ಬೆಂಗಳೂರು, ಜುಲೈ 10: ತೆರಿಗೆ ವಿನಾಯಿತಿ ಎಂದಾಗ ಎಂದಾಗ ನಮ್ಮೆಲ್ಲರ ಕಣ್ಣಿಗೆ ಕಾಣಿಸುವುದು 80ಸಿ. ಈ 80 ಸಿ ಲಿಮಿಟ್ ಮುಗಿದ ಮೇಲೆ ತೆರಿಗೆ ಲಾಭ ಪಡೆದುಕೊಳ್ಳುವ ದಾರಿಗಳು ಇವೆಯಾ? ಈ ವಿಚಾರ ನಮಗೆ ಗೊತ್ತಿರುವುದಿಲ್ಲ. ಅದನ್ನು ತಿಳಿಸಿಕೊಡುವ ಸಣ್ಣ ಪ್ರಯತ್ನ ಮಾಡುತ್ತೇವೆ.
ಬಹುತೇಕ ಜನರು, ಅದರಲ್ಲೂ ನೌಕರರು ತಮ್ಮ 1.5 ಲಕ್ಷ ರೂ. ಇರುವ 80ಸಿ ಡಿಡಕ್ಷನ್ ಲಿಮಿಟ್ ಅನ್ನು ಇಪಿಎಫ್, ಮಕ್ಕಳ ಟ್ಯೂಷನ್ ಫೀ ಮತ್ತು ಲೈಫ್ ಇನ್ಶುರೆನ್ಸ್‌ನಿಂದಲೇ ತುಂಬಿಕೊಂಡಿರುತ್ತಾರೆ. ಇಂಥ ಸಂದರ್ಭದಲ್ಲಿ ತೆರಿಗೆ ಉಳಿಸುವುದು ಹೇಗೆ? ಇದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ, 80ಸಿ ಹೊರತಾಗಿಯೂ, ತೆರಿಗೆ ಉಳಿಸುವುದಕ್ಕೆ ಇತರ ಆಯ್ಕೆಗಳಿವೆ.

80ಸಿ ಬಿಟ್ಟು, ತೆರಿಗೆ ಉಳಿಸುವುದಕ್ಕೆ ಇರುವ ಮೊದಲ ಆಯ್ಕೆಯು ನ್ಯಾಷನಲ್ ಪೆನ್ಷನ್ ಸಿಸ್ಟಮ್ ಅಥವಾ ಎನ್‌ಪಿಎಸ್ ಸಿಸ್ಟಮ್. 1.5 ಲಕ್ಷ ರೂ. 80ಸಿ ಲಿಮಿಟ್ ಮುಗಿದ ಮೇಲೆ 80ಸಿಸಿಡಿ1(ಬಿ) ನಮ್ಮ ನೆರವಿಗೆ ಬರುತ್ತದೆ. ಎನ್‌ಪಿಎಸ್ ಟಯರ್ 1 ಅಕೌಂಟ್‌ನಲ್ಲಿ ಮಾಡಿದ ಹೂಡಿಕೆಗೆ ಸೆಕ್ಷನ್ 80ಸಿಸಿಡಿ1(ಬಿ) ಅಡಿಯಲ್ಲಿ ಹೆಚ್ಚುವರಿ 50 ಸಾವಿರ ಡಿಡಕ್ಷನ್ ಸಿಗುತ್ತದೆ. ಇದು 80ಸಿ ಯಲ್ಲಿ ನಮಗೆ ಸಿಗುವ 1.5 ಲಕ್ಷ ರೂ. ಲಿಮಿಟ್‌ಗೆ ಹೆಚ್ಚುವರಿಯಾಗಿರುತ್ತದೆ.
ಚಿಕಿತ್ಸೆ ವೆಚ್ಚ ಹೆಚ್ಚಳವಾಗುತ್ತಿರುವ ಸಮಯದಲ್ಲಿ ಹೆಲ್ತ್ ಇನ್ಶುರೆನ್ಸ್ ಎಂಬುದು ಕಡ್ಡಾಯ. ಹೆಲ್ತ್ ಇನ್ಶುರೆನ್ಸ್‌ನ ಒಂದು ಹೆಚ್ಚುವರಿ ಪ್ರಯೋಜನವೆಂದರೆ ಅದರಲ್ಲಿ ತೆರಿಗೆ ಉಳಿತಾಯವೂ ಆಗುತ್ತದೆ. ಸೆಕ್ಷನ್ 80ಡಿ ಅಡಿಯಲ್ಲಿ, ನೀವು, ಬಾಳಸಂಗಾತಿ ಮತ್ತು ಮಕ್ಕಳಿಗೆ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ರೂ. 25,000 ವರೆಗೆ ಡಿಡಕ್ಷನ್ ಇರುತ್ತದೆ. 60 ಹಾಗೂ ಹೆಚ್ಚು ವರ್ಷದ ಹಿರಿಯ ನಾಗರಿಕರಿಗೆ, ಡಿಡಕ್ಷನ್ ಮಿತಿಯು ರೂ. 50 ಸಾವಿರ ಇದೆ. ನಿಮಗೆ ಮತ್ತು ಹಿರಿಯ ನಾಗರಿಕರಾಗಿರುವ ಪಾಲಕರಿಗೆ ನೀವು ಹೆಲ್ತ್ ಇನ್ಶುರೆನ್ಸ್ ಖರೀದಿ ಮಾಡಿದರೆ 75 ಸಾವಿರ ರೂ.ವರೆಗೆ ಡಿಡಕ್ಷನ್ ಕ್ಲೇಮ್ ಮಾಡಲು ಅರ್ಹತೆ ಇರುತ್ತದೆ.
ಆದಾಯ ತೆರಿಗೆ ಕಾಯ್ಸ್ ಸೆಕ್ಷನ್ 24 ರ ಅಡಿಯಲ್ಲಿ, ಮನೆ ಖರೀದಿ ಅಥವಾ ನಿರ್ಮಾಣಕ್ಕೆ ತೆಗೆದುಕೊಂಡ ಹೋಮ್‌ಲೋನ್ ಮೇಲೂ ತೆರಿಗೆ ವಿನಾಯಿತಿ ಇದೆ. ಸ್ವಂತಕ್ಕೆ ಪ್ರಾಪರ್ಟಿ ಖರೀದಿ ಮಾಡಿದರೆ, ಹೋಮ್ ಲೋನ್ ಮೇಲೆ ಕಟ್ಟಿದ ಬಡ್ಡಿಗೆ 2 ಲಕ್ಷ ರೂ.ವರೆಗೆ ಡಿಡಕ್ಷನ್ ಸಿಗುತ್ತದೆ. ಇನ್ನೊಂದು ಕಡೆಗೆ, ಸಾಲದ ಮೂಲಕ ಮನೆ ಖರೀದಿ ಮಾಡಿದ್ದು, ಅದನ್ನು ಬಾಡಿಗೆಗೆ ನೀಡಿದರೆ, ಇಡೀ ಬಡ್ಡಿ ಮೊತ್ತದ ಮೇಲೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಹೋಮ್ ಲೋನ್‌ನ ಅಸಲು ಮರುಪಾವತಿ ಮಾಡಿದಾಗ ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಮಾಡಬಹುದು.
ಉನ್ನತ ಶಿಕ್ಷಣಕ್ಕೆ ಸಾಲ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಎಜುಕೇಶನ್ ಲೋನ್ ತೆಗೆದುಕೊಂಡ ವಿದ್ಯಾರ್ಥಿಗಳು ಸೆಕ್ಷನ್ 80ಇ ಅಡಿಯಲ್ಲಿ ಸಾಲದ ಮೇಲಿನ ಬಡ್ಡಿಗೆ ತೆರಿಗೆ ಡಿಡಕ್ಷನ್ ಪಡೆಯಬಹುದು. ಸಾಲವನ್ನು ಮರುಪಾವತಿ ಮಾಡುತ್ತಿರುವ ಮಗು ಅಥವಾ ಪಾಲಕರು ಇದರ ಪ್ರಯೋಜನವನ್ನು ಕ್ಲೇಮ್ ಮಾಡಬಹುದು. ಎಜುಕೇಶನ್ ಲೋನ್ ಆರಂಭವಾಗುವ ವರ್ಷದಿಂದ ಡಿಡಕ್ಷನ್ ಅನ್ನು ಕ್ಲೇಮ್ ಮಾಡಬಹುದು. ನೀವು ಸಾಲ ರೀಪೇ ಮಾಡುವಷ್ಟು ವರ್ಷಗಳವರೆಗೂ ಡಿಡಕ್ಷನ್ ಕ್ಲೇಮ್ ಮಾಡಬಹುದು. ಆದರೆ, ಡಿಡಕ್ಷನ್‌ನ ಪ್ರಯೋಜನವನ್ನು ಗರಿಷ್ಠ 7 ವರ್ಷಗಳವರೆಗೆ ಮಾತ್ರ ಪಡೆಯಬಹುದು. ಉದಾಹರಣೆಗೆ, 10 ವರ್ಷಗಳಿಗೆ ಶಿಕ್ಷಣ ಸಾಲವನ್ನು ರಿಪೇ ಮಾಡಿದರೆ, 7 ವರ್ಷಗಳವರೆಗೆ ಮಾತ್ರ ಈ ಪ್ರಯೋಜನವನ್ನು ಪಡೆಯಬಹುದು. ಬಡ್ಡಿ ಪಾವತಿ ಮಾಡುವುದಕ್ಕೆ ಡಿಡಕ್ಷನ್ ಕ್ಲೇಮ್ ಮಾಡುವುದರ ಮೇಲೆ ಯಾವುದೇ ಮಿತಿ ಇಲ್ಲ.
ದಾನ ಮಾಡಿದರೂ ತೆರಿಗೆಯೂ ಉಳಿತಾಯವಾಗುತ್ತದೆ. ಆಯ್ದ ರಿಲೀಫ್ ಫಂಡ್‌ಗಳು ಅಥವಾ ದತ್ತಿ ಸಂಸ್ಥೆಗಳಿಗೆ ದಾನ ಮಾಡಿದಾಗ, ಉದಾಹರಣೆಗೆ, ಪ್ರೈಮ್ ಮಿನಿಸ್ಟರ್ಸ್ ನ್ಯಾಷನಲ್ ರಿಲೀಫ್ ಫಂಡ್, ನ್ಯಾಷನಲ್ ಡಿಫೆನ್ಸ್ ಫಂಡ್‌ಗೆ ಹಣ ಕೊಟ್ಟರೆ, ಸೆಕ್ಷನ್ 80ಜಿ ಅಡಿಯಲ್ಲಿ ನೀವು ಡಿಡಕ್ಷನ್ ಕ್ಲೇಮ್ ಮಾಡಬಹುದು. ನೀವು ಯಾವ ಸಂಸ್ಥೆಗೆ ದಾನ ನೀಡುತ್ತೀರೋ, ಡೊನೇಶನ್ ಮೊತ್ತದ 50 ಅಥವಾ 100 ಪರ್ಸೆಂಟ್ ಡಿಡಕ್ಷನ್ ಅನ್ನು ನೀವು ಕ್ಲೇಮ್ ಮಾಡಬಹುದು. ನಗದು ರೂಪದಲ್ಲಿ 2000 ಕ್ಕಿಂತ ಹೆಚ್ಚು ದಾನ ಮಾಡಿದರೆ, ಆಗ ಅದು ತೆರಿಗೆ ಡಿಡಕ್ಷನ್‌ಗೆ ಅರ್ಹವಾಗುವುದಿಲ್ಲ. ಸರಕುಗಳ ರೂಪದಲ್ಲಿ ಮಾಡಿದ ಡೊನೇಶನ್‌ಗಳು ಟ್ಯಾಕ್ಸ್ ಡಿಡಕ್ಷನ್‌ಗೆ ಅರ್ಹವಾಗಿರುವುದಿಲ್ಲ. ತೆರಿಗೆ ಡಿಡಕ್ಷನ್ ಪ್ರಯೋಜನ ಪಡೆದುಕೊಳ್ಳಲು ತೆರಿಗೆದಾರರು ಕೆಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಈ ಷರತ್ತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಅವಲಂಬಿತ ಅಂಗವಿಕಲ ವ್ಯಕ್ತಿಯ ಚಿಕಿತ್ಸೆಗೆ ನೀವು ಖರ್ಚು ಮಾಡಿದರೆ ಸೆಕ್ಷನ್ 80ಡಿಡಿ ಅಡಿಯಲ್ಲಿ ತೆರಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಅವಲಂಬಿತರು 40% ಅಥವಾ ಹೆಚ್ಚು ಅಂಗವಿಕಲರಾಗಿದ್ದರೆ, ವೈದ್ಯಕೀಯ ವೆಚ್ಚಗಳಿಗೆ ಮಾಡಿದ 75 ಸಾವಿರ ರೂ.ವರೆಗೆ ಡಿಡಕ್ಷನ್ ಮಾಡಬಹುದು.80% ಅಥವಾ ಹೆಚ್ಚು ಡಿಸಬಿಲಿಟಿ ಇದ್ದರೆ, 1,25,000 ವರೆಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಆಟಿಸಂ, ಸೆರೆಬ್ರಲ್ ಪಾಲ್ಸಿ, ಬ್ಲೈಂಡ್‌ನಸ್, ದೃಷ್ಟಿದೋಷ, ಶ್ರವಣ ದೋಷ ಕೂಡ ಇದರಲ್ಲಿ ಕವರ್ ಆಗುತ್ತದೆ. ವೈದ್ಯಕೀಯ ಸಂಸ್ಥೆಯಿಂದ ಡಿಸಬಿಲಿಟಿ ಸರ್ಟಿಫಿಕೇಟ್ ಇದ್ದರೆ ಕ್ಲೇಮ್ ಮಾಡುವುದಕ್ಕೆ ಸಾಲುತ್ತದೆ.
ನಿಮ್ಮ ಅವಲಂಬಿತರು ಯಾವುದಾದರೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂದರೆ, ಕ್ಯಾನ್ಸರ್, ಡಿಮೆನ್ಷಿಯಾ, ಪಾರ್ಕಿನ್ಸನ್ಸ್, ಮೋಟಾರ್ ನ್ಯೂರಾನ್ ರೋಗದಿಂದ ಬಳಲುತ್ತಿದ್ದರೆ, ಸೆಕ್ಷನ್ 80ಡಿಡಿಬಿ ಅಡಿಯಲ್ಲಿ ತೆರಿಗೆ ರಿಯಾಯಿತಿ ಪಡೆಯಬಹುದು. 60 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರಿಗೆ ಡಿಡಕ್ಷನ್ ಲಿಮಿಟ್ 40 ಸಾವಿರ ರೂ. ಅಥವಾ ಚಿಕಿತ್ಸೆಗೆ ಎಷ್ಟು ಖರ್ಚು ಮಾಡಿದ್ದೀರೋ ಆ ಮೊತ್ತ ಆಗಿರುತ್ತದೆ. ಇನ್ನು ಅತಿ ಹಿರಿಯ ನಾಗರಿಕರಿಗೆ 1 ಲಕ್ಷ ರೂ.ವರೆಗೆ ಡಿಡಕ್ಷನ್ ಲಿಮಿಟ್ ಇದೆ. ಕೇವಲ 80 ಸಿ ಮಾತ್ರವಲ್ಲದೆ ನಿಮ್ಮ ಮುಂದೆ ಇಷ್ಟು ಆಯ್ಕೆಗಳಿದ್ದು ಈ ವರ್ಷದ ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಡೆಡ್ ಲೈನ್ ಹತ್ತಿರ ಬಂದಿದ್ದು ನೀವು ಯಾವ ಲಾಭ ಪಡೆದುಕೊಳ್ಳಬಹುದು ಎನ್ನುವುದನ್ನು ಪುನರ್ ವಿಮರ್ಶೆ ಮಾಡಿಕೊಳ್ಳಿ.


Click it and Unblock the Notifications