ನವದೆಹಲಿ, ಜೂನ್ 29: ಪರ್ಸನಲ್ ವಿಮಾ ಪಾಲಿಸಿಗಳ ಬಗ್ಗೆ ಗೊತ್ತು, ಆರೋಗ್ಯ ವಿಮೆ ಬಗ್ಗೆಯೂ ಗೊತ್ತು, ಪ್ರಾಪರ್ಟಿ ವಿಮೆಯ ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ನಿಮ್ಮ ಮನೆಯಲ್ಲಿರುವ ವಸ್ತುಗಳಿಗೂ ವಿಮಾ ರಕ್ಷಣೆ ಪಡೆದುಕೊಳ್ಳಬಹುದು ಎನ್ನುವುದು ಹಲವರಿಗೆ ಗೊತ್ತಿರಲಿಲ್ಲಿಲ್ಲ.
ನಿಮ್ಮ ಮನೆ ಹಾಗೂ ನಿಮ್ಮ ಮನೆಯಲ್ಲಿರುವ ವಸ್ತುಗಳ ಮೇಲೆ ವಿಮೆ ಪಡೆದುಕೊಳ್ಳುವುದು ಬಹಳ ಸುಲಭ.
ಇದಕ್ಕಾಗಿ ನೀವು ಸಮಗ್ರ ಮನೆ ವಿಮಾ ಪಾಲಿಸಿ ತೆಗೆದುಕೊಳ್ಳಬಹುದು. ಇದರಲ್ಲಿ ಮನೆಯ ಕಟ್ಟಡದ ಜೊತೆಗೆ ಮನೆಯಲ್ಲಿಟ್ಟಿರುವ ವಸ್ತುಗಳಿಗೂ ವಿಮೆ ಸಿಗುತ್ತದೆ. ಆದರೆ ಇಲ್ಲೊಂದು ಸಮಸ್ಯೆ ಇದೆ, ಮನೆ ನಿಮ್ಮ ಒಡೆತನದಲ್ಲಿ ಇರದಿದ್ದರೆ? ಆಗ ಏನು ಮಾಡಬೇಕು? ಮನೆಯಲ್ಲಿರುವ ವಸ್ತುಗಳಿಗೆ ವಿಮೆ ಪಡೆದುಕೊಳ್ಳಲು ಸಾಧ್ಯವಿದೆಯೇ?

ಹೌದು ಅಂತಹದ್ದು ಒಂದು ವಿಮೆ ಇದೆ. ಇದುವೇ ಕಂಟೆಂಟ್ ಒನ್ಲಿ ಕವರ್ ಪ್ಲಾನ್. ವಿವಿಧ ವಿಮಾ ಕಂಪೆನಿಗಳ ಹೋಂ ಇನ್ಷುರೆನ್ಸ್ ಪ್ಲಾನ್ ಗಳಲ್ಲಿ, ಕಂಟೆಂಟ್ ಒನ್ಲಿ ಕವರ್ ಪ್ಲಾನ್ ಇರುತ್ತದೆ. ಇದರಡಿ ಮನೆಯಲ್ಲಿರುವ ವಸ್ತುಗಳಿಗೆ ವಿಮೆ ಕವರೇಜ್ ಸಿಗುತ್ತದೆ. ಅಂದರೆ ಟಿವಿ, ಫ್ರಿಡ್ಜ್, ಎಸಿ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ವಿಮೆ ಮಾಡಿಸಬಹುದು. ಜೊತೆಗೆ ಮನೆಯಲ್ಲಿರೋ ಪೀಠೋಪಕರಣ, ಮನೆಯಲ್ಲಿ ಅಳವಡಿಸಿರುವ ವಿದ್ಯುತ್ ಚಿಮಣಿ, ದುಬಾರಿ ಲೈಟಿಂಗ್ ಇತ್ಯಾದಿಗಳಿಗೂ ವಿಮೆ ಸಿಗುತ್ತದೆ. ನಿಮ್ಮ ಮೌಲ್ಯಯುತ ವಸ್ತುಗಳಾದ ಆಭರಣ, ದುಬಾರಿ ಪೇಂಟಿಂಗ್ ಅಥವಾ ಚಿತ್ರಕಲೆ ಅಥವಾ ಯಾವುದೇ ಕಲಾಕೃತಿಗೂ ವಿಮೆ ಮಾಡಿಸಬಹುದು. ಆದರೆ, ಇದಕ್ಕಾಗಿ ನೀವು ಆ್ಯಡ್ ಆನ್ ಕವರ್ ತೆಗೆದುಕೊಳ್ಳಬೇಕು. ಇವುಗಳಿಗೆ ಹಾನಿಯಾದರೆ ಆಗ ನಿಮಗೆ ರೀ ಎಂಬರ್ಸ್ಮೆಂಟ್ ಸಿಗುತ್ತದೆ.
ಹಾಗಿದ್ದರೆ ಈ ವಿಮೆ ಪಡೆದುಕೊಳ್ಳುವುದು ಹೇಗೆ?
ಬಹುತೇಕ ಎಲ್ಲಾ ಸಾಮಾನ್ಯ ವಿಮಾ ಕಂಪನಿಗಳು ಅಂದರೆ ಜನರಲ್ ಇನ್ಶೂರೆನ್ಸ್ ಕಂಪೆನಿಗಳು ಈ ಬಗೆಯ ವಿಮೆ ಕೊಡುತ್ತಿವೆ. ನೀವು ಯಾವ ಕಂಪನಿಯಿಂದ ವಿಮೆ ತೆಗೆದುಕೊಳ್ಳತ್ತಿರೋ ಆ ಕಂಪನಿಗೆ ನಿಮ್ಮ ಮನೆಯಲ್ಲಿರೋ ಮೌಲ್ಯಯುತ ವಸ್ತುಗಳ ಪಟ್ಟಿ ಕೊಡಬೇಕಾಗುತ್ತದೆ. ಇದರ ಜೊತೆಗೆ, ಇವುಗಳ ಅಂದಾಜು ಬೆಲೆಯನ್ನ ಕೂಡ ತಿಳಿಸಬೇಕಾಗುತ್ತದೆ. ಯಾವುದೇ ನಷ್ಟ ಸಂಭವಿಸಿದರೆ ವಿಮಾ ಕಂಪೆನಿಗೆ ಕ್ಲೇಮ್ ಸಲ್ಲಿಸಬೇಕಾಗುತ್ತದೆ.
ಕಂಪನಿಯು ಈ ಕ್ಲೇಮುಗಳ ರೀಪ್ಲೇಸ್ಮೆಂಟ್ ವ್ಯಾಲ್ಯೂ ನಿರ್ಧರಿಸುತ್ತದೆ. ಈ ಮೌಲ್ಯವನ್ನ ನಿರ್ಧರಿಸುವಾಗ ಕಂಪೆನಿಯು ಕೆಲವು ಅಂಶಗಳನ್ನ ಪರಿಗಣಿಸುತ್ತದೆ. ಉದಾಹರಣೆಗೆ ಸವಕಳಿ ಅಥವಾ ಡಿಪ್ರಿಸಿಯೇಷನ್. ವಿಮಾ ಪಾಲಿಸಿ ಖರೀದಿಗೂ ಮೊದಲು ನೀವು ಆ ಪಾಲಿಸಿಗೆ ಸಂಬಂಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಓದಿ ತಿಳಿದುಕೊಳ್ಳಬೇಕು. ಆಗ ನಿಮಗೆ ಆ ಪಾಲಿಸಿಯಲ್ಲಿ ಏನೇನು ಕವರ್ ಆಗುತ್ತಿದೆ? ಯಾವುದು ಇಲ್ಲ ಎನ್ನುವುದು ಗೊತ್ತಾಗುತ್ತದೆ.
ಹೋಂ ಕಂಟೆಂಟ್ ಕವರೇಜ್ ಅಡಿ ಟೆನ್ಯುರ್ ಅಂದರೆ ನಿಮಗೆ ಎಷ್ಟು ಅವಧಿಗೆ ವಿಮೆ ಬೇಕು ಅನ್ನೋದು ಫ್ಲೆಕ್ಸಿಬಲ್ ಆಗಿರತ್ತೆ. ನೀವು ಒಂದರಿಂದ ಐದು ವರ್ಷಗಳ ಅವಧಿಗೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಪ್ಲಾನ್ ಖರೀದಿಸಬಹುದು. ಇದು ಸಮಗ್ರ ಕವರೇಜ್ ಒದಗಿಸತ್ತೆ. ಜೊತೆಗೆ ಅಗ್ನಿ ಅವಘಡ, ಪ್ರಾಕೃತಿಕ ವಿಕೋಪದಿಂದ ಹಾನಿ, ಕಳ್ಳತನ, ಆಕಸ್ಮಿಕ ಅಪಘಾತದಿಂದ ಹಾನಿ ಮೊದಲಾದವುಗಳ ನಷ್ಟವನ್ನ ಈ ವಿಮೆ ಭರಿಸುತ್ತದೆ.
ಹಾನಿ ಅಥವಾ ನಷ್ಟ ಸಂಭವಿಸಿದರೆ ತಕ್ಷಣ ವಿಮಾ ಕಂಪೆನಿಗೆ ವಿಷಯ ತಿಳಿಸಿ. ಅದರ ತುರ್ತು ಸಹಾಯವಾಣಿ ಸಂಖ್ಯೆ ಅಥವಾ ನೋಂದಾಯಿತ ಇ-ಮೇಲ್ ಐಡಿಗೆ ವಿಷಯ ತಲುಪಿಸಿ. ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಆಗ ಕ್ಲೇಮ್ ಸಲ್ಲಿಸೋದು ಸುಲಭ ಆಗಗುತ್ತದೆ. ಕಂಪೆನಿಯು ಕ್ಲೇಮಿನ ಕನ್ಫರ್ಮೇಷನ್ ಗೆ ನಿಮ್ಮಿಂದ ಸಾಕ್ಷ್ಯಾಧಾರ ಅಥವಾ ವಿವರಣೆ ಕೇಳಬಹುದು. ಅಂದರೆ ನಿಮ್ಮ ಬಳಿ ವೋಚರ್ ಗಳು, ಬಿಲ್ ಗಳನ್ನು ಇಟ್ಟುಕೊಂಡಿರಬೇಕು. ಹಾನಿಯಾದ ಸಂದರ್ಭದಲ್ಲಿ ಸಂಬಂಧಿಸಿದ ಒಬ್ಬ ತನಿಖಾಧಿಕಾರಿಯನ್ನ ನೇಮಕ ಮಾಡುತ್ತದೆ. ಅವರು ನೀವು ಕೊಡೋ ಎವಿಡೆನ್ಸ್ ಮತ್ತು ಕ್ಲೇಮ್ ಬಗ್ಗೆ ಗಮನಹರಿಸುತ್ತಾರೆ. ನೀವು ಅವರೊಂದಿಗೆ ಸಹಕರಿಸಬೇಕಾಗುತ್ತದೆ. ಆಗ ಮಾತ್ರ ನಿಮಗೆ ವಿಮಾ ಪರಿಹಾರ ಸಿಗಬಹುದು.


Click it and Unblock the Notifications