ಬೆಂಗಳೂರು, ಜೂನ್ 19: ನಾವು ಬಳಸುವ ಪ್ರತಿಯೊಂದು ವಸ್ತುಗಳ ಮೇಲೆ ತೆರಿಗೆ ಲೆಕ್ಕಾಚಾರವಿದೆ. ಅನಿವಾರ್ಯ ಸಂದರ್ಭ ಬಂದೋ ಅಥವಾ ಇನ್ಯಾವುದೋ ಕಾರಣಕ್ಕೋ ಊರಿನಲ್ಲಿ ಇರುವ ಕೃಷಿ ಜಮೀನು ಮಾರಾಟ ಮಾಡಿದರೆ ಆಗ ತ ತೆರಿಗೆ ಕಟ್ಟಬೇಕಾಗುತ್ತದೆಯಾ? ಈ ವಿಚಾವನ್ನು ನಾವು ತಿಳಿದುಕೊಳ್ಳಬೇಕು.
ಕೃಷಿ ಭೂಮಿಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ಗ್ರಾಮೀಣ, ಅಂದ್ರೆ, ಗ್ರಾಮೀಣ ಭಾಗಗಳಲ್ಲಿರೋ ಕೃಷಿ ಭೂಮಿ. ಎರಡನೆಯದು, ನಗರ ಪ್ರದೇಶಗಳಲ್ಲಿರೋ ಕೃಷಿ ಭೂಮಿ. ಆದಾಯ ತೆರಿಗೆಯ ದೃಷ್ಟಿಯಲ್ಲಿ, ಕೃಷಿಗೆಂದು ಬಳಸಲಾಗುವ ಎಲ್ಲಾ ರೀತಿಯ ಭೂಮಿಗಳನ್ನೂ ಕೃಷಿ ಭೂಮಿ ಎಂದು ಪರಿಗಣಿಸುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 2 (14)ರ ನಿಯಮಗಳಮನ್ನು ಸರಿಯಾಗಿ ಪೂರೈಸುವರೆಗೂ ನಿಮ್ಮ ಕೃಷಿ ಭೂಮಿಯನ್ನು ಕೃಷಿ ಭೂಮಿ ಎಂದು ಪರಿಗಣಿಸಲಾಗೋದಿಲ್ಲ.

ಉದಾಹರಣೆಗೆ, ನಿಮ್ಮ ಕೃಷಿ ಭೂಮಿಯು ಪುರಸಭೆಯೊಂದರ, ಸೂಚಿತ ಪ್ರದೇಶ ಸಮಿತಿಯೊಂದರ, ನಗರ ಪ್ರದೇಶ ಸಮಿತಿಯೊಂದರ, ಅಥವಾ ಕಂಟೋನ್ಮೆಂಟ್ ಬೋರ್ಡ್ ವ್ಯಾಪ್ತಿಯಲ್ಲಿದ್ದು ಅದರ ಜನಸಂಖ್ಯೆಯು 10,000 ಅಥವಾ ಅದಕ್ಕೂ ಹೆಚ್ಚಾಗಿದ್ದರೆ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಅದನ್ನು ಕೃಷಿ ಭೂಮಿ ಎಂದು ಪರಿಗಣಿಸಲಾಗುವುದಿಲ್ಲ.
ಒಂದು ವೇಳೆ, ಪುರಸಭೆಯ ಅಥವಾ ಕಂಟೋನ್ಮೆಂಟ್ ಬೋರ್ಡ್ನ ಜನಸಂಖ್ಯೆಯು 10,000ಕ್ಕಿಂತ ಹೆಚ್ಚಾಗಿದ್ದು 1 ಲಕ್ಷದವರೆಗೆ ಇದ್ದರೆ, ಆಗ 2 ಕಿಲೋಮೀಟರ್ ವ್ಯಾಪ್ತಿ ಒಳಗಿನ ಭೂಮಿಯನ್ನು ಕೃಷಿ ಭೂಮಿ ಎಂದು ಪರಿಗಣಿಸಲಾಗುವುದಿಲ್ಲ. ಒಂದು ವೇಳೆ, ಪುರಸಭೆಯ ಅಥವಾ ಕಂಟೋನ್ಮೆಂಟ್ ಬೋರ್ಡ್ ಪ್ರದೇಶದ ಜನಸಂಖ್ಯೆಯು 1 ಲಕ್ಷಕ್ಕಿಂತ ಹೆಚ್ಚಾಗಿದ್ದು10 ಲಕ್ಷಗಳವರೆಗೆ ಇದ್ದರೆ, 6 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಪ್ರದೇಶವನ್ನು ಕೃಷಿ ಭೂಮಿ ಎಂದು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ, ಪುರಸಭೆ ಅಥವಾ ಕಂಟೋನ್ಮೆಂಟ್ ಜನಸಂಖ್ಯೆಯು 10 ಲಕ್ಷಕ್ಕಿಂತಲೂ ಹೆಚ್ಚಾಗಿದ್ದರೆ, ಅದರ 8 ಕಿಲೋಮೀಟರ್ ವ್ಯಾಪ್ತಿಯೊಳಗಿನ ಭೂಮಿಯನ್ನು ಕೃಷಿ ಭೂಮಿ ಎಂದು ಪರಿಗಣಿಸಲಾಗುವುದಿಲ್ಲ.
ಒಂದು ವೇಳೆ, ನಿಮ್ಮ ಕೃಷಿ ಭೂಮಿಯು ನಿರ್ದಿಷ್ಟ ಗಡಿಗಳೊಳಗೆ ಇರದಿದ್ದರೆ, ಅದು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ, ಕೃಷಿ ಭೂಮಿಯನ್ನು ಕ್ಯಾಪಿಟಲ್ ಅಸೆಟ್ ಅಥವಾ ಬಂಡವಾಳದ ಸ್ವತ್ತು ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಅದನ್ನು ಮಾರಿದಾಗ ಬರೋ ಆದಾಯದ ಮೇಲೆ ಕ್ಯಾಪಿಟಲ್ ಗೇಯ್ನ್ ತೆರಿಗೆ ಅಥವಾ ಬಂಡವಾಳದಿಂದ ಬಂದ ಲಾಭದ ಮೇಲಿನ ತೆರಿಗೆಯನ್ನು ಹಾಕುವುದಿಲ್ಲ. ಒಂದು ವೇಳೆ, ನಿಮ್ಮ ಕೃಷಿ ಭೂಮಿಯು ಈ ಹಿಂದೆ ಹೇಳಿರುವ ಪ್ರದೇಶಗಳ ವ್ಯಾಪ್ತಿಗಳಲ್ಲಿದ್ದರೆ, ಅದನ್ನು ಕ್ಯಾಪಿಟಲ್ ಅಸೆಟ್ ಎಂದು ಪರಿಗಣಿಸಲಾಗುತ್ತದೆ.
ಎರಡನೆಯಯದಾಗಿ ನಗರ ಪ್ರದೇಶದ ಕೃಷಿ ಭೀಮಿಗಳ ಬಗ್ಗೆ ತಿಳಿದುಕೊಳ್ಳೋಣ. ನಗರ ಪ್ರದೇಶಕ್ಕೆ ಸೇರಿದ ಕೃಷಿ ಭೂಮಿ ಮಾರಿದಾಗ ಬರೋಲಾಭದ ಮೇಲೆ ಕ್ಯಾಪಿಟಲ್ ಗೇಯ್ನ್ ತೆರಿಗೆಯನ್ನು ಕಟ್ಟಬೇಕಾಗುತ್ತದೆ.ಒಂದು ವೇಳೆ, ನೀವು ಅಂತಹ ಭೂಮಿಯನ್ನು 24 ತಿಂಗಳುಗಳ ಕಾಲ ನಿಮ್ಮ ಬಳಿ ಇಟ್ಟುಕೊಂಡಿದ್ದರು ನಂತರ ಅದನ್ನು ಮಾರಿದರೆ, ಅದರಿಂದ ಬರೋ ಲಾಭವನ್ನು ದೀರ್ಘಾವಧಿ ಕ್ಯಾಪಿಟಲ್ ಗೇಯ್ನ್ ಎಂದು ಪರಿಗಣಿಸಲಾಗುತ್ತದೆ. ಅದರ ಮೇಲೆ ಇಂಡೆಕ್ಸೇಷನ್ ಬೆನಿಫಿಟ್ ಶೇ 20ರಷ್ಟು ತೆರಿಗೆಯನ್ನು ಹಾಕಲಾಗುತ್ತದೆ.
ಒಂದು ವೇಳೆ, ಕೃಷಿ ಭೂಮಿಯನ್ನು ಖರೀದಿಸಿದ ನಂತರದ 24 ತಿಂಗಳುಗಳ ಒಳಗೆ ಮಾರಿದರೆ, ಅದರಿಂದ ಬರೋ ಲಾಭದ ಮೇಲೆ ಅಲ್ಪಾವಧಿ ಕ್ಯಾಪಿಟಲ್ ಗೇಯ್ನ್ ತೆರಿಗೆಯನ್ನು ವಿಧಿಸಲಾಗುತ್ತೆ. ನಿಮ್ಮ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ಕ್ಯಾಪಿಟಲ್ ಗೇಯ್ನ್ ಮೊತ್ತವನ್ನು ಲೆಕ್ಕ ಹಾಕಲಾಗುತ್ತೆ. ಸೆಕ್ಷನ್ 54 (ಬಿ)ಯ ಅಡಿಯಲ್ಲಿ, ನಿಯಮ-ನಿಬಂಧನೆಗಳಿಗೆ ಅನುಗುಣವಾಗಿ, ಬೇರೊಂದು ಕೃಷಿ ಭೂಮಿಯನ್ನು ಕೊಳ್ಳುವ ಮೂಲಕ ನೀವು ಕ್ಯಾಪಿಟಲ್ ಗೇಯ್ನ್ ತೆರಿಗೆಯನ್ನು ಉಳಿಸಬಹುದು.
ನಿಮ್ಮ ಭೂಮಿ ಗ್ರಾಮೀಣ ಪ್ರದೇಶದಲ್ಲಿದೆಯೋ? ಅಥವಾ ನಗರ ಪ್ರದೇಶದಲ್ಲಿದೆಯೋ? ಎನ್ನುವುದು ಬಹಳ ಮುಖ್ಯ ವಿಚಾರವಾಗುತ್ತದೆ. ಆದಾಯ ತೆರಿಗೆ ಇಲಾಖೆ ತನ್ನ ಮಾನದಂಡ ಆಧರಿಸಿ ತೆರಿಗೆ ನಿರ್ಧಾರ ಮಾಡುತ್ತದೆ.


Click it and Unblock the Notifications