ಬೆಂಗಳೂರು, ಜೂನ್ 11: ವಿವಾಹ ಸ್ವರ್ಗದಲ್ಲಿ ನಿಶ್ಚಯವಾವಾದರೆ ವಿಚ್ಛೇದನ ಭೂಮಿಯಲ್ಲೇ ನಡೆಯುತ್ತದೆ! ದೇಶದಲ್ಲಿ ಅದರಲ್ಲೂ ನಗರಗಳಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಚ್ಛೇದನ ಪ್ರಕರಣದಲ್ಲಿ ಅತ್ಯಂತ ಪ್ರಮುಖ ಅಂಶವೆಂದರೆ ಪರಿಹಾರ. ಪರಿಹಾರವನ್ನು ಹೇಗೆ ಲೆಕ್ಕ ಮಾಡಲಾಗುತ್ತದೆ ಮತ್ತು ಅದಕ್ಕೆ ತೆರಿಗೆ ವಿಧಿಸಲಾಗುತ್ತದೆಯೇ ಇಲ್ಲವೇ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಪರಿಹಾರ ಅಂದರೆ ಅಲೋವೆನ್ಸ್ ಎಂದು ಕರೆಯಬಹುದು. ಇದೊಂದು ರೀತಿಯ ಹಣಕಾಸು ಸಹಾಯ ಎಂದು ಕರೆಯಬಹುದು. ಇದನ್ನು ವಿಚ್ಛೇದನದ ನಂತರದಲ್ಲಿ ಪತಿಯು ಪತ್ನಿಗೆ ನೀಡುತ್ತಾನೆ. ಸಾಮಾನ್ಯವಾಗಿ, ವಿಚ್ಛೇದನದ ನಂತರ ಪತ್ನಿಗೆ ಜೀವನ ನಡೆಸಲು ಸಾಕಷ್ಟು ಆದಾಯ ಇಲ್ಲದಿದ್ದರೆ, ಪತಿ ಕಾನೂನಾತ್ಮಕವಾಗಿ ಆಕೆಗೆ ಪರಿಹಾರವನ್ನು ನೀಡಬೇಕಾಗುತ್ತದೆ.

ಹಿಂದು ವಿವಾಹ ಕಾಯ್ದೆ ಸೆಕ್ಷನ್ 25 ರ ಪ್ರಕಾರ, ಹಣಕಾಸು ಸುರಕ್ಷತೆ ಮತ್ತು ಸುಸ್ಥಿರತೆಗಾಗಿ ಪತಿ ಅಥವಾ ಪತ್ನಿಗೆ ಶಾಶ್ವತ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಮಾಡಬಹುದು. ಎಲ್ಲ ವಿಚ್ಛೇದನ ಪ್ರಕರಣದಲ್ಲೂ ಅಲೋವೆನ್ಸ್ ಕೊಡಲೇಬೇಕೆಂದಿಲ್ಲ. ಈ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ಹಿತಾಸಕ್ತಿಗಳನ್ನು ಪರಿಗಣಿಸಲಾಗುತ್ತದೆ. ಹೆಂಡತಿ ಹಣ ಗಳಿಕೆ ಮಾಡುತ್ತಿದ್ದರೆ ಆಕೆಯ ಮತ್ತು ಆತನ ಆದಾಯದಲ್ಲಿ ವ್ಯತ್ಯಾಸ ಇದ್ದರೆ, ಆತನಷ್ಟೇ ಮಟ್ಟದ ಜೀವನ ನಿರ್ವಹಣೆ ಮಾಡುವುದಕ್ಕೆ ಆಕೆಗೆ ಬೇಕಿರುವ ಅಲೋವೆನ್ಸ್ ಅನ್ನು ಆಕೆ ಪಡೆಯಬಹುದು. ಪತ್ನಿಗೆ ಉದ್ಯೋಗ ಇಲ್ಲದಿದ್ದರೆ, ಆಕೆಯ ವಯಸ್ಸು, ಶಿಕ್ಷಣ ಮತ್ತು ಗಳಿಕೆಯ ಸಾಮರ್ಥ್ಯದಂತಹ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅಲೋವೆನ್ಸ್ ಕೊಡುವ ಬಗ್ಗೆ ನ್ಯಾಯಾಲಯ ನಿರ್ಧಾರ ಮಾಡಬಹುದು. ಪತಿ ಅಂಗವಿಕಲನಾದರೆ, ಅಂದರೆ ದೈಹಿಕವಾಗಿ ಗಳಿಕೆ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ ಮತ್ತು ಪತ್ನಿ ಕೆಲಸ ಮಾಡುತ್ತಿದ್ದರೆ ಆಗ ಪತಿಯೇ ಅಲೋವೆನ್ಸ್ ಪಡೆಯಬಹುದು.
ಇನ್ನು ನಗದು ಅಥವಾ ಆಸ್ತಿ ಅಥವಾ ಇವೆರಡನ್ನೂ ಪತ್ನಿಗೆ ಪರಿಹಾರ ಎಂದು ಘೋಷಣೆ ಮಾಡಬಹುದು. ನ್ಯಾಯಾಲಯವೇ ಪರಿಹಾರದ ಹಣ ಮತ್ತು ಪಾವತಿ ವಿಧಾನವನ್ನು ನಿರ್ಧಾರ ಮಾಡುತ್ತದೆ. ಇಬ್ಬರ ಆದಾಯ, ಅಸೆಟ್‌ಗಳು, ವಿವಾಹದ ಅವಧಿ, ಇಬ್ಬರ ಜೀವನ ವಿಧಾನ, ವಯಸ್ಸು ಮತ್ತು ಆರೋಗ್ಯ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೋರ್ಟ್ ನಿರ್ಧಾರ ಮಾಡುತ್ತದೆ. ಪರಿಹಾರದ ಹಣವನ್ನು ಒಟ್ಟಿಗೆ ಪಾವತಿ ಮಾಡುವಂತೆ ಅಥವಾ ಕಾಲಕಾಲಕ್ಕೆ ಪಾವತಿ ಮಾಡುವಂತೆಯೂ ಆದೇಶ ನೀಡಬಹುದು. ಅಲ್ಲದೆ, ಸನ್ನಿವೇಶ ಬದಲಾದರೆ, ಅಂದರೆ ಮರುವಿವಾಹ ಆದರೆ ಅಥವಾ ಯಾವುದೇ ಒಬ್ಬರು ಮೃತಪಟ್ಟರೆ ಪರಿಹಾರವನ್ನು ಬದಲಾವಣೆ ಮಾಡುವುದು ಅಥವಾ ಪರಿಹಾರವನ್ನು ರದ್ದು ಮಾಡುವ ಹಕ್ಕನ್ನೂ ಕೋರ್ಟ್ ಹೊಂದಿದೆ.
ವಿಚ್ಛೇದನದ ನಂತರ ಪತ್ನಿ ಪಡೆಯುವ ಪರಿಹಾರದ ಬಗ್ಗೆ ಆದಾಯ ತೆರಿಗೆ ಕಾಯ್ದೆಯಲ್ಲಿ ಯಾವುದೇ ಪ್ರತ್ಯೇಕ ನಿಯಮ ಇಲ್ಲ. ಇಂತಹ ಪ್ರಕರಣಗಳಲ್ಲಿ, ಮೇಂಟೆನೆನ್ಸ್ ಅಲೋವೆನ್ಸ್‌ಗೆ ಸಂಬಂಧಿಸಿದಂತೆ ತೆರಿಗೆಯನ್ನು ಸಾಮಾನ್ಯ ತೆರಿಗೆ ನಿಯಮಗಳನ್ನು ಜಾರಿಗೊಳಿಸಬಹುದು ಅಥವಾ ಕಾಲಕಾಲಕ್ಕೆ ನ್ಯಾಯಾಲಯಗಳು ನಿರ್ಧಾರವನ್ನೂ ಮಾಡಬಹುದು. ಮಹಿಳೆ ಒಂದೇ ಬಾರಿ ದೊಡ್ಡ ಮೊತ್ತದ ಪರಿಹಾರವನ್ನು ಪಡೆದರೆ, ಅದನ್ನು ಬಂಡವಾಳ ಸ್ವೀಕಾರ ಅಂತ ಕರೆಯಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯು ಬಂಡವಾಳ ಸ್ವೀಕೃತಿಯನ್ನು ಆದಾಯ ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಪರಿಹಾರವನ್ನು ಒಟ್ಟಿಗೆ ಸ್ವೀಕರಿಸಿದರೆ ಯಾವುದೇ ತೆರಿಗೆಯನ್ನ ಪತ್ನಿ ಪಾವತಿ ಮಾಡಬೇಕಿಲ್ಲ.
ಇನ್ನೊಂದೆಡೆ, ಮೇಂಟೆನೆನ್ಸ್ ಅಲೋವೆನ್ಸ್ ಪದೇ ಪದೇ ಸಿಗುತ್ತಿದ್ದರೆ ಅಂದರೆ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಬರುತ್ತಿದ್ದರೆ ಅದನ್ನು ಆದಾಯ ಸ್ವೀಕೃತಿ ಎಂದು ಕರೆಯಲಾಗುತ್ತದೆ. ಆದಾಯ ಸ್ವೀಕೃತಿ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಇಂತಹ ಪ್ರಕರಣಗಳಲ್ಲಿ, ಮಾಸಿಕ ಮೇಂಟೆನೆನ್ಸ್ ಅಲೋವೆನ್ಸ್‌ಗೆ ತೆರಿಗೆ ವಿಧಿಸಲಾಗುತ್ತದೆ. ಮೇಂಟೆನೆನ್ಸ್ ಅಲೋವೆನ್ಸ್ ಪಡೆದ ವ್ಯಕ್ತಿ ತೆರಿಗೆ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.


Click it and Unblock the Notifications