2026ರ ನವೆಂಬರ್ 10ರಂದು, ರಿಸ್ಕ್-ಆಧಾರಿತ ಕ್ಯಾಪಿಟಲ್ ವ್ಯವಸ್ಥೆಯನ್ನು (RBC) ಭಾರತೀಯ ಅಕೌಂಟಿಂಗ್ ಮಾನದಂಡಗಳಿಗೆ (Ind AS) ಒಳಪಡಿಸಲು 'ಐಆರ್ಡಿಎಐ' (IRDAI) ಎರಡು ಕಾರ್ಯನಿರತ ಸಮಿತಿಗಳನ್ನು ರಚಿಸಿದೆ. ಕರಡು ನಿಯಮಗಳನ್ನು ಸಲ್ಲಿಸಲು ಇವುಗಳಿಗೆ ಒಂದು ತಿಂಗಳ ಗಡುವು ನೀಡಲಾಗಿದೆ. ಹಾಗಂದ ತಕ್ಷಣ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ತಕ್ಷಣವೇ ಹೆಚ್ಚಾಗುವುದಿಲ್ಲ! ಇದರ ನೈಜ ಪರಿಣಾಮಗಳು ಕಂಡುಬರಲು ಕನಿಷ್ಠ 6 ರಿಂದ 18 ತಿಂಗಳುಗಳು ಬೇಕಾಗಬಹುದು. ಇನ್ನು ಏಪ್ರಿಲ್ 2027ರ ವೇಳೆಗೆ ಇದನ್ನು ಸಂಪೂರ್ಣವಾಗಿ ಜಾರಿಗೆ ತರುವ ಗುರಿ ಹೊಂದಲಾಗಿದೆ. ಭಾರತದ 'Ind AS 117' ವ್ಯವಸ್ಥೆಗೆ ತಕ್ಕಂತೆ ಈ ಹೊಸ ಬದಲಾವಣೆ ಮಾಡಲಾಗುತ್ತಿದೆ.
ಹೊಸ ರಿಸ್ಕ್-ಆಧಾರಿತ ಕ್ಯಾಪಿಟಲ್ ವ್ಯವಸ್ಥೆಯು, ಪ್ರಸ್ತುತ ಇರುವ ಸ್ಥಿರ ಸಾಲ್ವೆನ್ಸಿ ಮಾರ್ಜಿನ್ ಬದಲಿಗೆ ಕಂಪನಿಗಳು ಎದುರಿಸುವ ನೈಜ ರಿಸ್ಕ್ಗೆ ಅನುಗುಣವಾಗಿ ಬಫರ್ ಬಂಡವಾಳವನ್ನು ನಿಗದಿಪಡಿಸುತ್ತದೆ. ಇನ್ಶೂರೆನ್ಸ್ ಕಂಪನಿಗಳ ಲೆಕ್ಕಪತ್ರ ಹಾಗೂ ಆರ್ಥಿಕ ಸ್ಥಿರತೆಯ ನಡುವೆ ಸುಧಾರಣೆ ತರಲು, Ind AS ಹಣಕಾಸು ವರದಿಗಳ ಆಧಾರದ ಮೇಲೆಯೇ ಅಗತ್ಯ ಬಂಡವಾಳವನ್ನು ಲೆಕ್ಕಹಾಕಲಾಗುತ್ತದೆ. ಲೈಫ್ ಇನ್ಶೂರೆನ್ಸ್ ಕಂಪನಿಗಳು ಮಾರುಕಟ್ಟೆ, ಕ್ರೆಡಿಟ್, ಪಾಲಿಸಿ ಲ್ಯಾಪ್ಸ್, ಮರಣ ದರ, ವೆಚ್ಚ ಮತ್ತು ಆಕಸ್ಮಿಕ ವಿಕೋಪಗಳ ರಿಸ್ಕ್ಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಹೆಲ್ತ್ ಮತ್ತು ಜನರಲ್ ಇನ್ಶೂರೆನ್ಸ್ ಕಂಪನಿಗಳಿಗೆ ಅಂಡರ್ರೈಟಿಂಗ್ ಹಾಗೂ ವಿಕೋಪಗಳ ರಿಸ್ಕ್ ಭಾರ ಹೆಚ್ಚಿರಲಿದೆ. ಅನಗತ್ಯ ಸುರಕ್ಷತಾ ನಿಧಿಗಳನ್ನು ಕಡಿತಗೊಳಿಸಿ, ನೈಜ ನಷ್ಟದ ಆಧಾರದಲ್ಲೇ ಕಂಪನಿಗಳು ಬಂಡವಾಳ ಕಾಯ್ದಿರಿಸುವಂತೆ ಮಾಡುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ರಿಸ್ಕ್-ಆಧಾರಿತ ಕ್ಯಾಪಿಟಲ್, Ind AS ಮತ್ತು ನಿಮ್ಮ ಪ್ರೀಮಿಯಂ ಮೇಲಾಗುವ ಪರಿಣಾಮ
ಕಂಪನಿಗಳು ಈ ಹೊಸ ವ್ಯವಸ್ಥೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿರುವುದರಿಂದ, ತಕ್ಷಣವೇ ಪಾಲಿಸಿ ದರಗಳು ಬದಲಾಗುವ ಸಾಧ್ಯತೆ ಕಡಿಮೆ. ಪಾರ್ಟಿಸಿಪೇಟಿಂಗ್ ಪ್ಲಾನ್ಗಳು ಕಂಪನಿಯ ಲಾಭವನ್ನು ಹಂಚಿಕೊಳ್ಳುವುದರಿಂದ, ಇಲ್ಲಿ ಗ್ಯಾರಂಟಿ ಮತ್ತು ಬೋನಸ್ ಶೈಲಿಯೇ ಬಂಡವಾಳವನ್ನು ನಿರ್ಧರಿಸುತ್ತದೆಯೇ ಹೊರತು ದಿಢೀರ್ ಬೆಲೆ ಏರಿಕೆಯಲ್ಲ. ಆದರೆ, ಗ್ಯಾರಂಟಿ ರಿಟರ್ನ್ಸ್ ನೀಡುವ ನಾನ್-ಪಾರ್ಟಿಸಿಪೇಟಿಂಗ್ ಉಳಿತಾಯ ಯೋಜನೆಗಳಿಗೆ ಕಂಪನಿಗಳು ಹೆಚ್ಚಿನ ಬಫರ್ ಬಂಡವಾಳ ಕಾಯ್ದಿರಿಸಬೇಕಾಗಬಹುದು. ಯುಲಿಪ್ (ULIP) ಯೋಜನೆಗಳಲ್ಲಿ ಮಾರುಕಟ್ಟೆಯ ರಿಸ್ಕ್ ಅನ್ನು ಗ್ರಾಹಕರೇ ಹೊರಬೇಕಾಗಿರುವುದರಿಂದ ಕಂಪನಿಗಳ ಮೇಲಿನ ಬಂಡವಾಳದ ಹೊರೆ ಕಡಿಮೆ ಇರಲಿದೆ; ಆದರೆ ಅದಕ್ಕೆ ತಕ್ಕಂತೆ ಶುಲ್ಕಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಬಹುದು. ಆದಾಗ್ಯೂ, ಯುಲಿಪ್ ರಿಟರ್ನ್ಸ್ ಸಂಪೂರ್ಣವಾಗಿ ಫಂಡ್ ಪ್ರದರ್ಶನದ ಮೇಲೆಯೇ ಆಧಾರಿತವಾಗಿರುತ್ತದೆಯೇ ಹೊರತು ಅಕೌಂಟಿಂಗ್ ನಿಯಮಗಳ ಮೇಲಲ್ಲ.
ಇನ್ಶೂರೆನ್ಸ್ ಕಂಪನಿಯ ಆರ್ಥಿಕ ಶಕ್ತಿ ಮತ್ತು ಕ್ಲೈಮ್ ಸಾಮರ್ಥ್ಯ ತಿಳಿಯುವುದು ಹೇಗೆ?
ಯಾವುದೇ ಇನ್ಶೂರೆನ್ಸ್ ಕಂಪನಿಯ 'ಸಾಲ್ವೆನ್ಸಿ ರೇಶಿಯೋ' ಗಮನಿಸಿ; ಭಾರತದಲ್ಲಿ ಇದರ ಕನಿಷ್ಠ ನಿಯಂತ್ರಣ ಮಿತಿ ಶೇಕಡಾ 150 ರಷ್ಟಿದೆ. ಪ್ರತಿಯೊಂದು ತ್ರೈಮಾಸಿಕದಲ್ಲೂ ಈ ಪ್ರಮಾಣಕ್ಕಿಂತ ಉತ್ತಮ ಮಟ್ಟ ಕಾಯ್ದುಕೊಂಡಿರುವ ಕಂಪನಿಯನ್ನು ಆಯ್ಕೆ ಮಾಡುವುದು ಸುರಕ್ಷಿತ. ಸೇವೆಯ ಗುಣಮಟ್ಟವನ್ನು ಅಳೆಯಲು, ಹೆಲ್ತ್ ಇನ್ಶೂರೆನ್ಸ್ ಕ್ಯಾಶ್ಲೆಸ್ ಸಮಯವನ್ನು ಗಮನಿಸಿ: ಪ್ರೀ-ಆಥರೈಸೇಶನ್ಗೆ 1 ಗಂಟೆ ಮತ್ತು ಡಿಸ್ಚಾರ್ಜ್ಗೆ 3 ಗಂಟೆಗಳ ಕಾಲಮಿತಿ ಇರುತ್ತದೆ. ಲೈಫ್ ಇನ್ಶೂರೆನ್ಸ್ ವಿಚಾರದಲ್ಲಿ, ಗ್ರಾಹಕರು ಎಷ್ಟು ಕಾಲ ಪಾಲಿಸಿ ಮುಂದುವರಿಸಿದ್ದಾರೆ ಎಂಬುದನ್ನು ತಿಳಿಯಲು 13ನೇ ಮತ್ತು 61ನೇ ತಿಂಗಳ 'ಪರ್ಸಿಸ್ಟೆನ್ಸಿ ರೇಶಿಯೋ' ಪರಿಶೀಲಿಸಿ. ಜೊತೆಗೆ, ಹೂಡಿಕೆದಾರರಿಗೆ ನೀಡುವ ವರದಿಗಳಲ್ಲಿ ಕಂಪನಿಯ 'ಎಂಬೆಡೆಡ್ ವ್ಯಾಲ್ಯೂ' ಹಾಗೂ ಆರ್ಥಿಕ ಸ್ಥಿರತೆಯ ಟ್ರೆಂಡ್ಗಳನ್ನು ತಿಳಿದುಕೊಳ್ಳಬಹುದು.
ಪಾಲಿಸಿ ನವೀಕರಿಸುವ ಮುನ್ನ ನೀವೇನು ಮಾಡಬೇಕು?
ನಿಮ್ಮ ನಗರದ ಆಸ್ಪತ್ರೆ ವೆಚ್ಚಗಳಿಗೆ ತಕ್ಕಂತೆ 'ಸಮ್ ಇನ್ಶ್ಯೂರ್ಡ್' ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ; ಪಾಲಿಸಿಯಲ್ಲಿ ಕೊರತೆಗಳಿದ್ದರೆ ರೈಡರ್ಗಳನ್ನು ಸೇರಿಸಿಕೊಳ್ಳಿ. ಇನ್ಶೂರೆನ್ಸ್ ಕಂಪನಿಯ ಸಾಲ್ವೆನ್ಸಿ, ಕ್ಲೈಮ್ ನಿಗದಿ ಸಮಯ ಹಾಗೂ ಪರ್ಸಿಸ್ಟೆನ್ಸಿಯನ್ನು ಕಂಪನಿಯ ಸಾರ್ವಜನಿಕ ದಾಖಲೆಗಳಲ್ಲಿ ಒಮ್ಮೆ ಪರಿಶೀಲಿಸಿ. ಯಾವುದೇ ದೂರುಗಳಿದ್ದರೆ ಪರಿಹರಿಸಿಕೊಳ್ಳಲು 'ಬೀಮಾ ಭರೋಸಾ' ಪೋರ್ಟಲ್ ಬಳಸಿ, ಅಗತ್ಯವಿದ್ದರೆ 'ಒಂಬುಡ್ಸ್ಮನ್' ಮೊರೆ ಹೋಗಿ; ಪರಿಹಾರ ನೀಡುವಲ್ಲಿ ವಿಳಂಬವಾದರೆ ದಿನಕ್ಕೆ ₹5,000 ದಂಡ ವಿಧಿಸಲಾಗುತ್ತದೆ. ಸದ್ಯಕ್ಕೆ ಯಾವುದೇ ಆತಂಕದಿಂದ ಪಾಲಿಸಿಗಳನ್ನು ತಕ್ಷಣ ಬದಲಾಯಿಸಲು ಹೋಗಬೇಡಿ; ಆರ್ಬಿಸಿ ನಿಯಮಗಳ ಕರಡು ಮತ್ತು ಕಂಪನಿಗಳ ಹೊಸ ಯೋಜನೆಗಳು ಹೊರಬಂದ ನಂತರವೇ ಸೂಕ್ತ ನಿರ್ಧಾರ ತಗೆದುಕೊಳ್ಳಿ.


Click it and Unblock the Notifications