ಬೆಂಗಳೂರು, ಜುಲೈ 30: ಕರ್ನಾಟಕವು ಸೇರಿದಂತೆ ದೇಶದೆಲ್ಲೆಡೆ ಈಗ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಪ್ರಕ್ರಿಯೆಗಳು ನಡೆಯುತ್ತಿದೆ. ಈಗಾಗಲೇ ಕೋಟ್ಯಂತರ ತೆರಿಗೆದಾರರು ತಮ್ಮ ಐಟಿಆರ್ ಅನ್ನು ಸಲ್ಲಿಕೆ ಮಾಡಿದ್ದು, ಇನ್ನು ಕೂಡ ಹಲವರು ಈ ಸಲ್ಲಿಕೆ ಪ್ರಕ್ರಿಯೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಗಮನಾರ್ಹವೆಂದರೆ, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಒಮ್ಮೆ ಫೈಲಿಂಗ್ ಆದ ಬಳಿಕವೂ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಮಾಡಿಕೊಡುತ್ತದೆ. ಅಂದರೆ, ಮೊದಲು ರಿಟರ್ನ್ಸ್ ಸಲ್ಲಿಕೆ ಮಾಡುವಾಗ ತಪ್ಪು ಬ್ಯಾಂಕ್ ಖಾತೆ ಮಾಹಿತಿ ಸೇರಿದಂತೆ ಏನಾದರೂ ತಪ್ಪುಗಳು ಆಗಿದ್ದರೆ ಅಂಥಹ ಸಂದರ್ಭದಲ್ಲಿ ಅದನ್ನು ಪರಿಷ್ಕರಣೆ ಮಾಡಿ ದೋಷ ಸರಿಪಡಿಸುವುದಕ್ಕೆ ಅವಕಾಶ ನೀಡುತ್ತದೆ.
ಹಾಗಾದರೆ ಪರಿಷ್ಕೃತ ಐಟಿಆರ್ ಅಂದರೇನು?
ಆದಾಯ ತೆರಿಗೆ ಇಲಾಖೆ 1961ರ ಕಾಯ್ದೆಯ ಸೆಕ್ಷನ್ 139(5)ನಡಿ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಫೈಲಿಂಗ್ ಮಾಡುವುದಕ್ಕೆ ಅವಕಾಶವಿದೆ. ಅಂದರೆ, ಕಣ್ಣು ತಪ್ಪಿನಿಂದ ಆಗುವ ದೋಷವಿರಬಹುದು ಅಥವಾ ದಾಖಲೆಗಳು, ಮಾಹಿತಿಯನ್ನು ಸಲ್ಲಿಕೆ ಮಾಡುವಾಗ ಏನಾದರೂ ತಪ್ಪುಗಳಾಗಿದ್ದರೆ ಅಂಥಹ ಸಂದರ್ಭದಲ್ಲಿ ಅದನ್ನು ಸರಿಪಡಿಸಿಕೊಂಡು ಪರಿಷ್ಕೃತ ರಿಟರ್ನ್ಸ್ ಸಲ್ಲಿಸುವುದಕ್ಕೆ ಇದೊಂದು ಅವಕಾಶವಾಗಿದೆ. ಗಮನಾರ್ಹವೆಂದರೆ, ತೆರಿಗೆದಾರರು ಇದಕ್ಕೆ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿಲ್ಲ.

ಈ ಹಿಂದೆ ಆದಾಯ ತೆರಿಗೆ ಪಾವತಿ ಗಡುವಿನೊಳಗೆ ಪಾವತಿಸುವವರಿಗೆ ಮಾತ್ರ ಪರಿಷ್ಕೃತ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಅವಕಾಶವಿತ್ತು. ಆದರೆ, ಈಗ ಗಡುವು ದಾಟಿದ ಬಳಿಕ ಫೈಲಿಂಗ್ ಮಾಡುವವರಿಗೂ ಪರಿಷ್ಕೃತ ಐಟಿಆರ್ ಸಲ್ಲಿಸುವುದಕ್ಕೆ ಅವಕಾಶವಿದೆ. ಹೀಗಿರುವಾಗ, ತೆರಿಗೆದಾರರು ಒಮ್ಮೆ ಫೈಲಿಂಗ್ ಮಾಡಿರುವುದನ್ನು ತಿರಸ್ಕರಿಸುವ ಮೂಲಕ ಮತ್ತೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದಾಗಿದೆ.
ಪರಿಷ್ಕೃತ ರಿಟರ್ನ್ಸ್ ಫೈಲಿಂಗ್‌ಗೆ ಕೊನೆಯ ದಿನಾಂಕ ಯಾವುದು?
ಯಾವುದೇ ಆದಾಯ ತೆರಿಗೆಪಾವತಿದಾರರು ಆದಾಯ ತೆರಿಗೆ ಕಾಯ್ದೆ 139(5) ಸೆಕ್ಷನ್ ಪ್ರಕಾರ, 2023-24ರ ಆರ್ಥಿಕ ವರ್ಷದ 2024ರ ಡಿಸೆಂಬರ್ 31ರೊಳಗೆ ಅಥವಾ ಅಸೆಸ್‌ಮೆಂಟ್ ಅವಧಿ ಪೂರ್ಣಗೊಳ್ಳುವುದರೊಳಗೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು.
ಒಬ್ಬ ತೆರಿಗೆ ಪಾವತಿದಾರರು ಎಷ್ಟು ಬಾರಿ ಬೇಕಾದರೂ ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಕೆ ಮಾಡಬಹುದಾಗಿದೆ. ಅಂದರೆ ಅದಕ್ಕೆ ಯಾವುದೇ ರೀತಿಯ ಇತಿ-ಮಿತಿಗಳು ಇಲ್ಲ. ಆದರೆ, ಈ ಸಂಬಂಧ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.
ಹಾಗಾದರೆ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡುವುದು ಹೇಗೆ?
ಮೊದಲ ಹಂತದಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ ಮೂಲಕ ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಬೇಕು. ಪಾರ್ಟ್ ಎ ನಲ್ಲಿ ಸಾಮಾನ್ಯ ಮಾಹಿತಿಯಲ್ಲಿ ರಿವೈಸ್ಡ್ ರಿಟರ್ನ್ ಸೆಕ್ಷನ್ 139(5) ಆಯ್ಕೆ ಮಾಡಬೇಕು. ನಂತರ ಸರಿಯಾದ ಹಾಗೂ ಮೂಲ ಆದಾಯ ತೆರಿಗೆ ಮಾಹಿತಿಯನ್ನು ದಾಖಲಿಸಬೇಕು. ಮುಂದೆ ಐಟಿಆರ್ ಅರ್ಜಿಯನ್ನು ಆಯ್ಕೆ ಮಾಡಬೇಕು. ಅಲ್ಲಿ ಪರಿಷ್ಕೃತ ರಿಟರ್ನ್ಸ್ ಫಾರ್ಮ್‌ನಲ್ಲಿ ಮಾಹಿತಿ ಭರ್ತಿ ಮಾಡಬೇಕು. ಆ ನಂತರದಲ್ಲಿ ಪರಿಷ್ಕೃತ ರಿಟರ್ನ್ಸ್ ಅನ್ನು ಸಲ್ಲಿಕೆ ಮಾಡಬೇಕು. ಆದರೆ, ನಮೂದು ಮಾಡಿರುವ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕವಷ್ಟೇ ಸಲ್ಲಿಕೆ ಮಾಡಬೇಕು.


Click it and Unblock the Notifications