ನವದೆಹಲಿ, ಜೂನ್ 25: ಸುಲಭಕ್ಕೆ ಸಿಕ್ಕಿತು ಅಂತಾ ಕ್ರೆಡಿಟ್ ಕಾರ್ಡ್ ಪಡೆದುಕೊಂಡುಬಿಡುತ್ತೇವೆ. ಕೆಲವೊಮ್ಮೆ ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳದೆ ಹೆಚ್ಚುವರಿ ಖರ್ಚು ಮಾಡಿದ ಪರಿಣಾಮ ಬಿಲ್ ಮೊತ್ತ ಅಳತೆ ಮೀರಿರುತ್ತದೆ. ಈ ಸಂದರ್ಭದಲ್ಲಿ ಬಿಲ್ ತುಂಬುವುದು ಹೇಗಪ್ಪಾ? ಎಂದು ತಲೆ ಕೆಡಿಸಿಕೊಂಡು ಕುಳಿತಿರುತ್ತೇವೆ. ಇಂಥ ಸಂದರ್ಭದಲ್ಲಿ ಬ್ಯಾಲೆನ್ಸ್ ಟ್ರಾನ್ಸ್ ಫರ್ ಎನ್ನುವ ಆಯ್ಕೆಯೊಂದು ನಿಮ್ಮ ನೆರವಿಗೆ ಬರಬಹುದು.
ಬ್ಯಾಲೆನ್ಸ್ ವರ್ಗಾವಣೆ ಅಥವಾ ಟ್ರಾನ್ಸ್ ಫರ್ ಎಂದರೆ ನಿಮ್ಮ ಪ್ರಸ್ತುತ ಕ್ರೆಡಿಟ್ ಕಾರ್ಡ್ ಸಾಲವನ್ನು ಬೇರೆ ಕಾರ್ಡ್‌ಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇಂಥ ಸಂದರ್ಭದಲ್ಲಿ ನೀವು ಪಡೆದುಕೊಳ್ಳುವ ಕಾರ್ಡ್ ಹಳೆಯ ಕಾರ್ಡ್ ನ ಶುಲ್ಕ ಮತ್ತಿತರ ಫೀfಳಿಗಿಂತ ಕಡಿಮೆ ಇರಬೇಕು. ಹೊಸ ಕಾರ್ಡ್ ನೀಡುವ ಕಡಿಮೆ ಬಡ್ಡಿದರ ಅಥವಾ ಮರುಪಾವತಿ ಅವಧಿಯ ಲಾಭವನ್ನು ಪಡೆಯುವುದೇ ಬ್ಯಾಲೆನ್ಸ್ ವರ್ಗಾವಣೆಯ ಮುಖ್ಯ ಗುರಿ. ನಿಮ್ಮ ಸಾಲವನ್ನು ನೀವು ವರ್ಗಾಯಿಸಿದಾಗ, ನೀವು ಬಡ್ಡಿದರಗಳನ್ನು ಕಡಿಮೆ ಮಾಡಬಹುದು ಮತ್ತು ಸಾಲವನ್ನು ವೇಗವಾಗಿ ಪಾವತಿಸುವ ಮೂಲಕ ಹಣವನ್ನು ಉಳಿಸಬಹುದು.

ಹಾಗಿದ್ದರೆ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಅಲ್ಲವೇ? ಮೊದಲಿಗೆ, ನಿಮ್ಮ ಪ್ರಸ್ತುತ ಕಾರ್ಡ್‌ನಲ್ಲಿ ನೀವು ಪಾವತಿಸಬೇಕಾದ ಒಟ್ಟು ಮೊತ್ತವನ್ನು ತಿಳಿದುಕೊಳ್ಳಿ. ಇದು ಆ ಕಾರ್ಡ್‌ನಲ್ಲಿ ವಿಧಿಸಲಾದ ಎಲ್ಲಾ ಶುಲ್ಕಗಳನ್ನು ಒಳಗೊಂಡಿರಬೇಕು. ನಂತರ, ಬ್ಯಾಲೆನ್ಸ್ ವರ್ಗಾವಣೆ ವೈಶಿಷ್ಟ್ಯಗಳನ್ನು ನೀಡುವ ಕ್ರೆಡಿಟ್ ಕಾರ್ಡ್‌ಗಳನ್ನು ನೀವು ಹುಡುಕಬೇಕು. ನಿಯಮಗಳು ಮತ್ತು ಷರತ್ತುಗಳು, ಬಡ್ಡಿ ದರಗಳು, ಮರುಪಾವತಿ ಅವಧಿಗಳನ್ನು ಹೋಲಿಕೆ ಮಾಡಿ.
ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯಾ ಎನ್ನುವುದನ್ನು ನೋಡಿಕೊಂಡು ಆಯ್ಕೆ ಮಾಡಿ. ಒಮ್ಮೆ ನೀವು ಹೊಸ ಕಾರ್ಡ್ ಆಯ್ಕೆ ಮಾಡಿದ ನಂತರ ಆ ಕಂಪನಿಯನ್ನ ಸಂಪರ್ಕಿಸಿ. ನೀವು ಇಮೇಲ್ ಮೂಲಕ ಬ್ಯಾಲೆನ್ಸ್ ವರ್ಗಾವಣೆಗೆ ವಿನಂತಿಸಬಹುದು ಅಥವಾ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಬಹುದು. ನಿಮ್ಮ ಪ್ರಸ್ತುತ ಸಾಲ ಮತ್ತು ನೀವು ವರ್ಗಾಯಿಸಲು ಬಯಸುವ ಮೊತ್ತ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿ ಅವರಿಗೆ ನೀಡಬೇಕಾಗುತ್ತದೆ.
ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವಾಗ ಕೆಲವೊಂದು ಪ್ರಮುಖ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲು, ಬಡ್ಡಿ ದರವನ್ನು ಪರಿಶೀಲಿಸಿ. ನಿಮ್ಮ ಪ್ರಸ್ತುತ ಕಾರ್ಡ್‌ಗೆ ಹೋಲಿಸಿದರೆ ಇದು ಎಷ್ಟು ಕಡಿಮೆಯಾಗಿದೆ ಎಂಬುದನ್ನು ನೋಡಿ. ಮರುಪಾವತಿ ಅವಧಿಗೆ ಗಮನ ಕೊಡಿ. ಹೆಚ್ಚುವರಿ ಬಡ್ಡಿ ಶುಲ್ಕಗಳನ್ನು ಪಾವತಿಸದೆ ಸಾಲವನ್ನು ಪಾವತಿಸಲು ನಿಮಗೆ ಸಾಕಷ್ಟು ಸಮಯ ಇದ್ಯಾ ಅನ್ನೋದನ್ನ ಖಚಿತಪಡಿಸಿಕೊಳ್ಳಿ. ಬಾಕಿಯನ್ನು ವರ್ಗಾಯಿಸಲು ಶುಲ್ಕವಿದೆಯೇ ಎಂದು ಪರಿಶೀಲಿಸಿ.
ಏಕೆಂದರೆ ಇದು ಬ್ಯಾಲೆನ್ಸ್ ಟ್ರಾನ್ಸ್‌ಫರ್ ವೆಚ್ಚದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ನೀವು ಯಾವ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತೀರಿ ಎನ್ನುವ ವಿಚಾರ ತಿಳಿದುಕೊಳ್ಳಿ. ಕ್ಯಾಶ್‌ಬ್ಯಾಕ್, ರಿವಾರ್ಡ್ಸ್ ಅಥವಾ ಯಾವುದೇ ರೀತಿಯ ಪ್ರಯೋಜನವನ್ನು ಪರಿಗಣಿಸಿ. ಬ್ಯಾಲೆನ್ಸ್ ವರ್ಗಾವಣೆಯ ಮೇಲೆ ಪ್ರಯೋಜನ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಎಲ್ಲ ಸವಲತ್ತುಗಳನ್ನು ಬಳಸಿಕೊಂಡರೆ ನಿಮ್ಮ ಕ್ರೆಡಿಟ್ ಕಾರ್ಡ್ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.


Click it and Unblock the Notifications