"ಫ್ರೂಟಿ" ಡ್ರಿಂಕ್ಸ್ ಬಗ್ಗೆ ಹೆಸರು ಕೇಳದವರು ಕಡಿಮೆಯೇ. ಜನಪ್ರಿಯ ಪಾನೀಯವಾದ ಫ್ರೂಟಿ ಭಾರತೀಯರಿಗಂತು ಚೆನ್ನಾಗಿಯೇ ಪರಿಚಯವಿದೆ. ಆದರೆ ಈ ಪಾನೀಯದ ಹಿಂದೆ ಸ್ಟೋರಿ ಮತ್ತು ಅದರ ಅಪಾರ ಜನಪ್ರಿಯತೆಗೆ ಕಾರಣರಾದವರು ಯಾರು ಎಂಬ ಇಂಟ್ರೆಸ್ಟಿಂಗ್ ಕಹಾನಿ ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರಲು ಸಾಧ್ಯವಿಲ್ಲ.
ಫ್ರೂಟಿ ತನ್ನ ಅನೇಕ ಪ್ರಥಮಗಳೊಂದಿಗೆ ಭಾರತೀಯ ಪಾನೀಯ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. 'ಆನ್-ದಿ-ಗೋ' " ಪರಿಕಲ್ಪನೆಯನ್ನು ಪರಿಚಯಿಸುವುದರ ಮೂಲಕ, ಫ್ರೂಟಿ ಪಾನೀಯ ಗ್ರಾಹಕರಿಗೆ ವಿಶೇಷ ಆಯ್ಕೆಯನ್ನು ಸೃಷ್ಟಿಸಿತು. ಬಹಳಷ್ಟು ವರ್ಷಗಳ ಹಿಂದೆ ಟೆಟ್ರಾ ಪ್ಯಾಕ್‌ನಲ್ಲಿ ಪ್ಯಾಕ್ ಮಾಡಲಾದ ಭಾರತದ ಮೊದಲ ತಂಪು ಪಾನೀಯ ಬ್ರ್ಯಾಂಡ್ ಇದಾಗಿದ್ದು, ಇದು ಪಾನೀಯಗಳನ್ನು ಹೆಚ್ಚು ಕಾಲ ತಾಜಾವಾಗಿಡಲು ಸಹಾಯ ಮಾಡಿತು. ಅಲ್ಲದೆ, ಫ್ರೂಟಿ ಪಿಇಟಿ ಬಾಟಲಿಗಳು ಮತ್ತು ಟಿಸಿಎ ಟೆಟ್ರಾ ಪ್ಯಾಕ್‌ಗಳ ಬಳಕೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಅಂದು ಫ್ರೂಟಿ ಕ್ರಾಂತಿ ಹೇಗಿತ್ತೆಂದರೆ 300 ಕೋಟಿ ರೂ. ಬ್ರ್ಯಾಂಡ್‌ನಿಂದ 8,000 ಕೋಟಿ ರೂ. ವ್ಯವಹಾರಕ್ಕೆ ತಲುಪಿತು. ಪಾನೀಯ ಕ್ಷೇತ್ರದಲ್ಲಿ ತನ್ನದೇ ಆತ ಛಾಪು ಮೂಡಿಸಿದ ಕ್ರಾಂತಿಕಾರಿ ಮಾರ್ಕೆಟಿಂಗ್ ಯೋಜನೆಯ ಹಿಂದೆ ಇರೋದು ಓರ್ವ ಮಹಿಳೆ ಎಂದರೆ ನಂಬಲೇಬೇಕು. ಅವರೇ " ನಾಡಿಯಾ ಚೌಹಾಣ್" . ಇವರು ಭಾರತದ ಅತಿದೊಡ್ಡ FMCG ಸಂಸ್ಥೆಗಳಲ್ಲಿ ಒಂದಾದ ಪಾರ್ಲೆ ಆಗ್ರೋದಲ್ಲಿ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಇಂದು ಕಾರ್ಯನಿರ್ವಹಿಸುತ್ತಿದ್ದಾರೆ.
ನಾಡಿಯಾ 2003 ರಲ್ಲಿ ತನ್ನ ತಂದೆಯ ಪಾರ್ಲೆ ಆಗ್ರೋ ಗುಂಪನ್ನು ಸೇರಿದಾಗ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಇವರು ಕಂಪನಿಯ ಆದಾಯದ ಸುಮಾರು 95 ಪ್ರತಿಶತಕ್ಕೆ ಹೆಚ್ಚಿಸಲು "ಫ್ರೂಟಿ" ಮೂಲಕ ಕಾರಣರಾಗಿದ್ದರು. ತಮ್ಮ ವಿನೂತನ ಮಾರ್ಕೆಟಿಂಗ್ ತಂತ್ರಗಳು ಮತ್ತು ಉತ್ಪನ್ನ ವೈವಿಧ್ಯೀಕರಣಗೊಳಿಸಿ ಮುನ್ನಡೆಸಿದರು. ಕಂಪನಿಯನ್ನು ಭಾರತೀಯ ಪಾನೀಯ ಉದ್ಯಮದಲ್ಲಿ ಒಂದು ಶಕ್ತಿ ಕೇಂದ್ರವಾಗಿ ಪರಿವರ್ತಿಸಿದರು.
ನಾಡಿಯಾ ಚೌಹಾಣ್ ಯಾರು?
ಕ್ಯಾಲಿಫೋರ್ನಿಯಾದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ನಾಡಿಯಾ ಅವರು ಮುಂಬೈನ H. R. ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು. ನಾಡಿಯಾ ಚೌಹಾಣ್ ಅವರ ತಂದೆ ಪಾರ್ಲೆ ಆಗ್ರೋದ ಅಧ್ಯಕ್ಷ ಪ್ರಕಾಶ್ ಚೌಹಾಣ್. ಫೋರ್ಬ್ಸ್ ಪ್ರಕಾರ, ಅವರು ತಮ್ಮ ಎಳೆ ವಯಸ್ಸಿನಿಂದಲೇ ತಮ್ಮ ತಂದೆಯಿಂದ ಪೋಷಿಸಲ್ಪಟ್ಟರು. ತಮ್ಮ17 ವರ್ಷದಲ್ಲಿ ಕಂಪನಿಗೆ ಸೇರಿದ ನಂತರ, ಒಂದು ಉತ್ಪನ್ನದ ಮೇಲಿನ ಕಂಪನಿಯ ಅವಲಂಬನೆಯನ್ನು ಕಡಿಮೆ ಮಾಡಿ ಇತರ ಕ್ಷೇತ್ರಗಳಿಗೆ ವಿಸ್ತರಿಸಲು ನಿರ್ಧರಿಸಿದರು. ಇದರ ಭಾಗವಾಗಿ, ಅವರು ಐಕಾನಿಕ್ ಪ್ಯಾಕೇಜ್ ವಾಟರ್ ಬ್ರ್ಯಾಂಡ್ 'ಬೈಲೀಸ್' ಅನ್ನು ಪ್ರಾರಂಭಿಸಿದರು. ಫ್ರೂಟಿ, ಫ್ರೂಟ್ ಸ್ಮೂಥೀಸ್, ಹೀಗೆ ಒಂದಾದ ಮೇಲೆ ಒಂದರಂತೆ ಮಾರುಕಟ್ಟೆಗೆ ಪಾನೀಯ ಪರಿಚಯಿಸಿದರು. ಅವರು ತಮ್ಮ ಕುಟುಂಬ ವ್ಯವಹಾರದಲ್ಲಿ ದೊಡ್ಡ ಹುದ್ದೆಯನ್ನು ಗಳಿಸಿದ್ದಷ್ಟೇ ಅಲ್ಲ; ಅವರು ಕಷ್ಟಪಟ್ಟು ದುಡಿದು ಉನ್ನತ ಶ್ರೇಣಿಗೆ ಬೆಳೆದು ನಿಂತರು.
2005 ರಲ್ಲಿ ನಾಡಿಯಾ ಕನಸಿನ ಕೂಸು "ಆಪ್ಪಿ ಫಿಜ್" ಅನ್ನು ಪ್ರಾರಂಭಿಸಿದರು. ಭಾರತದಲ್ಲಿ ಆಪಲ್ ಜ್ಯೂಸ್ ಪರಿಚಯವಿಲ್ಲದಿದ್ದಾಗ ಅದು ಆಪಲ್ ಜ್ಯೂಸ್ ವಿಭಾಗದಲ್ಲಿ ಮೊದಲನೆಯದಾಗಿತ್ತು. ಈ ವಿಭಾಗದಲ್ಲಿ ಶೇ. 99 ರ ಮಾರುಕಟ್ಟೆ ಪಾಲನ್ನು ಹೊಂದುವುದರೊಂದಿಗೆ ಜನಪ್ರಿಯವಾಯಿತು. ಸಾಂಪ್ರದಾಯಿಕ ಕಾರ್ಬೊನೇಟೆಡ್ ಪಾನೀಯಗಳಿಗೆ ವಿಶಿಷ್ಟ ಮತ್ತು ರಿಫ್ರೆಶ್ ಪರ್ಯಾಯವನ್ನು ನೀಡುವ ಮೂಲಕ ಅಪ್ಪಿ ಫಿಜ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿತ್ತು ಮಾತ್ರವಲ್ಲದೇ ಒಟ್ಟಾರೆಯಾಗಿ ಹೊಸ ವರ್ಗವನ್ನು ಸೃಷ್ಟಿಸಿತು.
ಇಂದು, ಫ್ರೂಟಿ ಮತ್ತು ಅಪ್ಪಿ ಫಿಜ್ 50 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಾರ್ಲೆ ಆಗ್ರೋವನ್ನು ಅಂತರರಾಷ್ಟ್ರೀಯ ಪಾನೀಯ ಉದ್ಯಮದಲ್ಲಿ ಪ್ರಮುಖ ಸಂಸ್ಥೆಯನ್ನಾಗಿ ಮಾಡಿದೆ.
ಪಾರ್ಲೆ ಆಗ್ರೋ ಗ್ರೂಪ್ ಬಗ್ಗೆ
ಪಾರ್ಲೆ ಗ್ರೂಪ್ ಅನ್ನು ಮೋಹನ್ ಲಾಲ್ ಚೌಹಾಣ್ 1929 ರಲ್ಲಿ ಸ್ಥಾಪಿಸಿದರು. ಅವರು ನಾಡಿಯಾ ಚೌಹಾಣ್ ಅವರ ಮುತ್ತಜ್ಜ. ಮೋಹನ್ ಲಾಲ್ ಅವರ ಕಿರಿಯ ಮಗ ಜಯಂತಿಲಾಲ್ 1959 ರಲ್ಲಿ ಪಾನೀಯಗಳ ವ್ಯವಹಾರವನ್ನು ಪ್ರಾರಂಭಿಸಿದರು. ಇದರಲ್ಲಿ ಥಂಬ್ಸ್ ಅಪ್, ಲಿಮ್ಕಾ, ಗೋಲ್ಡ್ ಸ್ಪಾಟ್, ಸಿಟ್ರಾ ಮತ್ತು ಮಾಜಾ ಮುಂತಾದ ಪಾನೀಯಗಳು ಸೇರಿದ್ದವು. ಕಂಪನಿಯನ್ನು ಮುಂದೆ ರಮೇಶ್ ಚೌಹಾಣ್ ಮತ್ತು ಪ್ರಕಾಶ್ ಚೌಹಾಣ್ ಅವರಿಗೆ ವರ್ಗಾಯಿಸಲಾಯಿತು.
ಪಾರ್ಲೆ ಗ್ರೂಪ್ 1990 ರ ದಶಕದಲ್ಲಿ ಈ ಬ್ರ್ಯಾಂಡ್‌ಗಳನ್ನು ಕೋಕಾ-ಕೋಲಾಗೆ ಮಾರಾಟ ಮಾಡಿತು. ನಂತರ ಇಬ್ಬರು ಸಹೋದರರು ತಮ್ಮ ವ್ಯವಹಾರಗಳನ್ನು ಹಂಚಿಕೊಂಡರು. ಜಯಂತಿ ಚೌಹಾಣ್ ಅವರ ಪುತ್ರರಮೇಶ್ ಚೌಹಾಣ್, ಬಿಸ್ಲೆರಿ ಬ್ರಾಂಡ್‌ನ ಉಸ್ತುವಾರಿ ವಹಿಸಿಕೊಂಡರು.
2003 ರಲ್ಲಿ ಕೇವಲ 17 ವರ್ಷ ವಯಸ್ಸಿನಲ್ಲಿ ನಾಡಿಯಾ ಚೌಹಾಣ್ ಪಾರ್ಲೆ ಆಗ್ರೋ ಸಂಸ್ಥೆಯನ್ನು ಸೇರಿದಾಗ, ಅವರು ಕಂಪನಿಯು ಕೇವಲ "ಫ್ರೂಟಿ" ಉತ್ಪನ್ನವನ್ನೇ ಹೆಚ್ಚಾಗಿ ಅವಲಂಬಿಸಿರುವುದನ್ನು ಗಮನಿಸಿದರು. ಇದು ಒಟ್ಟು ಮಾರಾಟದ 95% ರಷ್ಟಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸಲು, ನಾಡಿಯಾ ಒಂದು ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದರು. ಅವರು ತಮ್ಮ ತಂಡಕ್ಕೆ ಅಧಿಕಾರ ನೀಡಿ, ಎಲ್ಲರೂ ಒಂದೇ ಗುರಿಯತ್ತ ಕೆಲಸ ಮಾಡುವಂತೆ ನೋಡಿಕೊಂಡರು. ಈ ಕಾರ್ಯತಂತ್ರದ ಬದಲಾವಣೆಯು ಕಂಪನಿಗೆ ಗಣನೀಯ ಬೆಳವಣಿಗೆಯನ್ನು ತಂದುಕೊಟ್ಟಿತು. ಮಾರಾಟವು 300 ಕೋಟಿ ರೂಪಾಯಿಗಳಿಂದ 8,000 ಕೋಟಿ ರೂಪಾಯಿಗಳಿಗೆ ಏರಿತು. "ಫ್ರೂಟಿ" ಉತ್ಪನ್ನದ ಪ್ರಾಬಲ್ಯವು 48% ಕ್ಕೆ ಇಳಿದರೂ, ಪ್ಯಾಕೇಜ್ಡ್ ವಾಟರ್ (ಬೈಲಿ) ಸೇರಿದಂತೆ ಇತರ ಉತ್ಪನ್ನಗಳು ಮಾರಾಟದಲ್ಲಿ 1,000 ಕೋಟಿ ರೂಪಾಯಿಗಳನ್ನು ತಲುಪಿದವು. ಭಾರತದ ಪ್ರಮುಖ ಎಫ್‌ಎಂಸಿಜಿ ಕಂಪನಿಗಳಲ್ಲಿ ಒಂದಾದ ಪಾರ್ಲೆ ಆಗ್ರೋಸ್, ಇತ್ತೀಚಿನ ವರ್ಷಗಳಲ್ಲಿ ತನ್ನ ವಹಿವಾಟನ್ನು ದ್ವಿಗುಣಗೊಳಿಸಿ 5,000 ಕೋಟಿ ರೂಪಾಯಿಗಳಿಗೆ ತಲುಪಿದೆ.


Click it and Unblock the Notifications