದರೆ ಡಿಎ/ಡಿಆರ್ ಅಕ್ಟೋಬರ್‌ನಲ್ಲಿ ಹೆಚ್ಚಾಗುವುದರಿಂದ, ನೌಕರರು ಮತ್ತು ಪಿಂಚಣಿದಾರರಿಗೆ ಬಾಕಿ ಹಣವನ್ನು ನೀಡಲಾಗುತ್ತದೆ. ಪ್ರಸ್ತುತ, 7ನೇ ವೇತನ ಆಯೋಗದ ಅಡಿಯಲ್ಲಿ, ಡಿಎ/ಡಿಆರ್ ಸುಮಾರು 3% ರಷ್ಟು ಹೆಚ್ಚಳ ಕಂಡಿದೆ, ಈ ಮೂಲಕ ಒಟ್ಟು ಡಿಎ/ಡಿಆರ್ ಅನ್ನು 58% ಕ್ಕೆ ತಲುಪಿಸಿದೆ. ರೂ. 18,000 ಕನಿಷ್ಠ ಮೂಲ ವೇತನದ ಮೇಲೆ, 3% ಡಿಎ ಹೆಚ್ಚಳವು ₹540 ಸೇರಿಸುತ್ತದೆ, ಇದರಿಂದ 58% ಡಿಎ ಯೊಂದಿಗೆ ಒಟ್ಟು ಕನಿಷ್ಠ ವೇತನ ₹28,440 ಆಗಲಿದೆ.
ಅದೇ ರೀತಿ, ₹9,000 ಕನಿಷ್ಠ ಮೂಲ ಪಿಂಚಣಿಯ ಮೇಲೆ 3% ಡಿಆರ್ ಹೆಚ್ಚಳವು ₹270 ಸೇರಿಸುತ್ತದೆ, ಇದರಿಂದ 58% ದರದಲ್ಲಿ ಒಟ್ಟು ಕನಿಷ್ಠ ಪಿಂಚಣಿ ₹14,220 ಆಗಲಿದೆ. ಕಳೆದ ದೀಪಾವಳಿಗೆ, ಕೇಂದ್ರ ಸರ್ಕಾರದ ನೌಕರರು 53% ದರದಲ್ಲಿ ಡಿಎ ಮತ್ತು ಡಿಆರ್ ಪಡೆದಿದ್ದರು. ಆಗ ₹18,000 ಕನಿಷ್ಠ ಮೂಲ ವೇತನದೊಂದಿಗೆ, 7ನೇ ವೇತನ ಆಯೋಗದ ಅಡಿಯಲ್ಲಿ ಒಟ್ಟು ಕನಿಷ್ಠ ವೇತನ ₹27,540 ಆಗಿತ್ತು. ಪಿಂಚಣಿದಾರರಿಗೆ 53% ದರದಲ್ಲಿ ₹13,770 ಸಿಗುತ್ತಿತ್ತು.
ಯಾವಾಗ ಬರುತ್ತೆ 8ನೇ ವೇತನ ಆಯೋಗ?
8ನೇ ವೇತನ ಆಯೋಗದ ಕುರಿತು, ಕೇಂದ್ರ ಸರ್ಕಾರವು ಜನವರಿ 2025 ರಲ್ಲಿ ಅದನ್ನು ಅನುಮೋದಿಸಿದ್ದರೂ, ಅಧಿಕೃತ ಅಧಿಸೂಚನೆ ಬರಲು ಇನ್ನೂ ಬಾಕಿ ಇದೆ. ಅಲ್ಲದೇ ಹೊಸ ವೇತನ ಆಯೋಗದ ಸದಸ್ಯರು ಮತ್ತು ಅಧ್ಯಕ್ಷರನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ. 8ನೇ ವೇತನ ಆಯೋಗದ ಕುರಿತು ರಾಜ್ಯ ಸರ್ಕಾರಗಳೊಂದಿಗೆ "ಸಕ್ರಿಯವಾಗಿ ಸಮಾಲೋಚನೆ ನಡೆಸುತ್ತಿರುವುದಾಗಿ" ಕೇಂದ್ರ ಸರ್ಕಾರ ತಿಳಿಸಿದ್ದು, ಸಮಿತಿಯ ರಚನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಘೋಷಣೆ ಬಗ್ಗೆ ನಿರೀಕ್ಷಿಸಲಾಗಿದೆ.
ಹೊಸ ವೇತನ ಆಯೋಗದ ಅಡಿಯಲ್ಲಿ ವೇತನ ಹೆಚ್ಚಳವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. "ಪರಿಷ್ಕೃತ ವೇತನ = ಮೂಲ ವೇತನ × ಫಿಟ್‌ಮೆಂಟ್ ಅಂಶ" ಎಂಬುದು ಇದರ ಮೂಲ ಸೂತ್ರವಾಗಿದೆ. ಫಿಟ್‌ಮೆಂಟ್ ಅಂಶವು ನೌಕರರು ಮತ್ತು ಪಿಂಚಣಿದಾರರ ವೇತನ ಮತ್ತು ಪಿಂಚಣಿಗಳನ್ನು ನಿರ್ಧರಿಸಲು ಸರ್ಕಾರ ಬಳಸುವ ಮಾನದಂಡವಾಗಿದೆ.
8ನೇ ವೇತನ ಆಯೋಗದ ಅಡಿಯಲ್ಲಿ ಸಂಭಾವ್ಯ ಫಿಟ್‌ಮೆಂಟ್ ಅಂಶವು 1.8 ರಿಂದ 2.86 ರ ನಡುವೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಸ್ತುತ, 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಕನಿಷ್ಠ ಮಾಸಿಕ ಮೂಲ ವೇತನ ₹18,000 ಆಗಿದೆ. ಹೊಸ ವೇತನ ಆಯೋಗ ಜಾರಿಗೆ ಬಂದು ಡಿಎ ಮೂಲ ವೇತನದ 60% ಎಂದು ಭಾವಿಸಿದರೆ, ಕೇಂದ್ರ ಸರ್ಕಾರದ ನೌಕರರಿಗೆ ಒಟ್ಟು ಕನಿಷ್ಠ ವೇತನ (ಮೂಲ ವೇತನ + ಡಿಎ) ₹28,800 ಆಗಲಿದೆ.


Click it and Unblock the Notifications