ನವದೆಹಲಿ, ಜುಲೈ 11: ಈ ಬಾರಿಯ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿರುವ ಒಂದರ್ಥದಲ್ಲಿ ಕಿಂಗ್ ಮೇಕರ್ ಎಂದೇ ಕರೆಸಿಕೊಂಡಿರುವವರು ಈಗ ಕೇಂದ್ರದ ಮುಂದೆಯೇ ದೊಡ್ಡ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ನಲ್ಲಿ ತಮ್ಮ ರಾಜ್ಯಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಮಾರು 50 ಸಾವಿರ ಕೋಟಿ ರು.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ವರದಿಗಳು ಬಂದಿವೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಯಷ್ಟು ಬಹುಮತ ಸಾಧಿಸಲಿಲ್ಲ. ಚಂದ್ರಬಾಬು ನಾಯ್ಡು ಟಿಡಿಪಿ ಹಾಗೂ ನಿತೀಶ್ ಕುಮಾರ್ ಜೆಡಿಯು ಬೆಂಬಲ ಆಧರಿಸಿಕೊಂಡೆ ಸರ್ಕಾರ ರಚನೆ ಮಾಡಿಕೊಂಡಿದ್ದವು. ಈಗ ಬಜೆಟ್ ಗೂ ಮುನ್ನ ದೋಸ್ತಿಗಳು ಇಟ್ಟಿರುವ ಬೇಡಿಕೆ ಸಹಜವಾಗಿಯೇ ಮುಂದೆ ಯಾವುದಾದರೂ ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆಯಾ ಎನ್ನುವುದನ್ನು ನೋಡಬೇಕಾಗಿದೆ.

ಆಂಧ್ರ ಮತ್ತು ಬಿಹಾರ ಎರಡು ರಾಜ್ಯಗಳು 2025ನೇ ಸಾಲಿಗೆ ಹೆಚ್ಚುವರಿ ನಿಧಿಯಾಗಿ ಸುಮಾರು 48,000 ಕೋಟಿ ರು.ಗೆ ಬೇಡಿಕೆ ಇಟ್ಟಿವೆ. ಇದರ ಜತೆಗೆ ಕೇಂದ್ರವು ಬಂಡವಾಳ ವೆಚ್ಚಕ್ಕಾಗಿ ನೀಡುವ 1 ಲಕ್ಷ ಕೋಟಿ ರು. ಬಡ್ಡಿ ರಹಿತ ದೀರ್ಘಾವಧಿಯ ಸಾಲವನ್ನು ದ್ವಿಗುಣಗೊಳಿಸಲು ರಾಜ್ಯಗಳು ಕೇಳಿಕೊಂಡಿವೆ ಎನ್ನುವ ವರದಿಗಳು ಬಂದಿವೆ.
ಮಾರುಕಟ್ಟೆಯಿಂದ ಸಾಲ ಪಡೆಯಲು ಇರುವ ನಿಯಮಗಳ ಸಡಿಲಿಕೆಗೆ ಈ ರಾಜ್ಯಗಳು ಬೇಡಿಕೆ ಇರಿಸಿವೆ. ಈಗ ಕೇಂದ್ರ ಸರ್ಕಾರವು ಸಾಲದ ಮಿತಿಯನ್ನು ರಾಜ್ಯದ ಆದಾಯ ಅಥವಾ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ.3ಕ್ಕೆಸೀಮಿತಗೊಳಿಸಿದೆ. ಬಿಹಾರ ನಿರ್ದಿಷ್ಟವಾಗಿ 9 ಹೊಸ ವಿಮಾನ ನಿಲ್ದಾಣಗಳು, 2 ವಿದ್ಯುತ್ ಯೋಜನೆಗಳು, 2 ನದಿ ನೀರಿನ ಯೋಜನೆ ಮತ್ತು ಯಾವುದೇ ನಿರ್ದಿಷ್ಟ ಕಾಲಮಿತಿಯಿಲ್ಲದೆ 7 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಹಣ ನೀಡುವಂತೆ ಕೋರಿದೆ.
ಇನ್ನು ಆಂಧ್ರಪ್ರದೇಶವು ರಾಜ್ಯದ ರಾಜಧಾನಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು ಮತ್ತು ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಕೇಳಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ಮೇಲೆ ಬಜೆಟ್ ಮಂಡನೆಯಾಗುತ್ತಿದ್ದು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.


Click it and Unblock the Notifications