ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ, ಅನಿಶ್ಚಿತತೆ ಇಂಥ ಸಂದರ್ಭಗಳಲ್ಲಿ ಕೌನ್ಸೆಲಿಂಗ್ ಬಹಳ ಅಗತ್ಯ ಇರುತ್ತದೆ. ಹೆಗಲು ಮೇಲೆ ಕೈ ಹಾಕಿಕೊಂಡು, "ಇದು ಇಷ್ಟೇ ಮಗ, ಇಷ್ಟು ಸಣ್ಣ ವಿಚಾರಕ್ಕೆ ಅಷ್ಟೊಂದು ತಲೆ ಕೆಡಿಸಿಕೊಂಡೆಯಾ?" ಎಂದು ಆಪ್ತವಾಗಿ, ಗೆಳೆಯನ ಧ್ವನಿಯಲ್ಲಿ ಹೇಳುವ ಸಲಹೆಗಳು ಬಹಳ ಅಗತ್ಯ ಎನಿಸುತ್ತವೆ.
"ನಿನಗೆ ಬೇಕಾದಂತೆ ಬದುಕು. ಆದರೆ ಯಾರಿಗೂ ನೋವು ಮಾಡಬೇಡ" ಎಂದು ಹೇಳುವ ಗೆಳತಿಯ ಅಂತಃಕರಣವೂ ಅಲ್ಲಿರಬೇಕು. ಆ ಮಾತುಗಳನ್ನು ಯಾರು ಹೇಳಿರಬೇಕು ಅಂತ ಹುಡುಕುತ್ತಾ ಹೋದಂತೆ ಸಿಕ್ಕಿದ ನೋಡಿ, ಪುಣ್ಯಾತ್ಮ ಚಾಣಕ್ಯ. ಆತ ಭಾರತ ಮಾತ್ರ ಅಲ್ಲ, ಇಡೀ ವಿಶ್ವವೇ ಮೆಚ್ಚಿಕೊಂಡಂಥ ಅರ್ಥಶಾಸ್ತ್ರಜ್ಞ, ರಾಜ ನೀತಿ ತಜ್ಞ. ಅಷ್ಟೇ ಅಲ್ಲ, ಪರ್ಸನಲ್ ಕೌನ್ಸೆಲಿಂಗ್ ನ ಮಹಾ ಗುರು.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಚಾಣಕ್ಯನ ಕೆಲವು ಮಾತುಗಳನ್ನು ನೆನಪಿಸಿಕೊಳ್ಳೋಣ. ಶತಮಾನಗಳ ನಂತರ ಕೂಡ ಎಂಥ ಅದ್ಭುತ ಸಲಹೆ- ಭರವಸೆ ಮಾತುಗಳು ಗೊತ್ತೇ ಅದು? ಇನ್ನೇಕೆ ತಡ ಮುಂದೆ ಓದಿ.
ಯಾರನ್ನು ಯಾವಾಗ ಪರೀಕ್ಷಿಸಬೇಕು
ಅತಿ ದೊಡ್ಡ ಗುರುಮಂತ್ರ ಏನು ಗೊತ್ತಾ? ಎಂದಿಗೂ ನಿಮ್ಮ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಅದು ನಿಮ್ಮನ್ನು ನಾಶಪಡಿಸುತ್ತದೆ. ಇನ್ನು ತನ್ನ ಕೆಲಸವನ್ನು ಹೇಗೆ ಮಾಡುತ್ತಾನೆ/ಳೆ ಎಂಬುದರ ಮೂಲಕ ಕೆಲಸದವರನ್ನು, ಕಷ್ಟದಲ್ಲಿದ್ದಾಗ ಬಂಧುಗಳನ್ನು, ಸಮಸ್ಯೆಗಳಿದ್ದಾಗ ಸ್ನೇಹಿತರನ್ನು, ದುರದೃಷ್ಟ ಬೆನ್ನಟ್ಟಿದಾಗ ಹೆಂಡತಿಯನ್ನು ಪರೀಕ್ಷೆ ಮಾಡಬೇಕು.
ಯಾವ ಕೆಲಸ ಆರಂಭಕ್ಕೂ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ಈ ಭೂಮಿ ಮೇಲೆ ಮೂರು ಬೆಲೆ ಕಟ್ಟಲಾಗದ ರತ್ನಗಳಿವೆ: ಆಹಾರ, ನೀರು ಹಾಗೂ ಮನಸಿಗೆ ಮುದ ನೀಡುವಂಥ ಮಾತುಗಳು. ಆದರೆ ಕೆಲವು ಮೂರ್ಖರು ಕಲ್ಲಿನ ತುಂಡುಗಳನ್ನು ರತ್ನಗಳು ಅಂದುಕೊಳ್ಳುತ್ತಾರೆ. ಅಂದ ಹಾಗೆ ಯಾವುದೇ ಕೆಲಸ ಶುರು ಮಾಡುವ ಮುನ್ನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ: ನಾನು ಏಕೆ ಇದನ್ನು ಮಾಡ್ತಿದೀನಿ? ಇದರ ಫಲಿತಾಂಶ ಏನಾಗಬಹುದು? ನಾನಿದರಲ್ಲಿ ಯಶಸ್ಸು ಕಾಣ್ತೀನಾ? ಈ ಪ್ರಶ್ನೆಗಳಿಗೆ ನಿಮಗೇ ಸಮಾಧಾನಕರ ಉತ್ತರ ದೊರೆತಲ್ಲಿ ಮಾತ್ರ ಮುಂದಕ್ಕೆ ಹೆಜ್ಜೆ ಇಡಿ.
ವಿಶ್ವದಲ್ಲೇ ಅತಿ ಶಕ್ತಿಶಾಲಿ ಯಾವುದು?
ವಿಶ್ವದ ಅತಿ ದೊಡ್ಡ ಶಕ್ತಿ ಅಂದರೆ ಮಹಿಳೆಯ ಯೌವನ ಮತ್ತು ಸೌಂದರ್ಯ. ಇನ್ನು ಪುಸ್ತಕಕ್ಕೆ ಸೀಮಿತವಾದ ಜ್ಞಾನ ಹಾಗೂ ಮತ್ತೊಬ್ಬರ ಅಧೀನದಲ್ಲಿ ಇರುವ ಸಂಪತ್ತು ಎರಡೂ ಕೂಡ ಅವುಗಳ ಅಗತ್ಯ ಉದ್ಭವಿಸಿದಾಗ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಓ ಬುದ್ಧಿವಂತ ವ್ಯಕ್ತಿ ನಿನ್ನ ಸಂಪತ್ತನ್ನು ಅರ್ಹರಿಗೆ ಮಾತ್ರ ನೀಡು, ಇತರರಿಗೆ ಅಲ್ಲ. ಮೋಡದಿಂದ ಸಮುದ್ರಕ್ಕೆ ಬೀಳುವ ನೀರು ಮಾತ್ರ ಯಾವಾಗಲೂ ಸಿಹಿಯಾಗಿರುತ್ತದೆ.
ಮಹಾನ್ ವ್ಯಕ್ತಿ ಯಾರು?
ದೇವರು ಮೂರ್ತಿಗಳಲ್ಲಿ ಇಲ್ಲ. ನಿಮ್ಮ ಭಾವನೆಗಳೇ ನಿಮ್ಮ ಪಾಲಿನ ದೇವರು. ಇನ್ನು ಆತ್ಮವೇ ನಿಮ್ಮ ಪಾಲಿನ ದೇಗುಲ. ನೆನಪಿರಲಿ, ಒಬ್ಬ ವ್ಯಕ್ತಿ ವಿಪರೀತ ಪ್ರಾಮಾಣಿಕನಾಗಿರಬಾರದು. ಏಕೆಂದರೆ, ನೇರವಾದ ಮರವನ್ನೇ ಮೊದಲು ಕಡಿಯಲಾಗುತ್ತದೆ. ನೇರವಂತನಿಗೆ ಮೊದಲು ಸಮಸ್ಯೆ ಬರುತ್ತದೆ. ಯಾವುದೇ ವ್ಯಕ್ತಿ ತನ್ನ ಕಾರ್ಯದಿಂದ ಮಹಾನ್ ಆಗುತ್ತಾನೆ ಹೊರತು ಹುಟ್ಟಿನಿಂದಲ್ಲ.


Click it and Unblock the Notifications