ಬೆಂಗಳೂರು, ಜೂನ್ 11: ಸಾಲ ಪಡೆದುಕೊಳ್ಳುವುದು ಅಷ್ಟೇ ಸುಲಭ ಆದರೆ ಕಂತುಗಳನ್ನು ಅಂದರೆ ಇಎಂಐ ಸರಿಯಾಗಿ ಪಾವತಿ ಮಾಡುವುದು? ಹೌದು ನಿಜಕ್ಕೂ ಒಂದು ಸವಾಲಿನ ಕೆಲವೇ. ಒಂದೇ ಒಂದು ಇಎಂಐ ಮಿಸ್ ಮಾಡಿದರೂ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಬಹುದೊಡ್ಡ ಪರಿಣಾಮ ಬೀರಬಲ್ಲದು. EMI ಮಿಸ್ ಮಾಡಿದರೆ ಏನಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಸಾಲದ EMI ಪಾವತಿ ಮಾಡದೇ ಇರುವುದನ್ನು ದೊಡ್ಡ ಅಥವಾ ಸಣ್ಣ ಡೀಫಾಲ್ಟ್ ಎಂದೇ ಹೇಳಬಹುದು. ಒಂದು ಅಥವಾ ಎರಡು ಕಂತುಗಳು ತಪ್ಪಿಹೋದರೆ, ಅಂದರೆ ಕೊನೆಯ ಪಾವತಿಯ 90 ದಿನಗಳಲ್ಲಿ ಎರಡನೇ ಕಂತನ್ನು ಪಾವತಿಸಿದರೆ, ಅದನ್ನು ಸಣ್ಣ ಡೀಫಾಲ್ಟ್ ಎಂದು ಪರಿಗಣಿಸಲಾಗುತ್ತದೆ. ಆದರೆ 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ EMI ಪಾವತಿಸದಿದ್ದರೆ, ಅಂದರೆ ಮೂರು ತಿಂಗಳಿಗಿಂತ ಹೆಚ್ಚು ಕಾಲ, ಅದನ್ನ ದೊಡ್ಡ ಡೀಫಾಲ್ಟ್ ಅಂತ ಪರಿಗಣಿಸಲಾಗುತ್ತದೆ. ನಿಜವಾದ ತೊಂದರೆ ಇಲ್ಲಿಂದ ಶುರುವಾಗುತ್ತದೆ.

ಒಂದು ವೇಳೆ ಮೊದಲ EMI ಪಾವತಿ ಮಾಡುವುದನ್ನು ಮಿಸ್ ಮಾಡಿಕೊಂಡರೆ ಆಗ ಬ್ಯಾಂಕ್ ಫೋನ್ ಕರೆ, ಮೆಸೇಜ್ ಅಥವಾ ಇಮೇಲ್ ಮೂಲಕ ಕಂತು ಮರುಪಾವತಿ ಮಾಡುವಂತೆ ನೆನೆಪಿಸುತ್ತದೆ. EMI ಪಾವತಿಸುವಲ್ಲಿ ವಿಳಂಬ ಮಾಡಿದರೆ ಅದು ಪೆನಾಲ್ಟಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ EMI ಮೊತ್ತದ ಶೇಕಡಾ 1 ರಿಂದ 2 ರಷ್ಟಿರುತ್ತೆ. ಅಲ್ಲದೇ ಹೆಚ್ಚುವರಿಯಾಗಿ, ದಂಡದ ಬಡ್ಡಿಯನ್ನು ಸಹ ವಿಧಿಸಬಹುದು. ಇದನ್ನು ಸಾಲದ ಬಡ್ಡಿದರದ ಮೇಲೆ ವಿಧಿಸಲಾಗುತ್ತದೆ. ಒಮ್ಮೆ ಈ ಪಾವತಿಯನ್ನು ಮಾಡಿದ ನಂತರ, ಸಾಲದ ಖಾತೆಯು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ ನೀವು ದೀರ್ಘಕಾಲದವರೆಗೆ ಇಎಂಐ ಪಾವತಿಸದಿದ್ದರೆ, ದಂಡಗಳು ಹೆಚ್ಚಾಗುತ್ತಿರುತ್ತವೆ.
EMI ಡೀಫಾಲ್ಟ್ ಮಾಹಿತಿಯು ನಿಮ್ಮ ಕ್ರೆಡಿಟ್ ರಿಪೋರ್ಟ್ ನಲ್ಲಿ ದಾಖಲಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಒಂದು EMI ತಪ್ಪಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ 50-70 ಅಂಕ ಕಡಿಮೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಇದನ್ನು ಹಾಗೇ ಮುಂದುವರಿಸಿದರೆ ಕ್ರೆಡಿಟ್ ಸ್ಕೋರ್ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ. ಇದರಿಂದ ನಿಮಗೆ ಮುಂದೆ ಸಾಲ ಪಡೆದುಕೊಳ್ಳುವುದು ಕಷ್ಟವಾಗಬಹುದು.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಆಗ ಸುಲಭವಾಗಿ ಸಾಲ ಸಿಗೋದಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಆಗ ಬ್ಯಾಂಕ್ ಗಳು ಸಾಲ ನೀಡುವುದಕ್ಕೆ ಹಿಂದೇಟು ಹಾಕುತ್ತದೆ. ಒಂದು ವೇಳೆ ಸಣ್ಣ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಲೋನ್ ನೀಡಲು ಮುಂದಾದರೂ ಕೂಡ ಅವರು ಸಾಮಾನ್ಯ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿದರ ವಿಧಿಸುತ್ತಾರೆ.
ನೀವು ಸಮಯಕ್ಕೆ ಕಂತು ಪಾವತಿಸದಿದ್ದರೆ, ಆಗ ಏಜೆಂಟ್ ಗಳು ನಿಮ್ಮನ್ನು ಸಂಪರ್ಕಿಸುತ್ತಾರೆ. ಅಲ್ಲದೇ ಈ ರಿಕವರಿ ಏಜೆಂಟ್‌ಗಳು ಸಾಲದ ಮೊತ್ತವನ್ನು ಸಂಗ್ರಹಿಸಲು ನಿಮ್ಮ ಕಚೇರಿ ಮತ್ತು ಮನೆಗೆ ಬರುವಂತೆ ಬೆದರಿಕೆ ಹಾಕುತ್ತಾರೆ. ಒಂದು ದಿನದಲ್ಲಿ ನೂರಾರು ಕರೆಗಳ ಮೂಲಕ ಅವರು ನಿಮ್ಮನ್ನು ಪೀಡಿಸುತ್ತಾರೆ.
ನೀವು ಆರಾಮವಾಗಿ ಮರುಪಾವತಿ ಮಾಡಲು ಎಷ್ಟು ಸಾಧ್ಯವೋ ಅಷ್ಟೇ ಮೊತ್ತವನ್ನ ಮಾತ್ರ ಸಾಲವಾಗಿ ತೆಗೆದುಕೊಳ್ಳಿ. ಯಾವುದೇ ಹಣಕಾಸಿನ ಸಮಸ್ಯೆಗಳಿದ್ದಲ್ಲಿ, ಬ್ಯಾಂಕ್ ಅನ್ನು ಸಂಪರ್ಕಿಸಿ ಮತ್ತು ಸಾಲದ ಪುನರ್ ರಚನೆ, ಸಾಲದ ಅವಧಿ ಹೆಚ್ಚಳ, EMI ಅನ್ನು ಕಡಿಮೆ ಮಾಡುವುದು ಅಥವಾ ಗ್ರೇಸ್ ಅವಧಿಯನ್ನು ಕೇಳುವ ಮೂಲಕ ನೀವು ಸಾಲವನ್ನು ಡೀಫಾಲ್ಟ್ ಮಾಡದಂತೆ ಚರ್ಚಿಸಿ. ನಿಮ್ಮ ಉಳಿತಾಯದ ಕಡೆ ಗಮನಕೊಡುವ ಮೂಲಕ ಅಥವಾ ಸ್ನೇಹಿತರು ಮತ್ತು ಪರಿಚಯಸ್ಥರಿಂದ ಹಣವನ್ನು ಪಡೆಯುವ ಮೂಲಕ ನೀವು ಸಾಲದ ಹೊರೆಯನ್ನು ಕಡಿಮೆ ಮಾಡಬಹುದು. ಯಾವುದೇ ಕಾರಣಕ್ಕೂ ಇಎಂಐ ಮಿಸ್ ಮಾಡುವ ತಪ್ಪು ಮಾಡಬೇಡಿ.


Click it and Unblock the Notifications