ಬೆಂಗಳೂರು, ಸೆಪ್ಟೆಂಬರ್ 24: ಬಯೋಕಾನ್ ಲಿಮಿಟೆಡ್ ನ ಸಂಸ್ಥಾಪಕರಾಗಿರುವ ಕಿರಣ್ ಮಜುಂದಾರ್ ಶಾ ಇಂದು ಶ್ರೀಮಂತ ಮಹಿಳೆಯಾಗಿ ಬೆಳೆದು ನಿಂತಿದ್ದಾರೆ. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ಮುಖವಾಗಿರುವ ಶಾ ಅಗ್ರಗಣ್ಯ ಮಹಿಳಾ ಉದ್ಯಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಒಂದು ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದು ಕೋಟ್ಯಾಂತರ ರೂ. ಮೌಲ್ಯದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರೀತಿ ಎಲ್ಲರಿಗೂ ಸ್ಪೂರ್ತಿದಾಯಕ. ಅವರ ಪರಿಶ್ರಮ ಬದ್ದತೆಯೂ ಬಹಳಷ್ಟು ಉದ್ಯಮಿಗಳಿಗೆ ಸ್ಪೂರ್ತಿ ತುಂಬಿದೆ.
ಮಧ್ಯಮ ವರ್ಗದ ಕುಟುಂಬದಿಂದ ಬಂದು ಬಿಲಿಯನೇರ್ ಆಗಿರುವ ಕಿರಣ್ ಮಜುಂದಾರ್ ಶಾ, ಬೆಂಗಳೂರಿನಲ್ಲಿ ಮಾರ್ಚ್ 23, 1953 ರಂದು ಜನಿಸಿದರು. ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ ಅವರಿಗೆ ವೈದ್ಯೆಯಾಗಬೇಕು ಎಂಬುವುದು ಕಿರಣ್ ಅವರ ಕನಸಾಗಿತ್ತು. ಇದಕ್ಕಾಗಿ ಶ್ರಮವಹಿಸಿ ಓದುತ್ತಿದ್ದರು. ಅವರ ಕನಸು ನನಸಾಗಲಿಲ್ಲ .ಅವರಿಗೆ ಮುಂದೆ ಸ್ಕಾಲರ್ ಶಿಪ್ ಸಿಗದ ಕಾರಣ ಬಿ.ಎಸ್ ಓದಬೇಕಾಗಿ ಬಂತು. ಅವರು ಮುಂದೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 1973 ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಿರಣ್ ಅವರ ತಂದೆ ರಾಸೇಂದ್ರ ಮಜುಂದಾರ್ ಯುನೈಟೆಡ್ ಬ್ರೂವರೀಸ್‌ನಲ್ಲಿ ಹೆಡ್ ಬ್ರೂಮಾಸ್ಟರ್ ಆಗಿದ್ದರು. ಬ್ರೂಯಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವರು ಸಲಹೆ ನೀಡಿದರು. ಇದಾದ ಬಳಿಕ 1975ರಲ್ಲಿ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ಯೂನಿವರ್ಸಿಟಿಯಲ್ಲಿ ಮಾಲ್ಟಿಂಗ್ ಮತ್ತು ಬ್ರಿವಿಂಗ್ನಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದರು. ಕಿರಣ್ ಅವರು ವೈದ್ಯರಾಗದಿದ್ದರೂ ಇಂದು ಅವರ ಸಂಸ್ಥೆಯಲ್ಲಿ ಅನೇಕ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆದ ಬಳಿಕ ಅವರು 1976 ರಲ್ಲಿ ಭಾರತಕ್ಕೆ ಹಿಂತಿರುಗಿದ ಕಿರಣ್ ಮಜುಂದಾರ್ ಅವರು, 1978 ರಲ್ಲಿ ಸ್ಕಾಟಿಷ್ ಕಂಪನಿಯಿಂದ ಆಫರ್ ಪಡೆದು , ಅಲ್ಲಿ ತಮ್ಮ ಸ್ಥಾನವನ್ನು ಸ್ವೀಕರಿಸಿದ ನಂತರ, ಅವರು ಸ್ಕಾಟ್ಲೆಂಡ್ ಗೆ ಪ್ರಯಾಣಿಸಲು ಉದ್ದೇಶಿಸಿದರು. ಝೀ ನ್ಯೂಸ್ ಪ್ರಕಾರ ಅವರು ಐರಿಶ್ ಬಯೋಟೆಕ್ ಉದ್ಯಮಿಯೊಬ್ಬರನ್ನು ಈ ವೇಳೆ ಆಕಸ್ಮಿಕವಾಗಿ ಭೇಟಿಯಾದರು. ಕಿರಣ್ ಅವರು ಬರೋಡಾದಿಂದ ದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಉತ್ಪನ್ನ ಖರೀದಿ ಗ್ಯಾರಂಟಿಯ ನೆರವಿನೊಂದಿಗೆ ಭಾರತದಲ್ಲಿ ಕಿಣ್ವ ತಯಾರಿಕಾ ಕಂಪನಿಯನ್ನು ಪ್ರಾರಂಭಿಸಲು ಆ ಉದ್ಯಮಿಯಿಂದ ಸ್ಫೂರ್ತಿ ಪಡೆದರು.
ಯಶಸ್ವಿನ ಕಥೆ ಪ್ರಾರಂಭ:
1978 ರಲ್ಲಿ, ಕಿರಣ್ ಮಜುಂದಾರ್ ಶಾ ಅವರು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ನಿರ್ಧಾರವನ್ನು ಮಾಡಿದ ನಂತರ ಬಯೋಕಾನ್ ಅನ್ನು ಸ್ಥಾಪಿಸಲು ನಿರ್ಧರಿಸಿದರು. ಒಂದು ಪುಟ್ಟ ಗ್ಯಾರೇಜ್ ನಲ್ಲಿ 10,000 ರೂಪಾಯಿ ಬಂಡವಾಳದೊಂದಿಗೆ ಕನಸಿನ ಸಂಸ್ಥೆ ಬಯೋಕಾನ್ ಅನ್ನು ಪ್ರಾರಂಭಿಸಿದರು. ಅವರಲ್ಲಿದ್ದ ಬಂಡವಾಳದ ಮೊತ್ತ ಪುಟ್ಟದಾಗಿದ್ದರೂ ಅವರಲಿದ್ದ ಕನಸು ದೊಡ್ಡದಾಗಿತ್ತು. ಇಲ್ಲಿಂದ ಅವರ ಪರಿಶ್ರಮ ಪ್ರಾರಂಭವಾಗಿತ್ತು.
ಯಾವುದರಿಂದ ಆರಂಭ?
ಬಯೋಕಾನ್‌ನ ಮೊದಲ ಪ್ರಯತ್ನವೂ ಪಪ್ಪಾಯಿಯಿಂದ ಉತ್ಪತ್ತಿಯಾಗುವ ಕಿಣ್ವವಾದ ಪಪೈನ್‌ನ ಹೊರತೆಗೆಯುವಿಕೆ ಆಗಿತ್ತು. ಈ ಪಪೈನ್ (Papain) ಎಂಬುದು ಮಾಂಸವನ್ನು ಮೆದು ಮಾಡಲು ಬಳಕೆ ಆಗುತ್ತದೆ. ಇವರ ಈ ಉತ್ಪನ್ನಕ್ಕೆ ಸಹಜವಾಗಿ ಒಳ್ಳೆಯ ಬೇಡಿಕೆ ಇತ್ತು. ಇದಾದ ಬಳಿಕ ಬಿಯರ್ ಕ್ಲ್ಯಾರಿಫೈಗಾಗಿ ಬಳಸುವ ಉಷ್ಣವಲಯದ ಕ್ಯಾಟ್‌ಫಿಶ್‌ನಿಂದ ಉತ್ಪತ್ತಿಯಾಗುವ ಐಸಿಂಗ್‌ಲಾಸ್ ಎಂಬ ರಾಸಾಯನಿಕ ತೆಗೆಯುವುದಾಗಿತ್ತು.
ಆಶ್ಚರ್ಯಕರವೆಂದರೆ , ಕಿರಣ್ ಮಜುಂದಾರ್ ಅವರ ವ್ಯವಹಾರವು ಬೆಳವಣಿಗೆ ಹೊಂದಿ, ಪಪೈನ್ ಮತ್ತು ಐಸಿಂಗ್ಲಾಸ್ ಈ ಎರಡೂ ಕಿಣ್ವ ಸಾರಗಳು ಒಂದು ವರ್ಷದೊಳಗೆ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಎರಡಕ್ಕೂ ಯಶಸ್ವಿಯಾಗಿ ರಫ್ತು ಮಾಡಿದ ಮೊದಲನೆಯ ಸಂಸ್ಥೆಯಾಯಿತು. ಬಯೋಕಾನ್ಗೆ ಒಳ್ಳೆಯ ಲಾಭ ಬಂದಿತು. ಸಣ್ಣ ಗ್ಯಾರೇಜಿನಲ್ಲಿ ಇದ್ದ ಇವರ ಕಂಪನಿ ಹೊಸೂರು ರಸ್ತೆಯಲ್ಲಿ 20 ಎಕರೆ ಜಾಗದಲ್ಲಿ ಫ್ಯಾಕ್ಟರಿಗೆ ಸ್ಥಳಾಂತರಗೊಂಡಿತು.
ಕಿರಣ್ ಮಜುಂದಾರ್ ಅವರ ನಾಯಕತ್ವದಲ್ಲಿ ಬಯೋಕಾನ್ ಬಯೋಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಉತ್ತಮ ಲಾಭವನ್ನು ಗಳಿಸಿದ್ದು ಮಾತ್ರವಲ್ಲದೇ, ಸಂಸ್ಥೆ ಪ್ರಗತಿಯನ್ನು ಸಾಧಿಸಿತು. ವಿಶೇಷವಾಗಿ ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ವೆಚ್ಚ-ಪರಿಣಾಮಕಾರಿ ಔಷಧಿಗಳನ್ನು ರಚಿಸುವಲ್ಲಿ ಬಯೋಕಾನ್ ಯಶಸ್ವಿಯಾಯಿತು.
ಇದೀಗ ಬಯೋಟೆಕ್ನಾಲಜಿ ಮತ್ತು ಬಯೋಫಾರ್ಮಸ್ಯೂಟಿಕಲ್ ಕ್ಷೇತ್ರದಲ್ಲಿ ಬಯೋಕಾನ್ ಪ್ರಬಲ ಕಂಪನಿಯಾಗಿ ಬೆಳೆದಿದೆ. 2024ರ ವೇಳೆಗೆ ಇವರ ಸಂಸ್ಥೆಯಲ್ಲಿ 16,315 ಉದ್ಯೋಗಿಗಳಿದ್ದಾರೆ. ಬಯೋಕಾನ್ ಸಂಸ್ಥೆಯ ಷೇರುಬೆಲೆ ಇಂದು 377.55 ರೂ ಇದೆ. ಸಂಸ್ಥೆಯ ಒಟ್ಟು ಮಾರುಕಟ್ಟೆ ಕ್ಯಾಪ್ 45,328.65 ಕೋಟಿ ರೂ ಆಗಿದೆ.
ಕಿರಣ್ ಮಜುಂದಾರ್ ಶಾ ಅವರು ಗ್ಯಾರೇಜ್ ನಲ್ಲಿ ಪ್ರಯೋಗಾಲಯ ಹುಟ್ಟುಹಾಕಿ ಮುಂದೆ ಜಾಗತಿಕವಾಗಿ ಪ್ರಸಿದ್ಧ ಜೈವಿಕ ತಂತ್ರಜ್ಞಾನ ಸಂಸ್ಥೆಯನ್ನಾಗಿ ಬಯೋಕಾನ್'ನ್ನು ಬೆಳೆಸಿ ಮುನ್ನಡೆಸುವ ಪ್ರಯಾಣ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಪ್ರೇರಣೆಯಾಗಿದೆ


Click it and Unblock the Notifications