ಖ್ಯಾತ ಉದ್ಯಮಿ ಹಾಗೂ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ ಆದಾಯದ ಶೇ. 60ರಷ್ಟು ಭಾಗವನ್ನು ಬಡವರಿಗೆ ಸಹಾಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ರೀತಿ ಹರಿಯಾಣದ ಕೈತಾಲ್‌ನಲ್ಲಿ ರತನ್ ಟಾಟಾ ಅವರಿಗೆ ಪೈಪೋಟಿ ನೀಡುವ ವ್ಯಕ್ತಿಯೊಬ್ಬರಿದ್ದಾರೆ.
ಆದರೆ ಆ ವ್ಯಕ್ತಿ ಹೆಚ್ಚು ಶ್ರೀಮಂತನಲ್ಲದಿದ್ದರೂ ಚಿನ್ನದಂಥಹ ಹೃದಯವನ್ನು ಹೊಂದಿದ್ದಾರೆ. ಅಂಥಹ ದಾನಶೂರ ವ್ಯಕ್ತಿಯ ಹೆಸರು ಫಕೀರ್ ಚಂದ್. ಅವರ ಸಂಪಾದನೆಯ ಶೇ.90ರಷ್ಟು ಹಣವನ್ನು ಬಡವರಿಗೆ ದಾನ ನೀಡುತ್ತಿದ್ದಾರೆ. ನವಭಾರತ್ ಟೈಮ್ಸ್ ಪ್ರಕಾರ, ಫಕೀರ್ ಚಂದ್ ತನ್ನ ಗಳಿಕೆಯ ಶೇ.90ರಷ್ಟು ಸಂಪತ್ತನ್ನು ದೇಣಿಗೆ ನೀಡುತ್ತಿದ್ದು, ಕೇವಲ ಶೇ.10ರಷ್ಟು ಹಣವನ್ನು ಮಾತ್ರ ತಮ್ಮ ನೆಮ್ಮದಿಯ ಜೀವನಕ್ಕೆ ಬಳಸುತ್ತಿರುವುದಾಗಿ ಹೇಳುತ್ತಿದ್ದಾರೆ.

ಫಕೀರ್ ಚಂದ್ ಹರಿಯಾಣದ ಕೈತಾಲ್‌ನಲ್ಲಿ ವಾಸಿಸುತ್ತಿದ್ದಾರೆ, ಅವರಿಗೆ 53 ವರ್ಷ. ಫಕೀರ್ ಚಂದ್ ಅವರ ಪ್ರಕಾರ, ಅವರಿಗೆ ಐದು ಮಂದಿ ಒಡಹುಟ್ಟಿದವರಿದ್ದು, ಆ ಪೈಕಿ ಯಾರಿಗೂ ಮದುವೆಯಾಗಲಿಲ್ಲ. ಫಕೀರ್ ಚಂದ್ ಅವರ ಎಲ್ಲ ಒಡಹುಟ್ಟಿದವರು ಮೃತಪಟ್ಟಿದ್ದು, ಈಗ ಅವರು ಮಾತ್ರ ಕುಟುಂಬದ ಏಕೈಕ ಸದಸ್ಯರಾಗಿ ಉಳಿದುಕೊಂಡಿದ್ದಾರೆ.
ಫಕೀರ್ ಚಂದ್ ತನ್ನ ಸಹೋದರ ಸಹೋದರಿಯರಿಗೆ ಸೇರಿದ ಸ್ವಲ್ಪ ಹಣವನ್ನು ಪಡೆದುಕೊಂಡಿದ್ದು ಆ ಹಣವು ತಮ್ಮ ನೆಮ್ಮದಿಯ ಜೀವನಕ್ಕೆ ಸಾಕಾಗುತ್ತದೆ ಎಂದು ಹೇಳುತ್ತಾರೆ. ಫಕೀರ್ ಚಂದ್ ಸ್ಕ್ರ್ಯಾಪ್ ವ್ಯವಹಾರವನ್ನು ಮಾಡುತ್ತಿದ್ದು, ಹೆಚ್ಚು ಕಷ್ಟಪಟ್ಟು ದುಡಿಯುವ ವ್ಯಕ್ತಿತ್ವ ಅವರದ್ದು. ಈ ಜನ್ಮದಲ್ಲಿ ಮಾಡಿದ ಒಳ್ಳೆಯ ಕಾರ್ಯವು ಮುಂದಿನ ಜನ್ಮದಲ್ಲಿ ಫಲ ನೀಡಬಹುದು ಎಂಬುದು ಫಕೀರ್ ಚಂದ್ ಅವರ ನಂಬಿಕೆ.
ಫಕೀರ್ ಚಂದ್ ಅವರು ಕಳೆದ 25 ವರ್ಷಗಳಿಂದ ರಟ್ಟುಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸುವ ವ್ಯವಹಾರದಲ್ಲಿದ್ದು, ಅವರು ಅಂಗಡಿಗಳಿಂದ ಕಾರ್ಡ್‌ಬೋರ್ಡ್‌ಗಳನ್ನು ಪಡೆದುಕೊಂಡು ನಂತರ ಗುಜುರಿಗೆ ಮಾರಾಟ ಮಾಡುತ್ತಿದ್ದಾರೆ.
ಫಕೀರ್ ಚಂದ್ ಅವರು ಐದು ಮಂದಿ ಬಡ ಹುಡುಗಿಯರ ಮದುವೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೆಲ್ಲರ ಮದುವೆಗಾಗಿ ತಲಾ 75,000 ರೂ. ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಲ್ಲಿವರೆಗೆ ಫಕೀರ್ ಅವರು 35 ಲಕ್ಷ ರೂ. ದಾನ ಮಾಡಿದ್ದಾರೆ.
ಹೀಗಿರುವಾಗ, ಫಕೀರ್ ಚಂದ್ ಅವರು ಸಮಾಜದಲ್ಲಿರುವ ಎಷ್ಟೋ ಮಂದಿ ಉಳ್ಳವರ ಪಾಲಿಗೆ ಮಾದರಿ ವ್ಯಕ್ತಿಯಾಗಿದ್ದು, ಸಂಪಾದನೆ ಮಾಡಿರುವ ಬಹುಪಾಲು ಸಂಪತ್ತನ್ನು ಮರಳಿ ಸಮಾಜಕ್ಕೆ ದಾನ ಮಾಡುವ ಅವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯವಾದದ್ದು.


Click it and Unblock the Notifications