ನವದೆಹಲಿ, ಜೂನ್ 29: 2023-24ರ ಹಣಕಾಸು ವರ್ಷದ ಆದಾಯ ತೆರಿಗೆ (ಐಟಿ) ರಿಟರ್ನ್ಸ್ ಫೈಲ್ ಮಾಡಲು ಮುಂದಿನ ತಿಂಗಳು ಅಂದ್ರೆ ಜುಲೈ 31, 2024 ಅಂತಿಮ ದಿನಾಂಕವಾಗಿದೆ. ಉದ್ಯೋಗಿಗಳಿಂದ ಹಿಡಿದು ಉದ್ಯಮಿಗಳವರೆಗೆ ಜುಲೈ 31ರೊಳಗೆ ಐಟಿ ರಿಟರ್ನ್ಸ್ ಅನ್ನು ಸಲ್ಲಿಸಲು ಯೋಜನೆ ರೂಪಿಸುತ್ತಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ, ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ನೀವು 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ, ಆದರೆ ನೀವು ಹೊಸ ತೆರಿಗೆ ಪದ್ಧತಿಯನ್ನು ಆರಿಸಿದ್ದರೆ, 7 ಲಕ್ಷದವರೆಗೆ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.
ಇದೇನೇ ಇರಲಿ ಉದ್ಯೋಗಿಯಾಗಿರಲಿ ಅಥವಾ ಉದ್ಯಮಿಯಾಗಿರಲಿ, ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನಗಳನ್ನು ಪ್ರಯತ್ನಿಸುವ ಮೂಲಕ ಆದಾಯ ತೆರಿಗೆಯನ್ನು ಉಳಿಸಲು ಪ್ರಯತ್ನಿಸುತ್ತಾರೆ. ಭಾರತದಲ್ಲಿ, ಆದಾಯ ತೆರಿಗೆ ಕಾಯಿದೆ, 1961 ಎಲ್ಲಾ ಆದಾಯ ತೆರಿಗೆ ಸಂಬಂಧಿತ ವಿಷಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಕಾಯಿದೆಯ ಪ್ರಕಾರ, ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಆದಾಯ ಅಥವಾ ಲಾಭವು ತೆರಿಗೆಗೆ ಒಳಪಟ್ಟಿರುವುದು ಕಡ್ಡಾಯವಾಗಿದೆ, ಅದಕ್ಕಾಗಿಯೇ ಆದಾಯ ತೆರಿಗೆಯನ್ನು ಹೇಗೆ ಉಳಿಸುವುದು ಎಂಬುದರ ಕುರಿತು ನೀವು ತಿಳಿದಿರಬೇಕು.

ಅದರಲ್ಲೂ ತಿಂಗಳ ವೇತನ ನಂಬಿಕೊಂಡಿರುವ ಉದ್ಯೋಗಿಗಳ ಬಗ್ಗೆ ಬಗ್ಗೆ ಹೇಳುವುದಾದರೆ, ತೆರಿಗೆ ಉಳಿತಾಯ ಅವರಿಗೆ ಸವಾಲಾಗಿರುತ್ತದೆ. ಅವರು ತಮ್ಮ ಮಾಸಿಕ ವೆಚ್ಚಗಳ ಜೊತೆಗೆ ಉಳಿತಾಯ, ಹೂಡಿಕೆ ಮತ್ತು ನಿವೃತ್ತಿಯನ್ನು ಯೋಜಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಂಡು, ಸರಿಯಾದ ಮಾರ್ಗಗಳನ್ನು ನಿಮ್ಮ ಆದಾಯ ತೆರಿಗೆಯನ್ನು ಹೇಗೆ ಉಳಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಹೋಮ್ ಲೋನ್:
ನೀವು ಹೋಮ್ ಲೋನ್ ಪಡೆದುಕೊಂಡಿದ್ದರೆ, ನೀವು ಸೆಕ್ಷನ್ 80C ಅಡಿಯಲ್ಲಿ ಅದರ ಮೂಲ ಮೊತ್ತದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದಲ್ಲದೆ, ನೀವು ಹೋಮ್ ಲೋನ್ ಬಡ್ಡಿಯ ಮೇಲೆ ರಿಯಾಯಿತಿಯನ್ನು ಸಹ ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 24 (ಬಿ) ಅಡಿಯಲ್ಲಿ ನೀವು ಈ ವಿನಾಯಿತಿಯನ್ನು ಪಡೆಯಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, 2 ಲಕ್ಷದವರೆಗಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದಾಗ್ಯೂ, ಆಸ್ತಿಯು ''Self-Occupied'ಆಗಿದ್ದರೆ ಮಾತ್ರ ಈ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.
ಇಪಿಎಫ್
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವೇತನ ಪಡೆಯುವವರಿಗೆ ತೆರಿಗೆ ಉಳಿಸಲು ಸುಲಭವಾದ ಆಯ್ಕೆಗಳಲ್ಲಿ ಒಂದಾಗಿದೆ . ಇದರಲ್ಲಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ರೂ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಪಿಎಫ್ ಖಾತೆಯಲ್ಲಿ ಪಡೆದ ಬಡ್ಡಿಯು ವಾರ್ಷಿಕವಾಗಿ ರೂ 2.5 ಲಕ್ಷದವರೆಗೆ ತೆರಿಗೆ ಮುಕ್ತವಾಗಿರುತ್ತದೆ.
ಮನೆ ಬಾಡಿಗೆ ಭತ್ಯೆ
ಮನೆ ಬಾಡಿಗೆ ಭತ್ಯೆಯನ್ನು (HRA) ಉದ್ಯೋಗದಾತರು ತಮ್ಮ ಸಂಬಳದ ಭಾಗವಾಗಿ ವಸತಿ ವೆಚ್ಚಗಳನ್ನು ಪೂರೈಸಲು ಉದ್ಯೋಗಿಗಳಿಗೆ ಪಾವತಿಸುತ್ತಾರೆ. ನಿಮ್ಮ ಕಂಪನಿಯು ನಿಮ್ಮ ಸಂಬಳದ ಜೊತೆಗೆ HRA ಅನ್ನು ಸಹ ಪಾವತಿಸುತ್ತಿದ್ದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(13A) ಅಡಿಯಲ್ಲಿ, ಕೆಲವು ಮಿತಿಗಳಿಗೆ ಒಳಪಟ್ಟು HRA ಮೇಲಿನ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಆರೋಗ್ಯ ವಿಮಾ ಪಾಲಿಸಿ
ತೆರಿಗೆದಾರರು ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿಯಲ್ಲಿ ಅವರು ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ. ನಿಮಗಾಗಿ, ಸಂಗಾತಿಗೆ, ಮಕ್ಕಳು ಮತ್ತು ಪೋಷಕರಿಗೆ ನೀವು ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ನೀವು 25,000 ರೂ.ವರೆಗಿನ ಪ್ರೀಮಿಯಂ ಮೇಲೆ ತೆರಿಗೆಯನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಪೋಷಕರ ವಯಸ್ಸು 60 ವರ್ಷಕ್ಕಿಂತ ಕಡಿಮೆಯಿರಬೇಕು. ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ತೆರಿಗೆ ವಿನಾಯಿತಿ ಮಿತಿ 50,000 ರೂ. ಆಗಿದೆ.
ಬೋಧನಾ ಶುಲ್ಕ
ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀವು ಪಾವತಿಸುವ ಶಾಲಾ/ಕಾಲೇಜು ಶುಲ್ಕದ ಬೋಧನಾ ಶುಲ್ಕದ ಭಾಗದಲ್ಲಿ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದಾಯ ತೆರಿಗೆಯ ಸೆಕ್ಷನ್ 80(ಸಿ) ನ ಷರತ್ತು 17 ರ ಅಡಿಯಲ್ಲಿ, ಬೋಧನಾ ಶುಲ್ಕ ಅಥವಾ ಶಾಲಾ ಶುಲ್ಕವನ್ನು ಪಾವತಿಸುವ ಪೋಷಕರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲು ಅವಕಾಶವನ್ನು ಮಾಡಲಾಗಿದೆ. ಇಬ್ಬರು ಮಕ್ಕಳ ಬೋಧನಾ ಶುಲ್ಕದಲ್ಲಿ ಈ ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ರಿಯಾಯಿತಿಯನ್ನು ಪಡೆಯಲು, ನೀವು ಸಂಸ್ಥೆಯಿಂದ ಪ್ರವೇಶ ಪುರಾವೆ ಮತ್ತು ಶುಲ್ಕ ರಶೀದಿಗಳನ್ನು ನೀಡಬೇಕು.


Click it and Unblock the Notifications