ಬೆಂಗಳೂರು, ಜುಲೈ 6: ಆದಾಯ ತೆರಿಗೆ ಸಲ್ಲಿಕೆ ಅಂತಿಮ ದಿನಾಂಕ ಹತ್ತಿರ ಬರುತ್ತಿದೆ. ಆದಾಯ ತೆರಿಗೆಗೆ ಸಂಬಂಧಿಸಿ ನೂರಾರು ನಿಯಮಗಳಿವೆ. ಮೃತ ವ್ಯಕ್ತಿಗೂ ಸಂಬಂಧಿಸಿ ಐಟಿಆರ್ ಸಲ್ಲಿಕೆ ಮಾಡಬೇಕಾಗುತ್ತದೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಐಟಿಆರ್ ಫೈಲ್ ಮಾಡೋ ವಿಚಾರಕ್ಕೆ ಬಂದರೆ ಸಾವನ್ನಪ್ಪಿದವರು ಏನು ಗಳಿಕೆ ಮಾಡಿದ್ದಾರೆ ಅನ್ನೋದು ಲೆಕ್ಕಕ್ಕೆ ಬರುತ್ತದೆ.
ಹಣಕಾಸು ವರ್ಷದ ಆರಂಭದ ದಿನಾಂಕದಿಂದ ಸಾವಿನ ದಿನಾಂಕದವರೆಗಿನ ಗಳಿಕೆಗಳು ಮೃತರ ಐಟಿಆರ್ ಫೈಲಿಂಗ್ಗೆ ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಮಿಸ್ಟರ್ ಎ, 2023ರ ನವೆಂಬರ್ 30 ರಂದು ವಿಧಿವಶರಾಗಿದ್ದರೆ, ಹಣಕಾಸು ವರ್ಷ 2023-24ಕ್ಕೆ ಅವರ ಐಟಿಆರ್ ಅನ್ನ ಏಪ್ರಿಲ್ 1 ರಿಂದ ನವೆಂಬರ್ 30ರವರೆಗಿನ ಗಳಿಕೆಗಳಿಗೆ ಸಂಬಂಧಿಸಿ ಫೈಲ್ ಮಾಡಬೇಕು.

ಒಂದು ವೇಳೆ ಮೃತಪಟ್ಟವರು ವಿಲ್ ಮಾಡಿದ್ರೆ, ಅವರ ವಾರಸುದಾರರು ಐಟಿಆರ್ ಫೈಲ್ ಮಾಡಬೇಕು. ಒಂದು ವೇಳೆ ವಿಲ್ ಮಾಡಿಲ್ಲ ಅಂತಾದ್ರೆ, ಮೃತರ ಹತ್ತಿರದ ಸಂಬಂಧಿಕರು ಅಂದ್ರೆ ಗಂಡ, ಹೆಂಡತಿ, ಮಕ್ಕಳನ್ನು ಕಾನೂನುಬದ್ಧ ವಾರಸುದಾರರು ಅಂತಾ ಪರಿಗಣಿಸುವುದರಿಂದ ಅವರು ಐಟಿಆರ್ ಫೈಲ್ ಮಾಡಬೇಕಾಗುತ್ತದೆ.
ಸಾವನ್ನಪ್ಪಿದವರ ಐಟಿಆರ್ ಫೈಲ್ ಮಾಡುವ ವ್ಯಕ್ತಿ ಅವರು ಮೃತರ ವಾರಸುದಾರ ಅಂತಾ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಮೃತರ ವಾರಸುದಾರರು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ, ಇ-ಫೈಲಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ, ರಿಜಿಸ್ಟರ್ ಆಸ್ ರೆಪ್ರೆಸೆನ್ ಟೆಟೀವ್ಸ್ ಅನ್ನೋದನ್ನ 'ಆಥರೈಸ್ಡ್ ಪಾರ್ಟನರ್ಸ್ ' ಟ್ಯಾಬ್ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಮೃತರ ಪ್ಯಾನ್ ಮತ್ತು ಮರಣ ಪ್ರಮಾಣ ಪತ್ರ ಬೇಕು. ಹಾಗೇ ವಾರಸುದಾರರ ಪ್ಯಾನ್, ಬ್ಯಾಂಕ್ ಖಾತೆ, ಅವರೇ ವಾರಸುದಾರರು ಎನ್ನುವುದಕ್ಕೆ ಸಾಕ್ಷಿ, ಇಂಡೆಮ್ನಿಟಿ ಲೆಟರ್ ಬೇಕು. ಇವುಗಳನ್ನ ದಾಖಲಿಸಿ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಐಟಿ ಡಿಪಾರ್ಟ್ಮೆಂಟ್ನಿಂದ ಅಪ್ರೂವಲ್ ಸಿಕ್ಕಿದ ಮೇಲೆ, ಮೃತರ ಕಾನೂನುಬದ್ಧ ವಾರಸುದಾರರ ಮೃತರ ಪರವಾಗಿ ಐಟಿಆರ್ ಫೈಲ್ ಮಾಡಬಹುದು.
ಜೀವಂತ ವ್ಯಕ್ತಿಯ ಐಟಿಆರ್ ಹೇಗೆ ಫೈಲ್ ಮಾಡ್ತಾರೋ ಹಾಗೇನೇ ಮೃತರ ಐಟಿಆರ್ ಕೂಡ ಫೈಲ್ ಮಾಡಬೇಕಾಗುತ್ತದೆ. ಇಲ್ಲೆ ಒಂದೇ ಒಂದು ವ್ಯತ್ಯಾಸ ಏನೆಂದರೆ, ರೆಪ್ರೆಸೆಂಟೆಟಿವ್ ಅಸೆಸಿ ಅನ್ನೋದನ್ನ ಸೆಲೆಕ್ಟ್ ಮಾಡಬೇಕಾಗುತ್ತದೆ. ಹಣಕಾಸು ವರ್ಷದ ಆರಂಭದ ದಿನದಂದ ಸಾವಿನ ದಿನದವರೆಗೆ ಅವರ ಗಳಿಕೆಗಳನ್ನ ಆದಾಯ ಎಂದು ಪರಿಗಣಿಸಲಾಗುತ್ತದೆ. ಈ ಆದಾಯ ಎಫ್ ಡಿ ಯಿಂದ ಬಂದಿರಬಹುದು, ಷೇರುಗಳಿಂದ ಬಂದಿರಬಹುದು ಅಥವಾ ಇನ್ಯಾವುದೇ ಆಸ್ತಿಗಳಿಂದ ಬಂದಿರಬಹುದು.
ಮೃತರ ಆಸ್ತಿಗಳಿಂದ ಗಳಿಸಿರೊ ಆದಾಯವನ್ನ ಡಿಕ್ಲೇರ್ ಮಾಡದಿದ್ದರೆ ಅದಕ್ಕೆ ವಾರಸುದಾರ ಅಥವಾ ರೆಪ್ರೆಸೆನ್ಟೆಟಿವ್ ಅದಕ್ಕೆ ಹೊಣೆಗಾರರಾಗುತ್ತಾರೆ. ಲೀಗಲ್ ಇನ್ಹೆರಿಟೆನ್ಸ್ ಅಥವಾ ಕಾನೂನುಬದ್ಧ ವಾರಸುದಾರ ಪ್ರಮಾಣಪತ್ರ ಸಿಗುವುದು ವಿಳಂಬವಾಯಿತು ಎನ್ನುವ ಕಾರಣ ನೀಡಿದರೆ ಆದಾಯ ತೆರಿಗೆ ಇಲಾಖೆ ಕೇಳುವುದಿಲ್ಲ. ವಾರಸುದಾರರು ಕಡ್ಡಾಯವಾಗಿ ಮೃತರ ಆದಾಯವನ್ನ ಐಟಿಆರ್ ನಲ್ಲಿ ದಾಖಲಿಸಬೇಕು. ಆದಾಯ ಮರೆ ಮಾಚುವ ಕೆಲಸ ಮಾಡಿದರೆ ನೋಟಿಸ್ ಬಂದರೂ ಅಚ್ಚರಿ ಇಲ್ಲ.


Click it and Unblock the Notifications