2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ, ಹಿಂದುಳಿದವರ, ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಶಿಕ್ಷಣ ಪಡೆಯಲು ಸಹಾಯವಾಗುವಂತೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ. ಮ್ಯೂಚುವಲ್ ಫಂಡ್ - 1 ಫೈನಾನ್ಸ್‌ನ ಹಿರಿಯ ಉಪಾಧ್ಯಕ್ಷೆ ರಜನಿ ತಾಂಡೇಲ್ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಪಟ್ಟಿ ಮಾಡಿದ್ದಾರೆ.

ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ (PMSS)
ವಿದ್ಯಾರ್ಥಿಗಳ ಕೋರ್ಸ್ ಅವಧಿಯನ್ನು ಆಧರಿಸಿ 1 ರಿಂದ 5 ವರ್ಷಗಳಿಗೆ, ಆಯ್ದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಗಂಡು ಮಕ್ಕಳಿಗೆ ಮಾಸಿಕ 2,500 ರೂಪಾಯಿ ಮತ್ತು ಹೆಣ್ಣು ಮಕ್ಕಳಿಗೆ ಮಾಸಿಕ 3,000 ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಇಸಿಎಸ್ ಮೂಲಕ ಹಣ ಜಮಾ ಮಾಡಲಾಗುತ್ತದೆ.
ವೈದ್ಯಕೀಯ, ದಂತ ವೈದ್ಯಕೀಯ, ಪಶುವೈದ್ಯಕೀಯ, ಇಂಜಿನಿಯರಿಂಗ್, ಎಂಬಿಎ, ಎಂಸಿಎ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಈ ವಿದ್ಯಾರ್ಥಿ ವೇತನ ಸಿಗಲಿದೆ. ಎಐಸಿಟಿಇ/ಯುಜಿಸಿಯಿಂದ ಅನುಮೋದಿಸಲ್ಪಟ್ಟ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 2750 ಹುಡುಗರು ಮತ್ತು 2750 ಹುಡುಗಿಯರು ಈ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗುತ್ತಾರೆ. ಪಿಯುಸಿ/ಡಿಪ್ಲೋಮಾ ಮತ್ತು ಪದವಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY)
ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (NSDC) ಆಯೋಜಿಸಿರುವ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಪ್ರಮುಖ ಕಾರ್ಯಕ್ರಮವಾಗಿದೆ. ಪ್ರಧಾನ ಮಂತ್ರಿ ಯುವ ತರಬೇತಿ ಕಾರ್ಯಕ್ರಮ ಎಂದೂ ಕರೆಯಲ್ಪಡುವ ಈ ಯೋಜನೆಯು ಯುವಕರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯ ಅಡಿಯಲ್ಲಿ ಮೂರು ರೀತಿಯ ತರಬೇತಿಯನ್ನು ನೀಡಲಾಗುತ್ತದೆ. 15 ರಿಂದ 45 ವರ್ಷ ವಯಸ್ಸಿನವರು ಔಪಚಾರಿಕ ಶಿಕ್ಷಣ ಪಡೆಯದ, ಶಾಲೆ ಅಥವಾ ಕಾಲೇಜು ಬಿಟ್ಟವರು ಮತ್ತು ನಿರುದ್ಯೋಗಿ ಯುವಕ, ಯುವತಿಯರು ತರಬೇತಿ ಪಡೆಯಬಹುದು.
ಪಿಎಂ ಮಕ್ಕಳ ಕಲ್ಯಾಣ ಯೋಜನೆ
ಕೋವಿಡ್-19 ಸಾಂಕ್ರಾಮಿಕದ ಬಳಿಕ ಪೋಷಕರು, ಕಾನೂನು ಪಾಲಕರು ಅಥವಾ ದತ್ತು ಪಡೆದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಮೇ 29, 2021 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪರಿಚಯಿಸಿದರು. ಪೋಷಕರು, ಪಾಲಕರನ್ನು ಕಳೆದುಕೊಂಡ ಮಗುವಿಗೆ ಈ ಯೋಜನೆಯಡಿ ಆರೋಗ್ಯ ವಿಮೆ, ಶಿಕ್ಷಣ ಮತ್ತು ಹಣಕಾಸಿನ ನೆರವುಗಳನ್ನು ನೀಡಲಾಗುತ್ತದೆ. 10 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ಸಿಗಲಿದೆ. 1 ರಿಂದ 12ನೇ ತರಗತಿಯವರೆಗೆ ಪ್ರತಿ ವರ್ಷ ಪ್ರತಿ ಮಗುವಿಗೆ ರೂ 20,000 ವಿದ್ಯಾರ್ಥಿವೇತನ ಸಿಗಲಿದೆ. ಆರೋಗ್ಯ ವಿಮಾ ರಕ್ಷಣೆಯಲ್ಲಿ 5 ಲಕ್ಷ ರೂಪಾಯಿ ಸಿಗಲಿದೆ.


Click it and Unblock the Notifications