ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಪಿಂಚಣಿ ಸೌಲಭ್ಯವನ್ನು (Pension) ಹೊಂದಿರುತ್ತಾರೆ. ಇನ್ನು ಪಿಂಚಣಿ ಸೌಲಭ್ಯದೊಂದಿಗೆ ತನ್ನ ಸಂಗಾತಿಯನ್ನೂ ಸಹ ಆಯ್ಕೆ ಮಾಡಲಾಗುತ್ತದೆ. ಆದ್ರೆ ಈ ಮಧ್ಯೆ ಪಿಂಚಣಿ ವಿಚಾರದಲ್ಲಿ ಭಾರೀ ಗೊಂದಲವೊಂದು ಶುರುವಾಗಿತ್ತು. ಅದೇನೆಂದರೆ, ಒಂದು ವೇಳೆ ಸರ್ಕಾರಿ ನೌಕರರು (Govt Employees) ಅಥವಾ ಪಿಂಚಣಿದಾರರು ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದರೆ, ಪಿಂಚಣಿ ಹಣ ಯಾರ ಪಾಲಾಗುತ್ತೆ ಎಂಬುದು. ಆದ್ರೆ ಈ ಗೊಂದಲಕ್ಕೆ ಕೊನೆಗೂ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಸ್ಪಷ್ಟನೆ ನೀಡಿದ್ದು. ಕೇಂದ್ರ ಸರ್ಕಾರಿ ಇಲಾಖೆಗಳಿಗೂ ಈ ಬಗ್ಗೆ ಸೂಚನೆ ಹೊರಡಿಸಿದೆ.

ಅಕ್ಟೋಬರ್ 27, 2025 ರಂದು ಹೊರಡಿಸಲಾದ ಕಚೇರಿ ಜ್ಞಾಪನ (O.M. No. 1/1(33)/2024-P&PW(K)/9629) ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಇದು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ರ ನಿಯಮ 50 ರಲ್ಲಿ ಇರುವ ನಿಯಮಗಳ ಬಗ್ಗೆ ಹೇಳಲಿದ್ದು, ಇದು ಕುಟುಂಬ ಪಿಂಚಣಿ ಪಾವತಿಯನ್ನು ನಿಯಂತ್ರಿಸುವ ಕಾನೂನು ಹೊಂದಿದೆ.
ಮೃತ ಪಿಂಚಣಿದಾರರಿಗೆ ಇಬ್ಬರು ಹೆಂಡತಿ ಇದ್ದರೆ ಹಣ ಯಾರ ಪಾಲು?
DoPPW, ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದು "CCS (ಪಿಂಚಣಿ) ನಿಯಮಗಳು, 2021 ರ ನಿಯಮ 50(6)(1) ರ ಪ್ರಕಾರ ಮೃತ ಸರ್ಕಾರಿ ನೌಕರ ಅಥವಾ ಪಿಂಚಣಿದಾರ ಕಾನೂನು ಬದ್ಧವಾಗಿ ಮದುವೆಯಾದ ಸಂಗಾತಿಯನ್ನು 'ವಿಧವೆ'" ಎಂದು ಹೇಳುತ್ತದೆ.
ಇನ್ನು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021 ರ ನಿಯಮ 50(8)(c) ರ ಪ್ರಕಾರ, "ಮೃತ ಸರ್ಕಾರಿ ನೌಕರ ಅಥವಾ ಪಿಂಚಣಿದಾರರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿ ಇದ್ದರೆ, ಆತ ಮೃತಪಟ್ಟ ನಂತರ ಫ್ಯಾಮಿಲಿ ಪೆನ್ಷನ್ ಅನ್ನು ಸಮಾನವಾಗಿ ವಿಧವೆಯರಿಗೆ ನೀಡಲಾಗುತ್ತದೆ. ಒಂದು ವೇಳೆ ಒಬ್ಬ ವಿಧವೆ ಸಾವನ್ನಪ್ಪಿದರೆ ಅಥವಾ ಅನರ್ಹಳಾದರೆ, ಆಕೆಯ ಕುಟುಂಬ ಪಿಂಚಣಿಯ ಪಾಲು ನಿಯಮ 9 ರಲ್ಲಿ ನಮೂದಿಸಲಾದ ಅರ್ಹತಾ ಷರತ್ತುಗಳಿಗೆ ತಕ್ಕಂತೆ, ಆಕೆಯ ಮಗು ಅಥವಾ ಮಕ್ಕಳಿಗೆ ಪಾವತಿಸಲಾಗುತ್ತದೆ."
ಎರಡನೇ ಮದುವೆ ಕಾನೂನು ಬಾಹಿರ:
ಪಿಂಚಣಿದಾರರು, ಸರ್ಕಾರಿ ಉದ್ಯೋಗಿಗಳು ಒಂದು ವೇಳೆ ಹಿಂದೂ ವಿವಾಹ ಕಾಯ್ದೆ, 1955ರ ಅಡಿಯಲ್ಲಿ ಒಳಪಟ್ಟರೆ, ಎರಡನೇ ಮದುವೆಯಾಗಲು ಅನುಮತಿ ಇದ್ಯಾ? ಎಂಬ ಪ್ರಶ್ನೆ ಮೂಡುತ್ತದೆ. ಇದೀಗ ಈ ಬಗ್ಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಸ್ಪಷ್ಟನೆ ನೀಡಿದ್ದು, "ಮೊದಲ ಪತ್ನಿ ಜೀವಂತವಾಗಿರುವಾಗ ಮತ್ತೊಂದು ಮದುವೆಯಾಗುವುದು ಹಿಂದೂ ವಿವಾಹ ಕಾಯ್ದೆ, 1955ರ ಉಲ್ಲಂಘನೆಯಾಗಿದೆ ಮತ್ತು ಇದು CCS (Pension) ನಿಯಮಗಳು, 2021ರ ಕಾಯ್ದೆಗೂ ವಿರುದ್ಧವಾಗಿದೆ." ಆದ್ದರಿಂದ ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ, ಕಾನೂನು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.
ಅಷ್ಟೇ ಅಲ್ಲದೇ ಒಬ್ಬ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರ ಎರಡು ಹೆಂಡತಿಯನ್ನು ಹೊಂದಿದ್ದರೆ ಪೆನ್ಷನ್ ವಿಚಾರದಲ್ಲಿ, ಕಾನೂನು ವ್ಯವಹಾರಗಳ ಇಲಾಖೆಯಿಂದ ಸಲಹೆ ಪಡೆಯಲೇಬೇಕು ಎಂದು ಹೇಳಿದೆ.


Click it and Unblock the Notifications