ಉದ್ಯಮ ಸ್ಥಾಪನೆಯಲ್ಲಿ ಕಠಿಣ ಪರಿಶ್ರಮ, ಸಾದಿಸುವ ಛಲದೊಂದಿಗೆ ಯಾರಾದರೂ ಸಾಧಕರ ಸಾಹಸಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕಿರುವುದು ಕೂಡ ಮುಖ್ಯ ಎಂದರೆ ತಪ್ಪಾಗಲಾರದು. ಯಾಕೆಂದರೆ ಇಂಥ ಸಾಧಕರ ಯಶೋಗಾಥೆಗಳಿಂದ ಎಲ್ಲರೂ ಸ್ಫೂರ್ತಿ ಪಡೆದುಕೊಳ್ಳುತ್ತಾರೆ. ಇನ್ನು ಅಲ್ಪಮೊತ್ತದಿಂದ ಉದ್ಯಮ ಆರಂಭಿಸಿ ಇಂದು ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನೇ ಸಾಧಿಸಿದ ಅನೇಕರ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಸದ್ಯ ಅಂಥ ಮತ್ತೊಬ್ಬ ಸಾಧಕರ ಬಗ್ಗೆ ಇಂದು ನಾವು ಹೇಳಲಿದ್ದೇವೆ. ವಂದನಾ ಲೂತ್ರಾ ಅವರ ಉದ್ಯಮದ ಕಥೆಯು ಆತ್ಮವಿಶ್ವಾಸಕ್ಕೆ ಒಂದು ಉತ್ತಮ ಉದಾಹರಣೆ ಎನ್ನಬಹುದು. ಸದ್ಯ ನಾವಿಲ್ಲಿ ವಂದನಾ ಲೂತ್ರಾ ಅವರ ಹೆಸರು ಹೇಳಿದರೆ ಬಹುಷಃ ಹೆಚ್ಚಿನವರು ಗುರುತಿಸಲಾರರು. ಆದರೆ ನಾವು VLCC ಎಂದು ಹೆಸರು ಹೇಳಿದಾಕ್ಷಣ ಎಲ್ಲರೂ ಗುರುತಿಸಲು ಆರಂಭಿಸಬಹುದು. ಎಲ್ಲರಿಗೂ ತಿಳಿದಿರುವಂತೆ VLCC ದೇಶದಲ್ಲೇ ಖ್ಯಾತ ಫಿಟ್ನೆಸ್ ಹಾಗೂ ಬ್ಯೂಟಿಪಾರ್ಲರ್ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. ದಢೂತಿ ದೇಹ ಹೊಂದಿರುವವರು ಇದೇ VLCC ಕೇಂದ್ರದ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳಬಹುದು. ಇಂದು VLCC ಬೃಹತ್ ಸಂಸ್ಥೆಯಾಗಿ, ಬೆಳೆದಿದ್ದು, ಸುಮಾರು 4000 ಮಹಿಳೆಯರು ವೃತ್ತಿಪರ ಕೆಲಸಗಾರರು ಇದರ ಭಾಗವಾಗಿದ್ದಾರೆ. ಆದರೆ ಈ ಸಂಸ್ಥೆಯ ಆರಂಭ ಬಹಳ ಕಠಿಣದಾಯಕವಾಗಿತ್ತು. ಕೇವಲ 20,000 ರೂ.ನಿಂದ ಆರಂಭಿಸಿದ ಉದ್ಯಮವು ಇಂದು ಬರೊಬ್ಬರಿ 4500 ಕೋಟಿ ರೂ. ಮೊತ್ತದ ಕಂಪೆನಿಯಾಗಿ ಬೆಳೆದು ನಿಂತಿದೆ. ಇನ್ನು ವಿಶೇಷವಾಗಿ ಹೇಳಬೇಕೆಂದರೆ ವಂದನಾ ಲೂತ್ರಾ ಅವರ ನಿವ್ವಲ ಮೌಲ್ಯವೇ 1300 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಜೀವನದಲ್ಲಿ ಏನನ್ನಾದರೂ ದೊಡ್ಡದನ್ನೇ ಸಾಧಿಸಬೇಕು ಎನ್ನುವ ಮಹತ್ವಾಕಾಂಕ್ಷಿ ಹೊಂದಿರುವ ಉದ್ಯಮಿಗಳಿಗೆ ಸ್ಪೂರ್ತಿಯ ಮೂಲವಾಗಿದೆ.
ವಂದನಾ ಅವರ ಬಗ್ಗೆ ಒಂದಿಷ್ಟು...
1989ರಲ್ಲಿ ವಂದನಾ ಅವರು ದೆಹಲಿಯಲ್ಲಿ ವಂದನಾ ಲೂತ್ರಾ ಕರ್ವ್ಸ್ ಮತ್ತು ಕರ್ವ್ಸ್ (VLCC) ಸಂಸ್ಥೆ ಸ್ಥಾಪಿಸುವ ಮೂಲಕ ಅವರ ಉದ್ಯಮ ಜೀವನ ಆರಂಭವಾಗಿತ್ತು. ತಾಯಿಯ ದತ್ತಿ ಕಾರ್ಯದಿಂದ ಸ್ಫೂರ್ತಿ ಪಡೆದ ವಂದನಾ ಅವರು ಜನರ ಜೀವನದಲ್ಲಿ ಬದಲಾವಣೆಗೆ ಹಾತೊರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಅವರು ಪೌಷ್ಟಿಕಾಂಶ ಮತ್ತು ಸೌಂದರ್ಯವರ್ಧಕಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದು, ಬಳಿಕ ಭಾರತಕ್ಕೆ ಮರಳಿದ್ದರು. ವೆಲ್‌ನೆಸ್ ಉದ್ಯಮದಲ್ಲಿ ಹಲವು ಅಂತರವನ್ನು ಅವರು ಕಂಡುಕೊಂಡಿದ್ದರು. ಕ್ಷೇಮವನ್ನು ಐಷಾರಾಮಿ ಎಂದು ನೋಡುತ್ತಿದ್ದ ಸಮಯದಲ್ಲಿ, ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಿದ ಆಹಾರ ಮತ್ತು ವ್ಯಾಯಾಮ ಕಾರ್ಯಕ್ರಮಗಳೊಂದಿಗೆ ಅದನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡುವುದು ವಂದನಾ ಅವರ ಯೋಜನೆಯಾಗಿತ್ತು. ಆದರೆ ವಂದನಾ ಅವರ ಉದ್ಯಮದ ಆರಂಭಿಕ ಹಾದಿ ಸುಲಭವಾಗಿರಲಿಲ್ಲ. 1990 ರ ದಶಕದಲ್ಲಿ ಮಹಿಳಾ ಉದ್ಯಮಿಯಾಗಿ, ವಂದನಾ ಅವರು ತಮ್ಮ ವ್ಯವಹಾರ ಕಲ್ಪನೆಯ ಬಗ್ಗೆ ಸಾಮಾಜಿಕ ಸವಾಲುಗಳನ್ನು ಮತ್ತು ಅನುಮಾನಗಳನ್ನು ಎದುರಿಸಿದರು. ಅಡೆತಡೆಗಳ ನಡುವೆಯೂ ಅವರ ದೃಢಸಂಕಲ್ಪ ಅವರನ್ನು ಉದ್ಯಮದಲ್ಲಿ ಮುಂದುವರೆಸುವಂತೆ ಮಾಡಿತು. ಪರಿಣಾಮ 2000ರ ವೇಳೆಗೆ VLCC ಸಂಸ್ಥೆಯು ಆಗಾಧವಾಗಿ ಬೆಳೆದು ನಿಂತಿತು.

ದೇಶದಲ್ಲಿ ವಿಸ್ತರಿಸಿದ VLCC
VLCC ಸಂಸ್ಥೆ ತನ್ನ ಆರಂಭಿಕ ದಿನಗಳಲ್ಲಿ ಹಿನ್ನಡೆ ಕಂಡರೂ ನಿಧಾನವಾಗಿ ದೇಶದಲ್ಲಿ ತನ್ನ ವಿಸ್ತರಣೆಯನ್ನು ಆರಂಭಿಸಿತು. ಆದರೆ ಆರಂಭಿಕ ಹಂತದಲ್ಲಿ ವಂದನಾ ಅವರ ಕಾರ್ಯದ ಬಗ್ಗೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಇನ್ನು ಹೀಗೆ ಅಭಿವೃದ್ದಿ ಹೊಂದುತ್ತಾ ಸಾಗಿದ ಸಂಸ್ಥೆಯು 2023ರ ವೇಳೆಗೆ 144 ನಗರ ಪ್ರದೇಶಗಳಿಗೆ ವಿಸ್ತರಣೆಯಾಯಿತು. ಅದೂ ಅಲ್ಲದೆ 311 ಕೇಂದ್ರಗಳಿಗೂ ವಿಸ್ತರಿಸಿದೆ. ಅದೂ ಅಲ್ಲದೆ ವಾರ್ಷಿಕವಾಗಿ ಅವರು 10,000 ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆಯುತ್ತಿದ್ದಾರೆ. ಹೀಗೆ ನಿಧಾನವಾಗಿ ಬೆಳೆಯುತ್ತಾ ಸಾಗಿದ ವಂದನಾ ಅವರು 2013ರಲ್ಲಿ VLCC 144 ನಗರಗಳಲ್ಲಿ 311 ಕೇಂದ್ರಗಳಿಗೆ ವಿಸ್ತರಿಸಿತು. ಅಲ್ಲದೆ 2013ರಲ್ಲಿ ವಂದನಾ ಅವರು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದು, ಅಲ್ಲದೆ ಫೋರ್ಬ್ಸ್‌ನ ಪ್ರಬಲ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದ್ದಾರೆ. ಇನ್ನು ಉಳಿದಂತೆ ನಾವೀನ್ಯತೆ ಮತ್ತು ಸಬಲೀಕರಣಕ್ಕೆ ತನ್ನ ಬದ್ಧತೆಯೊಂದಿಗೆ ಅವರು ಯುವ ಉದ್ಯಮಿಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರೆಸಿದ್ದಾರೆ.


Click it and Unblock the Notifications