ಮುಕೇಶ್ ಅಂಬಾನಿ ಮತ್ತು ಇಶಾ ಅಂಬಾನಿ ಬೆಂಬಲಿತ ಶೀಘ್ರವಾಗಿ ದಿನಸಿಯನ್ನು ಡೆಲಿವರಿ ಮಾಡುವ ಸಂಸ್ಥೆಯಾದ ಡೊನ್ಜೊ ಭಾರೀ ಸಂಕಷ್ಟದಲ್ಲಿದೆ. ಈ ಹಿಂದೆ ಹಲವಾರು ಬಾರಿ ಸಂಬಳ ವಿಳಂಬ ಮಾಡುತ್ತಾ ಬಂದ ಡೊನ್ಜೊ ಈಗ ಮತ್ತೆ ಸಂಬಳ ವಿಳಂಬ ಮಾಡಿದೆ. ಅದು ಕೂಡಾ ಮಾಜಿ ಉದ್ಯೋಗಿಗಳಿಗೆ ಡೊನ್ಜೊ ವೇತನವನ್ನು ನೀಡಲು ವಿಳಂಬ ಮಾಡುತ್ತಿದೆ ಎಂದು ವರದಿಯಾಗಿದೆ.
ಬಾಕಿ ಇರುವ ವೇತನವನ್ನು ನೀಡುವುದು ವಿಳಂಬವಾಗಲಿದೆ ಎಂದು ಡೊನ್ಜೊ ಸಂಸ್ಥೆಯು ಮಾಜಿ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ ಎಂದು ಮನಿಕಂಟ್ರೋಲ್‌ನ ವರದಿ ಮಾಡಿದೆ. ಈಗ ಡೊನ್ಜೊ ಅಕ್ಟೋಬರ್ ತಿಂಗಳಿನಲ್ಲಿ ಸಂಬಳವನ್ನು ಪಾವತಿಸುವುದಾಗಿ ಹೇಳಿಕೊಂಡಿದೆ. ಈ ಹಿಂದೆ ಹಲವಾರು ಬಾರಿ ಗಡುವನ್ನು ವಿಸ್ತರಿಸಿಕೊಳ್ಳುತ್ತಾ ಹೋಗಿದೆ.

ಮೊದಲು ಜುಲೈ 20 ರೊಳಗೆ ಡೊನ್ಜೊ ಬಾಕಿ ಇರುವ ವೇತನವನ್ನು ಪಾವತಿ ಮಾಡಲಾಗುವುದು ಎಂದು ಭರವಸೆಯನ್ನು ನೀಡಿತ್ತು. ಅದಾದ ಬಳಿಕ ಸೆಪ್ಟೆಂಬರ್ 4ರ ಒಳಗಾಗಿ ಬಾಕಿ ವೇತನ ನೀಡಲಾಗುತ್ತದೆ ಎಂದು ಡೊನ್ಜೊ ಹೇಳಿತ್ತು. ದಿನಾಂಕ ಸಮೀಪಿಸುತ್ತಿದ್ದಂತೆ, ನಗದು ಕೊರತೆಯಿರುವ ಕಂಪನಿಯು ಈ ದಿನಾಂಕವನ್ನು ಮತ್ತೆ ಒಂದು ತಿಂಗಳು ವಿಸ್ತರಣೆ ಮಾಡಿದೆ.
ಕಳೆದ ಕೆಲವು ತಿಂಗಳುಗಳಲ್ಲಿ, ಡೊನ್ಜೊ ರಿಲಯನ್ಸ್ ರಿಟೇಲ್ ಸೇರಿದಂತೆ ಕೆಲವು ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಹಣವನ್ನು ಸಂಗ್ರಹಿಸಲು ಮಾತುಕತೆ ನಡೆಸುತ್ತಿದೆ. ಹಲವಾರು ಬಾರಿ ನಗದು ಕೊರತೆಯಿಂದ ವೇತನ ವಿಳಂಬ ಮಾಡಿದೆ. ಒಂದು ತಿಂಗಳಿನಲ್ಲಿ ಶೇಕಡ 50 ರಷ್ಟು ಉದ್ಯೋಗಿಗಳಿಗೆ ಮಾತ್ರ ವೇತನ ನೀಡಿತ್ತು.
ಡೊನ್ಜೊ ಇಮೇಲ್‌ನಲ್ಲಿ ಹೇಳುವುದೇನು?
"ಈ ವಿಳಂಬಕ್ಕಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಸಾಧ್ಯವಾದಷ್ಟು ಬೇಗ ನಿಮ್ಮ ವೇತನವನ್ನು ನೀವು ಸ್ವೀಕರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದಕ್ಕಾಗಿ ನಾವು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ದಯವಿಟ್ಟು ತಿಳಿದಿರಿ. ಇದರ ನಂತರ ಯಾವುದೇ ವಿಳಂಬವಾಗುವುದಿಲ್ಲ ಎಂದು ನಮಗೆ ವಿಶ್ವಾಸವಿದೆ," ಎಂದು ಡೊನ್ಜೊ ಇಮೇಲ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
2014 ರಲ್ಲಿ ಕಬೀರ್ ಬಿಸ್ವಾಸ್, ಅಂಕುರ್ ಅಗರ್ವಾಲ್, ದಲ್ವಿರ್ ಸೂರಿ ಮತ್ತು ಮುಕುಂದ್ ಝಾ ಸ್ಥಾಪಿಸಿದ ಈ ಸ್ಟಾರ್ಟ್ಅಪ್ ಹಲವಾರು ಸುತ್ತಿನಲ್ಲಿ ಹಣವನ್ನು ಸಂಗ್ರಹ ಮಾಡಿದೆ. ಗೂಗಲ್ ಮತ್ತು ಲೈಟ್‌ಬಾಕ್ಸ್‌ನಂತಹ ದೈತ್ಯರಿಂದ ಬೆಂಬಲ ಪಡೆದುಕೊಂಡಿದೆ. ಮುಕೇಶ್ ಅಂಬಾನಿ ಕಳೆದ ವರ್ಷ ಜನವರಿಯಲ್ಲಿ ಸುಮಾರು 1641 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಡೊನ್ಜೊದಲ್ಲಿ ಸುಮಾರು ಶೇಕಡ 25ರಷ್ಟು ಪಾಲನ್ನು ಖರೀದಿ ಮಾಡಿದ್ದಾರೆ.
ಡೊನ್ಜೊ ಬಾಕಿ ಇರುವ ತನ್ನ ವೇತನದ ಮೇಲೆ ಶೇಕಡ 12 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುವ ಭರವಸೆಯನ್ನು ನೀಡಿದೆ. "ಸೆಪ್ಟೆಂಬರ್ 4 ರಂದು ಪಾವತಿಸಬೇಕಾದ ಜೂನ್ ಮತ್ತು ಜುಲೈ ತಿಂಗಳ ಬಾಕಿ ಇರುವ ವೇತನವನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪಾವತಿಸಲಾಗುವುದು. ನೀವು ಶೇಕಡ 12ರಷ್ಟು ಬಡ್ಡಿಯ ಜೊತೆಗೆ ಬಾಕಿ ಇರುವ ವೇತನವನ್ನು ಪಡೆಯುತ್ತೀರಿ. ಬಡ್ಡಿಯನ್ನು ಈಗ ಹೆಚ್ಚುವರಿ ತಿಂಗಳಿಗೆ ಲೆಕ್ಕಹಾಕಲಾಗುತ್ತದೆ," ಎಂದು ಮಾಜಿ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ತಿಳಿಸಲಾಗಿದೆ.
ಒಟ್ಟಾರೆಯಾಗಿ, ಡೊನ್ಜೊದಲ್ಲಿ ಬಾಕಿ ಉಳಿದಿರುವ ಮಾರಾಟಗಾರರ ಸಾಲಗಳು ಸರಿಸುಮಾರು 11.4 ಕೋಟಿ ರೂಪಾಯಿ ಆಗಿದೆ. ಈ ಹಿಂದೆ ಅಂದಾಜಿಸಲಾದ 5-6 ಕೋಟಿ ರೂಪಾಯಿಗಿಂತ ಇದು ಸುಮಾರು ದ್ವಿಗುಣವಾಗಿದೆ.


Click it and Unblock the Notifications