2024ರ ಜನವರಿ 22 ರಂದು ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಿಂದ (Pradhan Mantri Surya Ghar Muft Bijli Yojana)
ಈಗಾಗಲೇ ದೇಶದ ಹಲವರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯ ಅಡಿಯಲ್ಲಿ ದೇಶದ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಮೂಲಕ ಉಚಿತವಾಗಿ ವಿದ್ಯುತ್ ಪಡೆಯಬಹುದಾಗಿದೆ. ಅಲ್ಲದೇ ಉಚಿತ ವಿದ್ಯುತ್ (Free Electricity) ನೀಡುವುದಲ್ಲದೇ, ಅದಕ್ಕೆ ಸಬ್ಸಿಡಿ ರೂಪದಲ್ಲಿ ಹಣವನ್ನೂ ನೀಡುತ್ತದೆ. ಹಾಗಿದ್ರೆ ಏನಿದು ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ? ಇದರಿಂದ ಸಬ್ಸಿಡಿ ಹೇಗೆ ಸಿಗುತ್ತದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ?
2024 ರಲ್ಲಿ ಪ್ರಧಾನಿ ಮೋದಿ ಸರ್ಕಾರ ಪ್ರತೀ ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲಾಯಿತು. ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಮೂಲಕ ನೈಸರ್ಗಿಕ ಸಂಪನ್ಮೂಲಕ್ಕೆ ಹೆಚ್ಚು ಒತ್ತು ಮತ್ತು ವಿದ್ಯುತ್ ಉತ್ಪಾದನೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇನ್ನು ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಮೂಲಕ ಪ್ರತೀ ಮನೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಅನ್ನು ಪಡೆಯಲಿದ್ದಾರೆ. ಅಲ್ಲದೇ ಈ ಯೋಜನೆ ಮೂಲಕ ಹಣ ಗಳಿಸುವ ಅವಕಾಶವೂ ಇದೆ. ಇನ್ನು ಕೇಂದ್ರ ಸರ್ಕಾರ 75,021 ಕೋಟಿ ರೂ.ಗಳಷ್ಟು ಅನುದಾನವನ್ನು ಸಹ ಈ ಯೋಜನೆಗಾಗಿ ಮೀಸಲಿಟ್ಟಿತ್ತು.
ಉಚಿತ ವಿದ್ಯುತ್ ಜೊತೆಗೆ ಸರ್ಕಾರದಿಂದಲೇ ಸಹಾಯಧನ!
ಇನ್ನು ಸೂರ್ಯಘರ್ ಯೋಜನೆಯನ್ನು ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಬಹುದು. ಅಲ್ಲದೇ ಸೌರಫಲಕಗಳನ್ನು ಅಳವಡಿಸಲು ಸರ್ಕಾರದಿಂದಲೇ ಸಬ್ಸಿಡಿ ರೂಪದಲ್ಲಿ ಧನಸಹಾಯ ನೀಡಲಾಗುತ್ತದೆ. ಈ ಮೂಲಕ 1 ಕಿ.ವ್ಯಾಟ್‌ನಿಂದ 3 ಕಿ.ವ್ಯಾಟ್‌ವರೆಗಿನ ಸೌರ ವಿದ್ಯುತ್ ಘಟಕದ ಅಳವಡಿಕೆಗೆ ಸರ್ಕಾರ ಸಹಾಯ ಧನ ನೀಡುತ್ತದೆ. ಈ ಮೂಲಕ 1 ಕಿ.ವ್ಯಾಟ್‌ಗೆ 30 ಸಾವಿರ ರೂ., 2 ಕಿ.ವ್ಯಾಟ್‌ಗೆ 60 ಸಾವಿರ ರೂ., 3 ಕಿ.ವ್ಯಾಟ್ ಅಥವಾ ಹೆಚ್ಚಿನ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಅಳಡಿಸಿದರೆ 78 ಸಾವಿರ ರೂ.ವರೆಗೆ ಸರ್ಕಾರ ಸಹಾಯಧನ ನೀಡುತ್ತದೆ. ಈ ಮೂಲಕ ಮನೆಯ ಛಾವಣಿಯಲ್ಲೇ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಪಡೆಯಬಹುದು. ಅಲ್ಲದೇ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಲು ಅವಕಾಶವಿದೆ.
ಈ ಯೋಜನೆಯ ಪ್ರಯೋಜನಗಳು:
- ಮನೆಯ ಮೇಲ್ಛಾವಣಿಯಲ್ಲೇ ಸೌರ ಫಲಕ ಅಳವಡಿಸಲು ಸರ್ಕಾರದಿಂದಲೇ ಸಹಾಯಧನ ನೀಡಲಾಗುತ್ತದೆ.
- ಸೌರ ವಿದ್ಯುತ್ ಘಟಕ ಸ್ಥಾಪಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನೂ ನೀಡುತ್ತದೆ.
- ತಿಂಗಳಿಗೆ 300 ಯೂನಿಟ್‌ನಷ್ಟು ಉಚಿತ ವಿದ್ಯುತ್.
- ವಿದ್ಯುತ್ ಮಾರಾಟ ಮಾಡುವ ಮೂಲಕ 17 ಸಾವಿರದವರೆಗೂ ಆದಾಯ ಸಂಪಾದಿಸಲು ಅವಕಾಶ.
- ಸರ್ಕಾರಕ್ಕೆ ವಾರ್ಷಿಕವಾಗಿ ಲಕ್ಷಗಟ್ಟಲೆ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಉಳಿತಾಯದ ನಿರೀಕ್ಷೆ.
- ವಿದ್ಯುತ್ ಶುಲ್ಕ ಪಾವತಿ ಮಾಡಬೇಕೆಂಬ ಹೊರೆಯಿಲ್ಲ
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ಈ ಯೋಜನೆಯ ಫಲಾನುಭವಿಗಳು ಭಾರತೀಯ ಪ್ರಜೆಯಾಗಿರಬೇಕು.
- ಸ್ವಂತ ಮನೆಯನ್ನು ಹೊಂದಿರಬೇಕು ಮತ್ತು ಮನೆಯ ಮೇಲೆ ಸೌರಫಲಕಗಳನ್ನು ಅಳವಡಿಸಲು ಸರಿಯಾದ ಜಾಗದ ವ್ಯವಸ್ಥೆ ಇರಬೇಕು.
- ವಿದ್ಯುತ್ ಸಂಪರ್ಕ ಸರಿಯಾಗಿರಬೇಕು.
- ಸರ್ಕಾರದಿಂದ ಸೌರಫಲಕ ಅಳವಡಿಸಲು ಯಾವುದೇ ಸಹಾಯಧನ ಪಡೆದುಕೊಂಡಿರಬಾರದು.
ಅರ್ಜಿ ಸಲ್ಲಿಸುವುದು ಹೇಗೆ?
- https://www.pmsuryaghar.gov.in- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಂತರ ಅಲ್ಲಿ ರಾಜ್ಯವನ್ನು ಆಯ್ಕೆ ಮಾಡಿ.
- ವಿದ್ಯುತ್ ಸರಬರಾಜು ಸಂಸ್ಥೆಯನ್ನು ಆಯ್ಕೆ ಮಾಡಬೇಕು
- ವಿದ್ಯುತ್ ಸಂಪರ್ಕ ಗ್ರಾಹಕ ಸಂಖ್ಯೆಯನ್ನು ಆಡ್ ಮಾಡಬೇಕು.
- ಮೊಬೈಲ್ ನಂಬರ್ ಅನ್ನು ಆಡ್ ಮಾಡಿ.
- ಇಮೇಲ್ ಆಡ್ ಮಾಡಿ.
- ನಂತರ ಅಲ್ಲಿ ಮನೆಯ ಛಾವಣಿಯ ಮೇಲೆ ಸೌರ ಫಲಕ ಅಳವಡಿಸಲು ಅರ್ಜಿ ಸಲ್ಲಿಸಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ.
- ಅರ್ಜಿ ಸಲ್ಲಿಸಿದ ಬಳಿಕ, ವಿದ್ಯುತ್ ಸರಬರಾಜು ಸಂಸ್ಥೆಯಿಂದ ಅನುಮೋದನೆಗಾಗಿ ಕಾಯಬೇಕು. ಅನುಮೋದನೆ ಸಿಕ್ಕ ಬಳಿಕ, ಸಂಸ್ಥೆಯ ನೋಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಫಲಕಗಳನ್ನು ಅಳವಡಿಸುತ್ತಾರೆ.
- ಅಳಡಿಸಿದ ಬಳಿಕ, ಸೌರ ಫಲಕದ ವಿವರಗಳನ್ನು ಸಲ್ಲಿಸಬೇಕು ಮತ್ತು "ನೆಟ್ ಮೀಟರ್" ಅಳವಡಿಕೆಗೆ ಅರ್ಜಿ ಸಲ್ಲಿಸಬೇಕು.
- ನೆಟ್ ಮೀಟರ್ ಅಳವಡಿಸಿದ ಬಳಿಕ, ವಿದ್ಯುತ್ ವಿತರಣಾ ಸಂಸ್ಥೆಯವರು ಬಂದು ಪರಿಶೀಲನೆ ನಡೆಸುತ್ತಾರೆ. ಆ ನಂತರ ಅನುಮತಿ ಪತ್ರವನ್ನೂ ಸಹ ನೀಡಲಾಗುತ್ತದೆ.
- ಅನುಮತಿ ಪತ್ರ ನೀಡಿದ ನಂತರ, ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನೆಲ್ಲಾ ಸಲ್ಲಿಸಬೇಕು.
- ಆ ನಂತರ ನಿಮಗೆ 30 ದಿನಗಳ ಒಳಗೆ ಸಬ್ಸಿಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.


Click it and Unblock the Notifications