ಭಾರತದಲ್ಲಿ ಫ್ಯಾಮಿಲಿ ಬಿಸಿನೆಸ್ ಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವುದು ಸಾಮಾನ್ಯ ಸಂಗತಿಯಾಗಿದ್ದು, ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ದೇಶದ ಖ್ಯಾತಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಅನಿಲ್ ರಾಯ್ ಗುಪ್ತಾ ಕೂಡ ಇವುಗಳಲ್ಲಿ ಒಬ್ಬರಾಗಿದ್ದಾರೆ. ಇನ್ನು ಅನಿಲ್ ರಾಯ್ ಗುಪ್ತಾ ಎಂದು ಹೆಸರು ಹೇಳಿದಾಕ್ಷಣ ಹೆಚ್ಚಿನವರಿಗೆ ಇವರ ಪರಿಚಯ ಸಿಗಲಾರದು.
ಆದರೆ 1.10 ಲಕ್ಷ ಕೋಟಿ ರೂ. ಮೌಲ್ಯದ ಪ್ರಖ್ಯಾತ ಎಲೆಕ್ಟ್ರಿಕಲ್ ಕಂಪೆನಿಯಾಗಿರುವ ಹ್ಯಾವೆಲ್ಸ್ ಹೆಸರು ಹೇಳಿದರೆ ಬಹುಷಃ ಕೇಳದವರು ಬಹಳ ಕಡಿಮೆಯೇ ಎಂದರೆ ತಪ್ಪಾಗಲಾರದು. ಅದೇ ಎಲೆಕ್ಟ್ರಿಕಲ್ ಕಂಪನಿಯಾದ ಹ್ಯಾವೆಲ್ಸ್ ಇಂಡಿಯಾದಲ್ಲಿ ಗುಪ್ತಾ ಅವರು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಷ್ಟಕ್ಕೂ ಅನಿಲ್ ರಾಯ್ ಗುಪ್ತಾ ಯಾರೆಂದರೆ ಭಾರತದ ಮೂರನೇ ಅತ್ಯಂತ ಶ್ರೀಮಂತ ಮಹಿಳೆ ವಿನೋದ್ ರಾಯ್ ಗುಪ್ತಾ ಅವರ ಪುತ್ರನಾಗಿದ್ದಾರೆ. ವಿನೋದ್ ರಾಯ್ ಗುಪ್ತಾ ಅವರು ಬರೊಬ್ಬರಿ 46646 ಕೋಟಿ ರೂ. ಸಂಪತ್ತನ್ನು ಹೊಂದಿದ್ದು, ಭಾರತದ ಮೂರನೇ ಶ್ರೀಮಂತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
1958ರಲ್ಲಿ ಸ್ಥಾಪನೆಯಾದ ಕಂಪೆನಿ!
ಇನ್ನು ಮೊದಲೇ ತಿಳಿಸಿದಂತೆ ಭಾರತದಲ್ಲಿ ಹಿರಿಯರು ಹಾಕಿಕೊಟ್ಟ ವ್ಯವಹಾರವನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುವ ಪದ್ದತಿ ಅಥವಾ ಶ್ರೇಷ್ಠತೆ ಇದೆ. ಇದೇ ರೀತಿ ಅನಿಲ್ ರಾಯ್ ಗುಪ್ತಾ ಕೂಡ ಹೊರತಲ್ಲ. ವಿನೋದ್ ರಾಯ್ ಗುಪ್ತಾ ಅವರ ಪತಿ ಕಿಮತ್ ರಾಯ್ ಗುಪ್ತಾ ಅವರು 1958ರಲ್ಲಿ ಎಲೆಕ್ಟ್ರಿಕಲ್ಸ್ ವ್ಯಾಪಾರ ವ್ಯವಹಾರವನ್ನು ಆರಂಭಿಸಿದ್ದರು.
ಬಳಿಕ ಒಂದೊಂದೇ ಯಶಸ್ಸಿನ ಮೆಟ್ಟಿಲು ಹತ್ತಿದ ಅವರು ಲಾಭವನ್ನು ಕೂಡ ಹೆಚ್ಚಿಸಿಕೊಂಡರು. ಹೀಗೆ ಆರಂಭವಾದ ಹ್ಯಾವೆಲ್ಸ್ ಸಂಸ್ಥೆಗೆ 1992ರಲ್ಲಿ ಅನಿಲ್ ರಾಯ್ ಗುಪ್ತಾ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರ್ಪಡೆಗೊಂಡರು. ಆದರೆ 2014ರಲ್ಲಿ ತಂದೆ ಕಿಮತ್ ರಾಯ್ ಗುಪ್ತಾ ಅವರ ಮರಣಾನಂತರ ಕಂಪೆನಿ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅನಿಲ್ ರಾಯ್ ಗುಪ್ತಾ ಹುದ್ದೆ ಅಲಂಕರಿಸಿದರು. ಇನ್ನು ತಂದೆಯ ಅಮೋಘ ಸಾಹಸ ಹಾಗೂ ಜೀವನಗಾಥೆಯ ಬಗ್ಗೆ ಜೀವನಚರಿತ್ರೆಯನ್ನು ʻಹ್ಯಾವೆಲ್ಸ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಿಮತ್ ರಾಯ್ ಗುಪ್ತಾʼ ಎಂಬ ಹೆಸರಿನಲ್ಲಿ 2016ರಲ್ಲಿ ಅನಿಲ್ ರಾಯ್ ಗುಪ್ತಾ ಬರೆದರು.
ಅನಿಲ್ ಅವರ ವಿದ್ಯಾಭ್ಯಾಸ ಕುರಿತು...
ಅನಿಲ್ ರಾಯ್ ಗುಪ್ತಾ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಅಮೆರಿಕಾದ ಉತ್ತರ ಕೆರೊಲಿನಾದ ವೇಕ್ ಫಾರೆಸ್ಟ್ ಯೂನಿವರ್ಸಿಟಿಯಿಂದ MBA (ಮಾರ್ಕೆಟಿಂಗ್ ಮತ್ತು ಫೈನಾನ್ಸ್) ಪಡೆದುಕೊಂಡರು. ಅಲ್ಲದೆ ಅವರು ಹರಿಯಾಣದ ಖಾಸಗಿ ಕಲಾ ಕಾಲೇಜು ಅಶೋಕ ವಿಶ್ವವಿದ್ಯಾಲಯದ ಸಂಸ್ಥಾಪಕರಲ್ಲಿ ಕೂಡ ಒಬ್ಬರಾಗಿದ್ದಾರೆ. ಈಗಾಗಲೇ ಅನಿಲ್ ರಾಯ್ ಗುಪ್ತಾ ಅವರು ಸಂಗೀತಾ ರೈ ಗುಪ್ತಾ ಅವರನ್ನು ವಿವಾಹವಾಗಿದ್ದು, ದಂಪತಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
2003ರಿಂದ ಕಂಪೆನಿಯಲ್ಲಿ ಮಹತ್ತರ ಬದಲಾವಣೆ
2003ರ ವರೆಗೆ ಕೈಗಾರಿಕಾ ಉತ್ಪನ್ನ ಕಂಪೆನಿಯಾಗಿದ್ದ ಹ್ಯಾವೆಲ್ಸ್ ಆ ಬಳಿಕ ಸಂಸ್ಥೆಯನ್ನು ಗ್ರಾಹಕ ಉತ್ಪನ್ನ ಸಂಸ್ಥೆಯಾಗಿ ವೈವಿಧ್ಯಗೊಳಿಸಲು ಅನಿಲ್ ರಾಯ್ ಗುಪ್ತಾ ಅವರು ನಿರ್ದೇಶನ, ಮಾರ್ಗದರ್ಶನ ನೀಡಿದರು. ಅಲ್ಲದೆ ಅವರು ಕಂಪನಿಯನ್ನು ಕೇವಲ ಕುಟುಂಬದ ಬ್ರ್ಯಾಂಡ್‌ನಿಂದ ಜಾಗತಿಕ ಬ್ರ್ಯಾಂಡ್‌ಗೆ ಪರಿವರ್ತಿಸುವ ಮಾರ್ಕೆಟಿಂಗ್ ತಂತ್ರವನ್ನು ವಿನ್ಯಾಸಗೊಳಿಸಿದ್ದು, ಅಲ್ಲದೆ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕೂಡ ಕಾರ್ಯಕತಗೊಳಿಸಿದರು. ಇಂದು ಹ್ಯಾವೆಲ್ಸ್ ಸಂಸ್ಥೆಯು ಕೇವಲ ಭಾರತವಲ್ಲದೆ ವಿಶ್ವದ ಹಲವಾರು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದು, ಪ್ರಸಿದ್ದ ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ (FMEG) ಕಂಪನಿಯಾಗಿ ಹೊರಹೊಮ್ಮಿದೆ.
ಎಲ್ಲರಿಗೂ ಸ್ಪೂರ್ತಿ
ಕುಟುಂಬದ ವ್ಯವಹಾರವನ್ನು ಮತ್ತಷ್ಟು ಅಭಿವೃದ್ದಿಪಡಿಸಿ ಹೇಗೆ ಮುಂದುವರೆಯಬಹುದು ಎಂಬುವುದಕ್ಕೆ ಅನಿಲ್ ರಾಯ್ ಗುಪ್ತಾ ಅವರು ಉದಾಹರಣೆಯಾಗಿದೆ. ತಂದೆ ಹಾಕಿಕೊಟ್ಟ ಉದ್ಯಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡು, ಮಾರ್ಕೆಟಿಂಗ್ ವಿಭಾಗದಲ್ಲಿ ಕೂಡ ಮಹತ್ತರ ಬದಲಾವಣೆ ತಂದು ಸದ್ಯ ಕಂಪೆನಿಯನ್ನು ಭಾರತದ ಖ್ಯಾತಿ ಸಂಸ್ಥೆಯನ್ನಾಗಿ ಮೂಡಿಸಿದ್ದಾರೆ. ಈ ಮೂಲಕ ಇತರರಿಗೂ ಮಾದರಿ ಎನ್ನುವಂತೆ ಹೊರಹೊಮ್ಮಿದ್ದಾರೆ.


Click it and Unblock the Notifications